Sunday, September 8, 2024

ಡಿ.9ರಂದು ಕುಂದಾಪುರದಲ್ಲಿ ‘ಮಲ್ಯಾಡಿ ಯಕ್ಷೋತ್ಸವ’: ಯಕ್ಷ ಪ್ರೇಮಿಗಳಿಗೆ ಮೂರು ಪೌರಾಣಿಕ ಪ್ರಸಂಗಗಳ ರಸದೌತಣ

ಕುಂದಾಪುರ: ಸಾಲಿಗ್ರಾಮ ಮೇಳ ಮತ್ತು ಆಹ್ವಾನಿತ ಅಗ್ರಮಾನ್ಯ ಕಲಾವಿದರ ಪ್ರಸ್ತುತಿಯಲ್ಲಿ ಮಲ್ಯಾಡಿ ಲೈವ್ ಖ್ಯಾತಿಯ ಪ್ರಶಾಂತ ಮಲ್ಯಾಡಿಯವರ ಸಂಯೋಜನೆಯಲ್ಲಿ ಮಲ್ಯಾಡಿ ಯಕ್ಷೋತ್ಸವ ಡಿಸೆಂಬರ್ 9 ಶನಿವಾರ ರಾತ್ರಿ 9ಕ್ಕೆ ಕುಂದಾಪುರ ನೆಹರು ಮೈದಾನದಲ್ಲಿ ನಡೆಯಲಿದೆ.

ಮೂರು ಜನಪ್ರಿಯ ಪೌರಾಣಿಕ ಪ್ರಸಂಗಗಳ ಪ್ರದರ್ಶನ ನಡೆಯಲಿದ್ದು ಸಾಂಪ್ರಾದಾಯಿಕ ಶೈಲಿಯಲ್ಲಿ ಆಟ ಸಂಪನ್ನಗೊಳ್ಳಲಿದೆ. ನಿತ್ಯನೂತನವಾಗಿರುವ ಅಪರೂಪದ ಪೌರಾಣಿಕ ಪ್ರಸಂಗಗಳ ಮೂರು ವಿಭಿನ್ನ ರಂಗನಡೆಯಿಂದ ಪ್ರೇಕ್ಷಕರ ಮನಗೆದ್ದ ಆಖ್ಯಾನಗಳು. ಇಲ್ಲಿ ಪ್ರಸ್ತುತಗೊಳ್ಳಲಿರುವ ಮೂರು ಕಥಾನಕಗಳು ವಿಭಿನ್ನ ಕಥಾವಸ್ತುಗಳನ್ನು ಹೊಂದಿವೆ.

ಆಟ ಆರಂಭವಾಗುವುದೇ ಕವಿ ರತ್ನಾಪುರ ರಾಮ ವಿರಚಿತ ತಾಮ್ರಧ್ವಜ ಕಾಳಗದ ಮೂಲಕ. ಇದು ಅದ್ಭುತ ಕಥೆಯನ್ನು ಹೊಂದಿರುವ ಪ್ರಸಂಗ. ಆದರೆ ಇತ್ತೀಚೆಗೆ ಸ್ವಲ್ಪ ಅಪರೂಪ. ಪ್ರಸಿದ್ಧ, ಪ್ರಬುದ್ಧ ಕಲಾವಿದರ ತಾರಬಳಗದಲ್ಲಿ ಈ ಕೃತಿ ಜೀವ ಪಡೆದುಕೊಳ್ಳುತ್ತದೆ. ಯಕ್ಷರಂಗ ಅಗ್ರಮಾನ್ಯ ಕಲಾವಿದರಾದ ಯಾಜಿಯವರು ಪ್ರಥಮ ಬಾರಿಗೆ ತಾಮ್ರಧ್ವಜನಾಗಿ ರಂಗವೇರಲಿದ್ದಾರೆ. ತೀರ್ಥಹಳ್ಳಿಯವರ ಕೃಷ್ಣ, ಕೋಟದವರ ಅರ್ಜುನ, ಹಂದೆಯವರ ಮಯೂರ ಧ್ವಜ, ಉಳ್ಳೂರರ ಕುಮುದ್ವತಿ, ಬ್ರಾಹ್ಮಣರಾಗಿ ಕ್ಯಾದಗಿ, ಪಾಂಡೇಶ್ವರ ಕಾಣಿಸಿಕೊಳ್ಳಲಿದ್ದಾರೆ. ಪ್ರವೀಣ ಗಾಣಿಗ ಕೆಮ್ಮಣ್ಣು ಅವರ ಪಾತ್ರವನ್ನು ಪ್ರೇಕ್ಷಕರ ಕುತೂಹಕ್ಕೆ ಬಿಡಲಾಗಿದೆ. ಎರಡು ಅಶ್ವಮೇಧ ಅಶ್ವಗಳ ಅಪರೂಪದ ಮುಖಾಮುಖಿ ಇದರ ಇನ್ನೊಂದು ವಿಶೇಷ.

ಕವಿ ಪ್ರೊ.ಪವನ ಕಿರಣಕೆರೆ ವಿರಚಿತ ಶ್ರೀಕೃಷ್ಣ ತುಲಾಭಾರ ಈ ಭಾಗಕ್ಕೆ ತುಸು ಹೊಸತು. ಭಕ್ತಿ ಹಾಗೂ ಸ್ವಾರಸ್ಯಕರ ಉಳ್ಳ ಪ್ರಸಂಗ. ವಾಗ್ವಿಲಾಸಕ್ಕೆ ಅವಕಾಶವಿದೆ. ಮಾತಿನ ಚಕಮಕಿ ನೀರಸವೆನಿಸುವುದಿಲ್ಲ. ಮನಸಿಗೆ ಕಚಗುಳಿ ಇಡುತ್ತದೆ. ಸತ್ಯಭಾಮೆಯಾಗಿ ಕಾರ್ಕಳ, ಕೃಷ್ಣನಾಗಿ ಪ್ರಸನ್ನ, ನಾರದನಾಗಿ ಪ್ರದೀಪ ಸಾಮಗ, ಬಲರಾಮನಾಗಿ ನಾಗರಾಜ ಗುಣವಂತೆ, ರುಕ್ಮಿಣಿಯಾಗಿ ಕುಂಕಿಪಾಲ್, ಕಾಳಿಂದಿಯಾಗಿ ನಾಗರಾಜ ಪೂಜಾರಿ ಬಾರ್ಕೂರು. ಶ್ರೀಕೃಷ್ಣ ತುಲಾಭಾರದ ಭಕ್ತಿ-ಭಾವೋತ್ಕರ್ಷದ ಅಪೂರ್ವ ಸನ್ನಿವೇಶ ರಂಗವೈಭವೀಕರಿಸಲಿದೆ. ರಂಗಸ್ಥಳದಲ್ಲಿಯೇ ತುಲಾಭಾರ ಮಾಡಿಸುವ ದೃಶ್ಯಕಾವ್ಯವೂ ಕೂಡಾ ಅನಾವರಣಗೊಳ್ಳಲಿದೆ.

ಬೆಳಗಿನ ಜಾವದ ಚುರುಕು ನಡೆಯ ಪ್ರಸಂಗವೆಂದೇ ಪರಿಗಣಿತವಾದ ಮೀನಾಕ್ಷಿ ಕಲ್ಯಾಣ ತೃತೀಯ ಅಖ್ಯಾನ. ಸ್ತ್ರೀಭೂಮಿಕೆಯಲ್ಲಿ ಪುರುಷ ವೇಷಧಾರಿಗಳು ಕಾಣಿಸಿಕೊಳ್ಳುವುದು ಇಲ್ಲಿಯ ವಿಶೇಷ. ಮೀನಾಕ್ಷಿಯಾಗಿ ಪ್ರಸಿದ್ಧ ಪುಂಡುವೇಷಧಾರಿ ಹೆನ್ನಾಬೈಲು ಕಸೆ ಸ್ತ್ರೀವೇಷ ಮಾಡಲಿದ್ದಾರೆ. ಈಶ್ವರನಾಗಿ ಮಂಕಿ, ಶೂರಸೇನನಾಗಿ ರಾಜೇಶ ಗುಣವಂತೆ, ಪದ್ಮಗಂದಿನಿಯಾಗಿ ಹೊಸಪಟ್ಣ, ಮಂತ್ರಿಯಾಗಿ ರತ್ನಾಕರ, ನಾರದನಾಗಿ ಸನ್ಮಯ್ ಭಟ್ ಕಾಣಿಸಿಕೊಳ್ಳಲಿದ್ದಾರೆ.

ಹಿಮ್ಮೇಳದಲ್ಲಿ ಭಾಗವತರಾಗಿ ಚಂದ್ರಕಾಂತ ರಾವ್ ಮೂಡುಬೆಳ್ಳೆ, ಸೃಜನ್ ಗಣೇಶ್ ಹೆಗಡೆ, ಅಶೋಕ್ ಸರಳಕಿ, ಆಹ್ವಾನಿತ ಭಾಗವತರಾಗಿ ಸುರೇಶ ಶೆಟ್ಟಿ , ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆಯಲ್ಲಿ ಎನ್.ಜಿ ಹೆಗಡೆ ಯಲ್ಲಾಪುರ, ಗಣೇಶಮೂರ್ತಿ ಹುಲುಗಾರು, ಚಂಡೆಯಲ್ಲಿ ಶಿವಾನಂದ ಕೋಟ, ಮಂಜುನಾಥ ನಾವಡ ಕಟ್ಗೇರಿ ಸಾಥ್ ನೀಡಲಿದ್ದಾರೆ.

ಕಳೆದ ಒಂದು ದಶಕದಿಂದ ಯಕ್ಷಗಾನ ಛಾಯಾಗ್ರಹಣ ಕ್ಷೇತ್ರದಲ್ಲಿ ಗುರುತಿಸಿಕೊಂಡ ಪ್ರಶಾಂತ್ ಮಲ್ಯಾಡಿ ಇತ್ತೀಚೆಗಿನ ವರ್ಷಗಳಲ್ಲಿ ಯಕ್ಷಗಾನ ಲೈವ್ ಮೂಲಕ ಟ್ರೆಂಡ್ ಕಂಡುಕೊಂಡವರು. ಅವರದ್ದೇ ಸಂಯೋಜನೆಯಲ್ಲಿ ಯಕ್ಷಕಾಶಿಯಲ್ಲಿ ಮಲ್ಯಾಡಿ ಯಕ್ಷೆತ್ಸವ ಆಯೋಜಿಸಿದ್ದಾರೆ. ತುಂಬಾ ಆಟಗಳನ್ನು ಕಂಡವರು. ಹೊಸತನ್ನು ಸಾಂಪ್ರಾದಾಯಿಕ ಮೌಲ್ಯಗಳೊಂದಿಗೆ, ಒಂದಿಷ್ಟು ವಿಶೇಷತೆಗಳೊಂದಿಗೆ ಪ್ರೇಕ್ಷಕರಿಗೆ ನೀಡಬೇಕು ಎನ್ನುವುದು ಅವರ ಅಂತರ್ಯದ ಆಸೆ. ಅದಕ್ಕಾಗಿಯೇ ಈ ಪ್ರಯೋಗ. ಆ ದಿನ ನೇರ ಪ್ರಸಾರ ಇರುವುದಿಲ್ಲ. ಪ್ರೇಕ್ಷಕರೇ ನೇರಾ ಕಾರ್ಯಕ್ರಮಕ್ಕೆ ಬರುವ ಮೂಲಕ ಸಂಘಟಕರನ್ನು ಪ್ರೋತ್ಸಾಹಿಸಬೇಕಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!