Sunday, September 8, 2024

ವಾದ ಗಾಂಧಿಯವರ ಒಂದು ಗುಣ. ಅದು ಪ್ರಜಾಪ್ರಭುತ್ವದ ಗುಣವೂ ಹೌದು : ಪ್ರೊ. ಮೊಳಹಳ್ಳಿ ದಿನೇಶ್ ಹೆಗ್ಡೆ ಅಭಿಮತ

ಮಹಾತ್ಮ ಹುತಾತ್ಮರಾದ ದಿನ : ಸೌಹಾರ್ದ ಸಂಕಲ್ಪದ ಮಾನವ ಸರಪಳಿ

ಜನಪ್ರತಿನಿಧಿ ವಾರ್ತೆ (ಕುಂದಾಪುರ) : ಗಾಂಧಿ ವಿಚಾರಧಾರೆಗಳನ್ನು ಮಣ್ಣುಗೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಾವಿರಾರು ವರ್ಷಗಳಿಂದ ಸೌಹಾರ್ದ ಹಾಗೂ ಸಹಬಾಳ್ವೆಯಿಂದಿದ್ದ ಭಾರತದಲ್ಲಿರುವುದರಿಂದ ನಾನು ಭಾರತೀಯ ಎಂಬ ಹೆಮ್ಮೆ ಇದೆ ಎಂದು ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಜನಪರ ಚಿಂತಕ ಫ್ರೋಫೆಸರ್ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದರು.

ಅವರು ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನದ ಪ್ರಯುಕ್ತ ಇಂದು(ಮಂಗಳವಾರ) ತ್ರಾಸಿಯಿಂದ ಕುಂಭಾಶಿ ತನಕ ಮಾನವ ಸರಪಳಿ ಕುಂದಾಪುರದ ವಿವಿಧ ಸಮಾನ ಮನಸ್ಕ ಸಂಘಟನೆಗಳಿಂದ ಮಾನವ ಸರಪಳಿ ಕಾರ್ಯಕ್ರಮದ ಬಳಿಕ ಶಾಸ್ತ್ರಿ ಸರ್ಕಲ್ ಬಳಿ ಬಹಿರಂಗ ಸಭೆಯಲ್ಲಿ ಇವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ವರ್ಣ, ಜಾತಿ, ಧರ್ಮಗಳ ವಿಚಾರದಲ್ಲಿ ಅನ್ಯಾಯಗಳಾಗಿವೆ. ಅದನ್ನು ವಿರೋಧಿಸಿ ಹೋರಾಟಗಳಾಗಿವೆ, ಅದರಿಂದ ದಾರ್ಶನಿಕರೂ ಹುಟ್ಟಿದ್ದಾರೆ. ಅವರು ಸವರ್ಣೀಯರ, ಅವರ್ಣೀಯರ ಬೇಧವಿಲ್ಲದೆ ಬದುಕುವುದನ್ನು ಕಲಿಸಿದ್ದಾರೆ ಎಂದರು.

ಬುದ್ಧ, ನಾರಾಯಣ ಗುರು, ಪೆರಿಯಾರ್, ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಅವರ ಆದರ್ಶಗಳನ್ನು ಈ ಕಾಲದಲ್ಲಿ  ಪಾಲಿಸುವ ತುರ್ತಿದೆ.  ಆಧುನಿಕ ಶಿಕ್ಷಣದಲ್ಲೂ ತಾರತಮ್ಯ ನಡೆದಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ ಎಂದು ಅವರು ಹೇಳಿದರು.

ಮಹಾತ್ಮ ಗಾಂಧಿ ಸತ್ಯ ಶೋಧಕರೂ ಹೌದು, ಅವರು ಸತ್ಯದೊಂದಿಗೆ ಪ್ರಯೋಗವೂ ಮಾಡಿದ್ದಾರೆ. ಹಿಂಸೆ ಎನ್ನುವುದು ಬಲ ಹೀನರ ಮಾರ್ಗ ಎಂಬುವುದನ್ನು ಪ್ರತಿಪಾದಿಸಿದವರು. ಗಾಂಧಿ ಹಿಂಸೆಯನ್ನು ಸುತಾರಾಂ ಒಪ್ಪಿದವರಲ್ಲ. ಯಾವ ಸರ್ಕಾರ, ಕಾನೂನು, ಆಡಳಿತ ಜನ ಪರವಿರುವುದಿಲ್ಲವೋ ಅದನ್ನು ಚಳುವಳಿ ಮೂಲಕ ವಿರೋಧಿಸುವ ಗುಣ ಗಾಂಧಿಯವರಲ್ಲಿತ್ತು. ವಾದ ಗಾಂಧಿಯವರ ಒಂದು ಗುಣ. ಅದು ಪ್ರಜಾಪ್ರಭುತ್ವದ ಗುಣವೂ ಹೌದು. ತಪ್ಪುಗಳನ್ನು ಸರಿಯಾದ ಮಾರ್ಗದಲ್ಲಿ ವಾದ ಮಾಡಿ ಗೆಲ್ಲುವ ಮಾರ್ಗ ಹಾಕಿಕೊಟ್ಟವರು ಗಾಂಧಿ. ಗಾಂಧಿಯನ್ನು ಕುಗ್ಗಿಸಲು ಎಂದಿಗೂ, ಯಾರಿಂದಲೂ ಸಾಧ್ಯವಿಲ್ಲ. ಗಾಂಧಿ ಜಗತ್ತಿನ ಸ್ವತ್ತು. ಅವರಿಗೆ ಎಂದೂ ಸೋಲಿಲ್ಲ‌‌ ಎಂದು ಅವರು ಅಭಿಪ್ರಾಯ ಪಟ್ಟರು.

ಇನ್ನು, ಕರ್ನಾಟಕ ರಾಜ್ಯದಾದ್ಯಂತ ನಡೆಯಲಿರುವ ಈ ಕಾರ್ಯಕ್ರಮ ಕುಂದಾಪುರ ವಲಯ ವ್ಯಾಪ್ತಿಯಲ್ಲಿ ತ್ರಾಸಿ, ಹೆಮ್ಮಾಡಿ, ತಲ್ಲೂರು, ಸಂಗಂ ವಠಾರ, ಶಾಸ್ತ್ರಿ ಸರ್ಕಲ್, ಬಸ್ರೂರು ಮೂರ್ಕೈ, ಕೋಟೇಶ್ವರ ಮತ್ತು ಕುಂಬಾಶಿಯಲ್ಲಿ ನಡೆಯಿತು.

ಈ ಕಾರ್ಯಕ್ರಮ ಸಹಬಾಳ್ವೆ ಕುಂದಾಪುರ, ಸೌಹಾರ್ದ ಕರ್ನಾಟಕ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ. ಕುಂದಾಪುರ ತಾಲೂಕು ಘಟಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ), ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಕುಂದಾಪುರ,  ಸಮುದಾಯ ಕುಂದಾಪುರ, ಕ್ಯಾಥೋಲಿಕ್ ಸಭಾ, ಕುಂದಾಪುರ ವಲಯ. ಸಿಐಟಿಯು ಕುಂದಾಪುರ. ಜನವಾದಿ ಮಹಿಳಾ ಸಂಘಟನೆ ಕುಂದಾಪುರ, ಡಿವೈಎಫ್‌ಐ ಕುಂದಾಪುರ, ಮಾನವ ಭಂದುತ್ವ ವೇದಿಕೆ, ಕುಂದಾಪುರ. ಕರ್ನಾಟಕ ಮುಸ್ಲಿಂ ಜಮಾತೆ. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ‌ ಕುಂದಾಪುರ, ದಲಿತ ಹಕ್ಕುಗಳ ಸಮಿತಿ ಕುಂದಾಪುರ ಹಾಗೂ ಸಮಾನಮನಸ್ಕ ನಾಗರಿಕರ ಒಗ್ಗೂಡುವಿಕೆಯಿಂದ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!