spot_img
Friday, March 13, 2026
spot_img

ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಆಹಾರ ಭದ್ರತೆ ಮತ್ತು ನರೇಗಾ ಕಾರ್ಯಕ್ರಮಗಳನ್ನು ವಿರೋಧಿಸಿದ್ದರು : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ, ಆದರೆ ಕಾಂಗ್ರೆಸ್ ಹಸಿವು ಮುಕ್ತ ನಾಡನ್ನು, ಹಸಿವು ಮುಕ್ತ ದೇಶವನ್ನು ನಿರ್ಮಿಸಲು ಹೊರಟಿದೆ. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಆಹಾರ ಭದ್ರತೆ ಮತ್ತು ನರೇಗಾ ಕಾರ್ಯಕ್ರಮಗಳನ್ನು ವಿರೋಧಿಸಿದ್ದರು. ಇವು ಕಾಂಗ್ರೆಸ್ ಜಾರಿಗೆ ತಂದಿದ್ದ ಹಸಿವು ಮುಕ್ತ ಭಾರತದ ಕಾರ್ಯಕ್ರಮಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಅನ್ನಭಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು.

ಅನ್ನಭಾಗ್ಯ ಸೇರಿ ಬಡವರು, ಮಧ್ಯಮ ವರ್ಗದವರಿಗೆ ಕೊಟ್ಟ ಭಾಗ್ಯಗಳನ್ನು ಆಡಿಕೊಂಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ದುರಂತ. ಇಂಥಾ ತಪ್ಪುಗಳನ್ನು ಮತ್ತೆ ಮತ್ತೆ ಮಾಡಬೇಡಿ, ಅನ್ನದಾತರು ದುಡಿದರೆ ದೇಶ ಬದುಕುತ್ತದೆ. ನಾವು ತಲಾ 10 ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿ ಪ್ರತಿ ಕೆಜಿಗೆ 34 ರೂಪಾಯಿ ಕೊಡ್ತೀವಿ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದೆವು. ಆದರೂ ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ ಅಕ್ಕಿ ಕೊಡಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.

ಬಿಜೆಪಿ ಬಡವರ, ದುಡಿಯುವವರ, ಶ್ರಮಿಕರ ಪರವಾಗಿ ಇದ್ದಿದ್ದರೆ, ಈ ನಾಡಿನ ದಲಿತರು, ಶೂದ್ರರು ಮತ್ತು ಹಿಂದುಳಿದವರ ಪರವಾಗಿ ಇದ್ದಿದ್ದರೆ ಅಕ್ಕಿ ಕೊಡುತ್ತಿತ್ತು. ಮೋದಿಗೆ, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಹಸಿವು ಮುಕ್ತ ದೇಶ ಬೇಕಾಗಿಲ್ಲ. ಆದ್ದರಿಂದ ನಿಜವಾಗಿ ನಿಮ್ಮ ಪರವಾಗಿ ಇರುವವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಹೃದಯದ ಮಾತು ಕೇಳಿ ಮತ ಚಲಾಯಿಸಿ. ಹಸಿವಿನ ಜೊತೆಗೆ ದೇಶವನ್ನು ಅನಕ್ಷರತೆ, ಅನಾರೋಗ್ಯ ಮತ್ತು ನಿರುದ್ಯೋಗ ಮುಕ್ತ ಮಾಡುವುದೇ ನಮ್ಮ ಕಾಂಗ್ರೆಸ್  ಪಕ್ಷದ ಗುರಿ. ನಮ್ಮ ಹಿಂದಿನ ಸರ್ಕಾರದ ಕಾಲದಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ ವಿದ್ಯಾಸಿರಿ, ಇಂದಿರಾಕ್ಯಾಂಟೀನ್ ಕಾರ್ಯಕ್ರಮಗಳೆಲ್ಲವೂ ಈ ಗುರಿಯೆಡೆಗೆ ಕರ್ನಾಟಕವನ್ನು ಕೊಂಡೊಯ್ಯುವ ಪ್ರಯತ್ನದಲ್ಲಿ ಯಶಸ್ವಿ ಆಗಿವೆ ಎಂದರು.

ನಮ್ಮ ಈಗಿನ ಸರ್ಕಾರದ ಗ್ಯಾರಂಟಿ ಯೋಜನೆಗಳ ಗುರಿ ಕೂಡಾ ರಾಜ್ಯವನ್ನು ಹಸಿವು, ಅನಾರೋಗ್ಯ, ಅನಕ್ಷರತೆ, ನಿರುದ್ಯೋಗ ಮುಕ್ತ ಮಾಡುವುದೇ ಆಗಿದೆ. ಬಸವಣ್ಣನ ಕಾಯಕ-ದಾಸೋಹದ ಪರಿಕಲ್ಪನೆ ಅನ್ನಭಾಗ್ಯಕ್ಕೆ ಪ್ರೇರಣೆ.  ನಮ್ಮ ಯೋಜನೆಗಳಲ್ಲಿ ರಾಜಕೀಯ ಲಾಭದ ಉದ್ದೇಶ ಇಲ್ಲ, ನಮ್ಮ ಯೋಜನೆಗಳ ಉದ್ದೇಶ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆ. ರಾಜ್ಯದ ಯಾವುದೇ ಮನೆಯಲ್ಲಿ ಹಸಿವು, ಅನಾರೋಗ್ಯ, ಅನಕ್ಷರತೆ ಮತ್ತು ನಿರುದ್ಯೋಗದಿಂದ ಬಳಲುವರು ಇರದಂತೆ ನೋಡಿಕೊಳ್ಳುವುದೇ ನಮ್ಮ ಆಶಯ ಮತ್ತು ಬದ್ಧತೆ. ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿ ಮಾಡಿದೆ. 2013ರ ಬಸವ ಜಯಂತಿಯ ದಿನವೇ ಜಾರಿಗೆ ಬಂದಿರುವ ಅನ್ನಭಾಗ್ಯ  ಯೋಜನೆ ಬಸವಣ್ಣನವರ ದಾಸೋಹದಿಂದ ಪ್ರೇರಿತವಾಗಿರುವುದು. ಪಡಿತರ ವಿತರಕರಿಗೆ ಪ್ರತಿ ಕೆಜಿ ಅಕ್ಕಿಗೆ ಕಮಿಷನ್ ಮೊತ್ತ ಒಂದೂವರೆ ರೂಪಾಯಿಗೆ ಹೆಚ್ಚಳ ಮಾಡುತ್ತೇವೆ ಎಂದು ಅವರು ಹೇಳಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!