Sunday, September 8, 2024

ಸಾವಿರ ಗ್ರಾಮ ಆಡಳಿತಾಧಿಕಾರಿಗಳ ನೇಮಕಕ್ಕೆ ಶೀಘ್ರ ಅಧಿಸೂಚನೆ : ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ

ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಪ್ರಶ್ನೆಗೆ ಕಂದಾಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮದ ಭರವಸೆ ನೀಡಿದ ಸಚಿವರು  

ಜನಪ್ರತಿನಿಧಿ  (ಬೆಂಗಳೂರು) : ಕಂದಾಯ ಇಲಾಖೆಯ ಕಾರ್ಯ ವೈಖರಿಯನ್ನು ಇನ್ನಷ್ಟು ಚುರುಕುಗೊಳಿಸಲು ಹಾಗೂ ಜನರಿಗೆ ಸರಳ ಆಡಳಿತ ನೀಡುವ ಉದ್ದೇಶದಿಂದ ಶೀಘ್ರದಲ್ಲೇ 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ನಿನ್ನೆ(ಸೋಮವಾರ) ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ಪ್ರಶ್ನೆಗೆ ಸಚಿವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ತಾಲೂಕುಗಳಲ್ಲಿ ಗ್ರಾಮ ಆಡಳಿತಾಧಿಕಾರಿಗಳು (ಲೆಕ್ಕಾಧಿಕಾರಿಗಳು) ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಹಂತದ ನೌಕರರನ್ನು ಬೇರೆಡೆ ನಿಯೋಜನೆಗೊಳಿಸಲಾಗುತ್ತಿದೆ. ಉದ್ಯೋಗಿಗಳ ಕೊರತೆಯಿಂದಾಗಿ ಕಂದಾಯ ಇಲಾಖೆಯಲ್ಲಿ ಜನರಿಗೆ ಸರಿಯಾದ ಸಮಯಕ್ಕೆ ಕೆಲಸವಾಗುತ್ತಿಲ್ಲ” ಎಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಪ್ರಶ್ನೆಯ ಮೂಲಕ ವಿಷಯ ಪ್ರಸ್ತಾಪಿಸಿದ್ದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, “ನಿಮ್ಮ ಪರ ನಾವಿದ್ದೇವೆ. ಇದರಲ್ಲಿ ಯಾವುದೂ ರಾಜಕೀಯ ಇಲ್ಲ. ಕುಂದಾಪುರ ತಾಲೂಕಿನಲ್ಲಿ ಕಂದಾಯ ಇಲಾಖೆಯ 110 ಹುದ್ದೆಗಳ ಪೈಕಿ 70 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಶೇ.65ರಷ್ಟು ಸ್ಥಾನಗಳನ್ನು ಭರ್ತಿ ಮಾಡಲಾಗಿದೆ. ಉಳಿದ ಸ್ಥಾನಗಳನ್ನೂ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು” ಎಂದವರು ಭರವಸೆ ನೀಡಿದರು.

ಇತರೆ ಇಲಾಖೆಗಳಿಗೆ ಹೋಲಿಸಿದರೆ ಕಂದಾಯ ಇಲಾಖೆಯಲ್ಲಿ ನೌಕರರ ಸಂಖ್ಯೆ ಅಧಿಕವಿದೆ. ಅಲ್ಲದೆ, ಸಾರ್ವಜನಿಕರಿಗೆ ಶೀಘ್ರ ಸೇವೆ ನೀಡುವ ಉದ್ದೇಶಿದಿಂದ ಶೀಘ್ರದಲ್ಲೇ 1000 ಗ್ರಾಮ ಆಡಳಿತಾಧಿಕಾರಿಗಳ(ಲೆಕ್ಕಾಧಿಕಾರಿಗಳ) ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ನೇಮಕಾತಿಗೆ ಹಸಿರು ನಿಶಾನೆ ನೀಡಿದ್ದಾರೆ” ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ನಿಯೋಜನೆಯ ಮೇಲೆ ಬೇರೆಡೆ ತೆರಳುವುದು ಸರಿಯಲ್ಲ

ನಿಯೋಜನೆ ಮೇಲೆ ಅಧಿಕಾರಿಗಳು ಬೇರೆಡೆ ಕೆಲಸಕ್ಕೆ ತೆರಳುವ ಬಗ್ಗೆಯೂ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ, “ಸರ್ಕಾರಕ್ಕೆ ಸಾರ್ವಜನಿಕರ ಹಿತ ಮುಖ್ಯ. ಹೀಗಾಗಿ ಕಂದಾಯ ಇಲಾಖೆ ನೌಕರರು ನಿಯೋಜನೆಯ ಮೇಲೆ ಬೇರೆಡೆ ತೆರಳುವುದು ಸರಿಯಲ್ಲ. ಅವರು ಸರ್ಕಾರ ನೌಕರಿ ಕೊಟ್ಟ ಕಡೆ ಕೆಲಸ ಮಾಡಲಿ” ಎಂದು ಅಭಿಪ್ರಾಯಪಟ್ಟರು.

ಕಳೆದ ಸರ್ಕಾರ ತುಂಬಾ ಜನರನ್ನು ಬೇರೆಡೆ ನಿಯೋಜನೆ ಮಾಡಿದ್ದಾರೆ. ನನಗೂ ಕನಿಷ್ಠ 2000 ಉದ್ಯೋಗಿಗಳ ನಿಯೋಜನೆಗೆ ಮನವಿ ಸಲ್ಲಿಸಲಾಗಿದೆ. ಆದರೆ, ನಾನು ಈವರೆಗೆ ಒಬ್ಬರನ್ನೂ ನಿಯೋಜನೆ ಮಾಡಿಲ್ಲ. ಯಾರನ್ನೂ ಮೂಲ ಸ್ಥಾನದಿಂದ ನಿಯೋಜನೆಗೊಳಿಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೂ ಈಗಾಗಲೇ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳ ವಿವೇಚನೆ ಮೇಲೆ ಗರಿಷ್ಠ 5 ಸ್ಥಾನಗಳನ್ನು ಹೊರತುಪಡಿಸಿ ಉಳಿದ ಎಲ್ಲ ನೌಕರರನ್ನೂ ಮೂಲ ಸ್ಥಾನಕ್ಕೆ ವಾಪಸ್ ಕರೆಸಿಕೊಳ್ಳಬೇಕು. ಜನರಿಗೆ ಸರಳ ಹಾಗೂ ಶೀಘ್ರ ಸೇವೆ ಒದಗಿಸಲು ಸೂಚಿಸಲಾಗಿದೆ” ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!