Sunday, September 8, 2024

ಮಲದ ಗುಂಡಿಗೆ ಮಕ್ಕಳನ್ನು ಇಳಿಸಿ ಶುಚಿಗೊಳಿಸಿದ ಪ್ರಕರಣ : ತಲೆಮರೆಸಿಕೊಂಡ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿ : ಸಿಎಂ ಆದೇಶ

ಜನಪ್ರತಿನಿಧಿ ವಾರ್ತೆ (ಕೋಲಾರ) :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ  ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ  ಸಿದ್ದರಾಮಯ್ಯ, ರೆವೆನ್ಯು ಮತ್ತು ಅರಣ್ಯ ಭೂಮಿ ಗುರುತಿಸುವ ವಿಚಾರದಲ್ಲಿ ಆಗುತ್ತಿರುವ ತೊಂದರೆಗಳನ್ನು, ಗೊಂದಲಗಳನ್ನು ಪರಿಹರಿಸಲು ಎರಡೂ ಇಲಾಖೆಯ ಜಂಟಿ ಸರ್ವೆ ಮಾಡಿ ಜಿಲ್ಲಾಧಿಕಾರಿಗಳು ವರದಿ ನೀಡಬೇಕು.

ಈ ಸಮಸ್ಯೆ ರಾಜ್ಯ ಮಟ್ಟದಲ್ಲೂ ಇರುವುದರಿಂದ ವಿಧಾನಸೌಧದಲ್ಲಿ ಪ್ರತ್ಯೇಕ ಉನ್ನತ ಮಟ್ಟದ ಸಭೆ ಕರೆಯುತ್ತೇನೆ. ಅಲ್ಲಿಯವರೆಗೂ ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ಎಂದು ಯಾರನ್ನೂ ತೆರವುಗೊಳಿಸಬಾರದು. ಬರಗಾಲದ ಸಮಸ್ಯೆ ಜಿಲ್ಲೆಯಲ್ಲಿ ಯಾವ ಪ್ರಮಾಣದಲ್ಲಿದೆ? ಎಷ್ಟು ಗ್ರಾಮಗಳಲ್ಲಿ ಟ್ಯಾಂಕರ್ ನೀರು ನೀಡಲಾಗುತ್ತಿದೆ ಎಂಬ ಮಾಹಿತಿ ಒದಗಿಸಬೇಕು. ಇತರೆ ಯಾವುದೇ ನೀರಿನ ಮೂಲಗಳು ಇಲ್ಲದಿದ್ದಾಗ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬೋರ್ ವೆಲ್ ಕೊರೆಸಲು ಅವಕಾಶ ಮಾಡಿಕೊಳ್ಳಬಹುದು ಎಂದರು.

ಇನ್ನು, ಮಲದ ಗುಂಡಿಗೆ ಮಕ್ಕಳನ್ನು ಇಳಿಸಿ ಶುಚಿಗೊಳಿಸಿದ ಪ್ರಕರಣದಲ್ಲಿ ಮೂವರನ್ನು ಮಾತ್ರ ಜೈಲಿಗೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳನ್ನು ಏಕೆ ಬಂಧಿಸಿಲ್ಲ? ಅವರನ್ನು ತಕ್ಷಣ ಬಂಧಿಸಬೇಕು. ಇದೊಂದು ಕ್ರೂರ ಕೃತ್ಯ. ಇಂತಹುದ್ದನ್ನು ನಾವು ಅಪ್ಪಿತಪ್ಪಿಯೂ ಸಹಿಸುವುದಿಲ್ಲ. ಎರಡು ದಿನಗಳಲ್ಲಿ ಉಳಿದಿಬ್ಬರನ್ನು ಬಂಧಿಸಿ ಜೈಲಿಗಟ್ಟಬೇಕು. ಈ ಘಟನೆ ಇಡೀ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಒಂದು ಪಾಠ. ಯಾವುದೇ ಕಾರಣಕ್ಕೂ ಇದು ಮರುಕಳಿಸಬಾರದು ಎಂದು ಅವರು ಖಡಕ್‌ ಆಗಿ ಆದೇಶಿಸಿದರು.

ವಸತಿ ಶಾಲೆಗಳ ಒಳಗೆ ಪೋಷಕರು ಪ್ರವೇಶಿಸಲು ಅವಕಾಶ ನೀಡಬೇಕು. ಇದರಿಂದ ಪೋಷಕರಿಗೆ ವಸತಿ ಶಾಲೆಗಳ ಗುಣಮಟ್ಟ ಗೊತ್ತಾಗುತ್ತದೆ. ಹೀಗೆ ಮಾಡುವುದರಿಂದ ವಸತಿ ಶಾಲೆಗಳು ಜೈಲುಗಳು ಎನ್ನುವ ಭಾವನೆ ಹೋಗುತ್ತದೆ. ನನಗೆ ದಲಿತ ಚಳವಳಿಗಳ ಜತೆ ಒಡನಾಟ ಮೊದಲೂ ಇತ್ತು, ಈಗಲೂ ಇದೆ, ಸಾಯುವವರೆಗೂ ಇರುತ್ತದೆ. ಹಿಂದೆ “ಸರಾಯಿ ಬೇಡ-ವಸತಿ ಶಾಲೆ ಬೇಕು” ಎನ್ನುವುದು ದಲಿತ ಚಳವಳಿಯ ಘೋಷಣೆಯಾಗಿತ್ತು. ಅದಕ್ಕಾಗೇ ನಾನು ಹೋಬಳಿಗೊಂದು ವಸತಿ ಶಾಲೆ ಆರಂಭಿಸಿದೆ. ಈ ಶಾಲೆಗಳಲ್ಲಿ ಗುಣಮಟ್ಟ ಹೆಚ್ಚಿಸಬೇಕು. ಶಿಕ್ಷಕರಿಗೆ ತರಬೇತಿ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದರು.

ದೇವಸ್ಥಾನದ ಮತ್ತು ವಕ಼್ಫ್ ಬೋರ್ಡ್‌ಗೆ ಸಂಬಂಧಪಟ್ಟ ಸ್ಥಳಗಳು, ಜಮೀನು ಆಯಾ ಆಯಾ ಸಂಸ್ಥೆಗೆ ಹೋಗಬೇಕು. ಇವರ ಜಾಗ ಅವರಿಗೆ ಅವರ ಜಾಗ ಇವರಿಗೆ ಹೋಗದಂತೆ, ತಾಂತ್ರಿಕ ದಾಖಲಾತಿಗಳ ಗೊಂದಲ ಉಂಟಾಗದಂತೆ ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ವಿಶ್ವಕರ್ಮ ಯೋಜನೆ ಸೇರಿದಂತೆ ಯಾವುದೇ ಯೋಜನೆಗಳಲ್ಲೂ ನಿಯಮಾನುಸಾರ ಎಲ್ಲಾ ಜಾತಿ ಧರ್ಮದವರಿಗೂ ಅವಕಾಶ ನೀಡಬೇಕು. ಕೋಲಾರ ಜಿಲ್ಲೆಯಲ್ಲಿ ಅಪರಾಧಗಳ ಹೆಚ್ಚಳ ಆದರೆ ನಾನು ಸಹಿಸಲ್ಲ. ಕೋಲಾರ ಅಪರಾಧ ಮುಕ್ತ ಆಗಬೇಕು. ಚಾಳಿಬಿದ್ದ ಆರೋಪಿಗಳನ್ನು ಗಡಿಪಾರು ಮಾಡುವುದೂ ಸೇರಿದಂತೆ ಇತರೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಚಿವರಾದ ಎಂ ಸಿ ಸುದಾಕರ್‌ ಹಾಗೂ ಬೈರತಿ ಸುರೇಶ್‌ ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!