Sunday, September 8, 2024

ಐರೋಡಿ ಬುಡುಕುಬೆಟ್ಟು ಕುಲಾಲ ಕುಟುಂಬಸ್ಥರಿಂದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಕುಟುಂಬ ಸನ್ಮಾನ

ಸಾಸ್ತಾನ: ಅವಮಾನ, ಛೇಡಿಕೆ, ಕಾಲೇಳೆಯುವಿಕೆಗೆ ಕುಗ್ಗದೆ ಮುನ್ನೆಡೆದಾಗಲೇ ಸ್ಥಾನ, ಸನ್ಮಾನಗಳು ಲಭಿಸುತ್ತವೆ. ಸಾಧನೆ ಸಾಧ್ಯವಾಗುತ್ತದೆ. ಸಮಾಜ ಸೇವೆ ಎಂದಾಗ ಹಣ ಕೊಡುವುದು ಎಂದರ್ಥವಲ್ಲ, ಸಮಾಜದ ನೋವಿಗೆ ಸ್ಪಂದಿಸುವ ಕೆಲಸ ಆಗಬೇಕು. ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಮಾನವೀಯತೆಯ ಕರೆಗೆ ನಾವು ಒಗ್ಗೂಡಬೇಕು ಎಂದು ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ವೈದ್ಯ, ಸಮಾಜ ಸೇವಕ, ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಅಭಿಪ್ರಾಯಪಟ್ಟರು.

ಐರೋಡಿ ಬುಡುಕುಬೆಟ್ಟು ಕುಲಾಲ ಕುಟುಂಬಸ್ಥರು ಹಾಗೂ ಸರ್ವ ಕುಲಾಲ ಕುಟುಂಬಸ್ಥರು ಸಾಸ್ತಾನ ಶ್ರೀಕ್ಷೇತ್ರ ಗೋಳಿಗರಡಿಯ ಶ್ರೀ ಹೈಗುಳಿ ಪಂಜುರ್ಲಿ ದೈವಕ್ಕೆ ಬೆಳ್ಳಿಯ ಮುಖವಾಡ, ಘಂಟೆಮಣಿ, ಗಿಂಡಿಗೆ, ಪ್ರಭಾವಳಿ ಸಮರ್ಪಣೆ ಕಾರ್ಯಕ್ರಮದಲ್ಲಿ ಡಿ.ದೇವರಾಜ ಅರಸು ರಾಜ್ಯ ಪ್ರಶಸ್ತಿ ಲಭಿಸಿರುವುದನ್ನು ಪರಿಗಣಿಸಿ ಕುಲಾಲ ಕುಟುಂಬಸ್ಥರು ನೀಡಿದ ಕುಟುಂಬರತ್ನ ಬಿರುದಿನೊಂದಿಗೆ ಕುಟುಂಬ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಂಸ್ಕಾರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಅನಗತ್ಯ ದುಂದುವೆಚ್ಚ ಬೇಡ, ಸಮಾಜದ ನೋವಿಗೆ ಸ್ಪಂದಿಸುವ ಕೆಲಸ ಮಾಡೋಣ ಎಂದು ಹೇಳಿದ ಅವರು, ಜಾತ್ಯಾತಿತೆಯ ಚಿಂತನೆಯ ಗೋಳಿಗರಡಿ ದೇವಸ್ಥಾನ ಸರ್ವಜಾತಿಯ ಸಮನ್ವಯ ಕ್ಷೇತ್ರ. ನನ್ನ ಸಾಧನೆಯ ಹಿಂದೆಯೂ ಕೂಡಾ ಹಲವು ಸಮುದಾಯದವರ ಪಾತ್ರವಿದೆ. ಕುಲಾಲ ಕುಟುಂಬಿಕರು ನೀಡಿದ ಸನ್ಮಾನ ನನಗೆ ದೊರಕಿದ ಎಲ್ಲ ಸನ್ಮಾನಗಳಿಗಿಂತ ಹೆಚ್ಚಿನ ಸಂತೋಷ ನೀಡಿದೆ ಎಂದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಡಾ.ಅಣ್ಣಯ್ಯ ಕುಲಾಲರು ಕನ್ನಡದ ಕಣ್ಮಣಿ. ಅವರ ಮಾತಿನಂತೆ ಕೃತಿ, ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಕುಟುಂಬದ ವತಿಯಿಂದ ಸನ್ಮಾನಿಸುವುದು ಅರ್ಥಪೂರ್ಣವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಸ್ತಾನ ಹೆಲ್ತ್ ಕೇರ್ ಸೆಂಟರ್‌ನ ವೈದ್ಯಕೀಯ ನಿರ್ದೇಶಕ ಡಾ.ಹೇಮಂತ್ ಕುಮಾರ್ ಮಾತನಾಡಿ, ಡಾ.ಅಣ್ಣಯ್ಯ ಕುಲಾಲರು ಸಂಘಟನೆ, ಸಾಹಿತ್ಯ, ವೈದ್ಯಕೀಯ ಕ್ಷೇತ್ರದ ನಾನಾ ಮಜಲುಗಳಲ್ಲಿ ದುಡಿಯುತ್ತಿದ್ದಾರೆ. ರಾಜ್ಯದಲ್ಲಿ ಅನೇಕ ಮಹತ್ವದ ಸಮ್ಮೇಳನಗಳ ಆಯೋಜಿಸಿ ಯಶಸ್ವಿಯಾಗಿದ್ದಾರೆ. ಹರಿದು ಹಂಚಿ ಹೋಗಿದ್ದ ವೈದ್ಯಕೀಯ ಬರಹಗಾರರನ್ನು ಒಗ್ಗೂಡಿಸಿದ್ದು ಅವರ ಇನ್ನೊಂದು ಸಾಧನೆಯಾಗಿದೆ ಎಂದರು.

ಜನ್ಸಾಲೆ ಶ್ರೀ ಸರ್ವಾಥ ಸಾಧಿಕೆ ದೇವಸ್ಥಾನದ ಮುಖ್ಯಸ್ಥರು, ಉದ್ಯಮಿ ಕೆ.ಲಕ್ಷ್ಮಣ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಗೋಳಿಗರಡಿ ಕ್ಷೇತ್ರದ ಪ್ರಧಾನ ಪಾತ್ರಿಗಳಾದ ಜಿ.ಶಂಕರ ಪೂಜಾರಿ ಮತ್ತು ಹೈಗುಳಿ ಪಾತ್ರಿಗಳಾದ ಸೋಮನಾಥ ಕುಲಾಲ್ ಹುಣ್ಸೆಮಕ್ಕಿ ಅವರನ್ನು ಸನ್ಮಾನಿಸಲಾಯಿತು.

ಐರೋಡಿ ಅಣಲಾಡಿ ಮಠದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ರಮೇಶ ಕಾರಂತ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ, ಬ್ರಹ್ಮಾವರ ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಕುಲಾಲ್ ಕನ್ನಾರು, ಬ್ರಹ್ಮ ಬೈದರ್ಕಕ ಸೇವಾ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ಳಿಯ ಪರಿಕರಗಳ ನಿರ್ಮಿಸಿಕೊಟ್ಟ ಹೆಬ್ರಿಯ ಶ್ರೀರಾಮ ಜ್ಯುವೆಲ್ಲರ್‍ಸ್‌ನ ನಾರಾಯಣ ಕುಲಾಲರನ್ನು ಗೌರವಿಸಲಾಯಿತು. ಅತಿಥಿಗಳಿಗೆ ಗಿಡಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು.

ವೈಶಾಲಿ ಮತ್ತು ವೈಷ್ಣವಿ ಪ್ರಾರ್ಥನೆ ಹಾಡಿದರು. ವಿಶ್ವನಾಥ ಕುಲಾಲ್ ಸ್ವಾಗತಿಸಿ, ಶಂಕರ್ ಕುಲಾಲ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಯುವ ಸಾಹಿತಿ ಹಿಲಿಯಾಣ ಮಂಜುನಾಥ ಕುಲಾಲ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!