Sunday, September 8, 2024

ಪಟ್ಟಭದ್ರರನ್ನು ಗುರುತಿಸಿ ಮಟ್ಟ ಹಾಕುವ ನಿಷ್ಠುರತೆಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

ಜನಪ್ರತಿನಿಧಿ ವಾರ್ತೆ (ದಾವಣಗೆರೆ) : ಮೌಡ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ಹೇಳಿದರು.

ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪತ್ರಕರ್ತರಿಗೆ ರಾಜಕೀಯ ಬೇಕಾಗಿಲ್ಲ. ವಸ್ತುನಿಷ್ಠವಾಗಿ ಇರಬೇಕು. ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಶಕ್ತಿ ಹೆಚ್ಚಿಸುವ ಗ್ಯಾರಂಟಿ ಯೋಜನೆಗಳನ್ನು ಪತ್ರಕರ್ತರು ಬಿಟ್ಟಿ ಗ್ಯಾರಂಟಿ ಎಂದು ಕರೆಯಬಾರದು. ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಇರುವ ಈ ಯೋಜನೆಯನ್ನು ಬಿಟ್ಟಿ ಗ್ಯಾರಂಟಿ ಎಂದು ಕರೆಯದೆ, ನೀವೇ ಪರಿಶೀಲಿಸಿ ಬರೆಯಿರಿ. ಏನನ್ನಾದರೂ ಪ್ರಕಟಿಸುವ ಮೊದಲು ಪರಿಶೀಲನೆ ನಡೆಸಬೇಕು ಎಂದು ಅವರು ಹೇಳಿದರು.

ಪಟ್ಟಭದ್ರರನ್ನು ಗುರುತಿಸಿ ಮಟ್ಟ ಹಾಕುವ ನಿಷ್ಠುರತೆಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು. ಗಂಡ-ಹೆಂಡತಿ ಜಗಳವನ್ನು ಇಡೀ ದಿನ ತೋರಿಸುವುದಕ್ಕಿಂತ, ಸಮಾಜದ ಬೆಳೆವಣಿಗೆಗೆ ಅಡ್ಡಿ ಆಗಿರುವ ಪಟ್ಟಭದ್ರರನ್ನು ಗುರುತಿಸಿ ಬರೆಯಿರಿ. ಇದರಿಂದ ಸಮಾಜಮುಖಿ ಪತ್ರಕೋದ್ಯಮ ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಇನ್ನು, ಹಣವಂತರು, ಅತೀ ಶ್ರೀಮಂತರ ಕೈಯಲ್ಲಿ ಪತ್ರಿಕೋದ್ಯಮ ಸಿಲುಕಿದೆ. ಹೀಗಾಗಿ ಶ್ರೀಮಂತರ ಹಿತಾಸಕ್ತಿ ಕಾಯುವ, ಬಡವರ ಹಿತಾಕ್ತಿಗೆ ವಿರುದ್ಧವಾಗಿ ಬರೆಯುವ ಅಪಾಯ ಇರುತ್ತದೆ. ಇದನ್ನು ಪರಿಶೀಲಿಸಿಕೊಳ್ಳಿ. ನಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇರುವವನು, ಬೆಂಬಲಿಸುವವನು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಘನತೆ ತರುವಂತೆ ಮಾಡಬೇಕು. ಸ್ವಾತಂತ್ರ್ಯಪೂರ್ವದ ಪತ್ರಿಕೋದ್ಯಮದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತರಬೇಕು ಎನ್ನುವ ಆಶಯ ಪ್ರಧಾನವಾಗಿ ಕೆಲಸ ಮಾಡಿತ್ತು. ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವವನ್ನು ಕಾಯುವ, ರಕ್ಷಿಸುವ ಆಶಯ ಪ್ರಮುಖವಾಗಿದೆ ಎಂದು ಹೇಳಿದರು.  

ಜನ ಸಾಮಾನ್ಯರು ಪತ್ರಿಕಾವೃತ್ತಿ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳು ಹುಸಿಯಾಗದಂತೆ ಪತ್ರಕರ್ತರು ವೃತ್ತಿಪರತೆ ಬೆಳೆಸಿಕೊಳ್ಳಬೇಕು. ಈಗ ತಂತ್ರಜ್ಞಾನ, ವಿಜ್ಞಾನ ಬಹಳ ಬೆಳೆದಿದ್ದು ಇದರ ಪ್ರಯೋಜನವನ್ನು ಪತ್ರಿಕಾವೃತ್ತಿ ಬಳಸಿಕೊಳ್ಳಬೇಕಿದೆ. ಆದರೆ ಸತ್ಯನಿಷ್ಠೆಯನ್ನು ಯಾವುದೇ ಕಾರಣಕ್ಕೂ ಪತ್ರಕರ್ತರು ಬಿಡಬಾರದು. ಪತ್ರಿಕಾವೃತ್ತಿ ಸಮಾಜದ ಅಸಮಾನತೆ ಹೋಗಲಾಡಿಸಲು, ಅವಕಾಶ ವಂಚಿತರ ಪರವಾಗಿ, ಮೀಸಲಾತಿಯ ಆಶಯಗಳ ಪರವಾಗಿ ಇರಬೇಕು. ಇದರಿಂದ ಸಾಮಾಜಿಕ ನ್ಯಾಯಯನ್ನು ದ್ವನಿ ಇಲ್ಲದವರಿಗೆ ಕೊಡಲು ಸಾಧ್ಯ. ಹೀಗಾದಾಗ ಬಸವಣ್ಣನವರ ಸಮ ಸಮಾಜದ ಆಶಯ ಈಡೇರಲು ಸಾಧ್ಯ. ಪತ್ರಕರ್ತರು ಇದಕ್ಕೆ ಪೂರಕವಾಗಿ ವಸ್ತುನಿಷ್ಠವಾಗಿ ಕೆಲಸ ಮಾಡಬೇಕು ಎಂದರು.

ಇನ್ನು, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಈ ಬಜೆಟ್ ನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!