Sunday, September 8, 2024

ಮುಂದಿನ ದಿನಗಳಲ್ಲಿ ಕೃಷಿಯೇ ಆಧಾರ-ಎಸ್.ರಾಜು ಪೂಜಾರಿ


ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ತೆಂಗು ಮತ್ತು ಅಡಿಕೆ ಸಮಗ್ರ ಕೃಷಿ ಪದ್ದತಿ ಮಾಹಿತಿ ಕಾರ್ಯಾಗಾರ

ಕುಂದಾಪುರ, ಸೆ.16: ಕೃಷಿಯನ್ನು ಲಾಭದಾಯಕ ವಲಯವನ್ನಾಗಿ ಪರಿವರ್ತಿಸುವಲ್ಲಿ ಸುಧಾರಿತ ಪದ್ದತಿ, ವೈಜ್ಞಾನಿಕ ಕೃಷಿ, ಹೊಸ ಹೊಸ ತಂತ್ರಜ್ಞಾನಗಳ ಬಳಕೆಯ ಬಗ್ಗೆ ಕೃಷಿಕರು ಗಮನ ಹರಿಸಬೇಕು. ಇಸ್ರೆಲ್‍ನಂತಹ ದೇಶಗಳಲ್ಲಿ ಕೃಷಿ ಪ್ರಮುಖ ಆರ್ಥಿಕ ಶಕ್ತಿಯಾಗಿದೆ. ಕೃಷಿ ಕ್ಷೇತ್ರದಲ್ಲಿ ಆರ್ಥಿಕ ಭರವಸೆ ಮೂಡಿಸುವಲ್ಲಿ ಪ್ರಯೋಗಗಳು ನಡೆಯಬೇಕು. ಮುಂದಿನ ದಿನಗಳಲ್ಲಿ ಕೃಷಿಯೇ ಆಧಾರ ಎನ್ನುವುದು ಸ್ಪಷ್ಟವಾಗಲಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ, ಜಿ.ಪಂ, ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ ಹೇಳಿದರು.

ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾಡ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ನಾಡ ಹಾಡಿಗರಡಿಯ ಶ್ರೀ ನಂದಿಕೇಶ್ವರ ಸಭಾ ಭವನದಲ್ಲಿ ನಡೆದ ತೆಂಗು ಮತ್ತು ಅಡಿಕೆ ಸಮಗ್ರ ಕೃಷಿ ಪದ್ದತಿ ಮಾಹಿತಿ ಕಾರ್ಯಾಗಾರವನ್ನು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ವಿಶ್ವದಲ್ಲಿ ಆಹಾರೋದ್ಯಮವೇ ಪ್ರಮುಖವಾದುದು. ನಮ್ಮಲ್ಲಿರುವ ಭೂಮಿಯಲ್ಲಿ ಲಾಭದಾಯಕ ಕೃಷಿಯನ್ನು ಹೇಗೆ ಮಾಡಬಹುದು ಎನ್ನುವ ಬಗ್ಗೆ ಚಿಂತನೆಗಳು ಮೂಡಬೇಕು. ಸೈನಿಕರು ದೇಶವನ್ನು ಹೇಗೆ ರಕ್ಷಣೆ ಮಾಡುತ್ತಾರೆಯೂ ರೈತರು ಆಹಾರ ಉತ್ಪಾದನೆ ಮಾಡುವ ಮೂಲಕ ದೇಶವನ್ನು ರಕ್ಷಣೆ ಮಾಡುತ್ತಾರೆ. ಈಗ ಕೃಷಿ ವಲಯ ನಿರ್ಲಕ್ಷ್ಯಕ್ಕೆ ಒಳಗಾಗಿರಬಹುದು. ಶೀಘ್ರ ಕೃಷಿಯೇ ಪ್ರಮುಖ ಆಧ್ಯತೆಯ ಕ್ಷೇತ್ರವಾಗಿ ಗುರುತಿಸಲ್ಪಡುವುದರಲ್ಲಿ ಸಂಶಯವಿಲ್ಲ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಕೃಷಿ ಕೂಡಾ ಒಂದು ವಿಜ್ಞಾನ, ಕೃಷಿಕರು ವೈಜ್ಞಾನಿಕ ಕೃಷಿ, ತಂತ್ರಜ್ಞಾನಗಳ ಅಳವಡಿಕೆ ಮಾಡಿಕೊಳ್ಳಬೇಕು. ವ್ಯವಹಾರಿಕವಾಗಿ ಕೃಷಿಯನ್ನು ಮಾಡುವುದು ಅಗತ್ಯವೇ ಹೊರತು ಪ್ರಶಸ್ತಿಗಾಗಿ ಕೃಷಿ ಮಾಡುವುದು ಸರಿಯಲ್ಲ. ಸಾವಯವವೋ, ರಾಸಾಯನಿಕವೋ ಎನ್ನುವ ಗೊಂದಲವನ್ನು ರೈತ ನಿವಾರಿಸಿಕೊಳ್ಳಬೇಕು. ಪೂರಕ ಮಾಹಿತಿ ಇಲ್ಲದೆ ಕೃಷಿ ಮಾಡಿದರೆ ಪ್ರಯೋಜನವಿಲ್ಲ. ಲಭ್ಯಮೂಲಗಳಿಂದ ಮಾಹಿತಿ ಸಂಗ್ರಹಿಸಿದ ಬಳಿಕವೇ ಕೃಷಿ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಾಜೀವ ಪಡುಕೋಣೆ ಮಾತನಾಡಿ, ಕೃಷಿಕರ ಹಿತಾಸಕ್ತಿಯಿಂದ ಸಂಘವು ಕೃಷಿ ಉತ್ತೇಜನದ ಸಲುವಾಗಿ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ರೈತರ ಶ್ರೇಯೋಭಿವೃದ್ದಿಯ ದೃಷ್ಟಿಯಲ್ಲಿ ರೈತರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಮುಂದೆಯೂ ಕೂಡಾ ಆಯೋಜನೆ ಮಾಡಲಾಗುವುದು. ರೈತರು ಇಂಥಹ ಕಾರ್ಯಕ್ರಮಗಳ ಪ್ರಯೋಜನ ಪಡೆದು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದರು.

ಅಡಿಕೆ ಕೃಷಿಕ್ಷೇತ್ರ ವಿಸ್ತರಣೆ ಆರೋಗ್ಯಕರವಲ್ಲ:
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕೃಷಿ ವಿಜ್ಞಾನಿ ಡಾ.ರವಿರಾಜ ಶೆಟ್ಟಿ ಮಾತನಾಡಿ, ತೆಂಗು ಮತ್ತು ಅಡಿಕೆ ಕರಾವಳಿಯ ಪರಂಪರಿಕ ಬೆಳೆಗಳು. ನೂರಾರು ವರ್ಷಗಳಿಂದ ಈ ಭಾಗದಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ವಿಶ್ವದಲ್ಲಿಯೇ ಅತೀ ಹೆಚ್ಚು ಅಡಿಕೆ ಬೆಳೆಯ ಕ್ಷೇತ್ರ ಹಾಗೂ ಉತ್ಪಾದನೆ ಮಾಡುವ ದೇಶ ಭಾರತ. 2017ರಲ್ಲಿ 3 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಅಡಿಕೆ ಬೆಳೆದರೆ 2021ರಲ್ಲಿ ಅದು ದ್ವಿಗುಣವಾಗಿ 6 ಲಕ್ಷ ಹೆಕ್ಟೇರಿಗೆ ತಲುಪಿದೆ. ಪ್ರಸ್ತುತ 9 ಲಕ್ಷ ಹೆಕ್ಟೇರ್ ಆಗಿದೆ. ಈಗ ಅಡಿಕೆ ಬೆಳೆಯ ಧಾರಣೆಯ ಪ್ರಭಾವದಿಂದ ಪರಂಪರಿಕ ಕ್ಷೇತ್ರ ಬಿಟ್ಟು ರಾಜ್ಯದ ಎಲ್ಲ ಕಡೆ ಅಡಿಕೆ ಬೆಳೆಯಲಾಗುತ್ತಿದೆ. ಆದರೆ ಈ ರೀತಿ ಅಡಿಕೆ ಬೆಳೆ ಕ್ಷೇತ್ರ ವಿಸ್ತರಣೆ ಆರೋಗ್ಯಕರವಲ್ಲ ಎಂದರು.

ಕೃಷಿಕರು ವೈಜ್ಞಾನಿಕ ವಿಧಾನದಲ್ಲಿ ಕೃಷಿ ಮಾಡಬೇಕು. ಅಡಿಕೆ ಗಿಡ ನಾಟಿಗೆ ದೊಡ್ಡ ಹೊಂಡ ಮಾಡುವ ಕ್ರಮ ಸೂಕ್ತವಲ್ಲ ಎನ್ನುವುದು ದೃಢಪಟ್ಟಿದೆ. 45 ಸೆಂ.ಮೀ ಆಳದ ಹೊಂಡ ಸಾಕಾಗುತ್ತದೆ. ತೋಟದಲ್ಲಿ ನೀರು ನಿಲ್ಲದಂತೆ 50 ಸೆಂ.ಮೀ ಆಳದ ಬಸಿಗಾಲುವೆ ನಿರ್ಮಿಸಬೇಕು. ಕರಾವಳಿಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಪೋಷಕಾಂಶಗಳು ನಷ್ಟವಾಗುವುದು, ಮಣ್ಣು ಹುಳಿಗೆ ಬದಲಾವುದನ್ನು ತಡೆಯಬೇಕು. ಹಾಗೆಯೇ ಹೊಸ ಅಡಿಕೆ ತೋಟ ಮಾಡುವಾಗ ಸೂರ್ಯನ ಪ್ರಖರ ಕಿರಣಕ್ಕೆ ವಿರುದ್ಧವಾಗಿ ಗಿಡಗಳ ನಾಟಿ ಮಾಡಬೇಕು ಎಂದರು.

ತೆಂಗು ಬೇಸಾಯದಲ್ಲಿಯೂ ಕೂಡಾ ವೈಜ್ಞಾನಿಕ ವಿಧಾನಗಳ ಅಳವಡಿಕೆ ಮಾಡಬೇಕು. ಬೇರುಗಳಿಗೆ ಹಾನಿಯಾಗದಂತೆ ಗೊಬ್ಬರವನ್ನು ನೀಡಬೇಕು. ಶಿಫಾರಸು ಮಾಡಿದ ಪೋಷಕಾಂಶಗಳನ್ನು ನೀಡಬೇಕು. ಪೀಡೆನಾಶಕಗಳ ಬಳಕೆ, ಸೂಕ್ತ ನೀರು ನಿರ್ವಹಣೆ ಮಾಡಿದರೆ ಒಂದು ಮರದಿಂದ 200 ತೆಂಗಿನ ಕಾಯಿ ಪಡೆಯಬಹುದು ಎಂದರು.

ಮಣ್ಣು ಪರೀಕ್ಷೆಯ ಆಧಾರದಲ್ಲಿಯೇ ರಸಗೊಬ್ಬರ ನೀಡಿ:
ಕೃಷಿ ವಿಜ್ಞಾನಿ ಡಾ| ಜಯಪ್ರಕಾಶ ಶೆಟ್ಟಿ ಮಣ್ಣು ಮತ್ತು ಪೋಷಕಾಂಶಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ, ಮಣ್ಣು ಪರೀಕ್ಷೆಯ ಆಧಾರದಲ್ಲಿಯೇ ರಸಗೊಬ್ಬರವನ್ನು ನೀಡಬೇಕು. ಯೂಟ್ಯೂಬ್ ನೋಡಿ ಕೃಷಿ ಮಾಡುವುದು ಸರಿಯಲ್ಲ. ಅಲ್ಲಿ ಆಯಾ ಪ್ರದೇಶ ಅವಲಂಬಿತ ಯಶಸ್ಸು, ಪ್ರಾದೇಶಿಕ ಹವಾಗುಣ, ಮಣ್ಣಿನ ಗುಣದ ಮೇಲೆ ಅವಲಂಬಿತವಾರುತ್ತದೆ ಎಂದರು.

ಸಸ್ಯಗಳ ಬೆಳವಣಿಗೆಗೆ 14 ಪೋಷಕಾಂಶಗಳು ಅತ್ಯಗತ್ಯ. ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಮ್ ಶಿಫಾರಸ್ಸು ಮಾಡಲಾದ ಪ್ರಮಾಣದಲ್ಲಿ ನೀಡಬೇಕು. ವರ್ಷಕ್ಕೆ ಅಡಿಕೆ ಮರವೊಂದಕ್ಕೆ ಸಾರಜನಕ ಮತ್ತು ರಂಜಕ 250 ಗ್ರಾಂ, ಪೊಟ್ಯಾಶ್ 300 ಗ್ರಾಂ ಪ್ರಮಾಣದಲ್ಲಿ ಮೇ ಮತ್ತು ಸೆಪ್ಟೆಂಬರ್‍ನಲ್ಲಿ ಅರ್ಧಭಾಗ ನೀಡಬೇಕು. ಮಣ್ಣಿನಲ್ಲಿ ತೇವಾಂಶ ಇರುವಾಗಲೇ ರಸಗೊಬ್ಬರ ನೀಡಬೇಕು. 20 ಗ್ರಾಂ ಬೋರಾಕ್ಸ್ ಕೊಡಬೇಕು. ಕಿರು ಪೋಷಕಾಂಶಗಳ ಬಗ್ಗೆ ರೈತರು ಗಮನ ಹರಿಸಬೇಕು ಎಂದರು.

ಕರಾವಳಿಯಲ್ಲಿ ಮಳೆ ಹೆಚ್ಚು ಬೀಳುವುದರಿಂದ ಸುಣ್ಣ ಕೊಡಬೇಕು. ಪ್ರತಿ ಅಡಿಕೆ ಮರಕ್ಕೆ 500 ಗ್ರಾಂ ಸುಣ್ಣ ನೀಡಬೇಕು. 20 ವರ್ಷ ಮೇಲ್ಪಟ್ಟ ತೆಂಗಿನ ಮರಕ್ಕೆ 4 ಕೆಜಿ ಸುಣ್ಣ ನೀಡಬೇಕು. ಸುಣ್ಣ ನೀಡಿದ 15 ದಿನಗಳ ಬಳಿಕ ಮಣ್ಣು ತಟಸ್ಥ ಸ್ಥಿತಿಗೆ ಬಂದ ಬಳಿಕ ರಸಗೊಬ್ಬರ ನೀಡಬೇಕು ಎಂದರು.

ಕಳಿತ ಸಾವಯವ ಗೊಬ್ಬರವನ್ನು ನೀಡುವುದರೊಂದಿಗೆ ಹಸಿರು ಗೊಬ್ಬರವಾದ ಡಯಾಂಚ, ಸೆಣಬು ನೀಡಬೇಕು. ಬೇವಿನ ಹಿಂಡಿಯನ್ನು ಕೂಡಾ ನೀಡಬಹುದು. ಕೋಳಿ ಗೊಬ್ಬರ ನೀಡುವಾಗ ಎಚ್ಚರಿಕೆ ಅನುಸರಿಸಬೇಕು. ಕಾಳುಮೆಣಸು ಸೂಕ್ಷ್ಮ ಬೆಳೆಯಾದ್ದರಿಂದ ಬೇರುಗಳಿಗೆ ಹಾನಿಯಾಗಬಾರದು ಎಂದರು.

ರೈತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ತೆಂಗಿನ ಮರಕ್ಕೆ ಉಪ್ಪು ನೀಡುವ ಅವಶ್ಯಕತೆ ಇಲ್ಲ ಎಂದರು. ತೆಂಗಿನ ಮರದ ಕಾಂಡ ಸೋರುವಿಕೆಗೆ ಬೋರ್ಡೋ ದ್ರಾವಣದ ಬಳಕೆ ಬಗ್ಗೆ ಮಾಹಿತಿ ನೀಡಿದರು. ಅಡಿಕೆ ಮಿಡಿಗಳು ಒಡೆದು ಬೀಳುವುದಕ್ಕೆ ಬೋರಾನ್ ಕೊರತೆ ಕಾರಣ. ಲಘು ಪೋಷಕಾಂಶಗಳ ಬಗ್ಗೆಯೂ ರೈತರು ಗಮನ ನೀಡಬೇಕು ಎಂದರು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಮಹೇಶ ಹೆಗ್ಡೆ ಮೊಳಹಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ನಿರ್ದೇಶಕ ಫಿಲಿಪ್ ಡಿಸಿಲ್ವ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ ಅತಿಥಿಗಳನ್ನು ಗೌರವಿಸಿದರು. ನಿರ್ದೇಶಕ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!