


ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕುಂದಾಪುರ-2 ವ್ಯಾಪ್ತಿಯ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಕುಂದಾಪುರ ಯೋಜನಾ ಕಚೇರಿಯಲ್ಲಿ ನಡೆಯಿತು. ಒಟ್ಟು 35 ಮಂದಿ ವಿದ್ಯಾರ್ಥಿಗಳ ಸುಜ್ಞಾನನಿಧಿ ಶಿಷ್ಯವೇತನದ ಮಂಜೂರಾತಿ ಪತ್ರವನ್ನು ವಿದ್ಯಾರ್ಥಿಗಳಿಗೆ/ ಅವರ ಪೋಷಕರಿಗೆ ವಿತರಣೆ ಮಾಡಲಾಯಿತು.
ಈ ಸಂದರ್ಭ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಯೋಜನಾಧಿಕಾರಿ ನಾರಾಯಣ ಪಾಲನ್, ಪ್ರಸ್ತುತ ಸಾಲಿನಲ್ಲಿ ನಮ್ಮ ತಾಲೂಕಿನಲ್ಲಿ ಒಟ್ಟು 109 ಹೊಸ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ಬೇರೆಬೇರೆ ವೃತ್ತೀಪರ ಕೋರ್ಸುಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾಗಿದ್ದು, ಅವರ ಬ್ಯಾಂಕ್ ಖಾತೆಗಳಿಗೆ ಮೊತ್ತ ಜಮೆಯಾಗುತ್ತಿದೆ. ಅಂತೆಯೇ ಹಿಂದಿನ ಬಾರಿ ಸುಜ್ಞಾನನಿಧಿ ಶಿಷ್ಯವೇತನ ಅರ್ಜಿಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರಸ್ತುತ ಸಾಲಿನಲ್ಲಿ ರಿನಿವಲ್ ಕೂಡ ಮಂಜೂರಾತಿ ಆಗಿರುತ್ತದೆ. ನಮ್ಮ ತಾಲೂಕಿನ ಓರ್ವ ವಿದ್ಯಾರ್ಥಿ ಹೊರ ದೇಶವಾದ ರಷ್ಯಾದಲ್ಲಿ ಓದುತ್ತಿದ್ದು, ವಿದ್ಯಾರ್ಥಿ ಅನಿರುದ್ಧ ಉತ್ತಮ ಅಂಕವನ್ನು ಪಡೆದಿರುವುದು ಹಾಗೂ ಈತನ ಹೆತ್ತವರು ಸಂಘದಲ್ಲಿದ್ದ ಕಾರಣ ಈತನಿಗೂ ಕೂಡ ಪ್ರಥಮ ವರ್ಷದ ಸುಜ್ಞಾನನಿಧಿ ಶಿಷ್ಯವೇತನ ದೊರಕಿರುವುದು ಸಂತೋಷದ ವಿಚಾರವಾಗಿದೆ ಎಂದು ಶ್ಲಾಘಿಸಿದರು. ಈ ಮೊತ್ತವನ್ನು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು. ವರ್ಷಂಪ್ರತಿ ರಿನಿವಲ್‌ಗೆ ಸಮರ್ಪಕ ದಾಖಲಾತಿಗಳನ್ನು ವೆಬ್ಸೈಟಿನಲ್ಲಿ ಅಪ್ಲೋಡ್ ಮಾಡಿ, ರಿನಿವಲ್ ಮಾಡಿಸಿಕೊಳ್ಳಬೇಕು. ಹೆತ್ತವರು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿ, ಅವರ ಉತ್ತಮ ಬೆಳವಣಿಗೆಗೆ ಸಹಕರಿಸಬೇಕೇಂದು ತಿಳಿಸಿದರು.
ಹಣಕಾಸು ಪ್ರಬಂಧಕರಾದ ಗಂಗಾಧರ ಎಂ ಗಿರಿಯಣ್ಣ ಮಾತನಾಡಿ, ಯೋಜನೆಯ ಫಲಾನುಭವಿಗಳಿಗೆ ಯೋಜನೆಯಲ್ಲಿ ವಿವಿಧ ಸವಲತ್ತುಗಳಿವೆ. ಕೇಂದ್ರ ಕಛೇರಿಯ ಸಮುದಾಯ ವಿಭಾಗದಿಂದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಇದರಲ್ಲಿ ಅತೀ ಮುಖ್ಯವಾಗಿ ಶಿಕ್ಷಣಕ್ಕೆ ಒತ್ತನ್ನು ನೀಡುವ ಸಲುವಾಗಿ ವರ್ಷಂಪ್ರತಿ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನವನ್ನು ಒದಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರತೀ ವರ್ಷ ಉತ್ತಮ ಅಂಕವನ್ನು ಪಡೆದಕೊಂಡು ಕಲಿತ ಸಂಸ್ಥೆಗೂ ಹಾಗೂ ಹೆತ್ತವರಿಗೂ ಹೆಸರನ್ನು ತರುವಂತರಾಗಲಿ ಎಂದು ಶುಭ ಹಾರೈಸಿದರು.
ತಾಲೂಕು ಸಿ.ಎಸ್.ಸಿ ನೋಡಲ್ ಅಧಿಕಾರಿ ಲೋಹಿತ್ ರಾಜ್ ಎಚ್.ಕೆ ಮಾತನಾಡಿ ಸಿಎಸ್ಸಿ ಕೇಂದ್ರಗಳಲ್ಲಿ ಲಭ್ಯವಿರುವ ಸೇವೆಗಳ ಕುರಿತು ತಿಳಿಸಿ, ವಿದ್ಯಾರ್ಥಿಗಳು ಪಿಎಂಜಿ ದಿಶಾ ಕಾರ್ಯಕ್ರಮದಲ್ಲಿ ನೋಂದಾವಣೆ ಮಾಡಿಸಿಕೊಳ್ಳುವಂತೆ ತಿಳಿಸಿದರು.
ತಾಲೂಕು ಆಡಳಿತ ಪ್ರಬಂಧಕರಾದ ವಂದನಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯೋಜನಾ ಕಚೇರಿ ಸಿಬ್ಬಂದಿ ಸುರೇಶ್ ಸ್ವಾಗತಿಸಿ, ಸಿ.ಎಸ್.ಸಿ ನೋಡಲ್ ಅಧಿಕಾರಿ ಲೋಹಿತ್ ರಾಜ್ ಎಚ್.ಕೆ ವಂದಿಸಿದರು.