Sunday, September 8, 2024

ನೆಕ್ಸ್ಟ್‌ ಕೊಡಿ ಹಬ್ಬಕ್ಕೆ ಕಾಂತಾರ ಪ್ರಿಕ್ವೇಲ್‌ ! | ಸಿನೆಮಾ ಮುಹೂರ್ತದಲ್ಲಿ ರಿಷಬ್‌ ಶೆಟ್ಟಿ ಹೇಳಿದ್ದೇನು ?

ಜನಪ್ರತಿನಿಧಿ ವಾರ್ತೆ (ಕುಂದಾಪುರ ) : ಇಡೀ ಭಾರತೀಯ ಚಿತ್ರರಂಗವನ್ನೇ ಬೆರಗು ಕಣ್ಣಿನಿಂದ ನೋಡುವ ಹಾಗೆ ಮಾಡಿದ ಕನ್ನಡದ ಸುಪ್ರಸಿದ್ದ ಚಲನಚಿತ್ರ ʼಕಾಂತಾರʼ  ಸಿನೆಮಾದ  ಪ್ರಿಕ್ವೇಲ್‌ ಪಾರ್ಟ್‌ ನ ಫಸ್ಟ್‌ ಲುಕ್‌ ಟೀಸರ್‌ ಹಾಗೂ ಪೋಸ್ಟರ್‌ ಇಂದು(ಸೋಮವಾರ, ನವೆಂಬರ್‌ 27) ಕರಾವಳಿಯ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಅನಾವರಣಗೊಂಡಿತು.  ನಿರ್ಮಾಣ ಸಂಸ್ಥೆ ʼಹೊಂಬಾಳೆ ಫಿಲ್ಮ್ಸ್‌ʼ ಅಧಿಕೃತವಾಗಿ ಸಿನಿ ರಸಿಕರ ಕುತೂಹಲಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ.

ʼಕಾಂತಾರʼ ನಿರ್ದೇಶಕ, ನಟ ರಿಷಬ್‌ ಶೆಟ್ಟಿ ಅವರಿಗೆ ಒಂದು ಡಿವೈನ್‌ ಹಿಟ್‌ ತಂದುಕೊಟ್ಟಿತ್ತು. ಕನ್ನಡ ಚಿತ್ರರಂಗ ಹಿಂದೆಂದೂ ನೋಡದ ಬೆರುಗನ್ನು ಈ ಸಿನೆಮಾದ ಮೂಲಕ ನೋಡಿತ್ತು. ಇದೀಗ ʼಕಾಂತಾರ 2ʼ ಮತ್ತೊಂದು ಹೊಸ ನಿರೀಕ್ಷೆಯನ್ನು ಮೂಡಿಸಿದೆ. ಪ್ರಿಕ್ವೇಲ್‌ನಲ್ಲಿ ಪಂಜುರ್ಲಿಯ ಹಿನ್ನೆಲೆ ಇರಲಿದೆ ಎಂಬ ಮಾಹಿತಿಯನ್ನು ಸಿನೆಮಾ ತಂಡದ ಬಲ್ಲ ಮೂಲ ಈಗಾಗಲೇ ತಿಳಿಸಿತ್ತು.

ಬರುವ ವರ್ಷ ಕೊಡಿ ಹಬ್ಬಕ್ಕೆ ಕಾಂತಾರ ಪ್ರಿಕ್ವೇಲ್‌ !?

ʼಕಾಂತಾರ -1ʼ ಮೂಹೂರ್ತದ ಬಳಿಕ ಮಾಧ್ಯಮದ ವರದಿಗಾರರಿಗೆ ಪ್ರತಿಕ್ರಿಯಿಸಿದ ನಟ ನಿರ್ದೇಶಕ ರಿಷಬ್‌ ಶೆಟ್ಟಿ, ಕಾಂತಾರ ಸಿನೆಮಾದ ಸಂಪೂರ್ಣ ಸಕ್ಸಸ್‌ನನ್ನು ಕನ್ನಡ ಸಿನಿ ವೀಕ್ಷಕರಿಗೆ ಅರ್ಪಿಸುವುದಕ್ಕೆ ಇಷ್ಟ ಪಡುತ್ತೇನೆ. ಈ ಸಿನೆಮಾದ ಮೂಲಕ ಕಥೆಯ ಮುನ್ನುಡಿಯನ್ನು ಹೇಳುವುದಕ್ಕೆ ಹೊರಟಿದ್ದೇವೆ. ಸಿನೆಮಾ ಶೂಟಿಂಗ್‌ನನ್ನು ಸದ್ಯದಲ್ಲೆ ಆರಂಭಿಸುತ್ತಿದ್ದೇವೆ. ಸಿನೆಮಾದಲ್ಲಿ ಹೊಸ ಪ್ರತಿಭೆಗಳನ್ನು ಸೇರಿಸಿಕೊಳ್ಳುತ್ತಿದ್ದೇವೆ. ತಾಂತ್ರಿಕ ತಂಡವನ್ನು ಹೊರತುಪಡಿಸಿ, ಕೆಲವು ಹೊಸಬರನ್ನೂ ಸೇರಿಸಿಕೊಳ್ಳುತ್ತಿದ್ದೇವೆ. ಆನೆಗುಡ್ಡೆ ಕ್ಷೇತ್ರ ನಾವು ನಂಬಿದ ಕ್ಷೇತ್ರ, ವಿಜಯ್‌ ಕಿರಗಂದೂರು ಅವರು ಕೂಡ ಕ್ಷೇತ್ರದ ದೇವರ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ವಿನಾಯಕನ ಆಶಿರ್ವಾದ ಸಿನೆಮಾ ತಂಡದ ಮೇಲೆ ಇರುತ್ತದೆ ಎಂಬ ನಂಬಿಕೆ ಇದೆ. ಜನರ ಆಶೀರ್ವಾದವೂ ನಮ್ಮೊಂದಿಗೆ ಇರಲಿದೆ ಎಂಬ ವಿಶ್ವಾಸವಿದೆ. ದೇವರ ಆಶೀರ್ವಾದ ಇದ್ದರೇ, ಬರುವ ವರ್ಷ ಕೊಡಿ ಹಬ್ಬದ ಸಂದರ್ಭದಲ್ಲಿ ಸಿನೆಮಾವನ್ನು ತೆರೆ ಮೇಲೆ ಇಡುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ತ್ರಿಶೂಲ, ಪರಶು ಹಿಡಿದ ರೌದ್ರಾವತಾರದಲ್ಲಿ ರಿಷಬ್‌ ಶೆಟ್ಟಿ :

ಇನ್ನು, ಹೊಂಬಾಳೆ ಫಿಲ್ಮ್ಸ್‌ ತನ್ನ ಅಧಿಕೃತ ಯೂಟ್ಯೂಬ್‌ ಚಾನೆಲ್ನಲ್ಲಿ ಬಿಡುಗಡೆಗೊಳಿಸಿದ ʼಕಾಂತಾರ ಚಾಪ್ಟರ್‌ ೧ʼನ ಫಸ್ಟ್‌ ಲುಕ್‌ ಟೀಸರ್‌ ನಲ್ಲಿ ನಿರ್ದೇಶಕ, ನಟ ರಿಷಬ್‌ ಶೆಟ್ಟಿ  ಉರಿಯವ ಅಗ್ನಿ ವೃತ್ತದಲ್ಲಿ ರೌದ್ರಾವತಾರದಲ್ಲಿ ತ್ರಿಶೂಲ ಹಾಗೂ ಪರಶು ಹಿಡಿದು  ನಿಂತಿರುವ ದೃಶ್ಯ ಸಿನೆಮಾದ ಬಗ್ಗೆ ಬಾರಿ ಕುತೂಹಲ ಮೂಡಿಸಿದೆ. ಶಿವನ ಅವತಾರವೋ, ಕರಾವಳಿಯ ಸೃಷ್ಟಿಕರ್ತ ಪರಶುರಾಮನ ಅವತಾರವೋ ಅಥವಾ ಶಿವ, ಪರಶುರಾಮರನ್ನು  ಒಳಗೊಂಡ ನಿಗೂಢ ಅವತಾರವೋ ಎಂಬಂತೆ ಕಾಣಿಸುತ್ತಾ ಸಿನಿರಸಿಕರ ಮೈ ರೋಮಾಂಚನಗೊಳಿಸುತ್ತಿದೆ.

ಪ್ರಿಕ್ವೇಲ್‌ ಮೂಲಕ ಪಂಜುರ್ಲಿಯ ಇತಿಹಾಸದ ಆಳಕ್ಕೆ ಸಿನೆಮಾ ತಂಡ ಇಳಿಯಲಿದ್ದು, 14ನೇ ಶತಮಾನದ ಕಥೆಯನ್ನು ತೆರೆ ಮೇಲೆ ತರುವುದಕ್ಕೆ ಸಿನೆಮಾ ತಂಡ ತಯಾರಾಗಿದೆ ಅಂತೆ. ಪಂಜುರ್ಲಿ ದೈವದ ಹುಟ್ಟಿನ ಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದು, ಸಿನೆಮಾಕ್ಕಾಗಿ ವಿಜಯ್‌ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್‌ 110 ಕೋಟಿ ಹೂಡಿಕೆ ಮಾಡುತ್ತಿದೆ ಎಂದು ಸಿನಾಮಾ ತಂಡದ ಬಲ್ಲ ಮೂಲ ತಿಳಿಸಿತ್ತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!