Sunday, September 8, 2024

ಬಿಜೆಪಿಯವರು ಸಮಾಜದಲ್ಲಿರುವ ಅಸಮಾನತೆಯ ಮಹಾನ್ ಪೋಷಕರು : ಮುಖ್ಯಮಂತ್ರಿ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಧಾರೆ ಸೇರಿ ಹತ್ತಾರು ಭಾಗ್ಯಗಳು, ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಪ್ರತೀ ತಿಂಗಳು ಕೊಟ್ಟ ಮಾತಿನಂತೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತಿರುವವರು ನಾವು. ಉಚಿತ ಬಸ್, ಉಚಿತ ವಿದ್ಯುತ್ ಕೊಡುತ್ತಿರುವವರು ನಾವು‌ . ತಿಂಗಳಿಗೆ 2 ಸಾವಿರ ಪ್ರತೀ ಮಹಿಳೆಯ ಖಾತೆಗೆ ಹಾಕುತ್ತಿರುವವರು ನಾವು, ನಾವು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಈಗ ಕೇಳುತ್ತಿದ್ದೇವೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ಹಣ ಹಾಕ್ತೀವಿ ಅಂದರು. ವಿದೇಶದಿಂದ ಕಪ್ಪು ಹಣ ತಂದ್ರಾ? ನಿಮ್ಮ ಖಾತೆಗೆ ಹಾಕಿದ್ರಾ? ಕೊಟ್ಟ ಮಾತಿನಂತೆ ನಡೆದುಕೊಂಡು ನಿಮ್ಮ ಮತಕ್ಕೆ ಗೌರವ ತಂದುಕೊಟ್ಟವರು ನಾವು. ಇದನ್ನು ಜನರು ತಮ್ಮ ಹೃದಯಕ್ಕೆ ಕೇಳಿಕೊಂಡು ತೀರ್ಮಾನಿಸಬೇಕು ಎಂದು ಹೇಳಿದರು.

ಅಚ್ಚೆದಿನ್ ಆಯೆಗಾ ಎಂದು ಡೈಲಾಗ್ ಹೊಡೆದು ಪೆಟ್ರೋಲ್, ಡೀಸೆಲ್ ಬೆಲೆ, ಗ್ಯಾಸ್ ಬೆಲೆ, ರಸಗೊಬ್ಬರದ ಬೆಲೆ ಎಲ್ಲಾ ಏರಿಸಿ ಬಡವರು, ಮಧ್ಯಮ ವರ್ಗದವರು ಬದುಕುವುದೇ ದುಸ್ತರ ಮಾಡಿಬಿಟ್ಟರು. ಬಿಜೆಪಿಯವರು ಸಮಾಜದಲ್ಲಿರುವ ಅಸಮಾನತೆಯ ಮಹಾನ್ ಪೋಷಕರು. ಬಡವರು ಇನ್ನಷ್ಟು ಬಡವರಾಗುತ್ತಲೇ ಹೋಗಬೇಕು, ಮಧ್ಯಮ ವರ್ಗದವರು ಬಡತನಕ್ಕೆ ಜಾರಬೇಕು ಎನ್ನುವುದು ಬಿಜೆಪಿಯ ಅಜೆಂಡಾ. ಹೀಗಾಗಿ ಮಧ್ಯಮ ವರ್ಗದವರು, ಬಡವರಿಗೆ ನಮ್ಮ ಸರ್ಕಾರ ಕೊಡುವ ಎಲ್ಲಾ ಕಾರ್ಯಕ್ರಮಗಳನ್ನೂ ವಿರೋಧಿಸುತ್ತಾರೆ, ಫಲಾನುಭವಿಗಳನ್ನು ಅವಮಾನಿಸುತ್ತಾರೆ ಎಂದು ಹೇಳಿದರು.

ನಮ್ಮ ಸರ್ಕಾರ ಸಂವಿಧಾನದ ಆಶಯಗಳಂತೆ ಸರ್ವರ ಕಲ್ಯಾಣದ ಕಾರ್ಯಕ್ರಮ ರೂಪಿಸುತ್ತಿದೆ. ನಮ್ಮ ಸಂವಿಧಾನ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಮಹಿಳೆಯರು, ಯುವ ಸಮೂಹ ಸೇರಿ ಸರ್ವರಿಗೂ ಅವಕಾಶಗಳನ್ನು ಕೊಡುತ್ತದೆ. ಈ ಅವಕಾಶಗಳನ್ನು ನಾಶ ಮಾಡಬೇಕು ಎನ್ನುವ ಕಾರಣಕ್ಕೆ ಬಿಜೆಪಿ ನಮ್ಮ ಸಂವಿಧಾನವನ್ನು ಬದಲಾಯಿಸಿ ಅವರ ಮನುಸ್ಮೃತಿ  ಪರವಾಗಿ ಮಾತನಾಡುತ್ತಿದೆ.

ಬಿಜೆಪಿಯ ಹಾಲಿ ಸಂಸದ, ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಪದೇ ಪದೇ ಸಂವಿಧಾನ ಬದಲಾಯಿಸುವ ಮಾತಾಡುತ್ತಿದ್ದಾರೆ. ಇವರು ಬಹಿರಂಗವಾಗಿ ಸಂವಿಧಾನ ಬದಲಾಯಿಸುವ ಮಾತಾಡಿದರೂ ಪ್ರಧಾನಿ ನರೇಂದ್ರ ಮೋದಿ ಅವರಾಗಲೀ, ಬಿಜೆಪಿ ಹೈ ಕಮಾಂಡ್ ಆಗಲಿ ಇದನ್ನು ವಿರೋಧಿಸಿಲ್ಲ. ಹೀಗಾಗಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಜೆಂಡಾವನ್ನು ನಾಡಿನ ಜನತೆ ಅರ್ಥಮಾಡಿಕೊಳ್ಳಬೇಕು. ನಮ್ಮ ಸಂವಿಧಾನ ಹೋದರೆ ನಾಡಿನ ಜನರ, ಮಕ್ಕಳ ಭವಿಷ್ಯಕ್ಕೆ, ಅವರ ಬದುಕುವ-ದುಡಿಯುವ ಅವಕಾಶಗಳಿಗೆ ಕಂಟಕ ಬರುತ್ತದೆ ಎಂದು ಹೇಳಿದರು.

ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಜನಿಸುತ್ತೇನೆ ಎಂದಿದ್ದ ಮಾಜಿ ಪ್ರಧಾನಿ ದೇವೇಗೌಡರು ಈಗ ಬಿಜೆಪಿ ಜತೆ ಸೇರಿಕೊಂಡು ಬಿಜೆಪಿ ಮತ್ತು ಮೋದಿ ಅವರನ್ನು ಹೊಗಳುತ್ತಿದ್ದಾರೆ. ಇವರನ್ನು ಹೇಗೆ ನಂಬುತ್ತೀರಿ? ಸಚಿವ ಕೆ.ಹೆಚ್.ಮುನಿಯಪ್ಪ ಅವರು ಹಿಡಿದ ಕೆಲಸ ಬಿಡುವವರಲ್ಲ. ದೇವನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. ಅವರು ದೇವನಹಳ್ಳಿ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಸಿದ್ಧ ಮಾಡಿಕೊಂಡು ಬಂದಿದ್ದಾರೆ. ಅದೆಲ್ಲಕ್ಕೂ ಅನುದಾನ ನೀಡಲಾಗುವುದು.  ನೇಕಾರರ ಬಹುವರ್ಷಗಳ ಬೇಡಿಕೆಗಳನ್ನು ಈಡೇರಿಸಿದ್ದು ನಮ್ಮ ಸರ್ಕಾರ. ಹೀಗಾಗಿ ಯಾರು ನಿಮ್ಮ ಬದುಕಿನ ಪರವಾಗಿ ಇದ್ದಾರೋ ಅವರ ಜೊತೆ ನೀವು ನಿಲ್ಲಬೇಕು ಎಂದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!