spot_img
Tuesday, April 28, 2026
spot_img

ಮೀನುಗಾರರು ಸುರಕ್ಷತೆಗೆ ಲೈಪ್ ಜಾಕೆಟ್ ಧರಿಸುವುದು ಕಡ್ಡಾಯವಾಗಬೇಕು-ಶಾಸಕ ಗುರುರಾಜ ಗಂಟಿಹೊಳೆ


ಕುಂದಾಪುರ: ಮೀನುಗಾರರ ಸುರಕ್ಷತೆಗೆ ಒತ್ತು ನೀಡುವ ಸಲುವಾಗಿ ಮೋಟರ್ ಸೈಕರ್ ಸವಾರರು ಹೆಲ್ಮೆಟ್ ಧರಿಸುವಂತೆ ಮೀನುಗಾರರು ಲೈಪ್ ಜಾಕೆಟ್ ಧಾರಣೆ ಕಡ್ಡಾಯ ಮಾಡಬೇಕು, ಅಂಗನವಾಡಿ ಮೊಟ್ಟೆ ಸರಬರಾಜು ಜವಬ್ದಾರಿ ಬಾಲವಿಕಾಸ ಸಮಿತಿಗೆ ನೀಡಬೇಕು, ಅಂಗನವಾಡಿ ಶಿಥಿಲ ಕಟ್ಟಡಗಳ ನಿರ್ವಹಣೆ, ತೆರವು, ಭತ್ತ ಬೇಸಾಯ ಹಿನ್ನೆಡೆಗೆ ಕಳವಳ, ವಿದ್ಯಾರ್ಥಿನಿಲಯಗಳ ಸ್ಥಿತಿಗತಿ ಬೇಡಿಕೆ, ಪಶುಸಂಗೋಪನ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆ ಇತ್ಯಾದಿ ವಿಚಾರಗಳ ಬಗ್ಗೆ ಗಂಭೀರ ಚರ್ಚೆ, ಸಲಹೆ, ಸೂಚನೆ ವ್ಯಕ್ತವಾಗಿದ್ದು ಗುರುವಾರ ಅವರು ಕುಂದಾಪುರ ತಾಲೂಕು ಪಂಚಾಯಿತಿಯಲ್ಲಿ ನಡೆದ ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ.

ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಮೀನುಗಾರಿಕೆಗೆ ತೆರಳುವ ಮೀನುಗಾರರು ಕಡ್ಡಾಯವಾಗಿ ಲೈಪ್ ಜಾಕೆಟ್ ಧರಿಸಬೇಕೆಂದು ಕಡ್ಡಾಯ ಮಾಡಬೇಕು. ಜೀವರಕ್ಷಕ ಉಡುಪು ಧರಿಸದೇ ಮೀನುಗಾರಿಕೆ ಮಾಡುತ್ತಿರುವುದು ಕಂಡು ಬಂದರೆ ದಂಡ ವಿಧಿಸಬೇಕು ಎಂದರು.

ಉಪ್ಪುಂದದಲ್ಲಿ ಸಂಭವಿಸಿದ ಮೀನುಗಾರಿಕಾ ದೋಣಿ ದುರಂತದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದರು. ಅವರು ಲೈಪ್ ಜಾಕೆಟ್ ಧರಿಸಿದ್ದರೆ ಬದುಕುಳಿಯುವ ಸಾಧ್ಯತೆಗಳಿತ್ತು. ಮೀನುಗಾರಿಕೆಗೆ ತೆರಳುವ ಮೀನುಗಾರರು ಕಡ್ಡಾಯವಾಗಿ ಲೈಪ್ ಜಾಕೆಟ್ ಧರಿಸಲೇಬೇಕು. ಈ ಬಗ್ಗೆ ಕೂಡಲೇ ಸೂಚನೆ ನೀಡಬೇಕು ಎಂದರು.

ಇದಕ್ಕೆ ಉತ್ತರಿಸಿದ ಮೀನುಗಾರಿಕಾ ಅಧಿಕಾರಿ ಲೈಪ್ ಜಾಕೆಟ್ ಹಾಗೂ ಜೀವರಕ್ಷಕ ಪರಿಕರಗಳು ಇರದಿದ್ದರೆ ಮೀನುಗಾರಿಕೆ ಬೋಟ್‌ಗಳ ನೋಂದಣಿಯೇ ಆಗುವುದಿಲ್ಲ. ನೋಂದಣಿ ಸಂದರ್ಭ ಪ್ರತಿಬೋಟ್‌ನವರು ಇಲಾಖೆಯ ಮುಂದೆ ಹಾಜರುಪಡಿಸುತ್ತಾರೆ. ಬಳಿಕ ಅದನ್ನು ಸಮಪರ್ಕಕವಾಗಿ ಬಳಕೆ ಮಾಡುವುದಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮೀನುಗಾರರು ಜೀವರಕ್ಷಕಗಳನ್ನು ಪಾಲನೆ ಮಾಡುತ್ತಿದ್ದಾರೆಯೇ ಎನ್ನುವುದನ್ನು ಖಾತರಿ ಪಡಿಸಿಕೊಂಡು ಎಚ್ಚರಿಕೆ ನೀಡಬೇಕು ಎಂದರು.

ಮೀನುಗಾರಿಕಾ ಇಲಾಖೆಯಲ್ಲಿ ಉಡುಪಿ ಜಿಲ್ಲೆಗೆ ಮಂಜೂರಾದ ಹುದ್ದೆಯರು ಬೇರೆ ಜಿಲ್ಲೆಗಳಲ್ಲಿ ನಿಯೋಜನೆಯಲ್ಲಿದ್ದಾರೆ. ಮೀನುಗಾರಿಕಾ ಇಲಾಖಾ ಸಿಬ್ಬಂದಿಗಳು ಕರಾವಳಿ ಜಿಲ್ಲೆಯಲ್ಲಿಯೇ ಇರಬೇಕು. ತಕ್ಷಣ ಅಂಥಹವರ ನಿಯೋಜನೆ ರದ್ದು ಪಡಿಸಿ, ವಾಸ್ತವಕ್ಕೆ ಇಲ್ಲಿ ಹುದ್ದೆ ಭರ್ತಿ ಇದ್ದು ಸಿಬ್ಬಂದಿಗಳು ನಿಯೋಜನೆ ಹೆಸರಲ್ಲಿ ಬೇರೆ ಕಡೆ ಇರುವುದು ಸರಿಯಲ್ಲ ಎಂದು ಶಾಸಕ ಕಿರಣ್ ಕೊಡ್ಗಿ ಹೇಳಿದರು.

ನದಿಯಲ್ಲಿ ಮಾಡುವ ಪಂಜರ ಮೀನು ಕೃಷಿಗೆ ಈಗ ಪರವಾನಿಗೆ ಸಿಗುತ್ತಿಲ್ಲ. ಪಂಜರ ಮೀನುಗಳಿಗೆ ಮೀನಿನ ತ್ಯಾಜ್ಯಗಳ ಬಳಕೆ ಮಾಡುತ್ತಿರುವುದು ಪರಿಸರ, ಜೀವಸಂಕುಲದ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಈಗ ಅನುಮತಿ ನೀಡಲಾಗುತ್ತಿಲ್ಲ. ಚೆನ್ನೈಯಲ್ಲಿರುವ ಅನುಮತಿ ಪಡೆಯಬೇಕಾಗುತ್ತದೆ ಎಂದು ಮೀನುಗಾರಿಕಾ ಅಧಿಕಾರಿಗಳು ತಿಳಿಸಿದರು.

ಒಂದು ಸಣ್ಣ ಪಂಜರ ಮೀನು ಸಾಕಾಣಿಕೆ ಮಾಡಲು ಅನುಮತಿಗೆ ಚೆನ್ನೈಗೆ ಹೋಗಲು ಸಾಧ್ಯವಾ? ಎಂದು ಶಾಸಕ ಕಿರಣ್ ಕೊಡ್ಗಿ ಖಾರವಾಗಿ ಪ್ರಶ್ನಿಸಿದರು.

ತಿಂಗಳಿಗೊಮ್ಮೆ ಅಂಗನವಾಡಿ ಪುಟಾಣಿಗಳಿಗೆ ಮೊಟ್ಟೆ ಸರಬರಾಜು: ಕೊಡ್ಗಿ ಆಕ್ರೋಶ
ಅಂಗನವಾಡಿ ಪುಟಾಣಿಗಳಿಗೆ ತಿಂಗಳಿಗೊಮ್ಮ ಮೊಟ್ಟೆ ಸರಬರಾಜು ಮಾಡುವುದು ಅವೈಜ್ಞಾನಿಕ. ಕೊಳೆತ ಮೊಟ್ಟೆ ಬಳಸಲು ಸಾಧ್ಯವಾ? ಮೊಟ್ಟೆಯನ್ನು ಸ್ಥಳೀಯವಾಗಿ ಖರೀದಿಸಿ ಮಕ್ಕಳಿಗೆ ನೀಡುವಂತೆ ಅಂಗನವಾಡಿ ಬಾಲವಿಕಾಸ ಸಮಿತಿಗೆ ಜವಬ್ದಾರಿ ನೀಡಬಹುದು ಎಂದು ಶಾಸಕ ಕಿರಣ್ ಕೊಡ್ಗಿ ಹೇಳಿದರು.

ಅದಕ್ಕೆ ಉತ್ತರಿಸಿದ ಅಧಿಕಾರಿಗಳು ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೊಟ್ಟೆ ಉತ್ಪಾದನೆ ಆಗದೇ ಇರುವ ಕಾರಣ ಹೊರಭಾಗದವರಿಗೆ ಟೆಂಡರ್ ನೀಡಲಾಗಿತ್ತು. ಈಗ ಅದನ್ನು ರದ್ದು ಮಾಡಲಾಗಿದ್ದು, ಆರೋಪವಿರುವ ಟೆಂಡರ್‌ದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದರು.

ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಅಂಗನವಾಡಿ ಕಟ್ಟಡಗಳು ಶಿಥಿಲವಾಗಿವೆ. ಎಷ್ಟು ಕಟ್ಟಡ ತೆರವು ಮಾಡಲಾಗಿದೆ? ಎಷ್ಟು ಹೊಸ ಕಟ್ಟಡ ಮಂಜೂರಾಗಿದೆ ಎಂದು ಶಾಸಕರು ಪ್ರಶ್ನಿಸಿದರು.

ಅಂಗನವಾಡಿ ಕಟ್ಟಡಗಳ ಗುಣಮಟ್ಟ ಪರೀಕ್ಷೆ ಮಾಡುತ್ತಾ ಇರಬೇಕು. ಶಿಥಿಲಗೊಂಡ ಕಟ್ಟಡಗಳು ದುರಸ್ತಿಗೆ ಸಾಧ್ಯವಿದ್ದರೆ ದುರಸ್ತಿ ಮಾಡಿ. ತೆರವು ಮಾಡುವುದೇ ಗುರಿಯಾಗದಿರಲಿ. ಕೆಲವು ಕಟ್ಟಡಗಳ ಗೋಡೆ ಒಳ್ಳೆದಿತ್ತು, ಛಾವಣಿ ರೀಪು, ಪಕ್ಕಾಸು ಹಾಳಾಗಿರುತ್ತದೆ. ಆಗ ಛಾವಣಿ ದುರಸ್ತಿ ಮಾಡಲು ಸಾಧ್ಯವಿದೆ ಎಂದು ಕಿರಣ್ ಕೊಡ್ಗಿ ಹೇಳಿದರು.

ಪಶುವೈದ್ಯರ ಸಂಖ್ಯೆ ತುಂಬಾ ಕಡಿಮೆ ಇದೆ. ಈ ವಿಷಯವನ್ನು ವಿಧಾನಸಭೆಯಲ್ಲಿ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದಿದ್ದೇವೆ. ಸಚಿವರು ಕೂಡಾ ಆಸಕ್ತಿ ತೋರಿಸಿದ್ದಾರೆ. ಇಲಾಖಾ ಮಟ್ಟದಲ್ಲಿಯೂ ಗಮನ ಹರಿಸಿ. ಹಾಗೆಯೇ ಜಾನುವಾರುಗಳ ಸರಾಸರಿ ಅನುಪಾತ ಹೇಗಿದೆ? ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಪ್ರಶ್ನಿಸಿದರು.

ಭತ್ತ ಬೇಸಾಯ ಇನ್ನೂ ಹತ್ತು ವರ್ಷದಲ್ಲಿ ಯಾವ ಹಂತಕ್ಕೆ ಬರಬಹುದು? ಹೀಗೆ ಭತ್ತ ಬೇಸಾಯ ಕಡಿಮೆಯಾಗುತ್ತಾ ಹೋದರೆ ಹತ್ತು ವರ್ಷಗಳಲ್ಲಿ ಏನೂ ಇಲ್ಲದ ಸ್ಥಿತಿ ನಿರ್ಮಾಣವಾಗಬಹುದು. ಭತ್ತ ಬೇಸಾಯವನ್ನು ಉತ್ತೇಜಿಸುವಲ್ಲಿ, ಭೂಮಿ ಹಡಿಲು ಬೀಳುವುದನ್ನು ತಡೆಯಲು ಇಲಾಖೆ ಯಾವ ಕ್ರಮಕೈಗೊಂಡಿದೆ? ಹಾಗೂ ಈ ಬಗ್ಗೆ ಅಧ್ಯಯನ ವರದಿಯನ್ನು ಸಿದ್ಧಪಡಿಸಿ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಭತ್ತ ಬೇಸಾಯ ಇವತ್ತು ಲಾಭದಾಯಕವಾಗಿ ಉಳಿದಿಲ್ಲ. ಭತ್ತ ಬೆಳೆದು ಬದುಕುವುದು ಕಷ್ಟ ಎನ್ನುವ ಹಂತಕ್ಕೆ ರೈತರು ಬಂದಿದ್ದಾರೆ. ಪರ್ಯಾಯ ಲಾಭದಾಯಕ ಬೆಳೆಗಳತ್ತ ಕೃಷಿಕರು ಮನಸ್ಸು ಮಾಡುತ್ತಿದ್ದಾರೆ ಎಂದು ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ಅಧಿಕಾರಿಗಳು ವಂಡ್ಸೆ, ಕುಂದಾಪುರ, ಬೈಂದೂರು ಹೋಬಳಿಯಲ್ಲಿ ಮಳೆ ಆಶ್ರಯಿತವಾಗಿ ಭತ್ತ ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ಕಳೆದ ಬಾರಿ ೧೧.೨೦೦ ಸಾವಿರ ಹೆಕ್ಟೇರ್ ಭತ್ತ ಬೇಸಾಯ ಮಾಡಲಾಗಿತ್ತು. ಈ ಬಾರಿ ೧೦.೯೨ ಸಾವಿರ ಹೆಕ್ಟೇರ್ ಆಗಿದೆ. ಎಂದರು.

ಕೃಷಿಯ ಜೊತೆಯಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸುವುದರ ಬಗ್ಗೆ ಇರುವ ಅವಕಾಶಗಳನ್ನು ಜನರಿಗೆ ತಿಳಿಸಲು ರೈತರ ಜೊತೆ ಸಂವಾದ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ನಮ್ಮ ಯುವ ಜನಾಂಗ ಉದ್ಯೋಗವಕಾಶಕ್ಕೆ ವಲಸೆ ಹೋಗುವುದನ್ನು ತಡೆಯಲು, ಇಲ್ಲಿಯೇ ಉದ್ಯೋಗ ಭರವಸೆಗಳನ್ನು ನೀಡುವ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವೆಂದು ಗುರುರಾಜ ಗಂಟಿಹೊಳೆ ಹೇಳಿದರು.

ಕೃಷಿ, ತೋಟಗಾರಿಕಾ ಇಲಾಖೆಯ ಮೂಲಕ ಸಬ್ಸಿಡಿ, ಪರಿಕರ ನೀಡುವಾಗ ಪ್ರತೀ ವರ್ಷ ಪಡೆಯುವ ರೈತರಿಗೆ ಸಿಗುವಂತಾಗಬಾರದು ಎಂದು ಶಾಸಕರು ಸೂಚಿಸಿದರು. ಅದಕ್ಕೆ ಉತ್ತರಿಸಿದ ಅಧಿಕಾರಿಗಳು ಬಿತ್ತನೆ ಬೀಜ ಹೊರತು ಪಡಿಸಿ ಉಳಿದೆಲ್ಲವೂ ಕೂಡಾ ತಂತ್ರಾಂಶದ ಮೂಲಕವೇ ನೋಂದಣಿಯಾಗುವುದರಿಂದ ಅಲ್ಲಿ ಎಲ್ಲ ಡಾಟಾಗಳು ಲಭ್ಯವಿದ್ದು ಪರಿವರ್ತನೆಗೆ ಅವಕಾಶವಿರುವುದಿಲ್ಲ. ಕ್ಯೂ ಆರ್ ಕೋಡ್ ಸಹ ಬಳಕೆ ಮಾಡಲಾಗುತ್ತದೆ ಎಂದರು.

ಸಮಾಜ ಕಲ್ಯಾಣ ಇಲಾಖೆ, ಬಿಸಿ‌ಎಂ ವಿದ್ಯಾರ್ಥಿನಿಲಯಗಳ ಬಗ್ಗೆ ಚರ್ಚೆ ನಡೆಯಿತು. ನಗರ ಪ್ರದೇಶದ ಹಾಸ್ಟೇಲ್‌ಗಳಿಗೆ ತುಂಬಾ ಬೇಡಿಕೆ ಇದೆ. ಗ್ರಾಮೀಣ ಪ್ರದೇಶದಲ್ಲಿರುವ ಹಾಸ್ಟೆಲ್‌ಗಳಲ್ಲಿ ಖಾಲಿ ಇದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಕುಂದಾಪುರಕ್ಕೆ ಇನ್ನೂ ಎರಡು ವಿದ್ಯಾರ್ಥೀನಿಲಯದ ಅಗತ್ಯತೆ ಇದೆ ಎಂದರು.

ಬಾರಕೂರು ಕಾಲೇಜು ಅಧೀನದಲ್ಲಿ ಹಾಸ್ಟೆಲ್ ಕಟ್ಟಡವಿದ್ದು ಅದನ್ನು ಬಳಸಿಕೊಳ್ಳಲು ಸಾಧ್ಯತೆ ಇದೆ. ಕಾಲೇಜು ಕೂಡಾ ಇರುವುದರಿಂದ ಈ ಬಗ್ಗೆ ಇಲಾಖೆ ಚಿಂತನೆ ನಡೆಸಲಿ ಎಂದು ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ ಸಾಕಷ್ಟು ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಕೆಲವೊಂದು ಶಾಲಾ ಕಟ್ಟಡಗಳು ಸುಸಜ್ಜಿತವಾಗಿದೆ. ಅಲ್ಲಿ ವಿದ್ಯಾರ್ಥಿನಿಲಯ ಮಾಡಬಹುದು ಎನ್ನುವ ಸಲಹೆ ನೀಡಿದರು. ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಇಲಾಖೆಯ ವತಿಯಿಂದಲೇ ತಿಳಿಯಪಡಿಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಗುರುರಾಜ್ ಗಂಟಿಹೊಳೆ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಶ್ರೀನಿವಾಸ ರಾವ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!