Sunday, September 8, 2024

ಬಿಜೆಪಿ ಸರ್ಕಾರದ್ದು 2019 ರಿಂದ 2023ರ ವರೆಗೆ ದ್ವೇಷ ತುಂಬಿದ, ತುಕ್ಕು ಹಿಡಿದ ಬಸ್ಸು ಮುಂದಕ್ಕೆ ಹೋಗಲೇ ಇಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಮಂಗಳವಾರ) ಉತ್ತರಿಸಿದ್ದಾರೆ.

ಸರ್ಕಾರದ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿ ಹಾಗೂ ಜನಪರ ಯೋಜನೆಗಳಿಗೆ ರಾಜ್ಯಪಾಲರು ಕನ್ನಡಿ ಹಿಡಿದಿದ್ದಾರೆ. ಆದರೆ ಪ್ರತಿ ಪಕ್ಷ ನಾಯಕರಾದ ಆರ್‌, ಅಶೋಕ್ ಅವರು ರಾಜ್ಯಪಾಲರು ಮಾತಾಡಿದ್ದನ್ನು ಬಿಟ್ಟು ಅವರು ಮಾತಾಡದ್ದನ್ನೆಲ್ಲಾ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸುಳ್ಳು ಸುಳ್ಳೇ ಆರೋಪ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಾವು ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ರಾಜ್ಯಕ್ಕೆ 77 ಸಾವಿರ ಕೋಟಿ ಬಂಡವಾಳ ಹರಿದು ಬಂದಿದೆ. ಬಂಡವಾಳ ಹೂಡಿಕೆಗೂ, ಕಾನೂನು ಸುವ್ಯವಸ್ಥೆಗೂ ನೇರಾ ನೇರ ಸಂಬಂಧ ಇರುತ್ತದೆ. ಸರ್ಕಾರದ ಕಡಿಮೆ ಅವಧಿಯಲ್ಲೇ ಇಷ್ಟೊಂದು ಪ್ರಮಾಣದ ಹೂಡಿಕೆ ಆಗಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಗಮ ಆಗಿರುವುದಕ್ಕೆ ಸಾಕ್ಷಿ.  ಉಳಿದಂತೆ ಆರ್.ಅಶೋಕ್ ಅವರ ಆರೋಪ ಮತ್ತು ಸುಳ್ಳುಗಳಿಗೆ ಗೃಹ ಸಚಿವ ಪರಮೇಶ್ವರ್ ಅವರು ಈಗಾಗಲೇ ಸ್ಪಷ್ಟ ಉತ್ತರ ನೀಡಿದ್ದಾರೆ. ಉಳಿದದ್ದಕ್ಕೂ ಉತ್ತರ ನೀಡುತ್ತಾರೆ.

ರಾಜ್ಯ ಬಿಜೆಪಿ ಎಂದರೆ ಸುಳ್ಳು. ಸುಳ್ಳಿನ ಉತ್ಪಾದನೆಯಲ್ಲಿ ನಿಸ್ಸೀಮರ ಪಕ್ಷ ಅದು. ಅಭಿವೃದ್ಧಿ ಮರೆತು ಸುಳ್ಳುಗಳ ಆಸರೆ ಹೋಗಿದ್ದ ಬಿಜೆಪಿಯನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ಇದು ರಾಜ್ಯದ ಜನತೆ ಕೊಟ್ಟಿರುವ ಸರ್ಟಿಫಿಕೇಟ್. ಬಿಜೆಪಿ ರಾಜ್ಯದಲ್ಲಿ ಇವತ್ತಿನವರೆಗೂ ಸ್ವಂತ ಬಲದಿಂದ ಅಧಿಕಾರಿಕ್ಕೆ ಬಂದೇ ಇಲ್ಲ. ಹಿಂಬಾಗಿಲಲ್ಲಿ ಬಂದಿದ್ದಾರೆ ಅಷ್ಟೆ. ಬಿಜೆಪಿಯಿಂದ ಬಿ.ಎಸ್‌ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್, ಸದಾನಂದ ಗೌಡ ಮುಖ್ಯಮಂತ್ರಿ ಆದರು. ಇವರ್ಯಾರೂ ಸ್ಪಷ್ಟ ಬಹುಮತ ಪಡೆದು ಮುಖ್ಯಮಂತ್ರಿ ಆದವರಲ್ಲ. ಆಪರೇಷನ್ ಕಮಲ ಮತ್ತು ಹಿಂಬಾಗಿಲ ಮೂಲಕ ಆಮಿಷವೊಡ್ಡಿ ನಮ್ಮ ಶಾಸಕರನ್ನು ಸೆಳೆದು ಅಧಿಕಾರಕ್ಕೇರಿದರು. ಇವತ್ತಿನವರೆಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರ ನಡೆಸಿದ ಉದಾಹರಣೆ ಇದೆಯೇ? ಇದ್ದರೆ ತೋರಿಸಲಿ ಎಂದು ಅವರು ಆಕ್ರೋಶ ಹೊರಹಾಕಿದರು.

ನಾವು 2013 ರಲ್ಲಿ 2023 ರಲ್ಲಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬಂದಿದ್ದೇವೆ. ಜನ ನಮ್ಮನ್ನು ತಿರಸ್ಕರಿಸಿ ವಿರೋಧ ಪಕ್ಷದಲ್ಲಿ ಕೂರಿಸಿದಾಗಲೂ ತಲೆಬಾಗಿ ಜನರ ತೀರ್ಮಾನವನ್ನು ಒಪ್ಪಿಕೊಂಡು ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡಿ ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ನಾವು ಸುಳ್ಳುಗಳ ಆಸರೆಗೆ ಹೋಗಲಿಲ್ಲ. ರಾಜ್ಯಪಾಲರ ಭಾಷಣ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಕೂಲ ಕುರಿತಂತೆ ರಾಜ್ಯ ಮಟ್ಟದ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳು ಹಾಗೂ ಇತರೆ ಮಾಧ್ಯಮಗಳು ಶ್ಲಾಘಿಸಿ ಬರೆದು, ಅಪಾರ ಮೆಚ್ಚುಗೆ ಸೂಚಿಸಿವೆ. ವಿರೋಧ ಪಕ್ಷಗಳು ನಾಡಿನ ಪತ್ರಿಕೆಗಳ ಅಭಿಪ್ರಾಯ ಮತ್ತು ವಿಶ್ಲೇಷಣೆಗಳನ್ನಾದರೂ ಓದುವುದನ್ನು ರೂಢಿಸಿಕೊಳ್ಳಬೇಕು, ಏನನ್ನೂ ತಿಳಿದುಕೊಳ್ಳದೆ ಸುಳ್ಳುಗಳನ್ನು ಹೇಳಬಾರದು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಭಾರತೀಯ ಜನತಾ ಪಾರ್ಟಿಯ ಪರ ವಕಾಲತ್ತು ವಹಿಸುತ್ತಾರೆ, ನಾಡಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಮಾತನಾಡುವುದಿಲ್ಲ. ರಾಜ್ಯದ ಪರವಾಗಿ, ರಾಜ್ಯದ ಜನರ ಪರವಾಗಿ ನಾವು ಕೇಂದ್ರಕ್ಕೆ ಸರಣಿ ಪತ್ರ ಬರೆದಿದ್ದೇವೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಜತೆ ಸಂಘರ್ಷಕ್ಕೆ ಇಳಿಯಬಾರದು ಎಂದಿದ್ದಾರೆ. ಆದರೆ ನಾವು ಸಂಘರ್ಷಕ್ಕೆ ಇಳಿದಿಲ್ಲ. ನ್ಯಾಯ ಕೇಳುತ್ತಿದ್ದೇವೆ. ರಾಜ್ಯದ ಪಾಲಿನ‌ ಸಂವಿಧಾನಬದ್ದ ಹಕ್ಕನ್ನು, ಅನುದಾನವನ್ನು ಕೇಳುವುದು ಸಂಘರ್ಷ ಆಗುತ್ತದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯಕ್ಕೆ ತೀವ್ರ ಬರಗಾಲ ಬಂದಿದೆ. ಕೇಂದ್ರದಿಂದ ಬರ ಪರಿಹಾರ ಕೇಳಿ 17 ಬಾರಿ ಕೇಂದ್ರಕ್ಕೆ ಪತ್ರ ಬರೆದೆವು‌. ಇದರಲ್ಲಿ ಒಂದು ಪತ್ರಕ್ಕೆ ಮಾತ್ರ, “ನಿಮ್ಮ ಪತ್ರ ತಲುಪಿದೆ” ಎನ್ನುವ ಉತ್ತರ ಕೇಂದ್ರದಿಂದ ಬಂತು. ಆದರೆ ಉಳಿದ 16 ಪತ್ರಗಳಿಗೆ ಉತ್ತರವೂ ಬರಲಿಲ್ಲ.  ಕೇಂದ್ರದ ಅನುದಾನ ರಾಜ್ಯಕ್ಕೆ ಇವತ್ತಿನವರೆಗೂ ಒಂದು ಪೈಸೆಯೂ ಬರಪರಿಹಾರ ಬಂದಿಲ್ಲ. ಇದು ನಿಯಮಬದ್ದವಾಗಿ ರಾಜ್ಯದ ಹಕ್ಕು. ರಾಜ್ಯದ ಪಾಲು. ಇದನ್ನೂ ಕೇಂದ್ರ ಕೊಡುತ್ತಿಲ್ಲ. ನಮ್ಮ ಪಾಲನ್ನು, ರಾಜ್ಯದ ಪಾಲನ್ನು ಕೇಳುವುದು ತಪ್ಪಾ? ಇದು ಸಂಘರ್ಷ ಹೇಗಾಗುತ್ತದೆ?

ರಾಜ್ಯಕ್ಕೆ ಬರಗಾಲ ಬಂದಾಗ ನರೇಗ ಮಾನವ ದಿನಗಳನ್ನು ನಿಯಮ ಬದ್ಧವಾಗಿ 100 ರಿಂದ 150 ದಿನಗಳಿಗೆ ಏರಿಕೆ ಮಾಡಬೇಕಿತ್ತು. ಇದಕ್ಕಾಗಿ ನಾವು ಪದೇ ಪದೇ ಮನವಿ ಮಾಡಿದರೂ ಮಾನವ ದಿನಗಳನ್ನು ಏರಿಕೆ ಮಾಡಲೇ ಇಲ್ಲ. ಇದು ರಾಜ್ಯದ ಜನರಿಗೆ ಮಾಡಿದ ಅನ್ಯಾಯ ಅಲ್ಲವೇ? ನಮ್ಮ ರಾಜ್ಯದ ಹಕ್ಕನ್ನು ಕೇಳುವುದು ತಪ್ಪಾ? ಎಂದು ಪ್ರಶ್ನಿಸಿದ್ದಲ್ಲದೇ,  ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಶುರು ಮಾಡಿದ್ದೇವೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳಿಂದ ಕೋಟಿ , ಕೋಟಿ ಫಲಾನುಭವಿಗಳು ಅನುಕೂಲ ಪಡೆಯುತ್ತಿದ್ದಾರೆ  ಎಂದು ಅವರು ಹೇಳಿದ್ದಾರೆ.

ರಾಜ್ಯದ ಜನರಿಗೆ ಅನ್ನ ಕೊಡುವ ಉದ್ದೇಶದಿಂದ ಕೆ.ಜಿ ಗೆ 34 ರೂಪಾಯಿ ಕೊಡ್ತೀವಿ, ಈ ಹಣಕ್ಕೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದೆವು. ಆದರೆ ರಾಜ್ಯಕ್ಕೆ, ರಾಜ್ಯದ ಜನರಿಗೆ ಅಕ್ಕಿ ಕೊಡಲು ಕೇಂದ್ರ ಒಪ್ಪಲಿಲ್ಲ. ಈಗ 29 ರೂಪಾಯಿಗೆ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಈಗಲೂ ನಮಗೆ ಅದೇ ಬೆಲೆಗೆ ಅಕ್ಕಿ ಕೊಡಿಸಿ. ಅದನ್ನು ನಾವು ಕೇಂದ್ರದಿಂದ ಖರೀದಿಸಿ ರಾಜ್ಯದ ಜನರಿಗೆ ಕೊಡಲು ಸಿದ್ಧರಿದ್ದೇವೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರದ ಜತೆ ಮಾತನಾಡಿ ನಮಗೆ ಅಕ್ಕಿ ಕೊಡಿಸಲು ತಯಾರಿದ್ದಾರ?  ಬಿಜೆಪಿಯವರು ಎಂದಾದರೂ ಜಿಲ್ಲೆ, ತಾಲ್ಲೂಕುಗಳಲ್ಲಿರುವ ಹಿಂದುಳಿದ ವರ್ಗಗಳ, ಎಸ್.ಸಿ, ಎಸ್.ಟಿ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದ್ದಾರಾ? ಈ ಸಮುದಾಯದ ವಿದ್ಯಾರ್ಥಿಗಳ ಕಷ್ಟಗಳನ್ನು ಕೇಳಿದ್ದಾರಾ? ಅವರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರಾ? ಬಿಜೆಪಿ ಅವಧಿಯಲ್ಲಿ ಹಿಂದುಳಿದ ಸಮುದಾಯಗಳ ಏಳಿಗೆಗೆ ಬಿಡುಗಡೆ ಮಾಡಲಾದ ಅನುದಾನ ಮತ್ತು ನಮ್ಮ‌ ಅವಧಿಯಲ್ಲಿ ನೀಡಿದ ಅನುದಾನದ ವ್ಯತ್ಯಾಸ ಎಷ್ಟು ಗೊತ್ತೆ? ಪ್ರಶ್ನಿಸಿದರು.

2013 ರಿಂದ 2018 ರವರೆಗೆ ಪ್ರತೀ ವರ್ಷ ವಸತಿ ನಿಲಯಗಳ ಭೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ. 2014 ರಲ್ಲಿ ಮೆಟ್ರಕ್ ಪೂರ್ವ ಹಾಸ್ಟೆಲ್ ವಿದ್ಯಾರ್ಥಿಗಳ ಭೋಜನಾ ವೆಚ್ಚ ತಲಾ 750 ರಿಂದ 900ಕ್ಕೆ ಹೆಚ್ಚಿಸಿದ್ದು, ಮೆಟ್ರಿಕ್ ನಂತರದ ಭೋಜನಾ ವೆಚ್ಚ ತಲಾ 850 ರಿಂದ 1000 ಕ್ಕೆ ಹೆಚ್ವಿಸಲಾಯಿತು. ಈ ಮೊತ್ತ 2017-18 ಕ್ಕೆ ಕ್ರಮವಾಗಿ ಮೆಟ್ರಿಕ್ ಪೂರ್ವಕ್ಕೆ 1400 ಕ್ಕೆ, ಮೆಟ್ರಿಕ್ ನಂತರದ್ದು 1500 ಕ್ಕೆ ಹೆಚ್ಚಿಸಿದೆವು. ಆದರೆ ಬಿಜೆಪಿ 2019 ರಿಂದ 2022 ರ ವರೆಗೆ ಒಂದೇ ಒಂದು ರೂಪಾಯಿಯನ್ನೂ ಹೆಚ್ವಿಸಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು ತಲಾ ವಿದ್ಯಾರ್ಥಿಗೆ 650 ರೂ. ಹೆಚ್ಚಿಸಿದ್ದೇವೆ.  ನಮ್ಮ ಸರ್ಕಾರದ ಅವಧಿಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಕೊಟ್ಟಿದ್ದು 408.02 ಕೋಟಿ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ 880.65 ಕೋಟಿ ಸೇರಿ ಒಟ್ಟು ರೂ. 1,288.67 ಕೋಟಿ ಕೊಟ್ಟೆವು. ಆದರೆ ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ  ಕೊಟ್ಟ ವಿದ್ಯಾರ್ಥಿ ವೇತನ ಕೇವಲ ರೂ. 650.78 ಕೋಟಿ ಮಾತ್ರ.  ವಿದ್ಯಾಸಿರಿ ಯೋಜನೆಗೆ ಕಾಂಗ್ರೆಸ್ ಅವಧಿಯಲ್ಲಿ ರೂ.431.68 ಕೋಟಿ ಕೊಟ್ಟರೆ, ಬಿಜೆಪಿ ತನ್ನ ಅವಧಿಯಲ್ಲಿ ಕೊಟ್ಟಿದ್ದು 197.62 ಕೋಟಿ ಮಾತ್ರ ಎಂದು ಅವರು ಹೇಳಿದರು.

ನಮ್ಮ ಅವಧಿಯಲ್ಲಿ 308 ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಹೊಸ ಹಾಸ್ಟೆಲ್ ಗಳನ್ನು ತೆರೆದು 30,800 ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿದೆವು. ಬಿಜೆಪಿ ತನ್ನ ಅವಧಿಯಲ್ಲಿ ಕೇವಲ 5 ಹಾಸ್ಟೆಲ್ ಗಳನ್ನು ಮಾತ್ರ ತೆರೆದು ಕೇವಲ 500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿತು. ನಮ್ಮ ಸರ್ಕಾರದ 2013-18 ರ ಅವಧಿಯಲ್ಲಿ 328 ಮೊರಾರ್ಜಿ ವಸತಿ ಶಾಲೆಗಳನ್ನು ತೆರೆದು 82,000 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ, ಶಿಕ್ಷಣ ಒದಗಿಸಿತು. ಬಿಜೆಪಿ 14 ವಸತಿ ಶಾಲೆ ತೆರೆದು 3,500 ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿದೆ. ಇದು ಬಿಜೆಪಿ ಸರ್ಕಾರದ ಸಾಧನೆ. ಶೋಷಿತ ಜನರ ಬಗ್ಗೆ ನನಗೆ ಮತ್ತು ನಮ್ಮ ಸರ್ಕಾರಕ್ಕೆ ಇರುವ ಕಾಳಜಿ ಬಗ್ಗೆ ವ್ಯಂಗ್ಯವಾಡುವ ಮೊದಲು ವಿಪಕ್ಷ ನಾಯಕರಾದ ಅಶೋಕ್ ಅವರು ನೀವೇನು ಮಾಡಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಆರ್‌ ಅಶೋಕ್‌ ಅವರ ವಿರುದ್ಧ ಈ ಸಂದರ್ಭದಲ್ಲಿ ಹರಿಹಾಯ್ದರು.

ಬಿಜೆಪಿ ಸರ್ಕಾರದ್ದು 2019 ರಿಂದ 2023ರ ವರೆಗೆ ದ್ವೇಷ ತುಂಬಿದ, ತುಕ್ಕು ಹಿಡಿದ ಬಸ್ಸು ಮುಂದಕ್ಕೆ ಹೋಗಲೇ ಇಲ್ಲ. ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸರ್ಕಾರಕ್ಕಿಂತಲೂ ಹೆಚ್ಚಿನ ಹಾಲು ಉತ್ಪಾದನೆಯಾಗಿದೆ. 2023- 24 ರಲ್ಲಿ 84.41 ಲಕ್ಷ ಲೀಟರ್ ಹಾಲು ಹೆಚ್ಚು ಉತ್ಪಾದನೆಯಾಗಿದೆ ಎಂದು ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕರು ಪತ್ರದಲ್ಲಿ ತಿಳಿಸಿದ್ದಾರೆ.  ರೈತರಿಗೆ ನೀಡಬೇಕಿದ್ದ ಪ್ರೋತ್ಸಾಹ ಧನಕ್ಕಾಗಿ 2019 ರಿಂದ ಇಲ್ಲಿಯವರೆಗೆ 1,178 ಕೋಟಿ ರೂ.ಗಳು ಬಿಡುಗಡೆಯಾಗಿದೆ. ಈ ವರ್ಷ 1,172 ಕೋಟಿ ರೂ.ಗಳಲ್ಲಿ 971 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ರೈತರಿಗೆ 3 ರೂ. ಗಳಿಂದ 5 ರೂ.ಗಳಿಗೆ ಪ್ರೋತ್ಸಾಹ ಧನ ಹೆಚ್ಚಿಸಿದ್ದು ನಮ್ಮ ಸರ್ಕಾರ ಎಂದು ಹೇಳಿದರು.

ಇನ್ನು, ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರದ ನಿಲುವು, ನೀತಿ, ಮುನ್ನೋಟ ಹಾಗೂ ಕಾರ್ಯಕ್ರಮಗಳನ್ನು ಸ್ಪಷ್ಟವಾಗಿ ರಾಜ್ಯದ ಜನತೆ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸದನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರಿಗೆ ಅಭಿನಂದನೆಗಳು ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!