spot_img
Saturday, December 7, 2024
spot_img

ನ್ಯಾಯಾಲಯಗಳು ನಿರ್ದಿಷ್ಟ ನೀತಿ ಅಥವಾ ಯೋಜನೆಯನ್ನು ಜಾರಿಗೊಳಿಸಲು ರಾಜ್ಯಗಳಿಗೆ ನಿರ್ದೇಶಿಸಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್‌

ಜನಪ್ರತಿನಿಧಿ (ನವ ದೆಹಲಿ) : ನ್ಯಾಯಾಂಗದ ವ್ಯಾಪ್ತಿಯು ಸರ್ಕಾರದ ನೀತಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸುವಲ್ಲಿ ತುಂಬಾ ಸೀಮಿತವಾಗಿದೆ. ನ್ಯಾಯಾಲಯಗಳು ಯಾವುದೇ ನಿರ್ದಿಷ್ಟ ನೀತಿ ಅಥವಾ ಯೋಜನೆಯನ್ನು ಜಾರಿಗೊಳಿಸಲು ರಾಜ್ಯಗಳಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ಹೇಳಿದೆ.

ಹಸಿವು ಹಾಗೂ ಅಪೌಷ್ಟಿಕತೆಯನ್ನು ನಿವಾರಿಸಲು ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡುವಾಗ ಸುಪ್ರೀಂ ಹೇಳಿದೆ. ಈಗಾಗಲೇ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಹಾಗೂ ಇತರ ಕಲ್ಯಾಣ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯಗಳು ಜಾರಿಗೊಳಿಸುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿತು.

ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಹಾಗೂ ಪಂಕಜ್ ಮಿತ್ತಲ್ ಅವರಿದ್ದ ಪೀಠವು, ಸರ್ಕಾರದ ನೀತಿಯ ಕಾನೂನುಬದ್ಧತೆಯನ್ನು ಮಾತ್ರ ನ್ಯಾಯಾಂಗವು ಪರಿಶೀಲನೆಗೆ ಒಳಪಡಿಸುತ್ತದೆಯೇ ಹೊರತು ಆ ನೀತಿಯು ಉತ್ತಮವೇ ಅಥವಾ ಇಲ್ಲವೇ ಎಂಬುದನ್ನಲ್ಲ ಎಂದು ಹೇಳಿದೆ.

‘ನೀತಿಗಳನ್ನು ಪರಿಶೀಲಿಸುವಲ್ಲಿ ನ್ಯಾಯಾಂಗದ ವ್ಯಾಪ್ತಿಯು ಸೀಮಿತವಾಗಿದೆ ಎಂಬುದು ಈಗಾಗಲೇ ತಿಳಿದಿರುವ ವಿಚಾರವಾಗಿದೆ. ನ್ಯಾಯಾಲಯಗಳು ನೀತಿಯು ಸರಿಯಾಗಿದೆಯೇ ಅಥವಾ ಸೂಕ್ತವೇ ಎಂಬುದನ್ನು ಪರೀಕ್ಷಿಸುವುದಿಲ್ಲ ಮತ್ತು ಸಾಧ್ಯವಿಲ್ಲ. ನೀತಿಗಳ ಬಗ್ಗೆ ಸಲಹೆ ನೀಡಲು ನ್ಯಾಯಾಂಗವು ಕಾರ್ಯಾಂಗದ ಸಲಹೆಗಾರನಾಗಿರುವುದಿಲ್ಲ. ಕಾರ್ಯಾಂಗವು ನೀತಿಗಳನ್ನು ರೂಪಿಸಲು ಅರ್ಹವಾಗಿದೆ. ಹೀಗಾಗಿ, ಯಾವುದೇ ನಿರ್ದಿಷ್ಟ ನೀತಿ ಅಥವಾ ಯೋಜನೆಯನ್ನು ಜಾರಿಗೊಳಿಸಲು ನ್ಯಾಯಾಲಯಗಳು ರಾಜ್ಯಗಳಿಗೆ ನಿರ್ದೇಶಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ತಮಗೆ ಅಗತ್ಯ ಎನಿಸಿದ ಪರ್ಯಾಯ ಕಲ್ಯಾಣ ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮುಕ್ತವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇನ್ನು, ‘ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಒದಗಿಸುವ ಆಶಯದೊಂದಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್ಎಫ್ಎಸ್ಎ) ಜಾರಿಯಲ್ಲಿದ್ದು, ಈ ಕಾಯ್ದೆಯಡಿ ಇತರ ಕಲ್ಯಾಣ ಯೋಜನೆಗಳನ್ನು ಸಹ ಭಾರತ ಒಕ್ಕೂಟದಿಂದ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಹೆಚ್ಚಿನ ನಿರ್ದೇಶನವನ್ನು ರಾಜ್ಯಗಳಿಗೆ ನೀಡಲು ನಾವು ಬಯಸುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಎನ್‌ಎಫ್‌ಎಸ್‌ಎ ಉದ್ದೇಶವನ್ನು ಸಾಧಿಸಲು ಸಮುದಾಯ ಅಡುಗೆಮನೆಗಳ ಪರಿಕಲ್ಪನೆಯು ರಾಜ್ಯಗಳಿಗೆ ಲಭ್ಯವಿರುವ ಉತ್ತಮ ಪರ್ಯಾಯವೇ ಎಂಬುದನ್ನು ನಾವು ಪರಿಶೀಲಿಸಿಲ್ಲ. ಬದಲಿಗೆ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಅನುಮತಿಸಲಾಗಿರುವ ಪರ್ಯಾಯ ಕಲ್ಯಾಣ ಯೋಜನೆಗಳನ್ನು ಅಳವಡಿಸಿಕೊಳ್ಳಲು ಅಥವಾ ಅನ್ವೇಷಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮುಕ್ತವಾಗಿ ಬಿಡಲು ನಾವು ಬಯಸುತ್ತೇವೆ’ ಎಂದು ನ್ಯಾಯಪೀಠ ಹೇಳಿದೆ.

ಹಸಿವು ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಮುದಾಯ ಅಡುಗೆಮನೆಗಳ ಯೋಜನೆಯನ್ನು ರೂಪಿಸಲು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನಗಳನ್ನು ಕೋರಿ ಸಾಮಾಜಿಕ ಕಾರ್ಯಕರ್ತರಾದ ಅನುನ್ ಧವನ್, ಇಶಾನ್ ಸಿಂಗ್ ಮತ್ತು ಕುನಾಜನ್ ಸಿಂಗ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ.

ಐದು ವರ್ಷದೊಳಗಿನ ಅನೇಕ ಮಕ್ಕಳು ಹಸಿವು ಹಾಗೂ ಅಪೌಷ್ಟಿಕತೆಯಿಂದ ಪ್ರತಿದಿನ ಸಾಯುತ್ತಿದ್ದಾರೆ. ಈ ಸ್ಥಿತಿಯು ನಾಗರಿಕರ ಆಹಾರ ಮತ್ತು ಜೀವನದ ಹಕ್ಕು ಸೇರಿದಂತೆ ವಿವಿಧ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!