Sunday, September 8, 2024

ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗುವನ್ನು ಕೊಂದು ಬ್ಯಾಗ್‌ನಲ್ಲಿ ಕೊಂಡೊಯ್ಯುತ್ತಿದ್ದ ಬೆಂಗಳೂರಿನ ಸಿಇಒ ಬಂಧನ !

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ನಾಲ್ಕು ವರ್ಷದ ತನ್ನದೇ ಮಗುವಿನ ಶವವನ್ನು ಒಂದು ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದ ಕೃತಕ ಬುದ್ಧಿಮತ್ತೆ ಸ್ಟಾರ್ಟ್‌ಅಪ್‌ ಕಂಪೆನಿಯೊಂದರ ಸಿಇಒ ಸುಚನಾ ಸೇಠ್ (೩೯ ವ) ಎಂಬಾಕೆಯನ್ನು ನಿನ್ನೆ(ಸೋಮವಾರ) ಕರ್ನಾಟಕದ ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ತನ್ನ 4 ವರ್ಷದ ಮಗನನ್ನು ಕೊಂದು ಅಲ್ಲಿಂದ ಹೊರಬಂದ ಬಳಿಕ ಈ ಘಟನೆ ಬಯಲಾಗಿದೆ.

ಸುಚನಾ ಸೇಠ್‌ ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದಳು. ಸೋಮವಾರ, ಅವಳು ರೂಮಿನಿಂದ ಒಬ್ಬಂಟಿಯಾಗಿ ಚೆಕ್‌ ಔಟ್‌ ಮಾಡಿದಳು ಮತ್ತು ಬೆಂಗಳೂರಿಗೆ ಟ್ಯಾಕ್ಸಿ ಬುಕ್‌ ಮಾಡುವಂತೆ ಹೋಟೆಲ್ ಸಿಬ್ಬಂದಿಯನ್ನು ಕೇಳಿದ್ದಳು. ವಿಮಾನದಲ್ಲಿ ತೆರಳಿದರೆ ಹಣ ಕಡಿಮೆಯಾಗುತ್ತದೆ ಎಂದು ಹೊಟೇಲ್‌ ಸಿಬ್ಬಂದಿ ಸಲಹೆ ನೀಡಿದರೂ ಟ್ಯಾಕ್ಸಿಯನ್ನೇ ಬುಕ್‌ ಮಾಡುವಂತೆ ಆಕೆ ಒತ್ತಾಯಿಸಿದ್ದಾಳೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.ʻ

ಅವಳು ಹೊರಹೋಗುವಾಗ ಅವಳೊಂದಿಗೆ ಮಗ ಇಲ್ಲದಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಅವಳು ಹೋದ ನಂತರ, ಕೊಠಡಿ ಸಿಬ್ಬಂದಿ ಆಕೆಯ ರೂಮಿನಲ್ಲಿ ರಕ್ತದ ಕಲೆಗಳನ್ನು ಗಮನಿಸಿದರು. ಹೊಟೇಲ್ ಸಿಬ್ಬಂದಿ ತಕ್ಷಣ ವಿಚಾರವನ್ನು ಪೊಲೀಸರಿಗೆ ತಲುಪಿಸಿದ್ದಾರೆ. ಕ್ಯಾಲಂಗುಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್  ತಂಡ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ರಕ್ತದ ಕಲೆಯ ಬಗ್ಗೆ ಮಾಹಿತಿ ಪಡೆದ ನಂತರ ಹೋಟೆಲ್‌ಗೆ ತಲುಪಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದು ಮಗು ಆಕೆಯೊಂದಿಗೆ ಇಲ್ಲದಿರುವುದು ಅದರಲ್ಲಿ ಕಂಡುಬಂದಿದೆ.

ಆಗ ಟ್ಯಾಕ್ಸಿಯಲ್ಲಿ ತೆರಳುತ್ತಿದ್ದ ಸುಚನಾಳಿಗೆ ಕರೆ ಮಾಡಿದ ಪೊಲೀಸರು ಆಕೆಯ ಮಗನ ಬಗ್ಗೆ ವಿಚಾರಿಸಿದ್ದಾರೆ. ಆಕೆ ತನ್ನ ಮಗು ಫಟೋರ್ಡಾದಲ್ಲಿ ತನ್ನ ಸ್ನೇಹಿತೆಯ ಮನೆಯಲ್ಲಿದ್ದಾಳೆಂದು ಸುಳ್ಳು ವಿಳಾಸ ನೀಡಿದ್ದಾಳೆ. ಅನುಮಾನ ಬಂದ ಪೊಲೀಸರು ಆ ವಿಳಾಸ ಪರಿಶೀಲಿಸಿದಾಗ ಅದು ನಕಲಿಯಾಗಿತ್ತು. ಹೀಗಾಗಿ ಇನ್ಸ್‌ಪೆಕ್ಟರ್  ಟ್ಯಾಕ್ಸಿ ಚಾಲಕನಿಗೆ ಮತ್ತೆ ಕರೆ ಮಾಡಿ, ಪ್ರಯಾಣಿಕಳಿಗೆ ಅನುಮಾನ ಬಾರದಂತೆ ಈ ಬಾರಿ ಕೊಂಕಣಿಯಲ್ಲಿ ಮಾತನಾಡಿ, ಹತ್ತಿರದ ಪೊಲೀಸ್ ಠಾಣೆಗೆ ಹೋಗುವಂತೆ ಸೂಚಿಸಿದ್ದಾರೆ.

ಅಷ್ಟರಲ್ಲಾಗಲೇ ಟ್ಯಾಕ್ಸಿ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿತ್ತು. ಚಾಲಕ ಸುಚನಾಗೆ ತಿಳಿಯದಂತೆ ಕಾರನ್ನು ಐಮಂಗಲ ಪೊಲೀಸ್ ಠಾಣೆಗೆ ಒಯ್ದಿದ್ದಾನೆ. ಅಲ್ಲಿದ್ದ ಪೊಲೀಸ್ ಅಧಿಕಾರಿ ಕಾರಿನಲ್ಲಿದ್ದ ಬ್ಯಾಗ್‌ ಅನ್ನು ಪರಿಶೀಲಿಸಿದಾಗ ನಾಲ್ಕು ವರ್ಷದ ಮಗುವಿನ ಶವ ಕಂಡು ಬೆಚ್ಚಿಬಿದ್ದಿದ್ದಾರೆ.

ಸೋಮವಾರ ಸಂಜೆಯೇ ಪೊಲೀಸ್  ತಂಡ ಚಿತ್ರದುರ್ಗಕ್ಕೆ ಆಗಮಿಸಿ ಆರೋಪಿ ತಾಯಿಯನ್ನು ಬಂಧಿಸಿ ಗೋವಾಕ್ಕೆ ಕರೆದೊಯ್ದಿದ್ದಾರೆ.

ಇನ್ನು, ಈ ಬಗ್ಗೆ ಗೋವಾ ಪೊಲೀಸರು ಮಾಹಿತಿ ನೀಡಿದ್ದು, ಆರೋಪಿ ಮಹಿಳೆ ತನ್ನ ಮಾಜಿ ಪತಿ ಮಗುವನ್ನು ಭೇಟಿಯಾಗಲು ಇಷ್ಟಪಡದ ಕಾರಣ ತನ್ನ 4 ವರ್ಷದ ಮಗನನ್ನು ಕೊಲೆ ಮಾಡಿದ್ದಾಳೆ ಎಂದು ಪ್ರತಿಕ್ರಿಯಿಸಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!