Sunday, September 8, 2024

ಅತಿಥಿ ಉಪನ್ಯಾಸಕರಿಗೆ ಹೊಸ ವರ್ಷದ ಗಿಫ್ಟ್‌ : ಗೌರವಧನ ಹೆಚ್ಚಳ ಸಹಿತ ಹಲವು ಬೇಡಿಕೆಗಳನ್ನು ಈಡೇರಸಿದ ರಾಜ್ಯ ಸರ್ಕಾರ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಶಿಕ್ಷಣ ಸಚಿವರಾದ  ಡಾ|ಎಂ.ಸಿ.ಸುಧಾಕರ್ ಮತ್ತು‌ ಮಾಜಿ MLC ಪುಟ್ಟಣ್ಣನವರ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದ ಜತೆ ಚರ್ಚಿಸಿ, ಅತಿಥಿ ಉಪನ್ಯಾಸಕರ ನೆರವಿಗೆ ನಿಲ್ಲುವ ಉದ್ದೇಶದಿಂದ ಹಲವು ಮಹತ್ವದ ನಿರ್ಣಯಗಳನ್ನು ಘೋಷಿಸಿದರು.

ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿದೆ. ಅವರಿಗೆ ಸೇವಾನುಭವದ ಆಧಾರದಲ್ಲಿ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡುವ ಜೊತೆಗೆ ಕೆಲವು ಹೊಸ ಸೌಲಭ್ಯಗಳನ್ನು ನೀಡಲಾಗುವುದು.

ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರ್ಕಾರ ಮಾನವೀಯ ಕಾಳಜಿ ಹೊಂದಿದೆ. ಆದರೆ ಸೇವಾ ಭದ್ರತೆ ನೀಡಲು ಕಾನೂನು ತೊಡಕು ಇರುವುದರಿಂದ ಸಾಧ್ಯವಾಗುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ಅತಿಥಿ ಉಪನ್ಯಾಸಕರ ಪರವಾಗಿ ನಾನು ದನಿ ಎತ್ತಿ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದೆ. ಇದೀಗ ಎರಡೇ ವರ್ಷದೊಳಗೆ ನಮ್ಮ ಸರ್ಕಾರ ಮತ್ತೆ ಗೌರವಧನ ಹೆಚ್ಚಳಕ್ಕೆ ಮುಂದಾಗಿದೆ.

ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿದವರಿಗೆ 5 ಸಾವಿರ ರೂ., 5 ರಿಂದ 10 ವರ್ಷದ ಸೇವಾನುಭವ ಹೊಂದಿದವರಿಗೆ 6 ಸಾವಿರ ರೂ., 10 ರಿಂದ 15 ವರ್ಷದ ಸೇವಾನುಭವ ಹೊಂದಿದವರಿಗೆ 7 ಸಾವಿರ ರೂ. ಹಾಗೂ 15 ವರ್ಷಕ್ಕಿಂತ ಹೆಚ್ಚಿನ ಸೇವಾನುಭವ ಹೊಂದಿದವರಿಗೆ 8 ಸಾವಿರ ರೂ. ಗಳಷ್ಟು ಗೌರವಧನ ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ.

ಇದರ ಜೊತೆ ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಟಿಯಿಂದ ವಾರ್ಷಿಕ 5 ಲಕ್ಷ ರೂ. ಗಳ ಆರೋಗ್ಯ ವಿಮಾ ಸೌಲಭ್ಯ ಅನುಷ್ಠಾನ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ಮೀರಿದ ನಂತರದಲ್ಲಿ ಭದ್ರತಾ ರೂಪದಲ್ಲಿ ಗರಿಷ್ಠ 5 ಲಕ್ಷ ರೂ. ಇಡಿಗಂಟು ನೀಡುವುದು, ವಾರಕ್ಕೆ 15 ಗಂಟೆಗೂ ಹೆಚ್ಚಿನ ಕಾರ್ಯಭಾರ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವುದು ಹಾಗೂ 3 ತಿಂಗಳ ವೇತನ ಸಹಿತ ಮಾತೃತ್ವ ರಜೆ ನೀಡಲಾಗುವುದು.

ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರ ಸೇವಾನುಭವ ಆಧರಿಸಿ, ವೆಯ್ಟೇಜ್‌ ನೀಡುವುದು, ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿಯೇ ಕಾರ್ಯಭಾರವಿದ್ದಲ್ಲಿ ನಂತರದ ವರ್ಷವೂ ಅಲ್ಲಿಯೇ ಅವರ ಸೇವೆಯನ್ನು ಮುಂದುವರೆಸುವುದು ಸೇರಿದಂತೆ ಕೌನ್ಸೆಲಿಂಗ್‌ ಪ್ರಕ್ರಿಯೆ ಸರಳೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!