Sunday, September 8, 2024

ಕುಂದಾಪುರದಲ್ಲಿ ಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘ ಉದ್ಘಾಟನೆ


ಜನಪ್ರತಿನಿಧಿ ವಾರ್ತೆ
ಕುಂದಾಪುರ, ಮಾ.6: ಕುಂದಾಪುರ ಮುಖ್ಯ ರಸ್ತೆಯ ಸುಶಾನ್ ಪ್ಲಾಜಾ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘವನ್ನು ಉದ್ಯಮಿ ಸತೀಶ್ ಕೋಟ್ಯಾನ್ ಹಾಗೂ ಸುನೇತ್ರಾ ಸತೀಶ್ ಕೋಟ್ಯಾನ್ ಉದ್ಘಾಟಿಸಿದರು.

ಉದ್ಘಾಟನಾ ನುಡಿಗಳನ್ನಾಡಿದ ಉದ್ಯಮಿ ಸತೀಶ್ ಕೋಟ್ಯಾನ್, ಮಹಿಳೆಯರಲ್ಲಿ ಪ್ರತಿಯೊಂದು ವ್ಯವಸ್ಥೆಯನ್ನು ಯಶಸ್ವಿಯಾಗಿ ಮುನ್ನೆಡೆಸುವ ಸಾಮರ್ಥ್ಯವಿದೆ. ಅದೇ ರೀತಿ ಈ ಸಹಕಾರ ಸಂಘವೂ ಕೂಡಾ ಮಾದರಿಯಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶುಭಾಶಂಸನೆ ನೀಡಿದ ಕೋಡಿ ಶ್ರೀ ಚಕ್ರಮ್ಮ ದೇವಸ್ಥಾನದ ಅಧ್ಯಕ್ಷರಾದ ಗೋಪಾಲ ಪೂಜಾರಿ ಅವರು, ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದ ಆರಂಭವಾಗಿರುವ ಈ ಸಂಘ ದ್ಯೇಯೋದ್ದೇಶದಂತೆ ಯಶಸ್ಸಿನ ಹೆಜ್ಜೆ ಇಡುವ ಮೂಲಕ ಪ್ರಬುದ್ಧವಾಗಿ ಮುನ್ನೆಡೆಯಲಿ ಎಂದರು.

ಸಂಘದ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು, ಕೋಟೇಶ್ವರ ವ್ಯ.ಸೇ.ಸ.ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಹಿಂದುಳಿದಿರುವ ಸಮಾಜಕ್ಕೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಜಿಲ್ಲಾ ಮಟ್ಟದ ಮಹಿಳಾ ಸಹಕಾರ ಸಂಘವಾಗಿ ಆರಂಭವಾಗಿರುವ ಈ ಸಹಕಾರ ಸಂಘದ ನೇತೃತ್ವದಲ್ಲಿ ಗ್ರಾಮ ಮಟ್ಟದಲ್ಲಿ ಸ್ವಸಹಾಯ ಸಂಘಗಳ ರಚಿಸಿ, ಅದರ ಮೂಲಕ ಮಹಿಳೆಯರಿಗೆ ಸಾಲಸೌಲಭ್ಯ ನೀಡಿ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗುವುದು. ಲಾಭ ಗಳಿಕೆಯ ಉದ್ದೇಶವೊಂದನ್ನೇ ಹೊಂದದೆ ಸೇವೆಗೆ ಪ್ರಾಶಸ್ತ್ಯ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ನಾರಾಯಣಗುರು ಮಹಿಳಾ ಸಹಕಾರ ಸಂಘದ ಮುಖ್ಯ ಪ್ರವರ್ತಕರಾದ ಗುಣರತ್ನ ಮಾತನಾಡಿ, ಕಳೆದ ೨೦ ವರ್ಷಗಳ ಹಿಂದೆಯೇ ಮಹಿಳಾ ಸಹಕಾರ ಸಂಘ ಸ್ಥಾಪನೆಯ ಕಲ್ಪನೆ ಇತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಮಹಿಳಾ ಸಶಕ್ತೀಕರಣದೊಂದಿಗೆ ಉತ್ಕೃಷ್ಟ ಸೇವೆ ನೀಡುವ ಗುರಿ ಹೊಂದಲಾಗಿದೆ. ನಾರಾಯಣ ಗುರು ನಿಗಮದ ಮೂಲಕ ಸೌಲಭ್ಯಗಳನ್ನು ಪಡೆದು ಸದಸ್ಯರಿಗೆ ನೀಡುವುದು, ಸ್ವಸಹಾಯ ಸಂಘಗಳ ಸದಸ್ಯರಿಗೆ ೨% ಬಡ್ಡಿದರದಲ್ಲಿ ಒದಗಿಸಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು, ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಬ್ಯಾಂಕುಗಳಲ್ಲಿ ಶಿಕ್ಷಣ ಸಾಲ ಸಿಗುವಾಗ ಪ್ರಾರಂಭಿಕ ಅಡಚಣೆ ಆಗುತ್ತಿದ್ದು ಅದಕ್ಕೆ ಪೂರಕವಾಗಿ ಸಾಲ ನೀಡಲು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಗಣಕೀಕರಣ ವಿಭಾಗವನ್ನು ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸ್ವ-ಸಹಾಯ ವಿವಿಧೋದ್ದೇಶ ಸಹಕಾರ ಸಂಘ ನಿ., ಕೋಟ ಇದರ ಅಧ್ಯಕ್ಷೆ ಸುಧಾ ಎ.ಪೂಜಾರಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರವರ್ತಕರಾದ ಶ್ರೀಮತಿ ಸುನೇತ್ರಾ ಎಸ್.ಕೋಟ್ಯಾನ್, ಶ್ರೀಮತಿ ನಿರ್ಮಲ ಆರ್.ಪೂಜಾರಿ, ಶ್ರೀಮತಿ ಹೇಮಾವತಿ ಆರ್.ಪೂಜಾರಿ, ಶ್ರೀಮತಿ ಬೇಬಿ ಶ್ರೀಕಾಂತ್, ಶ್ರೀಮತಿ ಕುಸುಮ ರಾಮ ಪೂಜಾರಿ, ಶ್ರೀಮತಿ ಆರತಿ ಜಿ.ಪೂಜಾರಿ, ಶ್ರೀಮತಿ ಜಾನಕಿ ಬಿಲ್ಲವ, ಶ್ರೀಮತಿ ಗಾಯತ್ರಿ, ಶ್ರೀಮತಿ ಅಶ್ವಿನಿ, ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ದೀಪಾ, ಸಿಬ್ಬಂದಿ ರಮ್ಯ ಉಪಸ್ಥಿತರಿದ್ದರು.

ರಾಜೇಶ ಕಡ್ಗಿಮನೆ ಕಾರ್ಯಕ್ರಮ ನಿರ್ವಹಿಸಿ, ಪ್ರವರ್ತಕಿ ಸುನೇತ್ರಾ ಎಸ್.ಕೋಟ್ಯಾನ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!