Sunday, September 8, 2024

ದೆಹಲಿ ಚಲೋ : ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ರೈತರು ಪ್ರವೇಶಿಸದಂತೆ ಬಹುಪದರ ಬ್ಯಾರಿಕೇಡ್‌ಗಳು, ಮುಳ್ಳುತಂತಿಗಳ ಅಳವಡಿಕೆ !

ಜನಪ್ರತಿನಿಧಿ (ನವದೆಹಲಿ): ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಾಳೆ (ಮಂಗಳವಾರ, ಫೆಬ್ರವರಿ 13) ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ಪೊಲೀಸರ ಬಿಗಿ ಭದ್ರತೆ ನಿಯೋಜಿಸಲಾಗಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ರಾಜಧಾನಿಯ ಸಿಂಘು, ಘಾಜಿಪುರ್‌ ಮತ್ತು ಟಿಕ್ರಿ ಗಡಿ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧಿಸಿ, ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರತಿಭಟನಾಕಾರರು ಬರುವ ವಾಹನಗಳು ನಗರವನ್ನು ಪ್ರವೇಶಿಸದಂತೆ ತಡೆಯಲು ಕಾಂಕ್ರಿಟ್‌ ತಡೆಗೋಡೆ ಹಾಗೂ ಕಬ್ಬಿಣದ ಮೊಳೆಗಳನ್ನು ರಸ್ತೆಗಳಲ್ಲಿ ಅಳವಡಿಸಲಾಗಿದೆ ಎಂದು ವರದಿಯಾಗಿದೆ.

ಸಿಂಘು ಗಡಿಯಲ್ಲಿ ವಾಣಿಜ್ಯ ವಾಹನಗಳ ಸಂಚಾರದ ಮೇಲೆ ಇಂದಿನಿಂದಲೇ(ಸೋಮವಾರ) ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ ನಾಳೆ(ಮಂಗಳವಾರ) ಎಲ್ಲ ಮಾದರಿಯ ವಾಹನಗಳಿಗೂ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

ಸುಮಾರು 5,000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ರಸ್ತೆ ಬಂದ್‌ ಮಾಡುವುದಕ್ಕೆ ದೊಡ್ಡದೊಡ್ಡ ಕಂಟೇನರ್‌ಗಳನ್ನು ಹಾಗೂ ಕಾಂಕ್ರಿಟ್‌ ತಡೆಗೋಡೆ ಸಾಗಿಸಲು ಕ್ರೇನ್‌ಗಳನ್ನು ನಿಯೋಜಿಸಲಾಗಿದೆ. ರೈತರು ರಾಜಧಾನಿ ಪ್ರವೇಶಿಸದಂತೆ ನೋಡಿಕೊಳ್ಳಲು ಈಗಾಗಲೇ ಬಹುಪದರ ಬ್ಯಾರಿಕೇಡ್‌ಗಳು, ಮುಳ್ಳುತಂತಿಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ಒದಗಿ ಬಂದಿದೆ.

ಏತನ್ಮಧ್ಯೆ, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈಶಾನ್ಯ ದೆಹಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಎಎನ್‌ಐ ವರದಿಯಲ್ಲಿ ತಿಳಿಸಿದೆ. ದೆಹಲಿ ಪೊಲೀಸ್‌ ಕಮಿಷನರ್‌ ಸಂಜಯ್‌ ಅರೋರಾ, ಹರಿಯಾಣ ಮತ್ತು ಉತ್ತರ ಪ್ರದೇಶದೊಂದಿಗಿನ ನಗರದ ಗಡಿ ಪ್ರದೇಶಗಳಿಗೆ ಭಾನುವಾರವೇ ಭೇಟಿ ನೀಡಿ, ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತ್ರಿಪಡಿಸುವ ಕಾನೂನು ಜಾರಿ ಸೇರಿದಂತೆ ಹಲವು ಬೇಡಿಕಗಳ ಈಡೇರಿಕೆಗೆ ಒತ್ತಾಯಿಸಿ, ಸಂಯುಕ್ತ ಕಿಸಾನ್‌ ಮೋರ್ಚಾ ಮತ್ತು ಕಿಸಾನ್‌ ಮಜ್ದೂರ್‌ ಮೋರ್ಚಾ ‘ದೆಹಲಿ ಚಲೊ’ಗೆ ಕರೆ ನೀಡಿವೆ. ದೇಶದ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿವೆ.

ಸೆಕ್ಷನ್ 144 ಜಾರಿ, ತುರ್ತು ಬಂಧನಕ್ಕೆ ಆದೇಶ
‘ದೆಹಲಿ ಚಲೋ’ ಮಾರ್ಚ್‌ಗೆ ಮುನ್ನ ಮುಂದಿನ 30 ದಿನಗಳ ಕಾಲ ಇಡೀ ದೆಹಲಿ ನಗರದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಹೇಳಿದೆ. ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಸೋಮವಾರ ಆದೇಶ ಹೊರಡಿಸಿದ್ದು, ಆದೇಶವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯನ್ನು ತಕ್ಷಣವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

“ದೆಹಲಿಯ ಭೌಗೋಳಿಕ ಮಿತಿಗಳಲ್ಲಿ ರಾಜಕೀಯ, ಸಾಮಾಜಿಕ, ಅಥವಾ ಯಾವುದೇ ಇತರ ಉದ್ದೇಶಕ್ಕಾಗಿ ಯಾವುದೇ ಮೆರವಣಿಗೆಗಳು, ಪ್ರದರ್ಶನಗಳು, ರ್ಯಾಲಿಗಳು ಅಥವಾ ಕಾಲ್ನಡಿಗೆಯಲ್ಲಿ ಮೆರವಣಿಗೆ, ಸಮಾವೇಶ, ಅಥವಾ ಭಾಗವಹಿಸುವಿಕೆಯ ಮೇಲೆ ಸಂಪೂರ್ಣ ನಿಷೇಧವಿರುತ್ತದೆ.” ಆದೇಶದಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳ ಮೇಲ್ವಿಚಾರಣೆ
ಡಿಸಿಪಿ (ನಾರ್ತ್ ಈಸ್ಟ್) ಜಾಯ್ ಟಿರ್ಕಿ ಅವರು ಇದೇ ವಿಚಾರವಾಗಿ ಮಾತನಾಡಿದ್ದು, ‘ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ನಾವು ಸಾಮಾಜಿಕ ಮಾಧ್ಯಮ ಮತ್ತು ನಾವು ಸ್ವೀಕರಿಸುತ್ತಿರುವ ಇನ್‌ಪುಟ್‌ಗಳು ಸೇರಿದಂತೆ ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಾವು ಉತ್ತರ ಪ್ರದೇಶ, ಹರಿಯಾಣ ಹಾಗೂ ಪಂಜಾಬ್‌ನಲ್ಲಿ ಮುಂಜಾಗ್ರತ್ರಾ ಕ್ರಮವಾಗಿ ಪೋರ್ಟರ್‌ಗಳನ್ನು ನಿಯೋಜಿಸಿದ್ದೇವೆ.

ಇವುಗಳ ಲೈವ್ ಮಾಹಿತಿಯನ್ನು ನಾವು ಪಡೆಯುತ್ತಿದ್ದೇವೆ. ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಸ್ವಲ್ಪ ಒತ್ತಡವಿರುತ್ತದೆ… ವಿವರವಾದ ವ್ಯವಸ್ಥೆಯನ್ನು ಹೊರಡಿಸಲಾಗಿದೆ. ವಾಹನಗಳು, ಜೆಸಿ ಬ್ಯಾರಿಕೇಡ್ಗಳು ಮತ್ತು ಕಬ್ಬಿಣದ ಬ್ಯಾರಿಕೇಡ್ಗಳನ್ನು ಬಳಸುತ್ತಿದ್ದೇವೆ. 144 ಸೆಕ್ಷನ್ ಜಾರಿ ಮಾಡಿರುವುದಾಗಿ ನೋಟಿಸ್ ನೀಡಲಾಗಿದೆ. ನಾಳೆ ನಡೆಯಲಿರುವ ‘ದೆಹಲಿ ಚಲೋ’ ಮೆರವಣಿಗೆಗೆ ನಾವು ಸಿದ್ಧರಾಗುತ್ತೇವೆ ಎಂದು ಹೇಳಿರುವುದಾಗಿ ವರದಿಯಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!