Sunday, September 8, 2024

ನೀವು ಹಿಂದುಳಿದ, ದಲಿತ, ಬುಡಕಟ್ಟು, ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರೇ ನಿಮಗಿಲ್ಲಿ ಉದ್ಯೋಗವಿಲ್ಲ : ಕೇಂದ್ರದ ವಿರುದ್ಧ ರಾಗಾ ಟೀಕೆ

ಜನಪ್ರತಿನಿಧಿ (ಕಾನ್‌ಪುರ) : ‘ದೇಶದಲ್ಲಿ ಶೇ. 50ರಷ್ಟು ಜನ ಹಿಂದುಳಿದ ವರ್ಗದವರು, ಶೇ 15ರಷ್ಟು ದಲಿತರು, ಶೇ. 8ರಷ್ಟು ಆದಿವಾಸಿಗಳು, ಶೇ. 15ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ಇಲ್ಲಿ ಎಷ್ಟಾದರೂ ಅರಚಿಕೊಳ್ಳಿ, ಆದರೆ ಈ ದೇಶದಲ್ಲಿ ಉದ್ಯೋಗ ಸಿಗುವುದಿಲ್ಲ. ನೀವು ಹಿಂದುಳಿದ, ದಲಿತ, ಬುಡಕಟ್ಟು ಅಥವಾ ಬಡ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರೆ ನಿಮಗೆ ಉದ್ಯೋಗ ಸಿಗುವುದಿಲ್ಲ. ನಿಮಗೆ ಉದ್ಯೋಗ ಸಿಗುವುದು ನರೇಂದ್ರ ಮೋದಿ ಅವರಿಗೆ ಇಷ್ಟವಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.

ಕಾನ್ಪುರದಲ್ಲಿ ತಮ್ಮ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಗಾ, ‘ಒಟ್ಟು ಜನಸಂಖ್ಯೆಯ ಸುಮಾರು ಶೇ. 90 ರಷ್ಟಿರುವ ಹಿಂದುಳಿದ ವರ್ಗಗಳು, ದಲಿತರು, ಬುಡಕಟ್ಟು ಜನಾಂಗಗಳು ಹಾಗೂ ಅಲ್ಪಸಂಖ್ಯಾತರಿಗೆ ಉದ್ಯೋಗ ಸಿಗದಿರುವ ಇದು ಯಾವ ರೀತಿಯ ರಾಮರಾಜ್ಯ” ಎಂದು ಅವರು ಅಭಿಪ್ರಾಯ ಪಟ್ಟರು.

ಭಾರತದಲ್ಲಿ ವರ್ಗ ಮತ್ತು ಜಾತಿಯ ವಿಭಜನೆಯಿಂದಾಗಿ ದಲಿತರು ಮತ್ತು ಹಿಂದುಳಿದವರಿಗೆ ಮಾಧ್ಯಮಗಳಲ್ಲಿ ಅಥವಾ ದೊಡ್ಡ ಉದ್ಯಮಗಳಲ್ಲಿ ಅಥವಾ ಆಡಳಿತದಲ್ಲಿ ಪ್ರತಿನಿಧಿಸಲು ಅವಕಾಶ ನೀಡುತ್ತಿಲ್ಲ. ದೇಶದಲ್ಲಿ ಹಸಿವಿನಿಂದ ಜನರು ಸಾಯುತ್ತಿದ್ದಾರೆ ಎಂದು ಹೇಳಿದರು.

‘ನೀವು ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ನೋಡಿದ್ದೀರಿ. ಎಷ್ಟು ಮಂದಿ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದ ವರ್ಗಗಳಿಂದ ಎಷ್ಟು ಮಂದಿ ಅಲ್ಲಿದ್ದರು. ಬುಡಕಟ್ಟು ಜನಾಂಗಕ್ಕೆ ಸೇರಿದ ರಾಷ್ಟ್ರಪತಿಯನ್ನೂ (ದ್ರೌಪದಿ ಮುರ್ಮು) ಆಹ್ವಾನಿಸಿಲ್ಲ. ದಲಿತ ಮಾಜಿ ರಾಷ್ಟ್ರಪತಿ (ರಾಮನಾಥ್ ಕೋವಿಂದ್) ಅವರನ್ನೂ ಒಳಗೆ ಬಿಡಲಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

ಜಾತಿ ಗಣತಿಗಾಗಿ ತಮ್ಮ ಪಕ್ಷ ಮತ್ತು ಮಿತ್ರಪಕ್ಷಗಳ ಬೇಡಿಕೆ ಕುರಿತು ಮಾತನಾಡಿದ ರಾಹುಲ್, ಇಂತಹ ಸಮೀಕ್ಷೆಯಿಂದ ಮಾತ್ರ ದೇಶದಲ್ಲಿ ಹಿಂದುಳಿದವರ ಯೋಗಕ್ಷೇಮ ಮತ್ತು ಅವರ ಬಳಿ ಎಷ್ಟು ಹಣವಿದೆ ಎಂದು ತಿಳಿಯಲು ಸಹಾಯ ಮಾಡುತ್ತದೆ. ಭಾರತದ ಪ್ರಗತಿಗೆ ಅತಿದೊಡ್ಡ ಕ್ರಾಂತಿಕಾರಿ ಹೆಜ್ಜೆ ಜಾತಿವಾರು ಜನಗಣತಿ ಎಂದು ನಾವು ಹೇಳಿದ್ದೇವೆ ಎಂದು ಹೇಳಿದರು.

ದೇಶದ ಸಂಪೂರ್ಣ ಸಂಪತ್ತು ಕೇವಲ ಮೋದಿ ಆಪ್ತ ಬಳಗದಲ್ಲಿರುವ ಶೇಕಡಾ ಎರಡರಿಂದ ಮೂರರಷ್ಟು ಜನರ ಕೈಯಲ್ಲಿದೆ. ಅದಾನಿ, ಅಂಬಾನಿ, ಟಾಟಾ, ಬಿರ್ಲಾರಂತಹ ಎರಡು-ಮೂರು ಪ್ರತಿಶತ ಜನರು ನಿಮ್ಮನ್ನು ಆಳುತ್ತಿದ್ದಾರೆ. ಈ ಜನರು ನವ ಭಾರತದ ಮಹಾರಾಜರು ಎಂದು ಅವರು ಮೋದಿ ನೇತೃತ್ವದ ಸರ್ಕಾರವನ್ನು ಟೀಕೆ ಮಾಡಿದರು.

2016ರ ನೋಟು ಅಮಾನ್ಯೀಕರಣ, ಜಿಎಸ್‌ಟಿ ಮತ್ತು ಅಗ್ನಿವೀರ್ ಯೋಜನೆ ಸೇರಿದಂತೆ ಹಲವಾರು ನಿರ್ಧಾರಗಳಿಗಾಗಿ ಕಾಂಗ್ರೆಸ್ ನಾಯಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

‘ಕೆಲವೊಮ್ಮೆ ನಿಮ್ಮ ಪತ್ರಗಳು ಸೋರಿಕೆಯಾಗುತ್ತವೆ, ಕೆಲವೊಮ್ಮೆ ನಿಮ್ಮನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ, ನಿಮ್ಮ ಮೇಲೆ ಜಿಎಸ್‌ಟಿ ಹೇರಲಾಗಿದೆ, ನೋಟು ಅಮಾನ್ಯೀಕರಣವನ್ನು ಹೇರಲಾಗಿದೆ, ನಿಮ್ಮ ಸರ್ಕಾರಿ ನೇಮಕಾತಿ ನಡೆಯುತ್ತಿಲ್ಲ. ನೀವು ಸೇನೆಗೆ ಸೇರುವ ಮಾರ್ಗವನ್ನೂ ಅವರು ಅಗ್ನಿವೀರ್ ಯೋಜನೆ ಮೂಲಕ ಮುಚ್ಚಿದ್ದಾರೆ ಎಂದು ದೂರಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!