Sunday, September 8, 2024

ಎಲ್ ಜಿ ಫೌಂಡೇಶನ್ ಮೂಲಕ ಸಮಾಜ ಸೇವಾ ಕಾರ್ಯ ನಡೆಸುತ್ತಿರುವ ನಾಗರಾಜ್ ಜಿ. ದೇವಾಡಿಗ ಪಡುಕೋಣೆ

kundapura (ಜನಪ್ರತಿನಿಧಿ ವರದಿ): ಬದುಕಿನಲ್ಲಿ ಉನ್ನತಿಯನ್ನು ಕಂಡುಕೊಳ್ಳುತ್ತಿದ್ದಂತೆ ಹುಟ್ಟೂರು, ಪರಿಸರ, ಬಡತನ ಎಲ್ಲವನ್ನು ಮರೆತು ಬದುಕುವವರೇ ಅಧಿಕ. ಆದರೆ ಉದ್ಯಮಿಯಾಗಿ ಗುರುತಿಸಿಕೊಂಡಿರುವಂತಹ ನಾಗರಾಜ ಜಿ.ಪಡುಕೋಣೆಯವರು ತನ್ನ ದುಡಿಮೆಯ ಒಂದು ಭಾಗವನ್ನು ಸೇವೆಯಾಗಿ ಮುಡಿಪಾಗಿಟ್ಟವರು. ಇವತ್ತು ಯಶಸ್ವಿ ಉದ್ಯಮಿಯಾಗಿರುವ ಇವರು ಎಲ್.ಜಿ ಫೌಂಡೇಶನ್ ಸ್ಥಾಪಿಸಿಕೊಂಡು ಅದರ ಮೂಲಕ ಸೇವಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ಕೊಡುತ್ತಿರುವ ಇವರು ಬಡವರು, ದುರ್ಬಲರು, ಅಸಹಾಯಕರ ಬಗ್ಗೆ ಇಟ್ಟಿರುವ ಕಳಕಳಿ ಅನನ್ಯವಾದುದು.

ನಾಗರಾಜ ದೇವಾಡಿಗ ಪಡುಕೋಣೆ ಅವರ ಬಾಲ್ಯ ಸಿರಿತನದಿಂದ ಕೂಡಿದ್ದಾಗಿರಲಿಲ್ಲ. ಬಡತನದ ನೆನಪುಗಳು ಈಗಲೂ ಅವರ ಬಳಿ ಇವೆ. ಕಷ್ಟದ ಪ್ರತಿಯೊಂದು ಅನುಭವವೂ ಅವರಿಗೆ ಅರಿವಿಗಿದೆ. ಹಾಗಾಗಿ ಅವರು ಪ್ರಥಮಥಃ ಗಮನ ಹರಿಸುವುದು ಬಡಜನರ ಮೇಲೆಯೇ. ಆರ್ಥಿಕವಾಗಿ ಅಸಹಾಯಕ ಸ್ಥಿತಿಯಲ್ಲಿರುವರಿಗೆ ಏನಾದರೂ ಸಹಾಯ ಮಾಡಬೇಕು ಎನ್ನುವ ನೆಲೆಯಲ್ಲಿ ಅವರು ಈಗಾಗಲೇ ಸಾಕಷ್ಟು ಸಾಮೂಹಿಕ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಅದರ ಮೂಲಕ ವೈದ್ಯಕೀಯ ತಪಾಸಣೆ, ಚಿಕಿತ್ಸೆಗೂ ನೆರವಾಗಿದ್ದಾರೆ.

ಪಡುಕೋಣೆಯ ಗಣೇಶ ಹಾಗೂ ಲಚ್ಚು ದೇವಾಡಿಗರ ಪುತ್ರರಾಗಿ ಜನವರಿ 3-1965ರಂದು ಜನಿಸಿದ ಇವರು ಹಡವು ಗ್ರಾಮದ ಕೋಟೆಗುಡ್ಡೆ ಶಾಲೆಯಲ್ಲಿ 4ನೇ ತರಗತಿ, ಪಡುಕೋಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ, ಗ್ರೆಗರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ತನಕ ಶಿಕ್ಷಣ ಪಡೆದರು.

ನಂತರ ಉಡುಪಿಯ ಅಪೊಲೋ ಇಂಜಿನಿಯಿಂಗ್ ಸಂಸ್ಥೆಯಲ್ಲಿ ಎರಡು ವರ್ಷ ಕೆಲಸ ಮಾಡಿದರು. ಬಳಿಕ ಅಪೊಲೋ ಬೊರಿಂಗ್ ಸಂಸ್ಥೆಯಲ್ಲಿ ಆರು ವರ್ಷ ದುಡಿದರು. 1991ರಲ್ಲಿ ಸ್ವಂತದ್ದಾದ ಟೆಕ್ನಿಕ್ ಇಂಜಿನಿಯರಿಂಗ್ ಸ್ಥಾಪನೆ ಮಾಡಿದರು. ಇದೀಗ ಮುಂಬಯಿ, ಬೆಂಗಳೂರು, ಹೈದರಬಾದ್, ಕುಂದಾಪುರದ ಅದರ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.
1998ರಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಇವರು ಪತ್ನಿ ಕುಸುಮಾ, ಪುತ್ರ ಗುರುಕೃತಿಕ್ ಅವರೊಂದಿಗೆ ಸಂತೃಪ್ತ ಕುಟುಂಬದ ಸದಸ್ಯ. ಪುತ್ರ ಬಿಸಿನೆಸ್ ಮ್ಯಾನೇಜ್‍ಮೆಂಟ್ ವ್ಯಾಸಂಗ ಮಾಡಿ ತಂದೆಯೊಂದಿಗೆ ಉದ್ಯಮದಲ್ಲಿ ಕೈಜೋಡಿಸಿದ್ದಾರೆ.

ನಾಗರಾಜ್ ಜಿ. ದೇವಾಡಿಗ ಅವರು ತಮ್ಮ ಸೇವಾ ವಲಯವನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಸಲುವಾಗಿ ಎಲ್.ಜಿ ಫೌಂಡೇಶನ್ ಎನ್ನುವ ಟ್ರಸ್ಟ್‍ನ್ನು ಡಿಸೆಂಬರ್ 16-2016 ರಂದು ಸ್ಥಾಪಿಸಿದರು. ಟ್ರಸ್ಟ್ ಕಾರ್ಯಾರಂಭದಿಂದಲೇ ದ್ಯೇಯ, ಉದ್ದೇಶ, ಆಶಯದಂತೆ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಮಾನಸದಲ್ಲಿ ಅಚ್ಚೊತ್ತಿ ನಿಂತಿದೆ. ಆರ್ಥಿಕವಾಗಿ ಹಿಂದುಳಿದವರು ಹಾಗೂ ನೊಂದವರನ್ನು ಬಳಿಗೆ ತೆರಳಿ ಅವರಿಗೆ ನೆರವಾಗುವ ಕಾರ್ಯವನ್ನು ಟ್ರಸ್ಟ್ ಮಾಡುತ್ತಿರುವುದು ವಿಶೇಷ.

ಈಗಾಗಲೇ ಎಲ್.ಜಿ ಫೌಂಡೇಶನ್ ಹೆಸರಿನಲ್ಲಿ ಟ್ರಸ್ಟ್ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಶಿಕ್ಷಣ ಮತ್ತು ವೈದ್ಯಕೀಯ ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಸ್ಥಳೀಯ ಮತ್ತು ಸುತ್ತಮುತ್ತಲಿನ ವಯಸ್ಸಾದ ಮತ್ತು ಬುದ್ಧಿಮಾಂದ್ಯ ರೋಗಿಗಳ ಚಿಕಿತ್ಸೆಗಳಿಗೆ ಸಹಾಯವನ್ನು ಒದಗಿಸುವುದು, ನಿರ್ಗತಿಕ ರೋಗಿಗಳಿಗೆ, ಅಂಗವಿಕಲರಿಗೆ, ದುರ್ಬಲರಿಗೆ ಸಹಾಯ, ನಿಯತಕಾಲಿಕವಾಗಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ಬಡವರಿಗೆ ಮತ್ತು ನಿರ್ಗತಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಆಯೋಜಿಸುವುದು. ಅಧ್ಯಯನದಲ್ಲಿ ಉತ್ಸಾಹವಿದ್ದು, ಹಣಕಾಸಿನ ಅಗತ್ಯವಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸುವುದು. ವೃದ್ಧಾಶ್ರಮಗಳು ಮತ್ತು ಮಕ್ಕಳ ಆರೈಕೆಯ ಕೇಂದ್ರಗಳನ್ನುಅರ್ಹ ಫಲಾನುಭವಿಗಳಿಗೆ ಒದಗಿಸುವುದು ಮೊದಲಾದ ಸೇವಾ ಚಟುವಟಿಕೆಗಳನ್ನು ನೆರವೇರಿಸಿಕೊಂಡು ಬರುತ್ತಿದೆ.

ಎಲ್ ಜಿ ಫೌಂಡೇಶನ್ ಆಡಳಿತ ಮಂಡಳಿ ಟ್ರಸ್ಟಿಯಾಗಿ ನಾಗರಾಜ್ ಜಿ. ದೇವಾಡಿಗ, ಟ್ರಸ್ಟಿಗಳಾಗಿ ಮಹೇಶ್ ಜಿ. ದೇವಾಡಿಗ, ಶ್ರೀಮತಿ ಕುಸುಮ ಎನ್. ದೇವಾಡಿಗ, ಶ್ರೀಮತಿ ಲಚ್ಚು ದೇವಾಡಿಗ ಸೇವೆ ಸಲ್ಲಿಸುತ್ತಿದ್ದಾರೆ.

ಎಲ್ ಜಿ ಫೌಂಡೇಶನ್ ನಿರ್ವಹಿಸಿರುವ ಕಾರ್ಯಗಳು:
ಎಲ್ ಜಿ ಫೌಂಡೇಶನ್ ಈಗಾಗಲೇ ಹಲವಾರು ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಪ್ರಮುಖವಾದುದು ಕೆಲವೆಂದರೆ ಪ್ರಾಥಮಿಕ ಆರೋಗ್ಯ ಕೇಂದ್ರ, ನಾಡ- ಗುಡ್ಡೆಅಂಗಡಿಯಲ್ಲಿ ದಿನಾಂಕ 23.04.2017ನೇಯ ಭಾನುವಾರ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಆಯೋಜನೆ, ಕರೋನ ಸಂದರ್ಭದಲ್ಲಿ ಉಚಿತವಾಗಿ ಕೋವಿಶೀಲ್ಡ್ ಮತ್ತು ಸ್ಟೀಮ್ ಮಷೀನ್ ಕೊಡುಗೆ, ಸರ್ಕಾರಿ ಪ್ರೌಢಶಾಲೆ, ಉಪ್ಪಿನಕುದ್ರುವಿನಲ್ಲಿ ದಿನಾಂಕ 15- 3-2020ನೇ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಿರುವುದು. ದಿನಾಂಕ 27.03.2022ನೇ ಭಾನುವಾರ ಸಾಧನ ಸಮುದಾಯ ಭವನ, ಮರವಂತೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜನೆ, ದಿನಾಂಕ 29.01.2023 ನೇ ಭಾನುವಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಅಂಕದಕಟ್ಟೆ ಕುಂದಾಪುರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಪ್ರತೀ ವರ್ಷ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾರ್ಥಿವೇತನ ವಿತರಣೆ, ಬಡ ವಿದ್ಯಾರ್ಥಿಗಳು ಆಯ್ದ ಕಾಲೇಜಿಗೆ ಸೇರಲು ನೇರವಾಗಿ ವಿದ್ಯಾರ್ಥಿಗಳ ಪರವಾಗಿ ಕಾಲೇಜಿಗೆ ತೆರಳಿ ಶುಲ್ಕವನ್ನು ಪಾವತಿಸುವ ಕೆಲಸ ಟ್ರಸ್ಟ್ ಮಾಡಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆಯಲ್ಲಿ ಸುಮಾರು ನೂರು ವಿದ್ಯಾರ್ಥಿಗಳಿಗೆ ಹೆಲ್ತ್ ಇನ್ಸೂರೆನ್ಸ್ ಮಾಡಿಕೊಡಲಾಗಿದೆ. ಇದೇ ಶಾಲೆಗೆ ಮೂರು ತರಗತಿ ಕೋಣೆಗಳ ನವೀಕರಣ ಮಾಡಿಕೊಡಲಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಳಾವರ ಇಲ್ಲಿಯ ಮುಖ್ಯೋಪಾಧ್ಯಾಯರಿಗೆ ಲ್ಯಾಪ್ಟಾಪ್ ಕೊಡುಗೆ, ಮರವಂತೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ನಡೆದ ಕಣ್ಣಿನ ಪರೀಕ್ಷೆಯಲ್ಲಿ ಎರಡು ಜನರಿಗೆ ಕಣ್ಣಿನಗುಡ್ಡೆ ಶಸ್ತ್ರ ಚಿಕಿತ್ಸೆಗೆ ನೆರವು ನೀಡಲಾಗಿದೆ. ಈವರೆಗೆ ನಡೆದ ಎಲ್ಲಾ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಕಣ್ಣಿನ ಪೆÇರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ಆಸ್ಪತ್ರೆಯಲ್ಲಿ ಅವರಿಗೆ ಬೆಳಗ್ಗಿನ ಉಪಹಾರ ಮತ್ತು ಊಟದ ಖರ್ಚು ವೆಚ್ಚಗಳನ್ನು ಸಂಸ್ಥೆ ಭರಿಸಿದೆ. ಹಾಗೂ ಎಲ್ಲಾ ಶಿಬಿರದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗಿದೆ. ಹತ್ತು ಹಲವಾರು ಕಾರ್ಯಕ್ರಮಗಳೊಂದಿಗೆ ನಿರಂತರವಾಗಿ ವಿವಿಧ ರೀತಿಯ ಸೇವಾ ಕಾರ್ಯಗಳಲ್ಲಿ ಟ್ರಸ್ಟ್ ನಿರತವಾಗಿದೆ.

ಜನವರಿ 7ರಂದು ಪಡುಕೋಣೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಎಲ್.ಜಿ ಫೌಂಡೇಶನ್ ಕುಂದಾಪುರ ಇದರ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ನಾಡ, ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರು, ಹಳೆ ವಿದ್ಯಾರ್ಥಿ ಸಂಘ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಡುಕೋಣೆ, ಶ್ರೀ ಮಹಾವಿಷ್ಣು ಫ್ರೆಂಡ್ಸ್ ಸರ್ಕಲ್ ಪಡುಕೋಣೆ, ಫ್ರೆಂಡ್ಸ್ ಪಡುಕೋಣೆ, ವಿಶ್ವ ದೇವಾಡಿಗ ಮಹಾ ಮಂಡಲ, ದೇವಾಡಿಗ ಅಕ್ಷಯ ಕಿರಣ ಸೇವಾ ಪೌಂಡೇಶನ್, ಪಡುಕೋಣೆ ಎಜುಕೇಶನ್ ಮತ್ತು ಸ್ಪೋಟ್ಸ್ ಪ್ರಮೋಟರ್ಸ್ ನಾಡ, ಜನಸೇವಾ ಟ್ರಸ್ಟ್ ನಾಡ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜನವರಿ 7ರಂದು ಭಾನುವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಸ.ಮಾ.ಹಿ.ಪ್ರಾ.ಶಾಲೆ ಪಡುಕೋಣೆಯಲ್ಲಿ ನಡೆಯಲಿದೆ.

ಮಾಜಿ ಮುಖ್ಯಮಂತ್ರಿಗಳಾದ ಡಾ.ವೀರಪ್ಪ ಮೊಯ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಕಿವಿ-ಮೂಗು-ಗಂಟಲು ತಪಾಸಣೆ, ಚರ್ಮರೋಗ ತಪಾಸಣೆ ಮತ್ತು ಕಣ್ಣಿನ ತಪಾಸಣೆ, (ವೈದ್ಯಕೀಯ ಶಿಫಾರಸ್ಸಿನ ಮೇರೆಗೆ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು) ಅಗತ್ಯವುಳ್ಳವರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನೆಡೆಸಲಾಗುವುದು. ಮಧುಮೇಹ ಮತ್ತು ರಕ್ತದ ಒತ್ತಡ ಪರೀಕ್ಷೆ, ಹೃದಯ ಸಂಬಂಧ ರೋಗ ತಪಾಸಣೆ, ಸ್ತ್ರೀರೋಗ ತಪಾಸಣೆ ನಡೆಸಲಾಗುವುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!