spot_img
Wednesday, January 22, 2025
spot_img

ವಂಡ್ಸೆ ಗಣೇಶೋತ್ಸವ : ನಿವೃತ್ತ ಶಿಕ್ಷಕಿ ಆಶಾ, ನಿವೃತ್ತ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿ, ನಿವೃತ್ತ ಪೋಸ್ಟ್ ಮ್ಯಾನ್ ಆನಂದ ನಾಯ್ಕ್ ಅವರಿಗೆ ಸೇವಾ ಪುರಸ್ಕಾರ: ಗುಂಡು ಪೂಜಾರಿ ಅವರಿಗೆ ಕೃಷಿ ಪುರಸ್ಕಾರ, ನವೀನ್ ಕಾಂಚನ್ ಅವರಿಗೆ ಕ್ರೀಡಾ ಪುರಸ್ಕಾರ

ಕುಂದಾಪುರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಂಡ್ಸೆ ಇದರ 21ನೇ ವರ್ಷದ ಗಣೇಶೋತ್ಸವ ಸೆ.18 ಮತ್ತು ಸೆ.19ರಂದು ನಡೆಯಲಿದೆ.

ಸೆ.18ರಂದು ಬೆಳಿಗ್ಗೆ 9.40ಕ್ಕೆ ಗಣೇಶ ವಿಗ್ರಹದ ಪ್ರತಿಷ್ಠಾಪನೆ, ಬೆಳ್ಳಿ ಪ್ರಭಾವಳಿ ಸಮರ್ಪಣೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಂಗಳಾರತಿ, ಅನ್ನಸಂತರ್ಪಣೆ, 12.45ರಿಂದ ಪ್ರಸಿದ್ಧ ಯಕ್ಷಗಾನ ಹಿಮ್ಮೇಳ ಕಲಾವಿದರಿಂದ ಗಾನ ವೈಭವ, ಸಂಜೆ 5.30ಕ್ಕೆ ಪೂಜಾ ಕಾರ್ಯಕ್ರಮ, 6 ಗಂಟೆಗೆ ರಾಘವೇಂದ್ರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, 7.30ರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 8.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಆಶಾ ವಂಡ್ಸೆ, ನಿವೃತ್ತ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿ ವಂಡ್ಸೆ, ನಿವೃತ್ತ ಪೋಸ್ಟ್ ಮ್ಯಾನ್ ಆನಂದ ನಾಯ್ಕ್ ಅವರಿಗೆ ಸೇವಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಯಶಸ್ವಿ ಕೃಷಿಕ ಗುಂಡು ಪೂಜಾರಿ ಹರವರಿ ಇವರಿಗೆ ಕೃಷಿ ಪುರಸ್ಕಾರ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ ನವೀನ್ ಕಾಂಚನ್ ಅವರಿಗೆ ಕ್ರೀಡಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಕರಾಟೆಯಲ್ಲಿ ರಾಷ್ಟ್ರ ಮಟ್ಟದ ಬಂಗಾರದ ಪದಕ ವಿಜೇತ ದಿಗಂತ್, ಅಮಿತ್ ಉದ್ದಿನಬೆಟ್ಟು ಅವರಿಗೆ ಪ್ರತಿಭಾ ಪುರಸ್ಕಾರ, ಎಸ್.ಎಸ್.ಎಲ್.ಸಿ ಪಿಯುಸಿಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮ ಕೂಡಾ ನಡೆಯಲಿದೆ. ಬಳಿಕ ಓಂಕಾರ ಕಲಾವಿದರು ಕಣ್ಣುಕೆರೆ ತೆಕ್ಕಟ್ಟೆ ಇವರಿಂದ ಹಾಸ್ಯ ನಾಟಕ ‘ಎಂತಾರು ಬಿಡುವುದಿಲ್ಲ’ ನಡೆಯಲಿದೆ.

ಸೆ.19ರಂದು ಬೆಳಿಗ್ಗೆ ಸಾರ್ವಜನಿಕ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 3 ಗಂಟೆಗೆ ವಿಸರ್ಜನ ಪೂಜೆ, ವೈಭವದ ಪುರಮೆರವಣಿಗೆ, ವಂಡ್ಸೆ ಕಳುವಿನಬಾಗಿಲು ಬಳಿ ಚಕ್ರಾ ನದಿಯಲ್ಲಿ ಜಲಸ್ತಂಭನ ನಡೆಯಲಿದೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಪ್ರಕಾಶ ಪೂಜಾರಿ ಜಡ್ಡು, ಗೌರವಾಧ್ಯಕ್ಷ ಉದಯ ಕೆ,ನಾಯ್ಕ್ ಕಾರ್ಯದರ್ಶಿ ಅಭಿಷೇಕ್ ಮೇಲ್ಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೇವಾ ಪುರಸ್ಕಾರ, ಕೃಷಿ ಪುರಸ್ಕಾರ, ಕ್ರೀಡಾ ಪುರಸ್ಕಾರ: ಸಾಧಕರ ಕಿರು ಪರಿಚಯ

ನಿವೃತ್ತ ಶಿಕ್ಷಕಿ ಶ್ರೀಮತಿ ಆಶಾ ಕೆ.ಬೋಳಾರ್

ಶಿಕ್ಷಣ ಕ್ಷೇತ್ರದಲ್ಲಿ ತನ್ನದೆಯಾದ ಛಾಪು ಮೂಡಿಸಿ, ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದರು ಶ್ರೀಮತಿ ಆಶಾ ಕೆ.ಬೋಳಾರ್. ಸಹಶಿಕ್ಷಕಿಯಾಗಿ ಮೂರು ಬಾರಿ ಪ್ರಬಾರ ಮುಖ್ಯ ಶಿಕ್ಷಕಿಯಾಗಿ ಗುರುತರವಾದ ಸೇವೆ ಸಲ್ಲಿಸಿದವರು ಇವರು.

ದಿನಾಂಕ: 18-05- 1963 ರಂದು ಬೈಂದೂರಿನ ವೆಂಕಟು ಮತ್ತು ದೇವಮ್ಮ ದಂಪತಿಗಳ ಮಗಳಾಗಿ ಜನಿಸಿದ ಇವರು, ಪ್ರಾಥಮಿಕ ಶಿಕ್ಷಣವನ್ನು ಸ.ಮಾ.ಹಿ.ಪ್ರಾ. ಶಾಲೆ ಬೈಂದೂರು, ಪ್ರೌಢ ಶಿಕ್ಷಣವನ್ನು ರತ್ತುಬಾಯಿ ಗರ್ಲ್ಸ್ ಹೈಸ್ಕೂಲ್ ಬೈಂದೂರು, ಪದವಿಪೂರ್ವ ಶಿಕ್ಷಣವನ್ನು ಜೂನಿಯರ್ ಕಾಲೇಜು ಬೈಂದೂರು ಇಲ್ಲಿ ಮುಗಿಸಿದರು.

22ನೇ ವಯಸ್ಸಿನಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದ ಇವರು 31-07-1985 ರಂದು ಪುತ್ತೂರು ತಾಲೂಕಿನ ರೆಂಜಿಲಾಡಿ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಳ್ಳುವ ಮೂಲಕ ಸರಕಾರಿ ಕೆಲಸಕ್ಕೆ ಸೇರ್ಪಡೆಗೊಂಡರು. ಸ.ಹಿ.ಪ್ರಾ ಶಾಲೆ ಜಡ್ಕಲ್‍ನಲ್ಲಿ ಸೇವೆ ಸಲ್ಲಿಸಿ 28-01-1994 ರಲ್ಲಿ ವಂಡ್ಸೆ ಶಾಲೆಗೆ ನಿಯುಕ್ತರಾದರು. 1994ರಿಂದ 2023ರ ತನಕ ವಂಡ್ಸೆ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದರು.

1987ರಲ್ಲಿ ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೇಶವ ಬೋಳಾರ್ ಇವರನ್ನು ವಿವಾಹವಾದರು. ಸ್ವಾತಿ ಮತ್ತು ಶ್ರುತಿ ಇವರ ದಾಂಪತ್ಯದ ಪ್ರತೀಕಗಳು.

ಸುಮಾರು 29 ವರ್ಷಗಳ ಕಾಲ ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸಿ ವಂಡ್ಸೆಯ ಜನತೆಯ ಅಪಾರ ಅಭಿಮಾನಕ್ಕೆ ಪಾತ್ರರಾದವರು. ಪ್ರಸ್ತುತ ವಂಡ್ಸೆಯವರೇ ಆಗಿರುವ ಆಶಾ ಇವರು ಆಶಾ ಟೀಚರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಸೌಮ್ಯ ಮುಖಮುದ್ರೆಯ ಇವರು ಮಕ್ಕಳ ಸರ್ವಾಂಗೀಣ ಪ್ರಗತಿಗೆ ನೀಡಿದ ಕೊಡುಗೆ ಅನುಪಮವಾದುದು. ಕನ್ನಡ, ಗಣಿತ ವಿಷಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬೋಧಿಸುತ್ತಿದ್ದ ಇವರ ಪಾಠವನ್ನು ಆಲಿಸಿದ ವಿದ್ಯಾರ್ಥಿ ಎಂದೂ ಮರೆಯಲಾರ. ವಿದ್ಯಾರ್ಥಿಗಳ ಆಪಾರವಾದ ಕಳಕಳಿ ಇವರದ್ದು.

ನಿವೃತ್ತ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿ ವಂಡ್ಸೆ:

ಕೇವಲ ಪಾಠ-ಪ್ರವಚನಕ್ಕೆ ಸೀಮಿತವಾಗದೇ ಕ್ರೀಡೆ-ಸಾಂಸ್ಕøತಿಕ ಕ್ಷೇತ್ರದಲ್ಲಿಯೂ ಕೂಡಾ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗೆ ಪ್ರೋತ್ಸಾಹದ ಅಮೃತಧಾರೆ ಎರೆದು ಪ್ರತಿಭಾ ರತ್ನಗಳನ್ನಾಗಿ ರೂಪಿಸಿದ ಶಿಕ್ಷಕ ಶಶಿಧರ ಶೆಟ್ಟಿ ಅವರು. ‘ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ, ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೇ ಗುರು’ ಎನ್ನುವಂತೆ ಶಶಿಧರ ಶೆಟ್ಟಿಯವರು 33 ವರ್ಷ 5 ತಿಂಗಳ ಸಾರ್ಥಕ ಸೇವೆ ನೀಡಿದ್ದಾರೆ.

ಆಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಜೂನ್ 30-2023ರಂದು ಸೇವಾ ನಿವೃತ್ತರಾಗಿದ್ದಾರೆ.

ವಂಡ್ಸೆಯ ಪಠೇಲರಮನೆಯ ಪಾರ್ವತಿ ಶೆಟ್ಟಿ ಮತ್ತು ತಲ್ಲೂರು ದೊಡ್ಮನೆ ನಾರಾಯಣ ಶೆಟ್ಟಿಯವರ ಪುತ್ರರಾಗಿ 1963ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ವಂಡ್ಸೆ ಶಾಲೆಯಲ್ಲಿ ಮುಗಿಸಿ, ಪ್ರೌಢಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ವಂಡ್ಸೆ-ನೆಂಪು ಇಲ್ಲಿ ಪಡೆದರು. ಪ್ರಾಥಮಿಕ ಶಾಲಾ ದಿನಗಳಲ್ಲಿ ಕಟ್ಟೆರೆ ರಘುರಾಮ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಹಿಂದಿ ಶಿಕ್ಷಕರಾಗಿದ್ದ ಆತ್ರಾಡಿ ಮಂಜಯ್ಯ ಶೆಟ್ಟಿಯವರಿಂದ ಪ್ರಭಾವಕ್ಕೆ ಒಳಗಾದ ಇವರು ಶಿಕ್ಷಕನಾಗುವ ಸಲುವಾಗಿ ಕೊಕ್ಕರ್ಣೆಯ ಕುಮುದಾ ಉಮಾಶಂಕರ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ತರಬೇತಿ ಪಡೆದರು.

ವಿದ್ಯಾರ್ಥಿದೆಸೆಯಲ್ಲಿಯೇ ಕ್ರೀಡೆ ಹಾಗೂ ಕಲಿಕೆಯಲ್ಲಿ ಅಗ್ರಗಣಿಯಾಗಿದ್ದ ಇವರು, 1983ರಲ್ಲಿ ಮೈಸೂರು ಹಿಂದಿ ಪ್ರಚಾರ ಪರಿಷತ್ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ rank ಪಡೆದು ದೆಹಲಿಯಲ್ಲಿ ರಾಷ್ಟ್ರಪತಿ ಸನ್ಮಾನಕ್ಕೆ ಭಾಜನರಾಗಿದ್ದರು.

1990ರಲ್ಲಿ ಕುಂದಾಪುರ ತಾಲೂಕಿನ ಹಣೆಜೆಡ್ಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗುವ ಮೂಲಕ ವೃತ್ತಿ ಜೀವನ ಆರಂಭಿಸಿದರು. ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆಗೆ 1992ರಲ್ಲಿ ವರ್ಗಾವಣೆಗೊಂಡು ಅಲ್ಲಿ 23 ವರ್ಷಗಳ ಸೇವೆ ಸಲ್ಲಿಸಿ 2015ರಿಂದ ಸ.ಹಿಪ್ರಾ.ಶಾಲೆ ಆಲೂರು ಇಲ್ಲಿಗೆ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದರು.

ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ ವಿಷಯಗಳನ್ನು ಸರಳ ಮತ್ತು ಸುಲಭವಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ತಿಳಿಸುತ್ತಿದ್ದರು. ಪಾಠದಲ್ಲಿ ಕಠಿಣ ವಸ್ತುಗಳಿದ್ದರೂ ಕೂಡಾ ಸಾಂದರ್ಭಿಕ ಉದಾಹರಣೆ, ಉಪಕಥೆ, ಗ್ರಾಮೀಣ ಭಾಷಾ ಸೊಗಡಿನಲ್ಲಿ ಪರಿಣಾಮಕಾರಿಯಾಗಿ ವಿವರಿಸುತ್ತಿದ್ದರು.

ಕ್ರೀಡಾ ಶಿಕ್ಷಕನಲ್ಲದಿದ್ದರೂ ಕ್ರೀಡಾಸಕ್ತ ಮಕ್ಕಳ ಸುಪ್ತ ಪ್ರತಿಭೆ ಗುರುತಿಸಿ ತರಬೇತಿ ನೀಡುತ್ತಿದ್ದರು. ಕಬ್ಬಡ್ಡಿ, ವಾಲಿಬಾಲ್ ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವಲ್ಲಿ ಇವರ ಶ್ರಮವೂ ಗಮನೀಯ.

ಕ್ರೀಡೆ ಮತ್ತು ಕಲೆ, ರಂಗಭೂಮಿ ಇವರ ಪ್ರವೃತ್ತಿಯ ಕ್ಷೇತ್ರಗಳು. ಅದ್ಭುತ ರಂಗನಟ, ಸಾಮಾಜಿಕ, ಚಾರಿತ್ರಿಕ, ಪೌರಾಣಿಕ ನಾಟಕಗಳಲ್ಲಿ ಕಥಾನಾಯಕ ಪಾತ್ರ ನಿರ್ವಹಿಸಿದ್ದಾರೆ. ವಂಡ್ರೆ ಪರಿಸರದಲ್ಲಿ ಸ್ಥಳೀಯರಿಂದ ನಾಟಕ ಆಯೋಜನೆಯಾದಾಗಲೆಲ್ಲ ನಾಯಕ ಪಾತ್ರಕ್ಕೆ ಮೊದಲು ಸೂಚಿಸಲ್ಪಡುವ ಹೆಸರು ಇವರದ್ದೆ. ಯಕ್ಷಗಾನದಲ್ಲಿಯೂ ಕೂಡಾ ಛಾಪು ಮೂಡಿಸಿದಾರೆ,

ವೀರಮಣಿ, ಭೀಷ್ಮ ಇವರಿಗೆ ಖ್ಯಾತಿ ತಂದಿತ್ತ ಪಾತ್ರಗಳು. ಕೆಂಪು ಮುಂಡಾಸು ಮತ್ತು ಕಿರೀಟ ವೇಷಗಳು ಇವರ ಆಳಂಗಕ್ಕೆ ಸೂಕ್ತ ಆಗುತ್ತಿದ್ದವು. ಎತ್ತರದ ಕಾಯ, ಗಂಭೀರತೆ, ಧ್ವನಿಭಾರ, ಅಭಿವ್ಯಕ್ತಿಯಲ್ಲಿ ತೋರಿಸುವ ನೈಜತೆ ಅನನ್ಯವಾದುದು. ದುಃಖರ ಸದ ಸಂದರ್ಭದಲ್ಲಿ ಪಾತ್ರದೊಂದಿಗೆ ಪ್ರೇಕ್ಷಕರು ಅತ್ತಿದ್ದು ಉಂಟು.

ಶಿಕ್ಷಣ ಸೇವೆಗೆ 2001ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಯಕ್ಷಭಾರತಿ ಸಾಂಸ್ಕೃತಿಕ ಕಲಾ ಕೇಂದ್ರ ನೆಂಪು ಇವರಿಂದ ಶಿಕ್ಷಕ ಜ್ಯೋತಿ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿ ಬಂದಿದ್ದವು.

2010ರಲ್ಲಿ ಶಿಕ್ಷಕರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, 2012ರಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ, ನಂತರ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹುಟ್ಟೂರಾದ ವಂಡ್ಸೆಯ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರದಲ್ಲಿ ಶ್ರಮಿಸಿದ್ದಾರೆ. ಆಲೂರು ಶಾಲೆ ಸರ್ವಾತೋಮುಖ ಪ್ರಗತಿಯಲ್ಲಿ ಶ್ರಮಿಸಿರುವ ಇವರು ದತ್ತಿನಿಧಿಗಳ ಸ್ಥಾಪಿಸಿದ್ದಾರೆ.

ಕೃಷಿ ಕುಟುಂಬದಲ್ಲಿ ಜನಿಸಿ, ಕೃಷಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಶಿಕ್ಷಕನಾಗಬೇಕು ಎನ್ನುವ ವಾಂಛೆಯಿಂದ ಸಾಧನೆಯ ಮೆಟ್ಟಿಲೇರಿದ ಶಶಿಧರ ಶೆಟ್ಟಿಯವರು ಶಿಕ್ಷಕನಾಗಿ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಜ್ಞಾನಶಶಿಯಾಗಿದ್ದಾರೆ

ಪತ್ನಿ ಮಾಲತಿ ಶೆಟ್ಟಿ, ಪುತ್ರ ಶಿಶಿರ ಶೆಟ್ಟಿ, ಪುತ್ರಿ ಶ್ರುತಿ ಶೆಟ್ಟಿ, ಮೊಮ್ಮಗ ಸಮನ್ಯು ಅವರೊಂದಿಗಿನ ಸಂತೃಪ್ತ ಸಂಸಾರ ಇವರದ್ದು.

ನಿವೃತ್ತ ಅಂಚೆ ಸೇವಕ ಆನಂದ ನಾಯ್ಕ್ ನ್ಯಾಗಳಮನೆ:

ಸುಮಾರು ಮೂರು ನಾಲ್ಕು ದಶಕಗಳ ಹಿಂದೆ ಪೋಸ್ಟ್ ಮ್ಯಾನ್ ಗೆ ವಿಶೇಷ ಮಹತ್ವವಿತ್ತು. ಇಂದಿಗೂ ಕೂಡಾ. ಆದರೆ ಅಂದು ಜನಜೀವನದ ಅವಿಭಾಜ್ಯ ಅಂಗವೇ ಅಂಚೆ ಇಲಾಖೆಯಾಗಿತ್ತು. ವಿಶ್ವಾಸಾರ್ಹವಾದ ಸೇವೆಗೆ ಪರ್ಯಾಯ ಹೆಸರು ಆಗಿರುವ ಅಂಚೆ ಇಲಾಖೆ, ಅಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳು, ಅದರಲ್ಲೂ ಪೋಸ್ಟ್ ಮ್ಯಾನ್ (ಅಂಚೆ ಸೇವಕ)ರ ಪಾತ್ರ ಅನನ್ಯವಾದುದು.

ವಂಡ್ಸೆ ಅಂಚೆ ಕಛೇರಿಯಲ್ಲಿ ಗ್ರಾಮೀಣ ಅಂಚೆ ಸೇವಕರಾಗಿ ಸುದೀರ್ಘ 42 ವರ್ಷಗಳ ಸೇವೆ ಸಲ್ಲಿಸಿರುವ ಆನಂದ ನಾಯ್ಕ ನ್ಯಾಗಳಮನೆ ದಿನಾಂಕ 02-06-2023ರಂದು ಸೇವಾ ನಿವೃತ್ತರಾಗಿದ್ದಾರೆ. ಅವರದ್ದು ನಾಲ್ಕು ದಶಕಗಳ ಸುದೀರ್ಘವಧಿಯ ಸೇವೆ. ಅದರಲ್ಲಿ ಜನರ ಪ್ರೀತಿ ವಿಶ್ವಾಸ ಗಳಿಸಿ ಸಾರ್ಥಕವಾದ ಸೇವೆ ನೀಡಿದ್ದಾರೆ.

ನ್ಯಾಗಳಮನೆ ಶೀನ ನಾಯ್ಕ ಮತ್ತು ಚಂದು ದಂಪತಿಗಳ ಪುತ್ರರಾಗಿ ಜನಿಸಿದ ಆನಂದ ನಾಯ್ಕ ಅವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ರೆಯಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢಶಾಲೆ ವಂಡ್ಸೆ-ನೆಂಪು ಇಲಿ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಮುಗಿಸಿದರು. ದಿನಾಂಕ 03-08- 1981ರಲ್ಲಿ ವಂಡ್ಸ್ ಅಂಚೆ ಕಛೇರಿಯಲ್ಲಿ ಸೇವೆಗೆ ಸೇರ್ಪಡೆಯಾದರು. ಆಗ ಮಾಸಿಕ ವೇತನ 160 ರೂ. ಇತ್ತು. ಆಗ ಶಿವರಾಮ ಹೊಳ್ಳರು ಅಂಚೆ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆಗ ಕಾಲ್ನಡಿಗೆಯಲ್ಲಿಯೇ ಅಂಚೆ ಬಟವಾಡೆ ಮಾಡಬೇಕಾದ ಜವಬ್ದಾರಿಯಿತ್ತು. ಟೆಲಿಗ್ರಾಂ ಸಂದೇಶವನ್ನು ಮುಟ್ಟಿಸಬೇಕಾಗಿತ್ತು. ಆಗ ಸಂವಹನ ಮಾಧ್ಯಮವೆಂದರೆ ಪತ್ರಗಳು, ಬೇರೆ ಬೇರೆ ಊರುಗಳಿಂದ ಬರುವ ಪತ್ರವನ್ನು ವಿಳಾಸದಾರರಿಗೆ ತಲುಪಿಸಬೇಕಾದ ಮಹತ್ತರ ಹೊಣೆಗಾರಿಕೆ ಇತ್ತು. ಹಣವನ್ನು ಮನಿಯಾರ್ಡರ್ ಮೂಲಕವೇ ಕಳಿಸಲಾಗುತ್ತಿತ್ತು. ವಿಳಾಸದಾರರಿಗೆ ಆ ಬಗ್ಗೆ ಮಾಹಿತಿ ನೀಡಿ ಅಂಚೆ ಕಛೇರಿಗೆ ಬಂದು ಪಡೆಯುವಂತೆ ಸೂಚಿಸಬೇಕಾಗಿತ್ತು. ದಿನವಿಡಿ ಕಠಿಣ ದುಡಿಮೆಯಾಗಿತ್ತು. ಮಳೆ, ಬಿಸಿಲು ಎನ್ನದೆ ತಿರುಗಾಡಬೇಕಾಗಿತ್ತು.

ಕೆಲವು ವರ್ಷಗಳ ತರುವಾಯ ಬಳಿಕ ಸೈಕಲ್ ಬಂತು. ಸೈಕಲ್‍ನಲ್ಲಿ ಓಡಾಟ ಆರಂಭವಾಯಿತು. ಅಂಚೆ ಇಲಾಖೆಗೆ ಒತ್ತಡ ಇರುವ ಸಮಯದಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಅಂದು ಫಲಾನುಭವಿಗೆ ಬರುತ್ತಿದ್ದುದು ವಿಧವಾ ವೇತನ ಮಾತ್ರ. ಅದನ್ನು ವಿಳಾಸದಾರರಿಗೆ ತಲುಪಿಸಬೇಕಾಗಿತ್ತು. ಸ್ಥಳೀಯರಾದ್ದರಿಂದ ವ್ಯಕ್ತಿ ಪರಿಚಯ, ಸ್ಥಳೀಯ ಪ್ರದೇಶ, ವಿಳಾಸದಾರರ ಪರಿಚಯ ಇದ್ದ ಕಾರಣ ಪ್ರಾರಂಭದಲ್ಲಿ ಕಷ್ಟವಾಗಲಿಲ್ಲ. ಬಳಿಕ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

ಪತ್ನಿ ನಾಗರತ್ನ, ಪುತ್ರಿಯರಾದ ಶೈಲಶ್ರೀ, ಶಿಲ್ಪಶ್ರೀ, ಪುತ್ರ ಗುರುಪ್ರಸಾದ್. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದ್ದಾರೆ. ಸೇವಾವಧಿಯಲ್ಲಿ ಅಂಚೆ ಕಛೇರಿಯ ಎಲ್ಲಾ ಸಿಬ್ಬಂದಿಗಳ ಸಹಕಾರ, ಶಾಖಾ ಕಛೇರಿ ಸಿಬ್ಬಂದಿಗಳ ಸಹಕಾರ, ಕುಂದಾಪುರ ಪ್ರಧಾನ ಅಂಚೆಕಛೇರಿಯ ಅಧಿಕಾರಿಗಳ ಸಹಕಾರವನ್ನು ಸ್ಮರಿಸಿಕೊಳ್ಳುವ ಆನಂದ ನಾಯ್ಕ ಸಾರ್ವಜನಿಕ ಸೇವೆಯಲ್ಲಿ ನಾಲ್ಕು ದಶಕಗಳ ಸೇವೆ ಖುಷಿ ತಂದಿದೆ. ಹೊಸ ಜೀವನಾನುಭವ ಕೊಟ್ಟಿದೆ ಎನ್ನುತ್ತಾರೆ ಆನಂದ ನಾಯ್ಕ್.

ಆನಂದ ನಾಯ್ಕ್ ಸಾಮಾಜಿಕ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ತೊಡಿಸಿಕೊಂಡಿರುವ ಇವರು ಶ್ರೀ ಕ್ಷೇ.ಧ.ಗ್ರಾ ಯೋಜನೆ ಒಕ್ಕೂಟ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಾರ್ವಜನಿಕ ಗಣೇಶೋತ್ಸವದಲ್ಲಿ ವಿವಿಧ ಜವಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಯುವ ಕೃಷಿಕ ಗುಂಡು ಪೂಜಾರಿ ಹರವರಿ:

ಯುವ ಜನಾಂಗ ಕೃಷಿ ಕ್ಷೇತ್ರಕ್ಕೆ ಬರುವುದು ಕಡಿಮೆ. ಕೃಷಿ ಯುವ ಜನಾಂಗದಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಈ ಸಂದರ್ಭ ಕೃಷಿ ಆರ್ಥಿಕ ಸುಧಾರಣೆಯ ಪ್ರಮುಖ ವಲಯ ಎನ್ನುವುದು ತೋರಿಸಿಕೊಟ್ಟವರು ಗುಂಡು ಪೂಜಾರಿ ಹರವರಿ.

ಕೃಷಿ ಅಂದು-ಇಂದು ಮುಂದೆ ಕೂಡಾ ಭರವಸೆಯ ಆಧ್ಯತಾ ವಲಯ. ಮುಂದೊಂದು ದಿನ ಕೃಷಿಯೇ ಪ್ರಮುಖ ಆರ್ಥಿಕ ವಲಯವಾಗಿ ರೂಪುಗೊಳ್ಳಲಿದೆ. ಸುಧಾರಿತ ಬೇಸಾಯ ಕ್ರಮಗಳ ಬಳಕೆ, ವಿಜ್ಞಾನ ತಂತ್ರಜ್ಞಾನಗಳ ಅನುಷ್ಠಾನ, ಹೊಸ ಹೊಸ ಪ್ರಯೋಗ, ಅಧ್ಯಾಯನ, ಕೃಷಿತಾಕುಗಳ ಭೇಟಿ ಇತ್ಯಾದಿಗಳು ಮೂಲಕ ಕೃಷಿಯಲ್ಲಿ ಯಶಸ್ಸು ಕಂಡವರು ಇವರು.

ವಂಡ್ಸೆ ಗ್ರಾಮದ ಕಲ್ಮಾಡಿ ಗೋವಿಂದ ಪೂಜಾರಿ ಮತ್ತು ದೇವಲ್ಕುಂದ ಸುಬ್ಬು ಪೂಜಾರಿ ದಂಪತಿಗಳ ದ್ವಿತೀಯ ಪುತ್ರನಾಗಿ ದಿನಾಂಕ 23-04-1973 ರಲ್ಲಿ ಹರವರಿಯಲ್ಲಿ ಜನಿಸಿದ ಇವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಳಿ ಆಲೂರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ, ಪ್ರೌಢ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ನೆಂಪು, ವಂಡ್ಸೆಯಲ್ಲಿ ಮುಗಿಸಿದರು.

ಅಡಿಕೆ, ತೆಂಗು, ಗೇರು, ಶುಂಠಿ, ಬಾಳೆ ಕೃಷಿಗಳಲ್ಲಿ ನಿರಂತರ ಪ್ರಯೋಗಶೀಲರಾಗಿ ಯಶಸ್ವಿಗಳಿಸಿದರು. ಇವರ ಕೃಷಿ ಸಾಧನೆಗೆ ಜೆಸಿಐ ಸಂಸ್ಥೆಯಿಂದ ಕೃಷಿ ರತ್ನ ಮತ್ತು ಲಯನ್ಸ್ ಸಂಸ್ಥೆಯಿಂದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಲಭಿಸಿದೆ.

ವಂಡ್ಸೆ ಗ್ರಾಮ ಪಂಚಾಯತ್ ಸದಸ್ಯರಾಗಿ, ವಂಡ್ಸೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಹಲವಾರು ಸಮಾಜಮುಖಿ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.

ಪತ್ನಿ ಜ್ಯೋತಿ ಜಿ. ಪೂಜಾರಿ, ಪುತ್ರಿಯರಾದ ಗಾಯತ್ರಿ ಮತ್ತು ಪ್ರತಿಭಾರೊಂದಿಗೆ ಸುಂದರ ಸಂಸಾರ ಇವರದ್ದು. ಕೃಷಿಯಲ್ಲಿ ಇನ್ನಷ್ಟು ಸಾಧನೆ, ವಿಸ್ತರಣೆ ಮಾಡುವುದರ ಜೊತೆಗೆ ಹೆಚ್ಚು ಹೆಚ್ಚು ಯುವ ಜನರನ್ನು ಕೃಷಿಯತ್ತ ಸಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಸವ್ಯಸಾಚಿ ವಾಲಿಬಾಲ್ ಆಟಗಾರ ನವೀನ್ ಕಾಂಚನ್:

ವಾಲಿಬಾಲ್ ಅಖಾಡದಲ್ಲಿ ಆಲ್‍ರೌಂಡರ್ ಪ್ರದರ್ಶನ, ಮಿಂಚಿನ ಆಟದ ಮೂಲಕ ವಾಲಿಬಾಲ್‍ನಲ್ಲಿ ಹೊಸ ಭರವಸೆಯ ಪ್ರತಿಭೆಯಾಗಿ ಮೂಡಿ ಬಂದಿರುವ ಯುವ ಆಟಗಾರ ವಂಡ್ಸೆ ಸಮೀಪದ ನವೀನ್ ಕಾಂಚನ್. ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯಾಗಳಮನೆ ನಿವಾಸಿ ಮಂಜುನಾಥ ಮತ್ತು ರತ್ನ ದಂಪತಿಗಳ ಪುತ್ರರಾಗಿರುವ ಇವರು ಬಸರೂರು ಶಾರದಾ ಕಾಲೇಜಿನಲ್ಲಿ ಬಿಕಾಂ ಪದವಿ, ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ನವೀನ್ ಕಾಂಚನ್ 6.4 ಅಡಿ ಎತ್ತರದ ಅಜಾನುಬಾಹು ಯುವಕ. ವಾಲಿಬಾಲ್ ಆಟಕ್ಕೆ ಅಗತ್ಯವಿರುವುದು ಕೂಡಾ ನೀಳಕಾಯ. ಗ್ರಾಮೀಣ ಪ್ರದೇಶದ ಈ ಯುವಕ ಪ್ರತಿಭಾನ್ವಿತ ವಾಲಿಬಾಲ್ ಆಟದ ಮೂಲಕವೇ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಹೆಗ್ಗಳಿಕೆ ಪಡೆದಿದ್ದಾರೆ.

ಹಿಜಾಣ ಕಿರಿಯ ಪ್ರಾಥಮಿಕ ಶಾಲೆ ಪ್ರಾಥಮಿಕ ಶಿಕ್ಷಣ, ಸ.ಪ.ಪೂ.ಕಾಲೇಜು ವಂಡ್ಸೆ-ನೆಂಪು ಇಲ್ಲಿ ಪದವಿ ಪೂರ್ವ ಶಿಕ್ಷಣ, ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಬಿ.ಕಾಂ ಪದವಿ ಪಡೆದಿದ್ದಾರೆ.

ಎಲ್ಲಿಯೂ ಪ್ರಚಾರ ಬಯಸದೇ ತನ್ನ ಆಟದ ಮೂಲಕವೇ ಹಂತಹಂತವಾಗಿ ಮೇಲೆರುತ್ತಿರುವ ನವೀನ್ ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಬೇಡಿಕೆಯ ವಾಲಿಬಾಲ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರದ ಪ್ರತಿಷ್ಠಿತ ಪ್ರಾಯೋಜಕರುಗಳು ಪ್ರಾಯೋಜಿತ ಆಟಗಾರರನ್ನಾಗಿ ಇವರನ್ನು ತಮ್ಮ ತಂಡಕ್ಕೆ ಕರೆಯುತ್ತಿದ್ದಾರೆ. ನವೀನ್ ವಾಲಿಬಾಲ್‍ನ ಸರ್ವಿಸ್, ಪಾಸಿಂಗ್, ಅಟ್ಯಾಕಿಂಗ್, ಬ್ಲಾಕಿಂಗ್ ವಿಭಾಗಗಳಲ್ಲಿ ತನ್ನದೆಯಾದ ಹಿಡಿತ ಸಾಧಿಸಿದ್ದಾರೆ. ಅದರಲ್ಲಿಯೂ ಸ್ಪೀಡ್ ಅಟ್ಯಾಕಿಂಗ್ ಜಂಪ್ ಸರ್ವಿಸ್‍ನಲ್ಲಿ ಮಿಂಚಿನ ಸರ್ವಿಸ್ ಮಾಡಿ ತಂಡದ ಮುನ್ನೆಡೆಗೆ ಕಾರಣರಾಗುತ್ತಾರೆ. ಅಂಡರ್ ಸರ್ವಿಸ್, ಜಂಪ್ ಸರ್ವಿಸ್, ಪ್ಲೋಟಿಂಗ್ ಸರ್ವಿಸ್, ಸ್ಮ್ಯಾಶ್‍ನಲ್ಲಿ ಡೈವಿಂಗ್, ಸ್ಟ್ರೈಟ್, ಟರ್ನ್ ಸ್ಮ್ಯಾಶ್‍ಗಳ ಮೂಲಕವೂ ಗಮನ ಸಳೆಯುತ್ತಾರೆ. ಒಟ್ಟಾರೆಯಾಗಿ ಇಡೀ ಅಖಾಡದಲ್ಲಿ ಎದ್ದುಕಾಣುವ ಆಟ ಇವರದ್ದು.

ಇವರಲ್ಲಿ ಅಡಗಿರುವ ವಾಲಿಬಾಲ್ ಸಾಮಥ್ರ್ಯ ಹಾಗೂ ಪ್ರತಿಭೆ ಗಮನಿಸಿದ ತರಬೇತುದಾರರು ಒಳ್ಳೆಯ ತರಬೇತಿ ನೀಡಿ ಸಜ್ಜುಗೊಳಿಸಿದ್ದಾರೆ. ಬಸ್ರೂರು ಶ್ರೀ ಶಾರದಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಸೂರಜ್ ಕುಮಾರ್ ಶೆಟ್ಟಿ ಹಾಗೂ ಕುಂದಾಪುರದ ರಾಷ್ಟ್ರೀಯ ವಾಲಿಬಾಲ್ ಆಟಗಾರ ಮಹಮ್ಮದ್ ಸಮೀರ್ ಹಾಗೂ ಸುನಿಲ್ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಪ್ರತಿಭೆಯಾಗಿ ಮೂಡಿ ಬಂದಿದ್ದಾರೆ.

2017-18ನೇ ಸಾಲಿನಲ್ಲಿ ಚೆನ್ನೈನ ಎಸ್.ಆರ್.ಎಂ ವಿಶ್ವವಿದ್ಯಾನಿಲಯದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ. 2016-17ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯ ವಾಲಿಬಾಲ್ ಲೀಗ್ (ಕೆ.ವಿ.ಎಲ್)ನಲ್ಲಿ ಭಾರತೀಯ ಸಂಚಾರ ನಿಗಮ ನಿ.(ಬಿ.ಎಸ್.ಎನ್.ಎಲ್) ತಂಡದ ಅತಿಥಿ ಆಟಗಾರರಾಗಿ ಪ್ರತಿನಿಧಿಸಿ ಎರಡು ಬಾರಿ ಚಾಂಪಿಯನ್ ಆಗಿದ್ದಾರೆ.

2017-18ನೇ ಸಾಲಿನ ಎಸ್.ಪಿ.ಎಸ್.ಬಿ ಇವರ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟವು ಕರ್ನಾಟಕದ ಬಳ್ಳಾರಿಯಲ್ಲಿ ನಡೆದಿದ್ದು ಈ ಪಂದ್ಯದಲ್ಲಿ ಜೆ.ಎಸ್.ಡ್ಲ್ಯೂ ಬಳ್ಳಾರಿ ಕರ್ನಾಟಕ ಇವರ ತಂಡವನ್ನು ಪ್ರತಿನಿಧಿಸಿ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ.
2018ರಲ್ಲಿ ಅಕ್ಟೋಬರ್ ತಿಂಗಳಲ್ಲಿ ಕುವೈಟ್‍ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. 2018 ಡಿಸೆಂಬರ್‍ನಲ್ಲಿ ದುಬೈನಲ್ಲಿ ನಡೆದ ಇಂಟರ್‍ನ್ಯಾಷನಲ್ ವಾಲಿಬಾಲ್ ಪಂದ್ಯಾಟದಲ್ಲಿಯೂ ಭಾಗವಹಿಸಿದ್ದಾರೆ.

ಕರ್ನಾಟಕ, ಕೇರಳ, ಪುಣೆ, ಮುಂಬಯಿಯಲ್ಲೂ ನಡೆದ ಹಲವಾರು ಅಂತರ್‍ರಾಜ್ಯ ಮಟ್ಟದ ಪ್ರತಿಷ್ಠಿತ ವಾಲಿಬಾಲ್ ಪಂದ್ಯಾಟಗಳಲ್ಲಿಯೂ ಭಾಗವಹಿಸಿ ಉತ್ತಮ ಹೊಡೆತಗಾರ, ಉತ್ತಮ ಸರ್ವಾಂಗೀಣ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.


(-ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!