Sunday, September 8, 2024

ಜನ ಸ್ಪಂದನೆಗೆ ಸಿದ್ದರಿಲ್ಲದವರು ಸ್ಥಾನ ತ್ಯಾಗ ಮಾಡಿ-ಉಡುಪಿಯಲ್ಲಿ ಅಧಿಕಾರಿಗಳಿಗೆ ಸಿ.ಎಂ.ಸಿದ್ಧರಾಮಯ್ಯ ಎಚ್ಚರಿಕೆ

ಉಡುಪಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ



ಉಡುಪಿ: ಜನರ ಕೆಲಸ ಮಾಡುವ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪಕ್ಷ ರಾಜಕಾರಣ ಚುನಾವಣೆ ವೇಳೆ ಮಾತ್ರ. ಅಧಿಕಾರಿಗಳು ನಿಲಕ್ಷ್ಯ, ಉದಾಸೀನ ತೋರಿಸಿದರೆ ಜನರಿಗೆ ಸ್ಪಂದಿಸದಿದ್ದರೆ ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ ಸಹಿಸಲು ಸಾಧ್ಯವಿಲ್ಲ. ಜನ ಸ್ಪಂದನೆಗೆ ಸಿದ್ದರಿಲ್ಲದವರು ಸ್ಥಾನ ತ್ಯಾಗ ಮಾಡಿ. ಜನಸ್ಪಂದನೆಗೆ ಸಾಕಷ್ಟು ಅಧಿಕಾರಿಗಳು ಇದ್ದಾರೆ. ಅಧಿಕಾರಿಗಳಿಗೆ ಸ್ಥಾನ ಮಾನ ಸಂಬಳ ಸವಲತ್ತುಗಳು ಸಿಗುವುದು ಜನರ ತೆರಿಗೆ ಹಣದಿಂದ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡಬಾರದು. ಸ್ಥಳಕ್ಕೆ ಬೇಟಿ ನೀಡುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಅವರು ಉಡುಪಿಯಲ್ಲಿ ಪ್ರಗತಿಪರಿಶೀಲನೆ ನಡೆಸಿ ಮಾತನಾಡಿದರು.

ಪೂರ್ಣ ಮನೆ ಬಿದ್ದರೆ 5 ಲಕ್ಷ:
ಮಳೆ ಅನಾಹುತಗಳಲ್ಲಿ ಪೂರ್ಣ ಮನೆ ಹಾನಿ ಆಗಿದ್ದರೆ 5 ಲಕ್ಷ ರೂ ಪರಿಹಾರ ನೀಡಬೇಕು. ಇದು ಸರ್ಕಾರದ ನಿರ್ಧಾರ. ಮನೆ ಸ್ವಂತ ಜಾಗದಲ್ಲಿ ಕಟ್ಟಿದ್ದಾರೋ-ಇಲ್ಲವೋ, ಹಕ್ಕು ಪತ್ರ ಇದೆಯೋ-ಇಲ್ಲವೋ ಎನ್ನುವುದನ್ನು ನೋಡದೆ ಮಳೆಯಿಂದ ಬಿದ್ದ ಮನೆಗೆ ಪರಿಹಾರ ನೀಡಿ. ಮೊದಲು ಮನೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಿ:
ಮಳೆ ಹಾನಿಗೆ ಸಂಬಂಧಪಟ್ಟಂತೆ ಸಂಪೂರ್ಣ ಸಮೀಕ್ಷೆ ನಡೆಸಿ. ಬೆಳೆ ಹಾನಿಗೊಳಗಾದವರಿಗೆ ತಪ್ಪದೆ ಪರಿಹಾರ ಸಿಗಬೇಕು. ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿ. ಬೆಳೆ ಹಾನಿ ಆದವರಿಗೆ ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು. ಒಮ್ಮೆ ಬೆಳೆ ಪರಿಹಾರ ಕೊಟ್ಟ ಬಳಿಕ ಪರ್ಯಾಯ ಬೆಳೆ ಬೆಳೆ ಬೆಳೆಯಲು ಅಗತ್ಯವಾದ ಬೀಜ, ಗೊಬ್ಬರ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸಿ. ಅಡಕೆ ಬೆಳೆಗೆ ಬಂದಿರುವ ಎಲೆಚುಕ್ಕೆ ರೋಗದ ಬಗ್ಗೆ ಕೃಷಿ ವಿಜ್ಞಾನಿಗಳ ನೆರವು ಪಡೆದು ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು.

2 ವರ್ಷಗಳಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಸೂಚನೆ:
ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಆಗಿರುವ ಕಾಲು ಸಂಕದಿಂದ ಆಗಿರುವ ಅನಾಹುತಗಳನ್ನು ತಪ್ಪಿಸಲು ಸೇತುವೆಗಳನ್ನು ನಿರ್ಮಿಸಬೇಕು. ನರೇಗಾ ಮತ್ತು ಲೋಕೋಪಯೋಗಿ ಜಂಟಿಯಾಗಿ ಸೇತುವೆಗಳನ್ನು ನಿರ್ಮಿಸಲು ಯೋಜನೆ ಸಿದ್ದಪಡಿಸಿ ಮತ್ತು ಎರಡು ವರ್ಷಗಳಲ್ಲಿ ಸೇತುವೆ ನಿರ್ಮಾಣ ಕೆಲಸಗಳು ಮುಗಿಯುವ ರೀತಿಯಲ್ಲಿ ಕೆಲಸ ಮಾಡಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಆರೋಗ್ಯ ಸೂಚ್ಯಂಕದಲ್ಲಿ ಕುಸಿತಕ್ಕೆ ಗರಂ
2015 ರಲ್ಲಿ ಆರೋಗ್ಯ ಸೂಚ್ಯಂಕದಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಈಗ 18 ನೇ ಸ್ಥಾನದಲ್ಲಿರುವುದಕ್ಕೆ, ತಾಯಂದಿರು ಮತ್ತು ಮಕ್ಕಳ ಸಾವಿನ ಪ್ರಮಾಣದಲ್ಲಿ ಏರಿಕೆ ಆಗಿರುವುಕ್ಕೆ ಗರಂ ಆದ ಮುಖ್ಯಮಂತ್ರಿಗಳು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಉಡುಪಿ ಸುಶಿಕ್ಷಿತರ ಜಿಲ್ಲೆ. ಆರೋಗ್ಯ ಸೂಚ್ಯಂಕದಲ್ಲಿ ಈ ಪ್ರಮಾಣದ ಕುಸಿತ ಕಂಡಿರುವುದಕ್ಕೆ ನಿಮ್ಮ ಹೊಣೆಗಾರಿಕೆ ಇಲ್ಲವಾ ಎಂದು ಡಿಹೆಚ್‌ಒ ಅವರನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು ಜಿಲ್ಲೆಯನ್ನು ಮತ್ತೆ ಮೊದಲ ಸ್ಥಾನಕ್ಕೆ ತರಬೇಕು. ಇಲ್ಲದಿದ್ದರೆ ಸಸ್ಪೆಂಡ್ ಆಗಬೇಕಾಗುತ್ತದೆ ಎಂದು ಎಚ್ಚರಿಸಿದ ಬಳಿಕ ಪಕ್ಕದಲ್ಲೇ ಇದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈ ಬಗ್ಗೆ ನಿಗಾ ವಹಿಸಿ ಸುಧಾರಣೆ ಕಾಣದಿದ್ದರೆ ಡಿಹೆಚ್‌ಒ ಅವರನ್ನು ಮುಲಾಜಿಲ್ಲದೆ ಸಸ್ಪೆಂಡ್ ಮಾಡಿ ಎಂದು ಸೂಚಿಸಿದರು.

ಶಿಕ್ಷಣದಲ್ಲೂ ಕುಸಿತ:
ಉಡುಪಿ ಜಿಲ್ಲೆ ಶೈಕ್ಷಣಿಕ ಸೂಚ್ಯಂಕದಲ್ಲಿ ೧೩ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಈ ಕುಸಿತ ನಿಮಗೆ ನಾಚಿಕೆ, ಬೇಸರ ತರುವುದಿಲ್ಲವೇ ಎಂದು ಪ್ರಶ್ನಿಸಿದರು. ಮುಂದಿನ ಅವಧಿ ವೇಳೆಗೆ ನಿಮ್ಮ ಮತ್ತು ಜಿಲ್ಲೆಯ ಕಾರ್ಯಕ್ಷಮತೆ ಕಾಣದಿದ್ದರೆ ನಿಮ್ಮನ್ನು ಶಾಶ್ವತವಾಗಿ ಮನೆಗೆ ಕಳಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಸ್ತೆ ಅಪಘಾತ ಸಾವು-ಸೈಬರ್ ಕ್ರೈಂ ಹೆಚ್ಚಳಕ್ಕೆ ಕ್ರಮ ವಹಿಸಲು ಸೂಚನೆ
ಜಿಲ್ಲೆಯಲ್ಲಿ ರಸ್ತೆ ಗುಂಡಿಗಳು, ಅಪಘಾತ ಮತ್ತು ಸಾವುಗಳ ಪ್ರಮಾಣ ಹೆಚ್ಚಳ ಹಾಗೂ ಸೈಬರ್ ಅಪರಾಧಗಳ ಹೆಚ್ಚಳ ಬಗ್ಗೆಯೂ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಸೂಕ್ತ ಉತ್ತರ ಬರದಿದ್ದಾಗ ಪೊಲೀಸ್ ಇಲಾಖೆಯ ಜವಾಬ್ದಾರಿ. ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಎಂದು ಲೋಕೋಪಯೋಗಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೀನುಗಾರಿಕ ಸಚಿವ ಮಾಂಕಳ ವೈದ್ಯ, ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು,

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!