spot_img
Saturday, April 26, 2025
spot_img

ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯಲ್ಲಿ ‘ವರ್ಣಾಂಜಲಿ’ ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ಪ್ರದರ್ಶನ

ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯು ರಜತ ಮಹೋತ್ಸವದ ವರ್ಷವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದು, ಸಂಸ್ಥೆ ಶೈಕ್ಷಣಿಕ ಉತ್ಕೃಷ್ಟತೆಯನ್ನು ಪೋಷಿಸಲು ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಉತ್ತೇಜಿಸಲು ಕಳೆದ ೨೫ ವರ್ಷಗಳಿಂದ ಅವಿರತವಾಗಿ ಪ್ರಯತ್ನಿಸಿದೆ. ಆ ನಿಟ್ಟಿನಲ್ಲಿ ಶಾಲೆಯ ಮತಂಗವನದಲ್ಲಿ ಫೆಬ್ರವರಿ 8, 9, 10ನೇ ತಾರೀಖಿನಂದು ಆರ್ಟಿಸ್ಟ್ ಪೋರಮ್, ಉಡುಪಿ ಇವರ ಸಹಯೋಗದೊಂದಿಗೆ “ವರ್ಣಾಂಜಲಿ” ಎಂಬ ಹೆಸರಿನ ರಾಜ್ಯ ಮಟ್ಟದ ಕಲಾ ಶಿಬಿರ ಮತ್ತು ಪ್ರದರ್ಶನ ಕಾರ್ಯಕ್ರಮವು ಮೂರು ದಿನಗಳ ಕಾಲ ರಾಜ್ಯ ಮಟ್ಟದ ವಿವಿಧ ಕಲಾವಿದರ ಒಗ್ಗೂಡುವಿಕೆಯಿಂದ ನೆರವೇರಲಿದೆ ಎಂದು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಹೇಳಿದರು.

ಅವರು ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬಸವರಾಜ ಕುತನಿ, ಗದಗ, ಚಂದ್ರನಾಥ ಆಚಾರ್ಯ, ಬೆಂಗಳೂರು, ಗಣೇಶ್ ಸೋಮಯಾಜಿ, ಮಂಗಳೂರು, ಜನಾರ್ದನ ಹಾವಂಜೆ, ಹಾವಂಜೆ, ಕಂಡನ್ ಜಿ. ಬೆಂಗಳೂರು, ಕಿಶೋರ್ ಕುಮಾರ್, ತುಮಕೂರು, ಕೃಷ್ಣ ಶೆಟ್ಟಿ, ಬೆಂಗಳೂರು, ಮೋಹನರಾವ್ ಬಿ. ಪಾಂಚಾಲ್, ಹಂಪಿ, ಸಕು ಪಾಂಗಾಳ, ಉಡುಪಿ, ಸಾವಿತ್ರೀ ಯರಶಿ, ಬಾಗಲಕೋಟೆ, ಸಿಂಧು ಕಾಮತ್, ಉಡುಪಿ, ಶಂಕರ್ ಕೆ. ವಿ., ಹುಬ್ಬಳ್ಳಿ, ವಿಶ್ವಾಸ್ ಎಂ., ಕಾಸರಗೋಡು, ವಿಲ್ಸನ್ ಸೋಜಾ, ಕಾಸರಗೋಡು, ರಮೇಶ್ ರಾವ್, ಉಡುಪಿ ಇವರುಗಳು ಆಗಮಿಸಲಿದ್ದಾರೆ.

ಫೆ.10 ಮಧ್ಯಾಹ್ನ 3 ಘಂಟೆಗೆ ಸಮಾರೋಪ ನಡೆಯಲಿದೆ. ಈ ಸಂದರ್ಭದಲ್ಲಿ ಕಲಾವಿದರು ರಚಿಸಿದ ವರ್ಣಚಿತ್ರಗಳ ಪ್ರದರ್ಶನವೂ ಸಹ ನಡೆಯಲಿದೆ ಎಂದರು.

ಆರಾಧನೆ-ಸಂಸ್ಥಾಪಕರ ದಿನಾಚರಣೆ:
ದಿ. ಶ್ರೀ ಹೆಚ್. ರಾಮಚಂದ್ರ ಭಟ್ಟರ ಕನಸಿನ ಶಿಶುವಾದ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯು ತನ್ನ ಸಾರ್ಧಕ್ಯ 25ವಸಂತಗಳನ್ನು ಪೂರೈಸಿದ್ದು, ದಿನಾಂಕ 10 ಶನಿವಾರದಂದು ಆರಾಧನೆ-ಸಂಸ್ಥಾಪಕರ ದಿನಾಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಸಹ ಹಮ್ಮಿಕೊಂಡಿದೆ.

ಸಭಾ ಕಾರ್ಯಕ್ರಮವು ಬೆಳಿಗ್ಗೆ 10 ಘಂಟೆಗೆ ನಡೆಯಲಿದ್ದು ಅಧ್ಯಕ್ಷತೆಯನ್ನು ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನ, ಹಟ್ಟಿ‌ಅಂಗಡಿಯ ಅಧ್ಯಕ್ಷರಾದ ಎಲ್. ಟಿ. ತಿಮ್ಮಪ್ಪ, ಸಾಗರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಯ್ಯಾಸ್ ಬೆವೆರೇಜಸ್ ಮತ್ತು ಫುಡ್ ಪ್ರೈ.ಲಿ ಬೆಂಗಳೂರು ಇದರ ಡಾ. ಪಿ. ಸದಾನಂದ ಮಯ್ಯ, ಪತ್ರಕರ್ತ ವಿನಾಯಕ ಭಟ್, ಮೂರೂರು ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ವೇ.ಮೂ.ಹೆಚ್.ಬಾಲಚಂದ್ರ ಭಟ್, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಹೆಚ್.ಗಣೇಶ್ ಕಾಮತ್, ವೀಣಾರಶ್ಮಿ ಎಂ.,ಪ್ರೊ.ಎಸ್.ನಾರಾಯಣ ರಾವ್, ಡಾ.ಎನ್.ಪಿ ನಾರಾಯಣ ಶೆಟ್ಟಿ ಭಾಗವಹಿಸಲಿದ್ದಾರೆ.

ಅಂದು ಬೆಳಿಗ್ಗೆ 9.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಪಂದನ ಬೌದ್ಧಿಕ ದಿವ್ಯಾಂಗರ ತರಬೇತಿ ಹಾಗು ಪುನರ್ವಸತಿ ಕೇಂದ್ರ ಉಪ್ಪೂರು ಉಡುಪಿ ಇಲ್ಲಿನ ಮಕ್ಕಳಿಂದ ರಾಮಾಯಣ ನೃತ್ಯ ರೂಪಕ, ಮಧ್ಯಾಹ್ನ ಸಭಾ ಕಾರ್ಯಕ್ರಮದ ಬಳಿಕ ವಿನಯ ಹೆಗಡೆ ಸಿರ್ಸಿ ಇವರಿಂದ ವರ್ಚುವಲ್ ರಿಯಾಲಿಟಿ ತಂತ್ರಜ್ಞಾನ ಆಧಾರಿತ ಕಾಸ್ಮಿಕ್ ಸ್ಪ್ಲಾಶ್ ಅಪರೂಪದ ಕಲಾ ಪ್ರದರ್ಶನ ನಡೆಯಲಿದೆ ಎಂದರು.

ಆರ್ಟಿಸ್ಟ್ ಫೊರಮ್ ಉಡುಪಿ ಇದರ ಅಧ್ಯಕ್ಷರಾದ ರಮೇಶ ರಾವ್ ಮಾತನಾಡಿ ವರ್ಣಾಂಜಲಿ ರಾಜ್ಯ ಮಟ್ಟದ ಕಲಾ ಶಿಬಿರವಾಗಿದೆ. ಇಲ್ಲಿ ಭಾಗವಹಿಸುವ ಎಲ್ಲ ಕಲಾವಿದರು ಕೂಡಾ ಮೊದಲ ದಿನವೇ ತಮ್ಮ ರಚನೆಯ ಚಿತ್ರಗಳನ್ನು ಪ್ರದರ್ಶನ ಮಾಡಲಿದ್ದಾರೆ. ಅವರ ಶೈಲಿ, ಚಿತ್ರಗಳ ವಿಶೇಷತೆಯ ಬಗ್ಗೆ ಆಸಕ್ತರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಂವಾದದ ರೀತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಆರ್ಟಿಸ್ಟ್ ಫೊರಮ್ ಉಡುಪಿ ಇದರ ಕಾರ್ಯದರ್ಶಿ ಸಕು ಪಾಂಗಳ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಕಲಾ ಶಿಬಿರದಲ್ಲಿ ಸ್ಥಳದಲ್ಲಿಯೇ ಕಲಾವಿದರು ಚಿತ್ರಕಲೆಯನ್ನು ಮಾಡಲಿದ್ದಾರೆ. ಬೇರೆ ಬೇರೆ ಶೈಲಿಯ ಚಿತ್ರಕಲೆಯನ್ನು ಇಲ್ಲಿ ಪ್ರದರ್ಶನದಲ್ಲಿ ವೀಕ್ಷಿಸಬಹುದು. ಚಿತ್ರಕಲಾವಿದರು ತಮ್ಮ ಕಲಾಕುಂಚದಲ್ಲಿ ಚಿತ್ರಗಳನ್ನು ಹೇಗೆ ರಚಿಸುತ್ತಾರೆ ಎನ್ನುವುದನ್ನು ಸ್ಥಳದಲ್ಲಿ ವೀಕ್ಷಿಸಬಹುದಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!