Sunday, September 8, 2024

‘ಸೂರಿ ಮಾಣಿ’ಯ ಹೋಟೆಲ್ ಬದುಕು ಮತ್ತು ಅವತಾರಗಳು

ಮನಷ್ಯ ಲೋಕ ಜೀವಿ. ಯಾರೇ ಆಗಲಿ ಲೋಕದಲ್ಲಿ ತನ್ನ ಬದುಕಿನಲ್ಲಿ ಏಳು ಬೀಳುಗಳನ್ನು ಕಾಣಲೇ ಬೇಕು. ಕಾಣುತ್ತಾನೆ ಕೂಡ. ಇದು ಈ ಲೋಕದಲ್ಲಿ ಅನಿವಾರ್ಯ. ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ನಾವು ನೀವು ಎಲ್ಲರೂ ಇಲ್ಲಿ ಒಂದೊಂದು ಬದುಕನ್ನು ಕಂಡವರು, ಒಂದೊಂದು ಅನುಭವ ಕಂಡವರು. ಒಬ್ಬೊಬ್ಬರ ಬದುಕು, ಅನುಭವಗಳಿಂದ ಒಂದು ಪುಸ್ತಕವೇ ರಚಿಸಿ ಬಿಡಬಹುದು. ಅಂತದಕ್ಕೆ ಒಂದು ಒಳ್ಳೆಯ ಉದಾಹರಣೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ, ಸಹೃದಯರೂ ಆದ ನೀಲಾವರ ಸುರೇಂದ್ರ ಅಡಿಗರು ಇತ್ತೀಚೆಗೆ ಬರೆದ ʼಸೂರಿ ಮಾಣಿʼ ಪುಸ್ತಕ.

ತಮ್ಮ ಜೀವನದ ಆರಂಭಿಕ ಕಾಲಘಟ್ಟದಲ್ಲಿ ಬೆಂಗಳೂರಿನ ʼಹೋಟೆಲ್ ಬದುಕಿನʼ ಅನುಭವಗಳನ್ನು ಹೃದಯಸ್ಪರ್ಶಿಯಾಗಿ ಅಡಿಗರು ಇಲ್ಲಿ ಹೆಣೆದಿದ್ದಾರೆ. ಒಬ್ಬ ಹೋಟೆಲ್ ಮಾಲೀಕ, ಹೋಟೆಲ್‌ ಕಾರ್ಮಿಕ ಹಾಗೂ ಹೋಟೆಲ್ ಗ್ರಾಹಕನ ದೃಷ್ಟಿಯಿಂದ ಅಡಿಗರು ನೋಡಿದ ನೋಟ ಈ ಕೃತಿಯಲ್ಲಿದೆ. ಹುಟೂರನ್ನು ಬಿಟ್ಟು ಇನ್ನೆಲ್ಲಿಗೊ ಉದ್ಯೋಗ ಅರಸಿ ಹೋಗುವವರ ಪಾಡು , ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಅವೆಲ್ಲಾ ಹೇಳಿ ತೀರಲಾಗದ ಸಂಕಟವೂ ಹೌದು. ಮನುಷ್ಯ ತನ್ನ ಬದುಕಿನಲ್ಲಿ ಯಾವುದರಿಂದ ಮುಕ್ತನಾದರೂ ಸಂಕಟಗಳಿಂದ ಬಹುಷಃ ಮುಕ್ತನಾಗಲಾರ. ಹಂತ ಹಂತಕ್ಕೆ ಆತನ ಬದುಕಿನ ಸ್ಥಿತಿ ಚೇತರಿಸಿಕೊಂಡರು ಸಂಕಟಗಳು ಆತನನ್ನು ಬಿಟ್ಟು ಬಿಡುವುದಿಲ್ಲ. ಅದರ ಸ್ವರೂಪ ಬೇರೆಯಾಗಿ ಆತನೊಂದಿಗೆ ಇರುತ್ತದೆ. ಇಲ್ಲಿನ ಪ್ರತಿ ಪುಟಗಳಲ್ಲಿ ಅಂತಹ ಸಂಕಟಗಳೇ ಹೆಚ್ಚು ಜಾಗ ಪಡೆದುಕೊಂಡಿವೆ. ಅಡಿಗರ ಅನುಭವದ ಧಾರೆ ಇಲ್ಲಿ ಓದುಗನಿಗೆ ಬದುಕು ಹೀಗೂ ಇರಬಹುದಾ ಅಂತನ್ನಿಸಿ ಕಣ್ಣೋಳಗೆ ಭಾವತೀವೃತೆಯನ್ನು ಹೆಚ್ಚು ಹೊತ್ತು ಕಾಲ ಉಳಿಸಿಕೊಳ್ಳದೆ ಹೊರ ಹಾಕದೇ ಇರಲಾಗದು ಎನ್ನುವುದಂತೂ ಪದಶಃ ಸತ್ಯ ಎನ್ನುವುದು ಅತಿಶಯೋಕ್ತಿ ಅಲ್ಲ.

ಶ್ರೀ ರಾಘವೇಂದ್ರ ಸ್ವಾಮಿ ಪ್ರಸನ್ನ ಹೋಟೆಲ್, ಹೊಟೇಲ್‌ ರಜನಿ, ಶೀ ದುರ್ಗಾ ರಿಫ್ರೆಶ್‌ ಮೆಂಟ್‌ ಹೊಟೇಲ್‌ ಗಳಲ್ಲಿ ಅಡಿಗರು ಕಂಡ ಅನುಭವಗಳೇ ಇಲ್ಲಿ ಒಬ್ಬ ಓದುಗನನ್ನು ಹೋಟೆಲ್ ತಿಂಡಿಗಳ ಸವಿಯ ಜೊತೆಗೆ ದುಃಖವನ್ನು ಉಣಬಡಿಸುತ್ತದೆ. ಹೋಟೆಲ್ ಕೆಲಸಕ್ಕೆ ಸೇರಿದ್ದರಿಂದ ಹಿಡಿದು, ತುಳಸಿ ಪಾರ್ಕ್‌ ಒಳಗಿರುವ ಬದುಕುಗಳ ವಿಹಂಗಮ ನೋಟ, ಕಾರ್ಮಿಕರ ಕಷ್ಟ, ವೃತಿ ಬದುಕಿನಲ್ಲಿ ಸಹದ್ಯೋಗಿಗಳೊಂದಿಗಿನ ಸಹಜ ವೈಮನಸ್ಸು, ಬೈಗುಳ, ವೃತ್ತಿ ನಿಷ್ಠೆ, ಸಿಟ್ಟು, ಸೆಡವು, ಸಾತ್ವಿಕ ಕೋಪ, ತಾಳ್ಮೆ, ಸಹನೆ, ಕಲಿಕೆ, ಬದುಕು ಎಲ್ಲವೂ ಇಲ್ಲಿ ಒಟ್ಟು ಸೇರಿವೆ. ಇದರೊಂದಿಗೆ ಹದಗೆಟ್ಟ ಮೈಸೂರು ಪಾಕ್‌ ನಿಂದ ತಯಾರಿಸುವ ʼಮಕ್ಮಲ್‌ ಪೂರಿʼ, ಬೆಳಗ್ಗೆ ಉಳಿದ ಚಿತ್ರಾನ್ನದಿಂದ ತಯಾರಿಸುವ ʼಮೋಹನ್‌ ಬಾತ್ʼ ಮತ್ತು ʼಬಾತ್‌ ಮಸಾಲʼ ಎಂಬ ಹೊಸ ಮಾದರಿಯ ಮಸಾಲೆ ದೋಸೆಗಳ ಆವಿಷ್ಕಾರಗಳನ್ನು ನೋಡಿದರೇ, ಇನ್ಮುಂದೆ ಹೋಟೆಲಿಗೆ ಹೋಗಿ ಹೊಸ ಬಗೆಯ ತಿಂಡಿ ಆರ್ಡರ್‌ ಮಾಡುವಾಗ ಈ ಪುಸ್ತಕ ನೆನಪಾಗಿ, ಒಮ್ಮೇ ಆ ತಿಂಡಿಯ ತಯಾರಿ ಯಾವುದರಿಂದಾಗಿರಬಹದು ಎಂಬುವುದನ್ನು ಯೋಚಿಸುವಂತೆ ಮಾಡದೆ ಇರಲಾರದು ಎನ್ನುವುದಂತೂ ಸತ್ಯ.

ಹೋಟೆಲು ಕಾರ್ಮಿಕನಾಗಿ, ಸಂಜೆ ಕಾಲೇಜಿನಲ್ಲಿ ಓದು ಮುಗಿಸಿ, ಕನ್ನಡ ಸಾಹಿತ್ಯದ ಬಗ್ಗೆ ಒಲವು ಇಟ್ಟುಕೊಂಡು, ಅದಕ್ಕಾಗಿ ಶ್ರಮವಹಿಸಿ, ಅದ್ಯಾಪಕರಾಗಿ, ಮಕ್ಕಳ ಪ್ರೀತಿಯ ಮೇಷ್ಟ್ರಾಗಿ, ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗುವ ತನಕ ಬೆಳೆದಿರುವುದು, ಬೆಳೆದು ಮಾದರಿಯಾಗಿಯೂ ಇರುವುದು ನಿಜಕ್ಕೂ ಶ್ಲಾಘನೀಯ. ಅವರ ಅಷ್ಟೂ ಅನುಭವವೇ ಇವತ್ತು ಇಷ್ಟು ಎತ್ತರವನ್ನು ಏರುವುದಕ್ಕೆ ಸಹಕಾರಿಯಾಗಿದೆ ಅಂತ ನನಗನ್ನಿಸುತ್ತದೆ. ಹೋಟೆಲು ಜೀವನದಲ್ಲಿ ಬರೇ ಹೋಟೆಲು ಕೆಲಸವಲ್ಲ, ಓದು, ಸಾಹಿತ್ಯ, ಕನಸು ಎಲ್ಲವೂ ಸೇರಿ ʼಸೂರಿ ಮಾಣಿʼ ಹೊರ ಬಂದಿದೆ.   

ಸುರೇಂದ್ರ ಅಡಿಗರ ಬರವಣಿಗೆ ಅವರ ಮಾತಿನಂತೆಯೇ ಸರಳ ಸುಂದರ. ಯಾರು ಬೇಕಾದರೂ ಓದಿ ಅರ್ಥೈಸಿಕೊಳ್ಳಬಹುದು. ಹಾಗೆಂದ ಮಾತ್ರಕ್ಕೆ ಪುಸ್ತಕದಲ್ಲಿ ಏನೂ ಇಲ್ಲ, ಗಟ್ಟಿತನವಿಲ್ಲ ಅಂತಲ್ಲ. ಹೇಳಬೇಕಾಗಿರುವುದನ್ನು ಸರಳೀಕರಿಸಿ, ಮನ ಮುಟ್ಟುವಂತೆ ಮಾಡುವ ಅವರ ಬರವಣಿಗೆ ಶೈಲಿ ಎಲ್ಲಾ ವಯಸ್ಸಿನ ಓದುಗರಿಗೂ ಹಿಡಿಸುತ್ತದೆ. ಮತ್ತು ತಲುಪುತ್ತದೆ. ʼಸೂರಿ ಮಾಣಿʼ ಇಲ್ಲಿ ಕಂಡಿದ್ದು ಕಷ್ಟವೇ ಇರಬಹುದು, ಆದರೆ.. ಎಂತಹ ಕಷ್ಟದಲ್ಲಿಯೂ ಪ್ರಯತ್ನ ಬಿಡಬಾರದು, ಕನಸು ಸುಟ್ಟುಕೊಳ್ಳಬಾರದು, ನಿರಂತರ ಶ್ರಮವಿದ್ದರೇ, ಜಯ ಕಂಡಿತ ಸಿಗುತ್ತದೆ ಎಂಬುವುದನ್ನು ಮಾರ್ಮಿಕವಾಗಿ ಈ ಕೃತಿಯಲ್ಲಿ ಹೇಳಿದ್ದಾರೆ. ಕೃತಿ ಓದಿಸಿಕೊಂಡು ಹೋಗುತ್ತದೆ. ನೀವೂ ಓದಿ.

-ಕಾವ್ಯ ಬೈರಾಗಿ   (ಶ್ರೀರಾಜ್ ವಕ್ವಾಡಿ)

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!