9.2 C
New York
Thursday, March 23, 2023

Buy now

spot_img

ಅಂತರ್ ರಾಜ್ಯ ಮಟ್ಟದಲ್ಲಿ ಪ್ರಶಂಸೆ ಪಡೆದ ಮೊವಾಡಿಯ ಶ್ರೀ ಮಾಣಿಸಿದ್ಧಲಿಂಗೇಶ್ವರ ಭಜನಾ ತಂಡ

ಕುಂದಾಪುರ: ತ್ರಾಸಿ ಗ್ರಾಮದ ಗ್ರಾಮೀಣ ಪ್ರದೇಶವಾಗಿರುವ ಮೊವಾಡಿ ಪ್ರದೇಶದಲ್ಲಿ ಕಳೆದ 22 ವರ್ಷಗಳ ಹಿಂದೆ ಜನ್ಮ ತಾಳಿದ ಶ್ರೀ ಮಾಣಿಸಿದ್ಧಲಿಂಗೇಶ್ವರ ಭಜನಾ ತಂಡ ಅಂತರ್ ರಾಜ್ಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಬಹುತೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಮೊವಾಡಿ ಗ್ರಾಮದಲ್ಲಿ ದೇವಪ್ಪ ಟೀಚರ್ ಹಾಗೂ ವಿಜಯ ಎಂ. ಮತ್ತು ಮಹಾಬಲ ಎಂ. ಅವರ ಪ್ರಯತ್ನದ ಫಲವಾಗಿ ಕೂಲಿ ಕಾರ್ಮಿಕ ಯುವಕರನ್ನು ಒಗ್ಗೂಡಿಸಿ ಸನಾತನ ಹಿಂದು ಧರ್ಮ, ಸಂಸ್ಕೃತಿಯ ಭಜನೆ ಮಹತ್ವವನ್ನು ಸಾರುವ ಉದ್ದೇಶದಿಂದ ಭಜನೆ ಕೀರ್ತನೆಯನ್ನು ಮನೆ ಮನೆಗೆ ಪಸರಿಸುವ ದೃಷ್ಟಿಯಿಂದ ಶ್ರೀ ಮಾಣಿಸಿದ್ಧಲಿಂಗೇಶ್ವರ ಭಜನಾ ತಂಡದ ಸ್ಥಾಪನೆಗೊಂಡಿತು. ಅನೇಕ ಯುವಕರು ಭಜನೆ ಮೂಲಕ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸುವ ವೇದಿಕೆಯಾಗಿ ಶ್ರೀ ಮಾಣಿಸಿದ್ಧಲಿಂಗೇಶ್ವರ ಭಜನಾ ತಂಡ ರೂಪುಗೊಳ್ಳಲಾರಂಭಿಸಿದೆ.

ಸುಮಾರು 12 ವರ್ಷಗಳ ಹಿಂದೆ ಶ್ರೀ ಮಾಣಿಸಿದ್ಧಲಿಂಗೇಶ್ವರ ಭಜನಾ ತಂಡ ಮೂಲತಃ ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಕಮ್ಮಟದಿಂದ ಪ್ರಭಾವಿತಗೊಂಡಿತ್ತು. ಪ್ರತಿವರ್ಷ ಧರ್ಮಸ್ಥಳದ ಭಜನಾ ಕಮ್ಮಟದಲ್ಲಿ ಭಾಗವಹಿಸುತ್ತಿರುವ ಈ ಭಜನಾ ತಂಡವು ಅಂತರ್ ರಾಜ್ಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಗಳಲ್ಲಿ 75ಕ್ಕೂ ಮಿಕ್ಕಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ರಾಜ್ಯ ಮಟ್ಟದಲ್ಲಿ 19 ಪ್ರಥಮ ಮತ್ತು 11 ದ್ವಿತೀಯ ಪ್ರಶಸ್ತಿಗಳನ್ನು, ಅಂತರ್ ರಾಜ್ಯ ಮಟ್ಟದಲ್ಲಿ 15 ಪ್ರಥಮ ಹಾಗೂ 11 ದ್ವಿತೀಯ ಪ್ರಶಸ್ತಿ ಸಹಿತ ತಾಲೂಕು ಮತ್ತು ವಲಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಂಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪ್ರಶಂಸೆಗೆ ಪಾತ್ರವಾಗಿರುವ ಶ್ರೀ ಮಾಣಿಸಿದ್ಧಲಿಂಗೇಶ್ವರ ಭಜನಾ ತಂಡ ಸ್ತ್ರೀ ಶಕ್ತಿ ಗುಂಪುಗಳಿಗೆ, ಯೋಜನೆಯ ಸದಸ್ಯರಿಗೆ, ಶಾಲೆಯ ವಿದ್ಯಾರ್ಥಿಗಳಿಗೆ ಭಜನಾ ತರಬೇತಿ ಮೂಲಕ ಭಜನೆಗೆ ಪ್ರೇರಣೆ ನೀಡುತ್ತಿದೆ. ಭಜನಾ ತಂಡದ ಸತೀಶ ಮೊವಾಡಿ, ಪ್ರವೀಣ ಮೊವಾಡಿ ಸಾರಥ್ಯದಲ್ಲಿ ಅಂತರ್ ರಾಜ್ಯ ಮಟ್ಟದಲ್ಲಿ ಭಜನಾ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಕಾರ್ಯ ನಡೆಸಲು ಮುಂದಾಗಿದ್ದು, ತಂಡದ ಹೊಂದಾಣಿಕೆ, ಗೀತೆಗಳ ಆಯ್ಕೆ ಹಾಗೂ ತರಬೇತಿ ಮೂಲಕ ಶ್ರೀ ಮಾಣಿಸಿದ್ಧಲಿಂಗೇಶ್ವರ ಭಜನಾ ತಂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಭಜನಾ ತಂಡದ ಸಾಧನೆಗೆ ಇನ್ನಷ್ಟು ಭಜನಾಸಕ್ತರು, ದಾನಿಗಳು ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಭಜನೆ ಬಗ್ಗೆ ತರಬೇತಿ, ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ ಮತ್ತು ರಾಷ್ಟ್ರ ಮಟ್ಟದಲ್ಲಿ ತಂಡದ ಸಾಧನೆಗಳನ್ನು ತಲುಪಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಭಜನಾ ತಂಡದ ಸತೀಶ ಮೊವಾಡಿ.

Related Articles

Stay Connected

21,961FansLike
3,742FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!