Sunday, September 8, 2024

ಸಂಸತ್ ಕಲಾಪದ ವೇಳೆ ಹೊಗೆ ಬಾಂಬ್: ಹೊಣೆ ಹೊತ್ತುಕೊಳ್ಳುವವರು ಯಾರು ಪ್ರಧಾನಿ ಸ್ಪಷ್ಟಪಡಿಸಲಿ-ವಿಕಾಸ್ ಹೆಗ್ಡೆ

ಕುಂದಾಪುರ: ದೇಶದ ಸಾರ್ವಭೌಮತೆಯ ಸಂಕೇತವಾಗಿರುವ ಸಂಸತ್ ಭವನದ ಒಳಗೆ ಸದನ ನಡೆಯುವ ವೇಳೆಯಲ್ಲಿಯೇ ಅನಪೇಕ್ಷಿತ ವ್ಯಕ್ತಿಗಳು ನುಗ್ಗಿ, ಸ್ಮೋಕ್ ಬಾಂಬ್ ದಾಳಿ ನಡೆಸಿರುವುದು ದೇಶದ ಭದ್ರತಾ ವೈಫಲ್ಯದ ದೊಡ್ಡ ಲೋಪವಾಗಿದ್ದು, ಇದರ ಹೊಣೆಯನ್ನು ಯಾರು ವಹಿಸಿಕೊಳ್ಳುತ್ತಾರೆ ಎನ್ನುವುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಸ್ವಷ್ಟ ಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ತಿಳಿಸಿದ್ದಾರೆ.

ರೈಲ್ವೆ ದುರಂತದ ಹೊಣೆಯನ್ನು ಹೊತ್ತುಕೊಂಡು ಪದತ್ಯಾಗ ಮಾಡಿರುವ ಲಾಲ್ ಬಹಾದುರ್ ಶಾಸ್ತ್ರಿ ಅವರ ಆದರ್ಶಗಳನ್ನು ಹಲವು ಬಾರಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿರುವ ಪ್ರಧಾನಿ ಮೋದಿ ಹಾಗೂ ಗ್ರಹ ಸಚಿವ ಅಮಿತ್ ಷಾ ಅವರು ಶಾಸ್ತ್ರೀಜಿಯವರ ನಡೆಯನ್ನೇ ಅನುಸರಿಸಿ, ಕೇವಲ ಭಾಷಣಕ್ಕೆ ಮಾತ್ರವಲ್ಲ ಅವರಂತೆಯೇ ನಾವು ಎನ್ನುವುದನ್ನು ಸಾಬೀತು ಪಡಿಸಬೇಕು.

ದೇಶ ರಕ್ಷಣೆಗಾಗಿ ೫೬ ಇಂಚು ಎದೆ ಇದೆ ಎಂದು ಎದೆಯುಬ್ಬಿಸಿ ಹೇಳುತ್ತಿದ್ದವರು, ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪಾರ್ಲಿಮೆಂಟ್ ಭವನದ ಒಳಗೆ ದಾಳಿ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದಕ್ಕೆ ನೈತಿಕ ಹೊಣೆ ಹೊರಬೇಕು. ದಾಳಿ ನಡೆಸಿದವರು ಸ್ಪೋಟಿಸಿರುವ ಸ್ಮೋಕ್ ಬಾಂಬ್ ಒಂದು ವೇಳೆ ಮಾರಣಾಂತಿಕ ವಿಷಕಾರಿಯಾಗಿದ್ದರೇ ಅದರಿಂದಾಗುವ ದೊಡ್ಡ ಅನಾಹುತವನ್ನು ಭರಿಸುವವರು ಯಾರು ಎನ್ನುವುದನ್ನು ಪ್ರಶ್ನಿಸಬೇಕಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಪಾರ್ಲಿಮೆಂಟ್ ಭವನ ಎನ್ನುವ ಹೆಗ್ಗಳಿಕೆಯ ಪ್ರಚಾರ ಪಡೆದುಕೊಂಡಿರುವ ನೂತನ ಸಂಸತ್ ಭವನ ರಕ್ಷಣಾ ವ್ಯವಸ್ಥೆ ಕನಿಷ್ಠ ಸ್ಮೋಕ್ ಬಾಂಬ್ ನ್ನು ಪತ್ತೆ ಮಾಡಲಾಗದಷ್ಟು ದುರ್ಬಲವಾಗಿದೆಯೇ ಎನ್ನುವ ಸಾರ್ವಜನಿಕರ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು.

ಕ್ಷೇತ್ರದ ಪರಿಚಿತ ವ್ಯಕ್ತಿಗಳಲ್ಲದೆ ಬೇರೆ ಕ್ಷೇತ್ರದವರಿಗೂ ಪಾಸ್ ನೀಡಲು ಆಲೋಚನೆ ಮಾಡಬೇಕಾದ ಕಾಲಘಟ್ಟದಲ್ಲಿ ಪರಿಚಯವೇ ಇಲ್ಲದವರಿಗೆ ಪಾಸ್ ನೀಡಲು ಸಹಿ ಮಾಡಿರುವ ನಖಲಿ ದೇಶಭಕ್ತ ಸಂಸದರ ಸದಸ್ಯತ್ವವನ್ನು ಕೊಡಲೇ ಅಮಾನತು ಮಾಡಿ ಅವರ ವಿರುದ್ಧ ಕ್ರಿಮಿನಲ್ ಸಂಚಿನ ಪ್ರಕರಣ ದಾಖಲಿಸಿ, ಬಂಧಿಸಿ ತನಿಖೆ ನಡೆಸಬೇಕು. ಪ್ರಶ್ನೆ ಕೇಳಲು ಲಂಚ ಪಡೆದಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಸಂಸದರೊಬ್ಬರನ್ನು ಲೋಕಸಭೆಯಿಂದಲೇ ಉಚ್ಚಾಟಿಸಿರುವ ಮೋದಿ ನೇತೃತ್ವದ ಸರ್ಕಾರ ಖಂಡಿತವಾಗಿಯೂ ದೇಶದ ಮುಕಟವಾಗಿರುವ ಪಾರ್ಲಿಮೆಂಟ್ ಭವನದ ಒಳಗೆ ದಾಳಿ ನಡೆಸಿದ ಆರೋಪಿಗಳ ಪ್ರವೇಶಕ್ಕಾಗಿ ಪಾಸ್ ವಿತರಣೆ ಮಾಡಿ ಪರೋಕ್ಷವಾಗಿ ಅವರ ದುಷ್ಕ್ರತ್ಯಕ್ಕೆ ಸಹಕರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವವನ್ನು ಹಾಳು ಮಾಡಿರುವ ಸಂಸದರ ಸದಸ್ಯತ್ವವನ್ನು ಉಚ್ಚಾಟಿಸುವ ಕ್ರಮವನ್ನು ಶೀಘ್ರದಲ್ಲೇ ಮಾಡುವ ನಿರೀಕ್ಷೆ ಇದೆ.

ನೆರೆಯ ಶತ್ರು ದೇಶದಲ್ಲಿ ಗೂಢಚರ್ಯೆ ಮೂಲಕ ಭಯೋತ್ಪಾದಕರನ್ನು ಸದೆ ಬಡಿಯುತ್ತಿದ್ದಾರೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಜೇಮ್ಸ್ ಬಾಂಡ್ ಆಗಿರುವ ಧೋವಲ್ ಮಹಾಶಯರು ದೇಶದ ಸಂಸತ್ತಿನ ಒಳಗೆ ಈ ಮಟ್ಟದ ಭದ್ರತಾ ದೋಶವಾಗುವಾಗ ಎಲ್ಲಿದ್ದರು ಎನ್ನುವುದನ್ನು ಪ್ರಧಾನಮಂತ್ರಿಗಳು ದೇಶದ ಜನರಿಗೆ ಸ್ವಷ್ಟ ಪಡಿಸಬೇಕು. ಸಣ್ಣ ಘಟನೆಗಳಿಗೂ ಕೋಮು ಬಣ್ಣ ಹಚ್ಚಿ, ಕಥೆ ಕಟ್ಟಿ ಜನರ ಭಾವನೆಗಳನ್ನು ನಿರಂತರವಾಗಿ ಕೆಡಿಸುತ್ತಿರುವ ಚಿಂಗಪುಲಿ ಇಷ್ಟೊಂದು ಗಂಭೀರ ಘಟನೆ ನಡೆದಿದ್ದರೂ, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಒಂದಕ್ಷರದ ಹೇಳಿಕೆ ನೀಡಿದೆ ಇರಲು ಕಾರಣವೇನು ? ಕಳೆದ ಬಾರಿಯ ಲೋಕಸಭಾ ಚುನಾವಣೆಯ ವೇಳೆಗೆ ನಡೆದ ಉಗ್ರರ ದಾಳಿಯಂತೆ. ಈ ದಾಳಿಯು ಭವಿಷ್ಯದ ಚುನಾವಣೆಯ ಹಿನ್ನೆಲೆಯಲ್ಲಿ ನಡೆದಿರುವ ದಾಳಿಗಳಾ ಎನ್ನುವುದನ್ನು ಕೇಂದ್ರ ಸರ್ಕಾರಗಳು ಸ್ವಷ್ಟ ಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!