Sunday, September 8, 2024

ಬೈಂದೂರು ವಿಧಾನ ಸಭಾ ಕ್ಷೇತ್ರ: ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ, ಪಕ್ಷ ಬಲಿಷ್ಠವಾಗಿದೆ-ಕೆ.ಗೋಪಾಲ ಪೂಜಾರಿ

ಬೈಂದೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ. ಭೂತ್ ಮಟ್ಟದಿಂದಲೇ ಪಕ್ಷ ಸದೃಢವಾಗಿದೆ. ಬೈಂದೂರು ಬ್ಲಾಕ್‌ನಲ್ಲಿ ಈಗಾಗಲೇ ಬೂತ್ ಮಟ್ಟದ ಸಭೆಗಳು ಪೂರ್ಣಗೊಳ್ಳುವ ಹಂತ ತಲುಪಿವೆ. ಮುಂದೆ 30 ಮನೆಗೊಂದು ಗ್ರಾಮೀಣ ಸಭೆ ನಡೆಸಿ, ಪರಿಣಾಮಕಾರಿಯಾಗಿ ಪಕ್ಷ ಮತದಾರರ ಹತ್ತಿರ ಹೋಗುವ ಕೆಲಸ ಮಾಡಲಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ಅವರು ಹೆಮ್ಮಾಡಿ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉಡುಪಿಯಲ್ಲಿ ಜನವರಿ 22ರಂದು ನಡೆಯಲಿರುವ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಬೈಂದೂರು ಮತ್ತು ವಂಡ್ಸೆ ಬ್ಲಾಕ್‌ನಿಂದ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ತಲ್ಲೂರಿನಿಂದ ಕಾರು ರ್‍ಯಾಲಿಯ ಮೂಲಕ ಉಡುಪಿ ತಲುಪಲಿದ್ದಾರೆ ಎಂದರು.

ಮಾಜಿ ಸಚಿವ ವಿನಯ ಕುಮಾರ ಸೊರಕೆ ಮಾತನಾಡಿ, ಕಾಂಗ್ರೆಸ್ ಪಕ್ಷದ 40 ಅಗ್ರಮಾನ್ಯ ನಾಯಕರುಗಳು ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದು, ಉಡುಪಿಯಲ್ಲಿ ಜನವರಿ 22ರಂದು ಕಾರ್ಯಕ್ರಮ ನಡೆಯಲಿದೆ. ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳಿಂದ ರಾಜ್ಯದ ಜನತೆ ಬೇಸೆತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಯಿತು. ಕೊರೋನಾ ಸಂದರ್ಭದಲ್ಲಿ ಕೇರಳದಲ್ಲಿ ಫ್ಯಾಕೆಜ್ ನೀಡಲಾಗುತ್ತದೆ, ಅದೇ ಕರ್ನಾಟಕದಲ್ಲಿ ನೀಡಲು ಸಾಧ್ಯವಾಗುವುದಿಲ್ಲ ಏಕೆ? ಕರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದರೂ ಕೂಡಾ ಪರಿಹಾರ ನೀಡಲಿಲ್ಲ. ಬಂಡವಾಳಶಾಹಿಗಳನ್ನು ಶ್ರೀಮಂತ ಮಾಡುವುದರಲ್ಲಿಯೇ ಸರ್ಕಾರಗಳು ನಿರತವಾಗಿವೆ ಎಂದ ಅವರು, ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಅಲ್ಲಿನ ಆಡಳಿತ ಮಂಡಳಿ ಗುಜರಿಗೆ ಹಾಕಿತು. ಸಕ್ಕರೆ ಕಾರ್ಖಾನೆಯ ಅವಶೇಷವೂ ಉಳಿಯದಂತೆ ಮಾಡಿತು. ಇದು ಬಿಜೆಪಿ ಆಡಳಿತದ ಕೊಡುಗೆ. ಕಸ್ತೂರಿ ರಂಗನ್ ವರದಿಯ ಆತಂಕ ಇನ್ನೂ ಹೆಚ್ಚುತ್ತಲೇ ಇದೆ. ಇದಕ್ಕೆ ಸರ್ಕಾರದ ಬಳಿ ಪರಿಹಾರವಿಲ್ಲ. ಕರಾವಳಿಯಲ್ಲಿ ನಡೆದ ಕೊಲೆಗಳಲ್ಲಿ ಪ್ರವೀಣ್ ಪೂಜಾರಿ ಕೊಲೆ ಪ್ರಕರಣ, ಕೋಟ ಅವಳಿ ಕೊಲೆ ಪ್ರಕರಣ, ಯಡಮೊಗೆಯ ಉದಯ ಗಾಣಿಗ ಕೊಲೆಯಲ್ಲಿ ಆರೋಪಿಗಳು ಬಿಜೆಪಿಯ ಪ್ರಭಾವಿಗಳೇ ಆಗಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಕಾಂಗ್ರೆಸ್‌ನಲ್ಲಿ ಯಾವುದೇ ಬಿರುಕಿಲ್ಲ. ಎಲ್ಲ ನಾಯಕರು ಒಟ್ಟಾಗಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ರಾಜ್ಯದ್ಯಂತ ಪ್ರಜಾಧ್ವನಿ ಯಾತ್ರೆ ಸಂಚಾರ ಮಾಡಲಿದೆ. ಉಡುಪಿಯ ಕಾರ್ಯಕ್ರಮದಲ್ಲಿ 25 ಸಾವಿರ ಜನ ಭಾಗವಹಿಸಲಿದ್ದಾರೆ. ಈ ಹಿಂದೆ ಸಿದ್ಧರಾಮಯ್ಯ ಚುನಾವಣೆಯ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳಲ್ಲಿ ಶೇ.99ರಷ್ಟನ್ನು ಕಾರ್ಯರೂಪಕ್ಕೆ ತಂದಿದ್ದರು. ಬಿಜೆಪಿ ಸರ್ಕಾರ ಚುನಾವಣಾ ಪೂರ್ವ ನೀಡಿದ 600 ಆಶ್ವಾಸನೆಗಳಲ್ಲಿ 100ನ್ನೂ ಈಡೇರಿಸಿಲ್ಲ. ಬಿಜೆಪಿ ಇವತ್ತು ಸುಳ್ಳು ಹೇಳಿಯೇ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ರಘುರಾಮ ಶೆಟ್ಟಿ, ರಾಜು ಪೂಜಾರಿ, ದೇವಾನಂದ ಶೆಟ್ಟಿ, ಡಾ.ಯಾದವ್, ಐಟಿ ಸೆಲ್‌ನ ರೋಶನ್ ಶೆಟ್ಟಿ, ಗ್ರಾಮೀಣ ಕಾಂಗ್ರೆಸ್ ಪಾಂಡು, ಜಯರಾಮ, ನಾಗಪ್ಪ ಕೊಠಾರಿ, ವಂಡಬಳ್ಳಿ ಜಯರಾಮ ಶೆಟ್ಟಿ, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು, ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.
ಪ್ರಸನ್ನ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಅನಂತ ಮೊವಾಡಿ ಸ್ವಾಗತಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!