spot_img
Wednesday, January 22, 2025
spot_img

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು-ಡಾ.ಎಚ್.ಎಸ್.ಶೆಟ್ಟಿ

ಕುಂದಾಪುರ, (ಜನಪ್ರತಿನಿಧಿ ವಾರ್ತೆ) ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಲು ಪತ್ರಿಕಾಮಾದ್ಯಮಗಳ ಪಾತ್ರ ದೊಡ್ಡದು. ಎಲ್ಲಾ ವ್ಯವಸ್ಥೆಗಳು ಕೂಡಾ ವ್ಯವಸ್ಥಿತವಾಗಿ ಮುನ್ನೆಡೆದು ಕಾರ್ಯನಿರ್ವಹಿಸುವ ಕೆಲಸ ಮಾಧ್ಯಮಗಳು ಮಾಡುತ್ತಿವೆ. ಪ್ರಸ್ತುತ ಪತ್ರಿಕಾಮಾಧ್ಯಮ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿಯಾಗಿದೆ. ಹೊಸಹೊಸ ಬದಲಾವಣೆಗಳು ಆಗಿವೆ. ಆದರೆ ಹೊಸ ಜನಾಂಗದಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿರುವುದು ವಿಷಾಧನೀಯ ಸಂಗತಿ ಎಂದು ಉದ್ಯಮಿ ಡಾ.ಎಚ್.ಎಸ್ ಶೆಟ್ಟಿ ಅಭಿಪ್ರಾಯಪಟ್ಟರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕೋಟೇಶ್ವರದ ಸಹನಾ ಕನ್ವೆನ್ಷನ್ ಸೆಂಟರ್‌ನ ಸುಮುಖಾ ಮಿನಿ ಹಾಲ್ ನಲ್ಲಿ ನಡೆದ ಬೆಳಗಾವಿ ವಿಶ್ವವಿದ್ಯಾನಿಲಯದ ಡಾಕ್ಟರ್ ಆಫ್ ಸೈನ್ಸ್ ಗೌರವ ಡಾಕ್ಟರೇಟ್ ಗೌರವ ಪಡೆದಿರುವ ಹಾಲಾಡಿ ಕುದ್ರುಮನೆ ಶ್ರೀನಿವಾಸ ಶೆಟ್ಟಿಯವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಇವತ್ತು ಪತ್ರಿಕಾ ಮಾಧ್ಯಮಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಹೊಸ ತಾಂತ್ರಿಕತೆ, ಡಿಜಿಟಲ್ ಮಾಧ್ಯಮಗಳ ಪ್ರವೇಶವಾಗಿದೆ. ಹೊಸ ಹೊಸ ಸವಾಲುಗಳನ್ನು ಸ್ವೀಕರಿಸಿ ಅದನ್ನು ಅಳವಡಿಸಿಕೊಂಡು ಮುನ್ನೆಡೆಯುವ ಸಂದಿಗ್ದತೆಯೂ ಪ್ರಸ್ತುತ ಇದೆ. ಓದುವ ಹವ್ಯಾಸ ನಶಿಸುತ್ತಿದೆ. ೪೦ ವರ್ಷ ಮೇಲ್ಪಟ್ಟವರಲ್ಲಿ ಓದುವ ಹವ್ಯಾಸ ಕಾಣಬಹುದು. ಹೊಸ ಓದುಗರು ಬರುತ್ತಿಲ್ಲ. ಓದುವ ಆಸಕ್ತಿ ಯುವಜನಾಂಗದಲ್ಲಿ ಬೆಳೆಯಬೇಕು ಎಂದರು.


ನಂತರ ನಡೆದ ಸಂವಾದದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಹುಟ್ಟೂರಿನಲ್ಲಿ ಉದ್ಯಮ ಆರಂಭಿಸುವ ಚಿಂತನೆ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಭಾಗದಲ್ಲಿ ಉದ್ಯಮ ಆರಂಭಿಸಲು ಪರಿಸ್ಥಿತಿ ಪ್ರತಿಕೂಲವಾಗಿದೆ. ಉದ್ಯಮಗಳನ್ನು ಆರಂಭಿಸಲು ಸರಿಯಾದ ಪೂರಕವಾದ ವಾತಾವರಣಗಳು ಇರಬೇಕಾಗುತ್ತದೆ. ನನಗೂ ಕೂಡಾ ಹುಟ್ಟೂರಿನ ಜನರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವ ಚಿಂತನೆ ಇದೆ. ಇಲ್ಲಿ ಉದ್ಯಮಗಳನ್ನು ಆರಂಭಿಸುವ ಚಿಂತನೆ ಇತ್ತು. ಸೂಕ್ತ ಸ್ಪಂದನೆ ಸಂಬಂಧಪಟ್ಟವರಿಂದ ಸಿಗಲಿಲ್ಲ ಎಂದರು.
ರಾಜಕಾರಣಕ್ಕೆ ಬರುತ್ತಿರಾ ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜಕೀಯಕ್ಕೆ ಬರುವುದಿಲ್ಲ. ರಾಜಕೀಯ ಅಪೇಕ್ಷೆಯಿಂದ ನಾನು ಸೇವೆ ಮಾಡುತ್ತಿಲ್ಲ. ರಾಜಕೀಯ ಇಲ್ಲದೇ ಜನಸೇವೆ ಮಾಡಲು ಸಾಧ್ಯವಿದೆ. ರಾಜಕೀಯ ಅನಿವಾರ್ಯವೂ ಅಲ್ಲ ಎಂದು ಅವರು ಪ್ರಶೆಯೊಂದಕ್ಕೆ ಉತ್ತರಿಸಿದರು.

ಕೋವಿಡ್ ಬಳಿಕ ಸಣ್ಣ ವ್ಯವಹಾರಗಳಿಗೆ ತೊಂದರೆಯಾಗಿದೆ. ದೊಡ್ಡ ಉದ್ಯಮಗಳಿಗೆ ಅಂತಹ ಸಮಸ್ಯೆಯಾಗಲಿಲ್ಲ. ಈಗ ಎಲ್ಲವೂ ಸರಿಯಾಗಿದೆ ಎಂದರು.

ಶಿಕ್ಷಣ ವ್ಯವಸ್ಥೆ ಬಲಿಷ್ಠವಾಗಬೇಕು:
ಶಿಕ್ಷಣ ವ್ಯವಸ್ಥೆ ಬಲಿಷ್ಠವಾಗಬೇಕು. ಸರ್ಕಾರಿ ಶಾಲೆಗಳು ಬಲಹೊಂದಬೇಕು. ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರಕುವಂತಾಗಬೇಕು. ನಾನು ಬಡತನವನ್ನು ಸ್ವತಃ ಅನುಭವಿಸಿದವ. ಭಂಡಾರ್ಕಾಸ್ ಕಾಲೇಜಿನಲ್ಲಿ ನಾನು ಓದಿದವ. ಮುಂದೆ ದಾರಿಗಳು ನನ್ನ ಮುಂದೆ ಇದ್ದವು. ಪತ್ರಿಕೆಯೊಂದಲ್ಲಿ ಕೆಲಸ ಸಿಕ್ಕಿತು. ನನ್ನ ಮುಂದೊಂದು ಗುರಿ ಇತ್ತು. ಅದಕ್ಕಾಗಿ ಕೆಲಸ ಬಿಟ್ಟು ಗುರಿಯತ್ತ ಮುನ್ನೆಡೆದೆ. ನಿರಂತರ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಿದೆ ಎಂದರು.

ಮನೆಗೊಂದು ಕೈತೋಟ ಇರಲಿ:
ಇವತ್ತು ನಾವು ಸೇವಿಸುವ ಆಹಾರ ಪದಾರ್ಥಗಳೆಲ್ಲವೂ ಕಲುಷಿತವಾಗಿವೆ. ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳು ರಾಸಾಯನಿಕಯುಕ್ತವಾಗಿವೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಾಧ್ಯವಾದಷ್ಟು ನಾವು ಕೃಷಿಯಲ್ಲಿ ತೊಡಗಿಸಿಕೊಂಡು ನಮ್ಮ ಅಗತ್ಯದಷ್ಟು ಉತ್ಪಾದನೆ ಮಾಡಿಕೊಳ್ಳಬೇಕು. ಮನೆಗೊಂದು ಕೈತೋಟ ಮಾಡಿಕೊಳ್ಳಿ. ಸೊಪ್ಪು ತರಕಾರಿಗಳನ್ನು ಸಾವಯವ ಮಾದರಿಯಲ್ಲಿ ಬೆಳೆದು ಉಪಯೋಗಿಸಿ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು ಎಂದರು.


ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಾ.ಎಚ್.ಎಸ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನ ನಿರ್ಮಾಣದ ಕುರಿತು ಮನವಿ ಸಲ್ಲಿಸಲಾಯಿತು.

ಕೋಶಾಧಿಕಾರಿ ಲೋಕೇಶ್ ಆಚಾರ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗಣೇಶ ಬೀಜಾಡಿ ಸ್ವಾಗತಿಸಿದರು. ರಾಘವೇಂದ್ರ ಪೈ ಸನ್ಮಾನ ಪತ್ರ ವಾಚಿಸಿದರು. ಸತೀಶ್ ಆಚಾರ್ ಉಳ್ಳೂರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಶ್ರೀಕರ ವಂದಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!