Sunday, September 8, 2024

ಸಂಸತ್‌ ದಾಳಿಯ ಬೆದರಿಕೆ ಕಡೆಗಣನೆ : ಬೆದರಿಕೆಗಳು ಇದ್ದರೂ ಹೆಚ್ಚಿನ ಭದ್ರತೆ, ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ವೈಫಲ್ಯ !

22 ವರ್ಷಗಳ ನಂತರ ಅದೇ ದಿನ ಸಂಸತ್‌ನಲ್ಲಿ ಭದ್ರತಾ ಲೋಪ : ಆರೋಪ  

ಜನಪ್ರತಿನಿಧಿ ವಾರ್ತೆ (ನವ ದೆಹಲಿ) : ಸಂಸತ್‌ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಇಬ್ಬರು ಸದನಕ್ಕೆ ನುಗ್ಗಿ ಭಯದ ವಾತಾವರಣ ಸೃಷ್ಟಿರುವುದು ನಿಸ್ಸಂಶಯವಾಗಿ ಭದ್ರತಾ ಲೋಪವಾಗಿದೆ. ಡಿ. 13ರಂದು ಸಂಸತ್​ ಭವನದ ಮೇಲೆ ದಾಳಿ ನಡೆಯುವ ಸಾಧ್ಯತೆ ಹಾಗೂ ಬೆದರಿಕೆಗಳು ಇದ್ದರೂ ಹೆಚ್ಚಿನ ಭದ್ರತೆ, ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ವೈಫಲ್ಯ ಉಂಟಾಗಿದೆಯೇ ಎಂಬ ಆತಂಕಕಾರಿ ಪ್ರಶ್ನೆಗಳು ಈ ಸಂದರ್ಭದಲ್ಲಿ ಹುಟ್ಟಿಕೊಂಡಿವೆ. ಅಲ್ಲದೆ, ಸಂಸತ್ತಿನ ಮೇಲೆ ದಾಳಿ ನಡೆಸುವ ಬೆದರಿಕೆಯನ್ನು ಹಗುರವಾಗಿ ಪರಿಗಣಿಸಲಾಗಿದೆ ಎಂಬ  ಆರೋಪಗಳು ಕೇಳಿ ಬಂದಿವೆ.

2001, ಡಿಸೆಂಬರ್ 13ರಂದು ಸಂಸತ್ತಿನ ಎರಡೂ ಕಲಾಪ ಮುಕ್ತಾಯವಾಗಿ 40 ನಿಮಿಷಗಳ ಬಳಿಕ ಸಂಸತ್ ಭವನದ ಮೇಲೆ ಪಾಕ್ ಬೆಂಬಲಿತ ಲಷ್ಕರ್-ಎ-ತೋಯ್ಬಾ ಹಾಗೂ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಹುತಾತ್ಮರಾದವರನ್ನು ಸ್ಮರಿಸಬೇಕಾದ ಡಿ. 13 ರಂದೇ ಈಗ ಭದ್ರತಾ ಲೋಪವಾಗಿದೆ.

ಇನ್ನೊಂದು ಮಹತ್ವದ ಸಂಗತಿ ಎಂದರೆ, ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಇದೇ ಡಿಸೆಂಬರ್ 13ರಂದು ಅಥವಾ ಅದಕ್ಕೂ ಮೊದಲು ಸಂಸತ್ತಿನ ಮೇಲೆ ದಾಳಿ ಮಾಡುವ ಬೆದರಿಕೆಯುಳ್ಳ ವಿಡಿಯೋ ಬಿಡುಗಡೆ ಮಾಡಿದ್ದ.

ಸಂಸತ್ತಿನ ಮೇಲೆ ದಾಳಿ ನಡೆಸಿದ ಅಪರಾಧಿ ಅಫ್ಜಲ್​ ಗುರು ಪೋಸ್ಟರ್​ ಒಳಗೊಂಡಿರುವ ವಿಡಿಯೋಗೆ “ದೆಹಲಿ ಖಲಿಸ್ತಾನ್ ಆಗಿ ಬದಲಾಗುತ್ತದೆ” ಎಂದು ಅಡಿಬರಹ ನೀಡಲಾಗಿತ್ತು. “ನನ್ನನ್ನು ಕೊಲ್ಲುವ ಭಾರತೀಯ ಏಜೆನ್ಸಿಗಳ ಸಂಚು ವಿಫಲವಾಗಿದೆ. ಡಿಸೆಂಬರ್ 13 ಅಥವಾ ಅದಕ್ಕೂ ಮೊದಲು ಸಂಸತ್ತಿನ ಮೇಲೆ ದಾಳಿ ಮಾಡುವ ಮೂಲಕ ನನ್ನ ವಿರುದ್ಧದ ಸಂಚಿಗೆ ಪ್ರತಿಕ್ರಿಯಿಸುತ್ತೇನೆ” ಎಂದು ಸವಾಲು ಹಾಕಿದ್ದ.

ಸಂಸತ್ತಿನಲ್ಲಿ ಸೋಮವಾರದಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಡಿ.22ರವರೆಗೂ ಅಧಿವೇಶನ ಮುಂದುವರಿಯಲಿದೆ. ಇದರ ನಡುವೆಯೇ ಪನ್ನುನ್​ ಈ ಬೆದರಿಕೆ ವಿಡಿಯೋ ಹರಿಬಿಟ್ಟಿದ್ದ.

ಹೀಗಿದ್ದರೂ ಸಂಸತ್ತಿನ ಮೇಲೆ ದಾಳಿ ನಡೆದ 22 ವರ್ಷ ತುಂಬಿದ ಸಂದರ್ಭ ಹಾಗೂ ಖಲಿಸ್ತಾನಿ ಉಗ್ರ ಪನ್ನುನ್​ ಬೆದರಿಕೆಯನ್ನು ಭದ್ರತಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಪ್ರಶ್ನೆ ಈಗ ಸಹಜವಾಗಿಯೇ ಹುಟ್ಟಿಕೊಂಡಿವೆ.

ಪನ್ನುನ್ ಯಾರು ​?

ಪಂಜಾಬ್​ನ ಅಮೃತಸರದಲ್ಲಿ ಹುಟ್ಟಿದ ಪನ್ನುನ್​, 2019ರಲ್ಲಿ ಮೊದಲ ಪ್ರಕರಣ ದಾಖಲಾದಾಗಿನಿಂದ ರಾಷ್ಟ್ರೀಯ ತನಿಖಾ ದಳ (ಎನ್​ಐಎ)ದ ಕಣ್ಗಾವಲಿನಲ್ಲಿ ಇದ್ದಾನೆ. ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳನ್ನು ಸಮರ್ಥಿಸುವ ಮತ್ತು ನಿಯೋಜಿಸುವಲ್ಲಿ ಪ್ರಾಥಮಿಕ ಪಾತ್ರವನ್ನು ವಹಿಸಿದ್ದಾನೆ ಮತ್ತು ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ಬೆದರಿಕೆ ತಂತ್ರಗಳ ಮೂಲಕ ಭಯ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

2021ರ ಫೆಬ್ರವರಿ 3ರಂದು ಪನ್ನುನ್​ ವಿರುದ್ಧ ಎನ್​ಐಎ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಆತನನ್ನು ಘೋಷಿತ ಅಪರಾಧಿ ಎಂದು ಕಳೆದ ವರ್ಷ ನವೆಂಬರ್​ 29ರಂದು ಸರ್ಕಾರ ಘೋಷಣೆ ಮಾಡಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!