Thursday, November 21, 2024

ಬಗರ್‌ ಹುಕುಂ ಹೆಚ್ಚುವರಿ ಸಮಿತಿ : ಬಿಜೆಪಿಯವರಿಗೆ ಮಾಹಿತಿ ಕೊರತೆ ಇದೆ : ಗೋಪಾಲ ಪೂಜಾರಿ ತಿರುಗೇಟು

ನಾನು ಶಾಸಕನಾಗಿದ್ದಾಗಲೂ ಎಸಿ ನೇತೃತ್ವದಲ್ಲಿ ಹೆಚ್ಚುವರಿ ಸಮಿತಿ ರಚನೆಯಾಗಿತ್ತು : ಮಾಜಿ ಶಾಸಕ ಗೋಪಾಲ ಪೂಜಾರಿ

ಜನಪ್ರತಿನಿಧಿ ವಾರ್ತೆ(ಕುಂದಾಪುರ) : ಬಗರ್‌ ಹುಕುಂ ಸಮಿತಿ ರಚನೆಯಲ್ಲಿ ರಾಜ್ಯ ಸರ್ಕಾರ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿ ಸಮಿತಿ ರಚಿಸಿ ಶಾಸಕರ ಅವಗಣನೆ ಮಾಡಲಾಗಿದೆ ಎಂಬ ಬೈಂದೂರು ಬಿಜೆಪಿ ಘಟಕದ ಆರೋಪಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ತಿರುಗೇಟು ನೀಡಿದ್ದಾರೆ.  

ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಶಾಸಕನಾಗಿದ್ದಾಗಲೂ ಅಕ್ರಮ ಸಕ್ರಮ ಸಾಗುವಳಿ ಸಕ್ರಮೀಕರಣದ ಬಗ್ಗೆ ಎಸಿ ನೇತೃತ್ವದಲ್ಲಿ ಹೆಚ್ಚುವರಿ ಸಮಿತಿ ರಚನೆ ಮಾಡಲಾಗಿತ್ತು ಎನ್ನುವುದನ್ನು ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್‌ ಶೆಟ್ಟಿ ಅವರ ಗಮನಕ್ಕೆ ತರುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಜನರಿಗೆ ನ್ಯಾಯ ದೊರಕಿಸಿಕೊಡುವ ದೃಷ್ಟಿಯಲ್ಲಿ ತಹಶೀಲ್ದಾರರಿಗೆ ಪತ್ರದ ಮೂಲಕ ಬಾಕಿ ಇರುವ ಅಥವಾ ವಿಲೇವಾರಿ ಆಗದೇ ಇರುವ ಅಕ್ರಮ ಸಕ್ರಮ ಅರ್ಜಿಗಳ ಬಗ್ಗೆ ಲೆಕ್ಕ ಕೇಳಿದಾಗ, ಒಟ್ಟು ಮೂವತ್ತೆರಡು ಅರ್ಜಿಗಳು ಬಾಕಿ ಇವೆ ಎಂಬ ವರದಿಯನ್ನು ಒಪ್ಪಿಸಿದ್ದಾರೆ. ಹಿಂದೆ ಮಾಜಿ ಶಾಸಕ ಸುಕುಮಾರ ಶೆಟ್ಟಿಯವರು ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿಯೂ ಅರ್ಜಿಗಳು ವಿಲೇವಾರಿ ಆಗಬೇಕಿತ್ತು, ಆದರೇ ಯಾವ ಅಡಚಣೆಯಿಂದ ಆಗಿಲ್ಲ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಕಂದಾಯ ಇಲಾಖೆಯಿಂದ ಈಗ ಶೀಘ್ರವಾಗಿ ಅಕ್ರಮ ಸಕ್ರಮ ಫೈಲ್‌ಗಳ ವಿಲೇವಾರಿ ಮಾಡಬೇಕೆಂದು ಆದೇಶ ಹೊರಡಿಸಿರುವುದರಿಂದ ಹೆಚ್ಚುವರಿ ಸಮಿತಿಯನ್ನು ರಚಿಸಲಾಗಿದೆ. ಬಿಜೆಪಿಯವರಿಗೆ ಮಾಹಿತಿ ಕೊರತೆ ಇದೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಹೆಚ್ಚುವರಿ ಸಮಿತಿಗೆ ಇಂತವರೇ ಆಗಬೇಕೆಂದೇನು ನಿಯಮವಿಲ್ಲ. ಯಾರನ್ನೂ ಬೇಕಾದರೂ ಹೆಚ್ಚುವರಿ ಸಮಿತಿಯಲ್ಲಿ ಸೇರಿಸಿಕೊಳ್ಳಬಹುದು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೂ ಹೆಚ್ಚುವರಿ ಸಮಿತಿಯನ್ನು ರಚನೆ ಮಾಡಲಾಗಿತ್ತು ಎನ್ನುವುದನ್ನು ನಾನು ಗಮನಕ್ಕೆ ತರುತ್ತೇನೆ. ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿ ಆಗುವುದಕ್ಕೆ ಸಾಕಷ್ಟು ಇರುವುದರಿಂದ ಹೆಚ್ಚುವರಿ ಸಮಿತಿಯನ್ನು ರಚಿಸಿದ್ದಾರೆಯೇ ಹೊರತು ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದಿದ್ದಾರೆ.

ಕ್ಷೇತ್ರದಲ್ಲಿ ವಿಲೇವಾರಿ ಆಗಬೇಕಿರುವ ಅಕ್ರಮ ಸಕ್ರಮ ಅರ್ಜಿಗಳು ಹೆಚ್ಚಿರುವುದರಿಂದ ಶಾಸಕರ ಅಧ್ಯಕ್ಷತೆಯ ಒಂದು ಸಮಿತಿ ಹಾಗೂ ನನ್ನ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಸಮಿತಿಯನ್ನು ರಚಿಸಲಾಗಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ಜನರಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಶೀಘ್ರಮುಖವಾಗಿ ಕೆಲಸ ಆಗಬೇಕು ಎನ್ನುವ ಕಾರಣಕ್ಕೆ ಹೆಚ್ಚುವರಿ ಸಮಿತಿಯನ್ನು ರಚಿಸಲಾಗಿದೆ. ಸರ್ಕಾರ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುವಂತಹ ಕೆಲಸವನ್ನು ಮಾಡುತ್ತೇನೆ. ಈ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ಹಸ್ತಕ್ಷೇಪವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಅಕ್ರಮ ಸಕ್ರಮದಲ್ಲಿ ಜನಸಾಮಾನ್ಯರ ಅರ್ಜಿಗಳು ವಿಲೇವಾರಿ ಆಗುವುದಿಲ್ಲ, ಪ್ರಭಾವಿಗಳ ಅರ್ಜಿಗಳು ಬೇಗ ವಿಲೇವಾರಿ ಆಗುತ್ತದೆ ಎಂಬ ಆರೋಪವಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಯಾವುದೇ ರೀತಿಯ ಪ್ರಭಾವ ಬೀರುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಮ್ಮ ಸರ್ಕಾರ ಇರುವುದೇ ಜನ ಸಾಮಾನ್ಯರಿಗೆ ನ್ಯಾಯ ಒದಗಿಸಿಕೊಡುವುದಕ್ಕಾಗಿ, ಜನಸಾಮಾನ್ಯರ ಪರವಾಗಿ ನಾವು ಕೆಲಸ ಮಾಡುತ್ತೇವೆ ಎಂದರು.

ಇನ್ನು, ಗೋಮಾಳವನ್ನು ಅಭಿವೃದ್ಧಿಪಡಿಸಿಕೊಂಡು ಬಂದ ರೈತರಿಗೆ ಹಕ್ಕು ಪತ್ರ ನೀಡುವ ಅವಕಾಶ ಸದ್ಯಕ್ಕಿಲ್ಲ. ಕಾನೂನಿನಲ್ಲಿ ತಿದ್ದಪಡಿ ಮಾಡಿ ಅವಕಾಶವಾದರೇ ಯಾರು ಆ ಜಾಗದಲ್ಲಿ ಇದ್ದಾರೋ ಅವರಿಗೆ ಹಕ್ಕುಪತ್ರ ನೀಡುವುದಕ್ಕೆ ಸಮಸ್ಯೆಯಿಲ್ಲ. ಪತ್ಯೇಕವಾದ ಗೋಮಾಳ ಜಾಗವನ್ನು ಕಾಯ್ದಿರಿಸಿದರೆ, ಹಕ್ಕುಪತ್ರ ನೀಡುವುದಕ್ಕೆ ಸಾಧ್ಯವಿದೆ. ಇದು ಸರ್ಕಾರ ಮಟ್ಟದಲ್ಲೇ ಆಗಬೇಕಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಶೆಟ್ಟಿ ಹಾಗೂ ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಪೂಜಾರಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!