Sunday, September 8, 2024

ʼಬ್ರ್ಯಾಂಡ್‌ ಮೋದಿʼ ಮತ್ತು ʼಬ್ರ್ಯಾಂಡ್‌ ರಾಹುಲ್‌ʼ ನಡುವಿನ ರಾಜಕೀಯ | ಕಾಂಗ್ರೆಸ್‌ ಕಳೆದ 10 ವರ್ಷಗಳಲ್ಲಿ ಬಿಜೆಪಿಗೆ ಒಂದು ಸವಾಲಾಗಿಯೇ ಕಾಣಿಸಿಕೊಂಡಿಲ್ಲ !

-ಶ್ರೀರಾಜ್‌ ವಕ್ವಾಡಿ

ತನ್ನಲ್ಲಿನ ಎಲ್ಲಾ ಆಂತರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ರಾಜಕೀಯ ಗುಣಮಟ್ಟ, ಪ್ರತಿಕ್ರಿಯೆ, ನಡೆಗಳನ್ನು ಕಾಲಾಂತರದಲ್ಲಿ ಸುಧಾರಿಸುವ ನೈಜ ಕಾಳಜಿ ಇಟ್ಟುಕೊಂಡು ಒಂದು ಪಕ್ಷ ಈಗ ಲೋಕಸಭೆಗಾಗಿ ಎದುರುಗಾಣುತ್ತಿದೆ ಎಂದರೇ ಅದು ಕಾಂಗ್ರೆಸ್.‌ ಲೋಕಸಭೆಗೆ ಟೀಮ್‌ ʼಇಂಡಿಯಾʼ ಮೈತ್ರಿ ಜೊತೆಯಾಗಿ ಕಣಕ್ಕಿಳಿಯುವುದಾದರೂ, ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್‌ ರಾಜಕೀಯವಾಗ ಸೃಷ್ಟಿ ಮಾಡಲಾದ ಟೀಕೆಗಳಿಗೆ ಎದುರು ನಿಂತು ಬಂದಿರುವುದು ಮತ್ತು ಕೆಲವೇ ಕೆಲವು ಗೆಲುವು, ತುಸು ಹೆಚ್ಚೇ ಆವರಿಸಿಕೊಂಡ ಸೋಲು ಬಹುಶಃ ಕಾಂಗ್ರೆಸ್‌ ನನ್ನು ಸದೃಢವನ್ನಾಗಿಸಿದೆ ಎಂದು ಕಾಣಿಸುತ್ತಿದೆ. ಒಂದು ವರ್ಗವನ್ನು ಹೊರತುಪಡಿಸಿದರೇ, ಕಾಂಗ್ರೆಸ್‌ ಗೆ ಈಗ ಪರವಾಗಿ ನಿಲ್ಲುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುವುದು ಕೂಡ ಸತ್ಯ.

ದೇಶದ ರಾಜಕೀಯದಲ್ಲಿ ʼಬ್ರ್ಯಾಂಡ್‌ ಮೋದಿʼ ಮತ್ತು ʼಬ್ರ್ಯಾಂಡ್‌ ರಾಹುಲ್‌ʼ ಮಾಡುವ ಪ್ರಯತ್ನವನ್ನು ಉಭಯ ಪಕ್ಷಗಳು ಸರ್ವ ಪ್ರಯತ್ನದಲ್ಲಿವೆ. ʼಬ್ರ್ಯಾಂಡ್‌ ಮೋದಿʼ ಕಾನ್ಸೆಪ್ಟ್‌ ನನ್ನು ಬಿಜೆಪಿ ಕಳೆದ ಕೆಲವು ವರ್ಷಗಳಿಂದಲೇ ಜಾರಿಯಲ್ಲಿ ಇರಿಸಿತ್ತು. ಆದರೇ ಕಾಂಗ್ರೆಸ್‌ ಇಂತಹ ಸೆಲ್ಫ್ ಮಾರ್ಕೇಟಿಂಗ್‌ ಮಾಡಿಕೊಳ್ಳುವ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಬಿಜೆಪಿಗಿಂತ ಹಿಂದೆಯೇ ಇದೆ ಎನ್ನುವುದು ಸತ್ಯ. ಕಾಂಗ್ರೆಸ್‌, ರಾಹುಲ್‌ ಗಾಂಧಿಯನ್ನು ʼಬ್ರ್ಯಾಂಡ್‌ ಮೆಟಿರಿಯಲ್‌ʼ ಮಾಡುವುದಕ್ಕೆ ಆರಂಭಿಸಿದ್ದೇ ಇತ್ತೀಚೆಗೆ. ಭಾರತ್‌ ಜೋಡೋ ಯಾತ್ರೆ ಬಳಿಕವಷ್ಟೇ ರಾಹುಲ್‌ ಗೆ ಒಂದಿಷ್ಟು ರಾಜಕೀಯ ವಲಯದಲ್ಲಿ ʼಮಾರ್ಕೇಟ್‌ʼ ಮಾಡುವುದಕ್ಕೆ ಆರಂಭಿಸಿದ್ದು. ೨೦೧೪ರ ಮೋದಿ ಆಡಳಿತ ಮತ್ತು ʼಬ್ರ್ಯಾಂಡ್‌ ಮೋದಿʼ ರಾಜಕೀಯ ತಂತ್ರಗಾರಿಕೆಯ ನಡುವೆ ರಾಹುಲ್‌ ‌ʼಪಾಲಿಟಿಕಲ್ ಮಾರ್ಕೇಟ್‌ʼ ಕುಸಿದಿತ್ತು. ರಾಹುಲ್‌ ಗೆ ರಾಜಕೀಯದಲ್ಲಿ ಸ್ವಲ್ಪ ಮಟ್ಟಿಗೆ ʼಮಾರ್ಕೆಟ್‌ ವಾಲ್ಯೂʼ ಸೃಷ್ಟಿ ಆಗಿದೆ ಅಂತಾದರೇ ಅದು ಭಾರತ್‌ ಜೋಡೋ ಕಾರಣದಿಂದಾಗಿ ಮತ್ತು ಕಾಂಗ್ರೆಸ್‌ ಮತ್ತು ಭಾರತ್‌ ಜೋಡೋ ಹಿಂದಿರುವ ರಾಜಕೀಯ ತಂತ್ರಗಾರರ ಶ್ರಮದಿಂದಾಗಿ.  

ಒಬ್ಬ ಸಿನೆಮಾ ನಟನ ಅಥವಾ ರಾಜಕೀಯ ನಾಯಕನ ʼಬ್ರ್ಯಾಂಡ್‌ ವಾಲ್ಯೂʼ ಕುಸಿಯುವುದು ಒಂದು ಎತ್ತರವನ್ನು ತಲುಪಿದ ನಂತರ ʼಏನ್‌ ಮಾಡಿದ್ರೂ ನಡೆಯುತ್ತದೆʼ ಎಂಬ ಧೋರಣೆಯಲ್ಲಿ ಮಾತ್ರ. ಬಿಜೆಪಿಗೆ ಮತ್ತು ಮೋದಿಗೆ ಈಗ ಅದೇ ಆಗಿದ್ದು/ಆಗುತ್ತಿರುವುದು. ಪ್ರತಿಪಕ್ಷಗಳ ಬಗೆಗಿನ ಕ್ಷುಲ್ಲಕ ನೋಟ, ಪ್ರತಿಪಕ್ಷಗಳ ಪ್ರಮುಖ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಗುರುತಿಸಲ್ಪಡುತ್ತಿರುವ ರಾಹುಲ್‌ ಗಾಂಧಿ ಬಗ್ಗೆ ದಿವ್ಯ ನಿರಾಕರಣೆ, ಹಿಂದುತ್ವವೇ ಎಲ್ಲಾ ರಾಜಕೀಯ ಮೈಲೇಜ್‌ಗೆ ಕಾರಣ ಎಂಬ ಬಿಜೆಪಿಯಲ್ಲಿನ ಸ್ಥಾಪಿತ ಮನಸ್ಥಿತಿ, ಅತಿಯಾದ ಆತ್ಮ ವಿಶ್ವಾಸ ಇವೆಲ್ಲವೂ ಒಂದು ತರದಲ್ಲಿ ಬಿಜೆಪಿಯ ʼಬ್ರ್ಯಾಂಡ್‌ ವಾಲ್ಯೂʼವನ್ನು ಕಡಿಮೆ ಮಾಡಿಸುತ್ತಿದೆ ಎಂದು ಕಾಣಿಸುತ್ತಿದೆ. ಟಿವಿ ಮಾಧ್ಯಮಗಳ ವೈಭವೀಕರಣ, ಸಾಮಾಜಿಕ ಜಾಲತಾಣಗಳ ರಂಜನೆ ಇವೆಲ್ಲಾ ಹಳೆ ಗೋಡೆಗೆ ಬಣ್ಣ ಹಚ್ಚುವ ಕೆಲಸವಷ್ಟೆ. ಅವು ಈ ರಾಜಕೀಯ ಆಂತರಿಕ ವ್ಯತ್ಯಾಸಗಳ ಬಗ್ಗೆ ಎಂದೂ ತೋರಿಸಲಾರವು. ಕಾಣುತ್ತಿರುವ ಪದರವಷ್ಟೇ ನಿಜವಾದ ರಾಜಕೀಯದ ಸ್ಥಿತಿ ಅಲ್ಲ. ಕಾಣದೆ ಉಳಿದಿರುವುದು ಕೂಡ ಹೌದು ಎನ್ನುವುದು ಇಲ್ಲಿ ಬಹಳ ಮುಖ್ಯ.

“ಪ್ರಧಾನಿ ನರೇಂದ್ರ ಮೋದಿಯವರ ನಿಲುವು ಮತ್ತು ವೈಯಕ್ತಿಕ ಜನಪ್ರಿಯತೆಗೆ ಸರಿಹೊಂದಲು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಇನ್ನಷ್ಟು ಶ್ರಮವಹಿಸಬೇಕಿದೆ ಎಂಬುದು ನಿಜವಾಗಿದ್ದರೂ, ಅವರು ಖಂಡಿತವಾಗಿಯೂ ಅವರಿಬ್ಬರ  ನಡುವಿನ ಅಂತರವನ್ನು ಕಡಿಮೆ ಮಾಡಿಕೊಂಡಿದ್ದಾರೆ ಎನ್ನುವುದಂತೂ ಸತ್ಯ. ಒಂದೇ ʼಮಾರ್ಕೇಟ್‌ʼ ಸರ್ವ ಕಾಲಕ್ಕೂ ಇರುವುದಿಲ್ಲ. ಒಂದು ಕೆಟ್ಟ ತಂತ್ರ ಆ ʼಮಾರ್ಕೆಟ್ ವಾಲ್ಯೂʼನನ್ನು ಕುಗ್ಗಿಸಬಹುದು. ಮತ್ತು ಆ ತಪ್ಪು ಹೆಜ್ಜೆಗಳೆ ಮುಂದಿನ  ತಂತ್ರಗಾರಿಕೆಗೆ ಸಹಾಯ ಮಾಡುವುದಕ್ಕೆ ಖಂಡಿತ ಸಾಧ್ಯವಿದೆ. ಇನ್ನಷ್ಟು ನಿಖರವಾಗಿ ಹೇಳುವುದಾದರೇ ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿಗೆ  ಬಹುತೇಕ ಈ ಸುದೀರ್ಘ ಸಂಪೂರ್ಣ ಹತ್ತು ವರ್ಷ ಕಲಿಸಿದ್ದು ಇದನ್ನೆ.

ಸವಾಲು ಎಸೆಯುವವರು ಎಲ್ಲಾ ಸಂದರ್ಭದಲ್ಲಿ ಪಂದ್ಯದಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಒಳ್ಳೆಯ ನಾಯಕನೋರ್ವ ಎಲ್ಲಾ ಸವಾಲನ್ನು ಎದುರಿಸಿ ಪಂದ್ಯವನ್ನು ಗೆಲ್ಲಿಸಿಕೊಡಬಹುದು. ಕಾಂಗ್ರೆಸ್‌ ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಗೆ ಒಂದು ದೊಡ್ಡ ಸವಾಲಾಗಿಯೇ ಕಾಣಿಸಿಕೊಂಡಿಲ್ಲ ಎಂಬುವುದನ್ನು ಕಾಂಗ್ರೆಸ್‌ ಕೂಡ ಅರಿತುಕೊಳ್ಳಬೇಕಿದೆ. ಅದು ಕಾಂಗ್ರೆಸ್‌ ನ ಆಂತರಿಕ ವೈಫಲ್ಯವೂ ಕೂಡ ಹೌದು. ಮೋದಿ ಅಂತಹ ಒಬ್ಬ ನಾಯಕ ಎದುರಾಳಿಯ ವೈಫಲ್ಯವನ್ನೇ ಬಳಸಿ ತನ್ನ ತಂತ್ರಗಾರಿಕೆಯಿಂದ ಎರಡೆರಡು ಬಾರಿ ಗೆದ್ದು ಬೀಗಿದರು. ಏನೇನೋ ವ್ಯಾಖ್ಯಾನಗಳು ಈ ಬಗ್ಗೆ ಹುಟ್ಟಿಕೊಂಡವಾದರೂ ಕಾಂಗ್ರೆಸ್‌ ಇಲ್ಲಿ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಲೇಬೇಕಿದೆ. ಪಂದ್ಯದಲ್ಲಿ ಹಾಗೆ, ಒಂದಿಷ್ಟು ಚೌಕಟ್ಟಿರುತ್ತದೆ, ಆ ಚೌಕಟ್ಟಿನೊಳಗೆ ಮಾಡಬಹುದಾದ ಎಲ್ಲಾ ಸಾಧ್ಯತೆಗಳನ್ನು ಮಾಡಿ ಗೆಲ್ಲಬಹುದು. ಸೋತ ಮೇಲೆ ಮೋಸ ಎಂದು ಹೇಳಿದರೆ ಇಲ್ಲಿ ಕೇಳುವವರು ಯಾರೂ ಇಲ್ಲ. ಬಿಜೆಪಿ ಚಾಣಾಕ್ಷ್ಯತನವನ್ನು ತೋರಿಸಿ ಎರಡು ಬಾರಿ ಗೆದ್ದಿತು. ಕಾಂಗ್ರೆಸ್‌ ಪರಾಭವಗೊಂಡಿತು. ಸದ್ಯದ ಸ್ಥಿತಿ ಹಾಗಿಲ್ಲ. ಕಾಂಗ್ರೆಸ್‌ ಕೂಡ ತನ್ನ ಸ್ಥಿತಿಯನ್ನು ಅವಲೋಕಿಸಿಕೊಂಡಿದೆ. ಬಿಜೆಪಿಗೆ ಒಂದು ಸಿಂಹ ಸ್ವಪ್ನವಾಗುವವರಗೆ ತನ್ನ ರಾಜಕೀಯ ತಂತ್ರಗಾರಿಕೆ ಹೆಣೆಯುವುದಕ್ಕೆ ಆರಂಭಿಸಿದೆ ಎನ್ನುವುದಕ್ಕೆ ದೊಡ್ಡ ಉದಾಹರಣೆಯೆ ಟೀಂ ʼಇಂಡಿಯಾʼ.  

ಇದು ಚಾಲೆಂಜರ್‌ ಅಥವಾ ಸವಾಲು ಹಾಕುತ್ತಿರುವ ಪ್ರತಿ ಬ್ರ್ಯಾಂಡ್‌ ಬಗ್ಗೆ ಯೋಚನೆಗೆ ಚಿಂತನೆ ಹಚ್ಚುವಂತೆ ಮಾಡಿದೆ ಎನ್ನುವುದು ದೇಶದ ರಾಜಕೀಯ ವಲಯದಲ್ಲಿನ ಸದ್ಯದ ಬೆಳವಣಿಗೆ. ಪ್ರತಿಪಕ್ಷಗಳನ್ನು ಸೋಲಿಸುವುದಕ್ಕೆ ತಾನೋಬ್ಬನೇ ಸಾಕು ಎಂದು ಸಂಸತ್ತಿನಲ್ಲಿ ಪ್ರತಿಪಾದಿಸಿದ ಮೋದಿ ಟೀಂ ʼಇಂಡಿಯಾʼ ರಚನೆಯಾಗುವಷ್ಟರಲ್ಲಿ ನಮಗೂ ಟೀಂ ಇದೆ, ನಮ್ಮ ಟೀಂ ನಿಮಗಿಂತ ದೊಡ್ಡ ಸಂಖ್ಯೆಯಿಂದ ಕೂಡಿದೆ ಎಂದು ತೋರಿಸಿಯೂ ಕೊನೆಗೆ ಹತಾಶರಾಗಿರುವುದು ಯಾಕೆ ಹಾಗಾದರೆ ? ಇದಕ್ಕೆ ʼಚಾಲೆಂಜಿಂಗ್‌ ಬ್ರ್ಯಾಂಡ್‌ʼ ಹಾಕಿದ ಸವಾಲೇ ಕಾರಣ. ʼಚಾಲೆಜಿಂಗ್‌ ಬ್ರ್ಯಾಂಡ್‌ʼ ಸಾಮಾನ್ಯವಾಗಿ ಟ್ರೆಡಿಷನಲ್‌ ಸೋರ್ಸ್‌ ಪೋಲ್‌ ಗಿಂತ ದೊಡ್ಡ ಮಹತ್ವಾಕಾಂಕ್ಷೆಗಳನ್ನು ಹೊಂದಿರುವುದಷ್ಟೆ ಅಲ್ಲದೆ, ಆತ್ಮವಿಶ್ವಾಸದಿಂದ ಮುನ್ನಡೆಯುವುದಕ್ಕೆ ಸಿದ್ಧವಾಗಿರುತ್ತದೆ. ಆದಾಗ್ಯೂ, ಚಾಲೆಂಜರ್ ಬ್ರ್ಯಾಂಡ್‌ ಗಳಾಗಿ  “ಯಾರು” ಸವಾಲು ಮಾಡುತ್ತಿದ್ದಾರೆ ಎಂಬುದಕ್ಕಿಂತ ಹೆಚ್ಚಾಗಿ “ಯಾವುದನ್ನು” ಅವರು ಸವಾಲು ಮಾಡುತ್ತಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.  

ಭಾರತದಲ್ಲಿ ಸದ್ಯ ರಾಜಕೀಯ ವಲಯದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ʼಚಾಲೆಂಜರ್‌ ಬ್ರ್ಯಾಂಡ್‌ʼ. ʼಲಿಡರ್‌ ಬ್ರ್ಯಾಂಡ್‌ʼ ಪ್ರಧಾನಿ ಮೋದಿ. ರಾಹುಲ್‌ ಕಳೆದ ಕೆಲವು ವರ್ಷಗಳ ಹಿಂದೆ ಇದ್ದ ಹಾಗಿಲ್ಲ. ಅವರ ರಾಜಕೀಯ ಅನುಭವ ವೃದ್ಧಿಸಿದೆ. ರಾಜಕೀಯದಲ್ಲಿನ ಅವರ  ʼಫಂಬ್ಲಿಂಗ್ ಎಕ್ಸ್‌ಪಿರಿಯನ್ಸ್‌ʼ ಅಥವಾ ಅನುಭವದ ಕೊರತೆ ಅವರನ್ನು ಟೀಕೆಗೆ ಒಳಪಡಿಸಿರುವುದನ್ನು ಇಡೀ ದೇಶ ಕಂಡಿದೆ.  ವೈಯಕ್ತಿಕವಾಗಿ ರಾಜಕೀಯದಲ್ಲಿ ರಾಹುಲ್‌ ಗಾಂಧಿ ಎಷ್ಟು ಸಮರ್ಥರೋ ಅಥವಾ ಅಸಮರ್ಥರೋ ಅದು ಎರಡನೇ ಹಂತದ ಚರ್ಚೆ. ಆದರೇ, ಅವರ ಹಿಂದೆ ಕೆಲಸ ಮಾಡುತ್ತಿರುವ ರಾಜಕೀಯ ತಂತ್ರಗಾರಿಕೆ ನಿಜಕ್ಕೂ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ದೊಡ್ಡ ಸವಾಲನ್ನೇ ಎಸೆಯುತ್ತಿದೆ ಎನ್ನುವುದಂತೂ ಅಕ್ಷರಶಃ ಸತ್ಯ. ‌ಪ್ರಸ್ತುತ ಸರ್ಕಾರದ ಕಾರ್ಯಕ್ಷಮತೆ, ನೋಟು ಅಮಾನ್ಯೀಕರಣ, ಜಿಎಸ್‌.ಟಿ, ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆ, ಆರ್ಥಿಕ ಅಸಮತೋಲನದಂತಹ ವಿಷಯಗಳ ಬಗ್ಗೆ ರಾಹುಲ್‌ ಗಾಂಧಿ ಪದೆ ಪದೆ ಜನರ ಮುಂದೆ ಇರಿಸುತ್ತಿರುವುದು ಮತ್ತು ಅವನ್ನು ತಮ್ಮ ಅಜೆಂಡಾವನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವುದು ಒಂದು ತರದ ಜಾಣ್ಮೆಯ ನಡೆಯೂ ಹೌದು. ಮತ್ತಿವು ರಾಹುಲ್‌ ಸಮರ್ಥರಾಗಿದ್ದಾರೆ ಎನ್ನುವ ಸಂಕೇತವೂ ಹೌದು.

ರಾಜಕೀಯದ ನಿರೀಕ್ಷೆಗಳನ್ನು ಮೀರಿ ನಡೆಯುವುಕ್ಕೆ ವಾಸ್ತವ ಸ್ಥಿತಿ ಇಲ್ಲಿ ಸಾಧ್ಯಮಾಡಿಕೊಡುವುದಿಲ್ಲ. ಅವಾಸ್ತವಿಕವಾಗಿ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದರಿಂದಲೂ ಎಲ್ಲಾ ರಾಜಕೀಯ ಲೆಕ್ಕಾಚಾರಗಳು ಮೇಲು ಕೇಳಗಾಗುತ್ತದೆ. ಅವಾಸ್ತವಿಕವಾಗಿ ನಡೆದುಕೊಳ್ಳುವ ನಾಯಕ ʼಭರವಸೆಯ ನಾಯಕʼ ಎಂದು ಕರೆಸಿಕೊಳ್ಳಲಾರ. ಇದು ನಿಸ್ಸಂದೇಹವಾಗಿ ಆತನ ವಿಶ್ವಾಸಾರ್ಹತೆ ಮತ್ತು ಜನಪ್ರಿಯತೆಗಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಇಲ್ಲಿ ಆಗಿರುವುದು ಇಷ್ಟೆ. ರಾಹುಲ್‌ ಗಾಂಧಿಯ ರಾಜಕೀಯ ವರ್ಚಸ್ಸು ಕುಂದುತ್ತಾ ಪಾತಾಳಕ್ಕೆ ಹೋಯ್ತು, ಮೋದಿ ರಾಜಕೀಯ ವರ್ಚಸ್ಸು ಗಗನಕ್ಕೇರಿತು. ʼಲೀಡರ್‌ ಬ್ರ್ಯಾಂಡ್‌ʼ ಇಡೀ ಮಾರ್ಕೇಟ್‌ ನನ್ನು ಸೆಳೆಯುವ ತಾಕತ್ತನ್ನು ಹೊಂದಿರಬೇಕಾಗುತ್ತದೆ. ಇಲ್ಲಿ ʼಚಾಲೆಂಜರ್‌ ಬ್ರಾಂಡ್‌ʼ ಮತ್ತು ʼಲೀಡರ್‌ ಬ್ರ್ಯಾಂಡ್‌ʼ ನಡುವಿನ ಸರಾಸರಿಯನ್ನು ಪರಿಗಣಿಸಿ ನೋಡಲಾಗುತ್ತದೆ. ಯಾವುದು ಹೆಚ್ಚು ಭಾರ ತೂಗುತ್ತದೋ ಅದಕ್ಕೆ ಮಾನ್ಯತೆ ದೊರೆಯುತ್ತದೆ. ಒಟ್ಟಿನಲ್ಲಿ, ʼಬ್ರ್ಯಾಂಡ್‌ ಮೋದಿʼ ಮತ್ತು ʼಬ್ರ್ಯಾಂಡ್‌ ರಾಹುಲ್ʼ ನಡುವೆ ಒಂದು ಸ್ಪರ್ಧೆಯೇ ಈಗ ಒಂದು ರೀತಿಯಲ್ಲಿ ಅಧಿಕೃತವಾಗಿ ಆರಂಭವಾಗಿದೆ. ಒಂದೆಡೆ ʼಬ್ರ್ಯಾಂಡ್‌ ಮೋದಿʼಯನ್ನು ಹಿಂದುತ್ವ, ರಾಮ ಮಂದಿರ, ಅಭಿವೃದ್ಧಿ, ಗ್ಲೋಬಲ್‌ ಲೀಡರ್‌ ಎಂಬಂತೆಲ್ಲಾ ಬಿಂಬಿಸಲಾಗುತ್ತಿದ್ದರೆ, ಮತ್ತೊಂದಡೆ ʼಬ್ರ್ಯಾಂಡ್‌ ರಾಹುಲ್‌ʼ ನನ್ನು ಪ್ರಗತಿಪರ, ಜಾತ್ಯತೀತ, ಸಹಾನುಭೂತಿಯುಳ್ಳ ನಾಯಕ, ಜನಪರ ಎಂಬಂತೆಲ್ಲಾ ಬಿಂಬಿಸಲಾಗುತ್ತಿದೆ. ಇಲ್ಲಿ ಎರಡೂ ಬ್ರಾಂಡ್‌ ಗಳು ತನ್ನದೇ ಆದ ಸೆಳೆತ ಮತ್ತು ವಿಶೇಷತೆಯನ್ನು ಹೊಂದಿವೆ.

ನಿಸ್ಸಂಶಯವಾಗಿ ಜನಪ್ರಿಯತೆಯ ಆಧಾರದಲ್ಲಿ ʼಬ್ರ್ಯಾಂಡ್‌ ಮೋದಿʼ ಬಲಿಷ್ಠವಾಗಿದೆ. ʼಬ್ರ್ಯಾಂಡ್‌ ರಾಹುಲ್‌ʼ ಕಳೆದುಕೊಂಡ ವರ್ಚಸ್ಸನ್ನು ಮರಳಿ ಪಡೆಯುವ ಯತ್ನದಲ್ಲಿದೆ.  ʼಚಾಲೆಂಜರ್ ಬ್ರ್ಯಾಂಡ್‌ʼ ಮತ್ತು ʼಲೀಡರ್‌ ಬ್ರ್ಯಾಂಡ್‌ʼ ಗಳ ಅಂತರ ಈಗ ಹೆಚ್ಚೇನೂ ಇಲ್ಲ. ‌ʼಪಾಲಿಟಿಕಲ್ ಮಾರ್ಕೆಟ್‌ʼ ಹೇಗೂ ಬದಲಾಗಬಹುದು. ಲೋಕಸಭೆ ಬರ್ತಿದೆ, ಕಾದು ನೋಡೋಣ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!