spot_img
Wednesday, January 22, 2025
spot_img

ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರಿಗೆ ಹುಟ್ಟೂರ ಸನ್ಮಾನ: ಸಮಾಜಕ್ಕೆ ಸ್ಪಂದಿಸುವ ಮಾನವೀಯ ಗುಣ ಶ್ರೀನಿವಾಸ ಶೆಟ್ಟಿಯವರದ್ದು-ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್


ಕುಂದಾಪುರ: ಸಾಧನೆಯ ಮೂಲಕ ಎಷ್ಟೇ ಎತ್ತರಕ್ಕೆರಿದರೂ ಹುಟ್ಟೂರಿಗೆ ಮಗನಾಗಿಯೇ ಇರುತ್ತಾರೆ. ಸಾಧನೆಗೆ ಹುಟ್ಟೂರಲ್ಲಿ ಸಿಗುವ ಗೌರವ ಮಹತ್ವದ್ದು. ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರು ಈ ಹಂತಕ್ಕೆ ಬೆಳೆಯುವುದರ ಹಿಂದೆ ಸಾಕಷ್ಟು ಪರಿಶ್ರಮವಿದೆ. ಅವರ ಸಾಧನೆಯ ಹಾದಿಯನ್ನು ನಾವು ಮೆಲುಕು ಹಾಕಬೇಕು. ಇಂಥಹ ಸಾಧಕರ ಜೀವನದ ಯಶೋಗಾಥೆ ಹೊಸ ಸಾಧನೆಗಳಿಗೆ ಮಾರ್ಗದರ್ಶಿ ಆಗುತ್ತದೆ ಎಂದು ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.

ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಹುಟ್ಟೂರ ಸನ್ಮಾನ ಸಮಿತಿ ನೇತೃತ್ವದಲ್ಲಿ ಹಾಲಾಡಿಯ ಶಾಲಿನಿ ಜಿ.ಶಂಕರ್ ಕನ್ವೆಶನ್ ಸೆಂಟರ್‌ನಲ್ಲಿ ನಡೆದ ಗೌರವ ಡಾಕ್ಟರ್ ಆಫ್ ಸೈನ್ಸ್ ಪುರಸ್ಕೃತರಾದ ಮೈಸೂರು ಮರ್ಕಂಟೈಲ್ ಕಂಪನಿ ಅಧ್ಯಕ್ಷರು ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರ ಹುಟ್ಟೂರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರು ಶಿಕ್ಷಣ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಸಮಾಜಕ್ಕೆ ಸಹಾಯಹಸ್ತ ನೀಡುತ್ತಿದ್ದಾರೆ. ಕೆಲವೇ ಕೆಲವು ವ್ಯಕ್ತಿಗಳಲ್ಲಿ ಸಮಾಜಕ್ಕೆ ಸ್ಪಂದಿಸುವ ಹೃದಯ ಶ್ರೀಮಂತಿಕೆ ಇರುತ್ತದೆ. ದೇವರ ರೂಪದಲ್ಲಿ ಇಂಥಹ ವ್ಯಕ್ತಿಗಳು ಸಮಾಜಕ್ಕೆ ಸ್ಪಂದಿಸುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು. ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅವರು ಡಾ.ಶ್ರೀನಿವಾಸ ಶೆಟ್ಟಿ ಹಾಲಾಡಿ ದಂಪತಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು.

ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಶ್ರೀನಿವಾಸ ಶೆಟ್ಟಿ ಹಾಲಾಡಿ ಅವರು, ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ರಾಜ್ಯದಲ್ಲಿ ಪ್ರಥಮ ಬಾರಿಗೆ ಖಾಸಗಿ ಹಾಗೂ ಸರ್ಕಾರ ಸಹಭಾಗಿತ್ವದಲ್ಲಿ ಪಬ್ಲಿಕ್ ಸ್ಕೂಲ್ ನಿರ್ಮಾಣವಾಗುತ್ತಿದೆ. ಡಿಸೆಂಬರ್‌ನಲ್ಲಿ ಉದ್ಘಾಟನೆಯಾಗಲಿದೆ. ಹಾಲಾಡಿ ನನ್ನ ಹುಟ್ಟೂರು. ಹಾಲಾಡಿಯಲ್ಲಿ 4-5 ಸರ್ಕಾರಿ ಶಾಲೆಗಳಿವೆ. ಅವುಗಳನ್ನೆಲ್ಲ ಒಟ್ಟುಗೂಡಿಸಿ ಪಬ್ಲಿಕ್ ಸ್ಕೂಲ್ ನಿರ್ಮಾಣ ಮಾಡುವುದಾಗಿ ತೀರ್ಮಾನಿಸಿದ್ದೇನೆ. ಈ ಸಂದರ್ಭದಲ್ಲಿ ಘೋಷಣೆ ಮಾಡುತ್ತೇನೆ ಎಂದು ಹೇಳಿದ ಅವರು, ಐ‌ಐಟಿ ಮದ್ರಾಸ್ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ರಾಜ್ಯದ 150 ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಕೋಚಿಂಗ್ ನೀಡಲಾಗುತ್ತಿದೆ. ಪ್ರಾಯೋಗಿಕವಾಗಿ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ 10 ಶಾಲೆಗಳಲ್ಲಿ ಅನುಷ್ಟಾನಿಸಲಾಗಿದೆ. ಬರುವ ಸಾಲಿನಲ್ಲಿ ಹಾಲಾಡಿ ಸೇರಿದಂತೆ 150 ಶಾಲೆಗಳಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು. ಸರ್ಕಾರಿ ಶಾಲೆಯ ಬಗ್ಗೆ ಕೀಳಿರಿಮೆ ಬೇಡ. ಚಂದ್ರಯಾನವನ್ನು ವಿಶ್ವವೇ ಗಮನಿಸಿದೆ. ಇಲ್ಲಿ ಕೆಲಸ ಮಾಡಿದ 90% ವಿಜ್ಞಾನಿಗಳು ಸರ್ಕಾರಿ ಶಾಲೆಯಲ್ಲಿ ಓದಿದವರು ಎನ್ನುವುದು ಗಮನಿಸಬೇಕಾದ ಅಂಶ ಎಂದರು.

ವೇ.ಮೂ.ತಟ್ಟುವಟ್ಟು ವಾಸುದೇವ ಜೋಯಿಸ ಹಾಲಾಡಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಉದ್ಯಮಿ ಎಂ ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಚೋರಾಡಿ, ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗರಾಜ ಗೋಳಿ, ನ್ಯಾಯವಾದಿ ರವಿರಾಜ ಶೆಟ್ಟಿ ಮುಡುವಳ್ಳಿ, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಸುಮನಾ ಶ್ರೀನಿವಾಸ ಶಟ್ಟಿ ಉಪಸ್ಥಿತರಿದ್ದರು. ಮಂಜುನಾಥ ಕಾಮತ್ ಅಭಿನಂದನ ಭಾಷಣ ಮಾಡಿದರು.

ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಾಗವತ ರಾಘವೇಂದ್ರ ಮಯ್ಯ ಪ್ರಾರ್ಥನೆ ಮಾಡಿದರು. ಹುಟ್ಟೂರ ಸಮಿತಿಯ ಎಚ್. ಸರ್ವೋತ್ತಮ ಶೆಟ್ಟಿ ಸ್ವಾಗತಿಸಿದರು. ಆರ್.ಜೆ ನಯನ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯೋಪಾಧ್ಯಾಯಿನಿ ರೋಶನಿ ಬೇಬಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!