Saturday, September 14, 2024

ಕುಂದಾಪುರ ತಾಲೂಕು ಕಛೇರಿಯಲ್ಲಿ ಸಿಬ್ಬಂದಿಗಳ ಕೊರತೆ

೧೪ ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲೆಯ ಬೇರೆ ಬೇರೆ ಕಛೇರಿಗಳಲ್ಲಿ ನಿಯೋಜನೆ ಮೇಲೆ ಕರ್ತವ್ಯ !

ಕುಂದಾಪುರ ತಾಲೂಕು ಕಛೇರಿಯಲ್ಲಿ ಸಿಬ್ಬಂದಿಗಳ ಕೊರತೆ ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ಜ್ವಲಂತ ಸಮಸ್ಯೆ. ಸಿಬ್ಬಂದಿಗಳ ಕೊರತೆಯಿಂದಾಗಿ ಇಲ್ಲಿನ ಸಾರ್ವಜನಿಕರು ನಿತ್ಯ ಪರಡಾಡುವಂತಹ ಸ್ಥಿತಿ ಇಲ್ಲಿದೆ. ಉಡುಪಿ ಜಿಲ್ಲೆಯಲ್ಲಿಯೇ ಕುಂದಾಪುರ ತಾಲೂಕು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಗ್ರಾಮಗಳನ್ನು ಹೊಂದಿರುವ ತಾಲೂಕಾಗಿದೆ. ದಿನಂಪ್ರತಿ ನೂರಾರು ಜನರು ತಾಲೂಕು ಕಛೇರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಭೇಟಿ ನೀಡುತ್ತಿದದು, ಕಛೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದೆ ಎಂಬ ಕೂಗು ಈಗ ಮತ್ತೆ ಮೇಲೆದ್ದಿದೆ.

ಮೂರು ನಾಲ್ಕು ಗ್ರಾಮಗಳಿಗೆ ಒಬ್ಬರು ಗ್ರಾಮ ಆಡಳಿತಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮಗಳಲ್ಲಿಯೂ ಕೂಡ ಗ್ರಾಮ ಆಡಳಿತಾಧಿಕಾರಿ ಅವರ ಕೊರತೆಯಿಂದಾಗಿ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

ಉಡುಪಿ ಜಿಲ್ಲಾಡಳಿತ ನೀಡಿರುವ ಮಾಹಿತಿಯ ಪ್ರಕಾರ, ಕುಂದಾಪುರ ತಾಲೂಕಿನಲ್ಲಿ ಒಟ್ಟು ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು ೩೩, ಈ  ೩೩ ಗ್ರಾಮ ಆಡಳಿತ ಅಧಿಕಾರಿಯವರ ಪೈಕಿ ೨ ಗ್ರಾಮ ಆಡಳಿತ ಅಧಿಕಾರಿಯವರು ಬೈಂದೂರು ತಾಲೂಕು ಕಛೇರಿಯಿಂದ ಈ ಕಛೇರಿಯಲ್ಲಿ ನಿಯೋಜನೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭರ್ತಿಯಾದ ೪೫ ಹುದ್ದೆಗಳಲ್ಲಿ ೧೪ ಗ್ರಾಮ ಆಡಳಿತ ಅಧಿಕಾರಿಗಳು ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯ ಬೇರೆ ಬೇರೆ ಕಛೇರಿಗಳಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದು ಗ್ರಾಮ ಪಂಚಾಯತ್‌ ಗೆ ಒಬ್ಬ ಗ್ರಾಮ ಆಡಳಿತಾಧಿಕಾರಿ ಅಂತ ಇಲ್ಲ. ಎರಡು ಮೂರು ಗ್ರಾಮ ಪಂಚಾಯತ್‌ಗಳಲ್ಲಿ ಒಬ್ಬ ಗ್ರಾಮ ಆಡಳಿತಾಧಿಕಾರಿ ಕಾರ್ಯ ನಿರ್ವಹಿಸುತ್ತಿರುವುದು ಕೂಡ ಜಿಲ್ಲಾಡಳಿತ ನೀಡಿರುವ ಮಾಹಿತಿಯಲ್ಲಿ ಕಂಡು ಬರುತ್ತದೆ.

ಕುಂದಾಪುರ ತಾಲೂಕಿಗೆ ಮಂಜೂರಾದ ಗ್ರಾಮ ಆಡಲೀತ ಅಧಿಕಾಯವರ ಸಂಖ್ಯೆ ೫೭ ಆಗಿದ್ದು, ಕುಂದಾಪುರ ತಾಲೂಕಿನಲ್ಲಿ ಖಾಲಿ ಇರುವ ಗ್ರಾಮ ಆಡಳಿತಾಧಿಕಾರಿಯವರ ಸಂಖ್ಯೆ ೧೨ ಆಗಿದೆ. ಸದ್ಯ, ಕುಂದಾಪುರ ತಾಲೂಕಿನಲ್ಲಿ ಒಟ್ಟು ೨೮ ಮಂದಿ ಗ್ರಾಮ ಆಡಳಿತಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನು, ಕುಂದಾಪುರ ತಾಲೂಕು ಕಛೇರಿಗೆ ಒಟ್ಟು ೧೧೦ ಹುದ್ದೆಗಳು ಮಂಜೂರಾತಿಯಾಗಿದ್ದು, ೭೦ ಹುದ್ದೆಗಳು ಭರ್ತಿಯಾಗಿರುತ್ತದೆ. ಒಟ್ಟು ೪೦ ಹುದ್ದೆಗಳು ಖಾಲಿ ಇರುತ್ತವೆ. ಭರ್ತಿಯಾಗಿರುವ ಒಟ್ಟು ೭೦ ಹುದ್ದೆಗಳಲ್ಲಿ ೧೯ ಹುದ್ದೆಗಳು ಇಲಾಖೆಯ ಬೇರೆ ಬೇರೆ ಕಛೇರಿಗಳಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕಾರಣ ತಾಲೂಕಿನಲ್ಲಿ ಸಾರ್ವಜನಿಕರ ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ತಾಲೂಕು ಕಛೇರಿಯಲ್ಲಿ ತಮ್ಮ ಕೆಲಸ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿಯೂ ಈ ಬಗ್ಗೆ ಆಕ್ರೋಶ ಕೇಳಿಬಂದಿದೆ.

ತಾಲೂಕುಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳು (ಲೆಕ್ಕಾಧಿಕಾರಿಗಳು) ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಹಂತದ ನೌಕರರನ್ನು ಬೇರೆಡೆ ನಿಯೋಜನೆಗೊಳಿಸಲಾಗುತ್ತಿದೆ. ಉದ್ಯೋಗಿಗಳ ಕೊರತೆಯಿಂದಾಗಿ ಕಂದಾಯ ಇಲಾಖೆಯಲ್ಲಿ ಜನರಿಗೆ ಸರಿಯಾದ ಸಮಯಕ್ಕೆ ಕೆಲಸವಾಗುತ್ತಿಲ್ಲ” ಎಂದು ರಾಜ್ಯ ಬಜೆಟ್‌ ಅಧಿವೇಶನ ಸಂದರ್ಭದಲ್ಲಿ ನಡೆದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಪ್ರಶ್ನೆಯ ಮೂಲಕ ವಿಷಯ ಪ್ರಸ್ತಾಪಿಸಿದ್ದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಾರ್ವಜನಿಕರಿಗೆ ಶೀಘ್ರ ಸೇವೆ ನೀಡುವ ಉದ್ದೇಶಿದಿಂದ ಶೀಘ್ರದಲ್ಲೇ 1000 ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಈಗ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಗೆ ಕರ್ನಾಟಕ ಲೋಕಸೇವ ಆಯೋಗ ಅಧಿಸೂಚನೆ ಹೊರಡಿಸಿದೆ.

ಇತರೆ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ನಿಯೋಜನೆಯನ್ನು ರದ್ಧುಪಡಿಸಿ : ಕೊಡ್ಗಿ

ಕುಂದಾಪುರ ತಾಲೂಕು ಕಛೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು ನಿಯೋಜನೆಯಲ್ಲಿರುವ ಸಿಬ್ಬಂದಿಗಳನ್ನು ಮರು ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸಿದ್ದೆ. ಐದು ಹುದ್ದೆಗಳನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟು ಉಳಿದ ೧೪ ಹುದ್ದೆಗಳನ್ನು ತಕ್ಷಣದಲ್ಲಿ ನಿಯೋಜನೆ ರದ್ದು ಪಡಿಸುವಂತೆ ಕಂದಾಯ ಸಚಿವರು ಆದೇಶಿಸಿರುತ್ತಾರೆ. ಆದರೇ ಈವರೆಗೆ ಯಾವುದೇ ಕ್ರಮವಾಗಿರುವುದಿಲ್ಲ. ಮತ್ತೆ ಈಗ ಕಂದಾಯ ಸಚಿವರಿಗೆ ಈ ಬಗ್ಗೆ ಪತ್ರ ಬರೆದಿದ್ದೇನೆ. ಕುಂದಾಪುರ ತಾಲೂಕು ಕಛೇರಿಗೆ ನೇಮಕ ಮಾಡಲಾದ ಸಿಬ್ಬಂದಿಗಳಲ್ಲಿ ನಿಯೋಜನೆ ಮೇಲೆ ಇತರೆ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ನಿಯೋಜನೆಯನ್ನು ರದ್ಧುಪಡಿಸಿ ಮೂಲ ಕಛೇರಿಯಲ್ಲಿ (ಕುಂದಾಪುರ ತಾಲೂಕು ಕಛೇರಿ) ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದೇನೆ.

-ಕಿರಣ್‌ ಕುಮಾರ್‌ ಕೊಡ್ಗಿ

ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!