-0.3 C
New York
Thursday, February 29, 2024

Buy now

spot_img

ಪೊಲೀಸರಂತೆ ಪತ್ರಕರ್ತರದ್ದು ಕೂಡಾ ಸಮುದಾಯದ ಹಿತದೃಷ್ಟಿಯ ಕಾರ್ಯ-ಎ‌ಎಸ್ಪಿ ಸಿದ್ಧಲಿಂಗಪ್ಪ

‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಕುಂದಾಪುರ, ಡಿ. 2: ಪೊಲೀಸರಂತೆ ಪತ್ರಕರ್ತರು ಕೂಡಾ ದಿನದ 24 ಗಂಟೆಯೂ ಕಾರ್ಯನಿರತರಾಗಿರುತ್ತಾರೆ. ಪತ್ರಕರ್ತರದ್ದು ತಾಳ್ಮೆಯ ಕೆಲಸ ಎಲ್ಲರಿಂದ ಸಾಧ್ಯವಿಲ್ಲ. ಪೊಲೀಸರು ಮತ್ತು ಪತ್ರಕರ್ತರು ಒಂದು ರೀತಿಯ ಥ್ಯಾಂಕ್ಸ್ ಲೆಸ್ ಜಾಬ್. ಆದರೆ ಸಮುದಾಯದ ಹಿತದೃಷ್ಟಿಯಿಂದ ಇಬ್ಬರದ್ದು ಉತ್ತಮ ಕಾರ್ಯ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಈ ಇಬ್ಬರದ್ದೂ ಪಾತ್ರವಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ. ಸಿದ್ಧಲಿಂಗಪ್ಪ ಹೇಳಿದರು.

ಅವರು ಶನಿವಾರ ಇಲ್ಲಿನ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಕುಂದಾಪುರ ತಾಲೂಕು ಕಾರ್‍ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಂದಾಪುರ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕನ್ನಡ ಶಾಲೆಗಳ ಉಳಿವಿಗಾಗಿ ಮತ್ತು ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ, ಮಾತನಾಡಿದರು.

ಕನ್ನಡ ಭಾಷೆ ಅದರಲ್ಲೂ ಕುಂದಾಪ್ರ ಕನ್ನಡ ವಿಶಿಷ್ಟ ಭಾಷೆ. ಬೇರೆ ಬೇರೆ ಕಡೆಗಳಲ್ಲಿ ಇಂತಹ ವಿಭಿನ್ನವಾದ ಭಾಷೆಗಳಿವೆ. ಗ್ರಾಮ್ಯ ಮಟ್ಟದಲ್ಲಿ ಕನ್ನಡ ಇಂದಿಗೂ ತನ್ನ ಛಾಪನ್ನು ಕಳೆದುಕೊಂಡಿಲ್ಲ. ಅದಕ್ಕೆ ಕುಂದಾಪ್ರ ಕನ್ನಡವೇ ಸಾಕ್ಷಿ. ಕನ್ನಡ ಮಾತನಾಡುವುದರಿಂದ ಭಾವನೆ ಅರಿಯಲು ಸಾಧ್ಯ. ಪೊಲೀಸ್ ಅಧಿಕಾರಿಗಳು ಸಹ ಬೇರೆ ಜಿಲ್ಲೆಗಳಿಂದ ಬಂದವರು ಸಹ ಕನ್ನಡ ಕಲಿತು ಜನರೊಂದಿಗೆ ವ್ಯವಹರಿಸುತ್ತಾರೆ. ಭಾಷೆ ಮತ್ತು ಭಾವನೆ ಎರಡು ಮುಖ್ಯವಾಗಿರುತ್ತದೆ. ಆ ಹಿನ್ನೆಲೆಯಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ ಎಂದರು.

ಸೈಬರ್ ಕ್ರೈಂ ವಿಚಾರದಲ್ಲಿ ಜಾಗರೂಕವಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ತೋರಿಸುವ ಆಸೆ ಅಮಿಷಗಳಿಗೆ ಒಳಗಾಗಬಾರದು. ನಿತ್ಯವೂ ಸಾಮಾಜಿಕ ಜಾಲತಾಣಗಳ ಮೂಲಕ ವಂಚಿಸುವ ಜಾಲಗಳು ಕಾರ್ಯಪ್ರವೃತ್ತವಾಗಿರುತ್ತವೆ. ಸದಾ ಎಚ್ಚರಿಕೆ ಇರಬೇಕಾಗುತ್ತದೆ ಎಂದರು.

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಕನ್ನಡವನ್ನು ನಾವು ಹೆಚ್ಚೆಚ್ಚು ಮಾತನಾಡುವುದರಿಂದ ಮಾತ್ರ ಉಳಿಸಲು ಸಾಧ್ಯ. ಸರಕಾರಿ ಶಾಲೆಗಳು ಹಾಗೂ ಮಾತೃಭಾಷೆ ಉಳಿಸುವ ನಿಟ್ಟಿನಲ್ಲಿ ಹಾಗೂ ಸಮಾಜದ ಸದಾ ಕಾಳಜಿ ವಹಿಸುವ ಪೊಲೀಸರ ಬಗೆಗಿನ ವಿಷಯವನ್ನು ಆಯ್ದುಕೊಂಡಿರುವ ಪತ್ರಕರ್ತರ ಸಂಘದ ಆಯ್ಕೆ ನಿಜಕ್ಕೂ ಶ್ಲಾಘನೀಯ ಎಂದರು.

ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಮಾತನಾಡಿ ಈ ಸ್ಪರ್ಧೆಯ ಮೂಲಕ ಪೊಲೀಸರ ಬಗ್ಗೆ ಮಕ್ಕಳಿಗೆ ತಿಳಿಯುವ ಅವಕಾಶ ಒದಗಿಸಿಕೊಟ್ಟಿದ್ದಾರೆ. ಮಕ್ಕಳಲ್ಲಿ ವಿಭಿನ್ನವಾಗಿ ಯೋಚಿಸುವ, ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವ ಪ್ರಯತ್ನ ಮಾಡಿದ ಕುಂದಾಪುರ ತಾಲೂಕು ಪತ್ರಕರ್ತರ ಸಂಘಕ್ಕೆ ಅಭಿನಂದನೆಗಳು ಎಂದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ಪ್ರ. ಕಾರ್‍ಯದರ್ಶಿ ನಝೀರ್ ಪೊಲ್ಯ, ರಜತ ಮಹೋತ್ಸವ ಸಮಿತಿ ಸಂಚಾಲಕ ಮೊಹಮ್ಮದ್ ಷರೀಫ್ ಮಾತನಾಡಿದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಲೋಕೇಶ್ ಆಚಾರ್ ತೆಕ್ಕಟ್ಟೆ ಉಪಸ್ಥಿತರಿದ್ದರು.

ತೀರ್ಪುಗಾರರಾದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಕುಮಾರ್ ಶೆಟ್ಟಿ ಕೋವಾಡಿ, ಹೆಸ್ಕತ್ತೂರು ಸರಕಾರಿ ಹಿ.ಪ್ರಾ. ಶಾಲಾ ಶಿಕ್ಷಕ ಅಶೋಕ ತೆಕ್ಕಟ್ಟೆ, ಲೇಖಕಿ ಪೂರ್ಣಿಮಾ ಕಮಲಶಿಲೆ ಅನುಭವ ಹಂಚಿಕೊಂಡರು. ಬಹುಮಾನ ವಿಜೇತರಾದ ಪ್ರಗತಿ ಆರ್. ಅಮಿನ್, ಪ್ರತೀಕ್ಷಾ ಅನಿಸಿಕೆ ವ್ಯಕ್ತಪಡಿಸಿದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಾಂತ್ ಪಾದೆ ಸ್ವಾಗತಿಸಿ, ಪ್ರಧಾನ ಕಾರ್‍ಯದರ್ಶಿ ಗಣೇಶ ಬೀಜಾಡಿ ವಂದಿಸಿದರು. ಪತ್ರಕರ್ತರಾದ ಶ್ರೀಕಾಂತ್ ಹೆಮ್ಮಾಡಿ ಬಹುಮಾನಿತರ ಪಟ್ಟಿ ವಾಚಿಸಿದರು. ಚಂದ್ರಶೇಖರ ಬೀಜಾಡಿ ಕಾರ್‍ಯಕ್ರಮ ನಿರೂಪಿಸಿದರು.

ಪ್ರಬಂಧ ಸ್ಪರ್ಧೆಯ ಫಲಿತಾಂಶ

ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆಯ ಪ್ರಗತಿ ಆರ್. ಅಮಿನ್ ಪ್ರಥಮ, ಬಸ್ರೂರು ಸರಕಾರಿ ಪ್ರೌಢಶಾಲೆಯ ಪ್ರತೀಕ್ಷಾ ದ್ವಿತೀಯ ಹಾಗೂ ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಹರ್ಷಿಣಿ ತೃತೀಯ ಬಹುಮಾನ ಪಡೆದಿದ್ದಾರೆ. ಕಾಳಾವರ ಸರಕಾರಿ ಪ್ರೌಢಶಾಲೆಯ ರಾಧಿಕಾ, ದೀಕ್ಷಾ, ಸಾಹಿತ್ಯ, ಆರ್ಡಿ- ಅಲ್ಬಾಡಿ ಸರಕಾರಿ ಪ್ರೌಢಶಾಲೆಯ ಶ್ರಾವ್ಯ, ಶಂಕರನಾರಾಯಣ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಅನನ್ಯ, ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಸ್ಪಂದನಾ ಉಳ್ಳೂರು, ಶ್ರೀಶಾಂತ್, ವಕ್ವಾಡಿ ಸರಕಾರಿ ಪ್ರೌಢಶಾಲೆಯ ಸೃಷ್ಟಿ, ಬಸ್ರೂರು ಸರಕಾರಿ ಪ್ರೌಢಶಾಲೆಯ ನವ್ಯಾ, ಕೋಟೇಶ್ವರ ಕೆಪಿ‌ಎಸ್‌ನ ಶ್ರೀಲಕ್ಷ್ಮಿ, ಕೆದೂರು ಸರಕಾರಿ ಪ್ರೌಢಶಾಲೆಯ ಅನುಶ್ರೀ, ಗಂಗೊಳ್ಳಿ ಸ್ಟೆಲ್ಲಾ ಮೇರಿಸ್ ಪ್ರೌಢಶಾಲೆಯ ಶ್ರಾವ್ಯ, ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಅರ್ಚನಾ ಸಮಾಧಾನಕರ ಬಹುಮಾನ ಗಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!