spot_img
Wednesday, January 22, 2025
spot_img

ಆರ್‌.ಎಸ್‌.ಎಸ್‌ ಈಗ ತ್ರಿವರ್ಣ ಧ್ವಜವನ್ನು ಬಹಿರಂಗವಾಗಿ ವಿರೋಧಿಸಲು ಧರ್ಮವನ್ನು ಗುರಾಣಿಯಾಗಿ ಬಳಸುತ್ತಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ಇಂದು ರಾಷ್ಟ್ರಪಿತ ಗಾಂಧೀಜಿಯವರು ಹುತಾತ್ಮರಾದ ದಿನ. ಸತ್ಯ, ಅಹಿಂಸೆ, ಶಾಂತಿ, ಸಾಮರಸ್ಯ, ಸಹಿಷ್ಣುತೆಯನ್ನೇ ತಮ್ಮ ಬದುಕಿನುದ್ದಕ್ಕೂ ಉಸಿರಾಡಿದ ಗಾಂಧೀಜಿಯವರ ಜೀವನ ಸಂದೇಶಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ. ಗಾಂಧೀಜಿಯವರ ಚಿಂತನೆಗಳನ್ನು ಬುಡಸಮೇತ ನಿರ್ಮೂಲನೆ ಮಾಡಬೇಕೆಂದು ಹಿಂದುತ್ವವಾದಿ ಬಲಪಂಥೀಯ ಶಕ್ತಿಗಳು ಇಂದು ದೇಶದೆಲ್ಲೆಡೆ ಇಂದು ತಮ್ಮ ಗುಪ್ತ ಕಾರ್ಯಸೂಚಿಯ ಅನುಷ್ಠಾನಕ್ಕೆ ಹೇಯವಾದ ಸಂಚು ರೂಪಿಸಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಸಿದ್ದರಾಮಯ್ಯ,   ಇಂತಹ ಮತೀಯವಾದಿ ಚಿಂತನೆಗಳನ್ನು ಸದಾಕಾಲ ಪ್ರೋತ್ಸಾಹಿಸಿಕೊಂಡು ಬಂದಿರುವ ಬಿಜೆಪಿ ಹಾಗೂ ಸಂಘ ಪರಿವಾರ ಗೋಡ್ಸೆಯ‌ ಚಿಂತನೆಗಳನ್ನು ಬಹಿರಂಗವಾಗಿಯೇ ವೈಭವೀಕರಿಸುವ ಮೂಲಕ ದೇಶದಲ್ಲಿನ ಧಾರ್ಮಿಕ ಸಾಮರಸ್ಯಕ್ಕೆ ಗಂಡಾಂತರ ತಂದಿವೆ.

ಮಂಡ್ಯದ ಕೆರಗೋಡುವಿನಲ್ಲಿ ನಡೆದಿರುವ ಘಟನೆ ಬಿಜೆಪಿ ಹಾಗೂ ಸಂಘ ಪರಿವಾರದ ಮತೀಯವಾದಿ ಕಾರ್ಯಸೂಚಿಯ ಭಾಗವಾಗಿಯೇ ನಡೆದ ವ್ಯವಸ್ಥಿತ ಸಂಚಾಗಿದೆ.. ಕೆರಗೋಡುವಿನ ಸರ್ಕಾರಿ ಜಾಗದಲ್ಲಿ ನೆಟ್ಟಿರುವ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾಗೂ ನಾಡಧ್ವಜಗಳನ್ನು ಮಾತ್ರವೇ ಹಾರಿಸಲು ಅನುಮತಿಸಲಾಗಿತ್ತು. ಅದರ ಹೊರತಾಗಿಯೂ ಅಲ್ಲಿ ಹನುಮಧ್ವಜವನ್ನು ಹಾರಿಸಲು ಮುಂದಾಗಿದ್ದರ ಹಿಂದೆ ಹನುಮನ ಮೇಲಿನ ಭಕ್ತಿ ಕಾಣುತ್ತಿಲ್ಲ, ಬದಲಿಗೆ ಮತೀಯ ಕಾರ್ಯಸೂಚಿ ಕಾಣುತ್ತಿದೆ ಎಂದಿದ್ದಾರೆ.

ದೇಶಭಕ್ತಿ, ರಾಷ್ಟ್ರಧ್ವಜ ಮತ್ತು ರಾಷ್ಟ್ರೀಯ ಲಾಂಛನಗಳೆಲ್ಲ ಅವರ ಪಾಲಿಗೆ ತಮ್ಮ ವಿಸ್ತರಣೆಯನ್ನು ಸಾಧಿಸಿಕೊಳ್ಳುವ ಪರಿಕರಗಳಷ್ಟೆ. ರಾಷ್ಟ್ರಧ್ವಜದ ಕುರಿತು ಆರ್.ಎಸ್.ಎಸ್ ನಾಯಕರ ನಿಲುವೇನಾಗಿತ್ತು ಎಂಬುದನ್ನು ಅರ್ಥ ಮಾಡಿಕೊಂಡರೆ, ಇವತ್ತು ಮಂಡ್ಯದಲ್ಲಿ ಬಿಜೆಪಿ ಯಾಕೆ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಭಾಗವಧ್ವಜ ಹಾರಿಸಬೇಕೆಂದು ಹಠ ಮಾಡುತ್ತಿದೆ ಎಂಬುದು ಮನದಟ್ಟಾಗುತ್ತದೆ.

ಪ್ರಾರಂಭದಿಂದಲೇ ಆರ್.ಎಸ್.ಎಸ್  ನಾಯಕರು ತ್ರಿವರ್ಣ ಧ್ವಜವನ್ನು ವಿರೋಧಿಸುತ್ತಾ ಬಂದಿದ್ದರು ಆರ್.ಎಸ್.ಎಸ್ ನ ಎರಡನೇ ಸರಸಂಘಚಾಲಕರಾದ ಎಂ ಎಸ್ ಗೋಳ್ವಾಲ್ಕರ್ ಅವರು ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರದ ಧ್ವಜವೆಂದು ಒಪ್ಪಲು ಸಾಧ್ಯವಿಲ್ಲ ತಮ್ಮ ‘ಬಂಚ್ ಆಫ್ ಥಾಟ್ಸ್’ ಕೃತಿಯಲ್ಲಿ ಬರೆದಿದ್ದರು.

 “ಭಾರತೀಯ ನಾಯಕರು ನಮ್ಮ ಕೈಗೆ ತ್ರಿವರ್ಣ ಧ್ವಜವನ್ನು ಕೊಡಬಹುದು. ಆದರೆ ನಾವ್ಯಾವತ್ತೂ ಅದನ್ನು ಗೌರವಿಸುವುದಿಲ್ಲ ಮತ್ತು ಅದನ್ನು ಒಪ್ಪಿಕೊಳ್ಳುವುದೂ ಇಲ್ಲ.  ಎಂದು 1947ರಲ್ಲಿಯೇ ಆರ್.ಎಸ್.ಎಸ್ ಮುಖವಾಣಿ ‘ದಿ ಆರ್ಗನೈಸರ್’ ಪತ್ರಿಕೆಯಲ್ಲಿ  ಬರೆದುಕೊಂಡಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಕಾರಣ ಕ್ಕಾಗಿಯೇ  ನಾಗಪುರದಲ್ಲಿರುವ ಆರ್.ಎಸ್.ಎಸ್ ಕೇಂದ್ರ ಕಚೇರಿ ಮೇಲೆ 52 ವರ್ಷಗಳ ಕಾಲ ರಾಷ್ಟ್ರಧ್ವಜವನ್ನೇ ಹಾರಿಸಿರಲಿಲ್ಲ. 2001ರ ಜನವರಿ 26ರಂದು ರಾಷ್ಟ್ರಪ್ರೇಮಿ ಯುವದಳದ ಮೂವರು ಕಾರ್ಯಕರ್ತರು, ಬಲವಂತವಾಗಿ ಆರ್.ಎಸ್.ಎಸ್ ಕಚೇರಿಗೆ ನುಗ್ಗಿ, ಸಾಕಷ್ಟು ವಿರೋಧದ ನಡುವೆಯೂ ಅದರ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ಆರ್.ಎಸ್.ಎಸ್ ಗೆ ಸೆಡ್ಡು ಹೊಡೆದಿದ್ದರು. ಅವರ ಮೇಲೆ ಆರ್.ಎಸ್.ಎಸ್ ಕೇಸು ಕೂಡಾ ದಾಖಲಿಸಿತ್ತು.

ರಾಷ್ಟ್ರಧ್ವಜ ಹಾಗೂ ರಾಷ್ಟ್ರಪಿತನಿಗೆ ನಿರಂತರವಾಗಿ ಅಪಮಾನ ಎಸಗುತ್ತಾ ಬಂದಿರುವ ಬಿಜೆಪಿ ಹಾಗೂ ಸಂಘ ಪರಿವಾರಗಳು ಇಂದು ರಾಷ್ಟ್ರಧ್ವಜವನ್ನೇ ತಾಲಿಬಾನ್‌ ಧ್ವಜಕ್ಕೆ ಹೋಲಿಸುತ್ತಿರುವುದು ಅವರ ರೋಗಗ್ರಸ್ತ ಚಿಂತನೆಗಳನ್ನು ಸೂಚಿಸುತ್ತಿದೆ. ತ್ರಿವರ್ಣ ಧ್ವಜವನ್ನು ಆರಂಭದಿಂದಲೂ ವಿರೋಧಿಸುತ್ತಲೇ ಬಂದ ಆರ್‌.ಎಸ್‌.ಎಸ್‌ ಈಗ ಅದನ್ನು ಬಹಿರಂಗವಾಗಿ ವಿರೋಧಿಸಲು ಧರ್ಮವನ್ನು ಗುರಾಣಿಯಾಗಿ ಬಳಸುತ್ತಿದೆ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಈ ರೀತಿಯ ಮತೀಯ ಉದ್ವಿಗ್ನತೆಯನ್ನು ಸೃಷ್ಟಿಸಿ ಅದರ ಲಾಭ ಪಡೆಯುವ ಹುನ್ನಾರ ರಾಜ್ಯದ ಬಿಜೆಪಿ ನಾಯಕರು ಹಾಗೂ ಸಂಘ ಪರಿವಾರದ್ದಾಗಿದೆ. ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆಯೂ ಇಂತಹದ್ದೇ ಪ್ರಯತ್ನಗಳಿಗೆ ಬಿಜೆಪಿ ಕೈ ಹಾಕಿದ್ದನ್ನು ಮಂಡ್ಯದ ಜನತೆ ಮರೆತಿಲ್ಲ.

ಬಿಜೆಪಿಯ ಇಂತಹ ಮತೀಯ ಸಂಚುಗಳಿಗೆ ಜೆಡಿಎಸ್‌ ಕೂಡ ಬಹಿರಂಗವಾಗಿಯೇ ಕೈಜೋಡಿಸಿರುವುದು ಆ ಪಕ್ಷದ ಅಧಿಕಾರದ ಹಪಾಹಪಿ, ಚಿಂತನಾ ದಾರಿದ್ರ್ಯ, ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಜೆಡಿಎಸ್‌ ಪಕ್ಷದ ವರಿಷ್ಠರು ತಾವು ಪ್ರತಿಯೊಂದು ವಿಚಾರದಲ್ಲಿಯೂ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಅಣತಿಯಂತೆ ನಡೆಯುವುದಾಗಿ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇದು ಜೆಡಿಎಸ್‌ ಪಕ್ಷದ ಅಸಲಿ ಹೈಕಮಾಂಡ್‌ ಮೋದಿ ಹಾಗೂ ಶಾ ಎನ್ನುವುದನ್ನು ನಿಚ್ಚಳಗೊಳಿಸಿದೆ. ಬಿಜೆಪಿಯವರು ನೀಡಿರುವ ಕೇಸರಿ ಶಾಲನ್ನು ಹೊದ್ದು ಸಂಭ್ರಮಿಸುತ್ತಿರುವ ಜೆಡಿಎಸ್‌ ನಾಯಕರಿಗೆ ಸಾಮರಸ್ಯ, ಸೌಹಾರ್ದದ ನೆಲೆಯಾದ ಕರ್ನಾಟಕಕ್ಕೆ ತಾವು ಎಸಗುತ್ತಿರುವ ಅಪಚಾರದ ಅರಿವೇ ಇಲ್ಲವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ, ಸಂಘ ಪರಿವಾರ ಹಾಗೂ ಜೆಡಿಎಸ್‌ ಒಗ್ಗೂಡಿಸಿ ರೂಪಿಸಿರುವ ಈ ಮತೀಯ ಸಂಚನ್ನು ಮಂಡ್ಯದ ಜನತೆ ವಿಫಲಗೊಳಿಸಲಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಿಂದಲೂ ಧಾರ್ಮಿಕ ಸಾಮರಸ್ಯ, ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಮಂಡ್ಯದ ಭೂಮಿ ರೈತ ಚಳವಳಿಯೂ ಸೇರಿದಂತೆ ನೂರಾರು ಪ್ರಗತಿಪರ ಚಳವಳಿಗೆ ತವರಾಗಿರುವ ನೆಲ.

ಸಂವಿಧಾನ, ಶಾಂತಿ, ಸಾಮರಸ್ಯಗಳಲ್ಲಿ ಗಾಢವಾದ ನಂಬಿಕೆ ಇರಿಸಿರುವ ಗಾಂಧೀವಾದಿ ಚಿಂತನೆಗಳಿಂದ ಪ್ರೇರಣೆ ಪಡೆದ ಭೂಮಿ. ಮಂಡ್ಯದ ಜನತೆಯು ಸಂವಿಧಾನ ವಿರೋಧಿ ಶಕ್ತಿಗಳಿಗೆ, ಗಾಂಧಿ ವಿರೋಧಿ ಚಿಂತನೆಗಳಿಗೆ ಎಂದಿಗೂ ಜಾಗ ನೀಡುವುದಿಲ್ಲ. ಧರ್ಮದ ಹೆಸರಿನಲ್ಲಿ ಕೋಮುವಾದಿ ರಾಜಕಾರಣಕ್ಕೆ ಆಸ್ಪದ ಮಾಡಿಕೊಡುವುದಿಲ್ಲ ಎನ್ನುವ ದೃಢವಾದ ನಂಬಿಕೆ ನನ್ನದು ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!