Sunday, September 8, 2024

ಬಿಜೆಪಿ ಅಭ್ಯರ್ಥಿಯೆಂದು ತಿರುಗಾಡಿದರೆ ಸೂಕ್ತ ಕ್ರಮ- ಸುರೇಶ ನಾಯಕ್

ಹೆಮ್ಮಾಡಿ: ಭಾರತೀಯ ಜನತಾ ಪಕ್ಷ ಇನ್ನೂ ಅಧಿಕೃತವಾಗಿ ಬೈಂದೂರು ಸೇರಿದಂತೆ ಯಾವ ಕ್ಷೇತ್ರದಲ್ಲಿಯೂ ಕೂಡಾ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ತಮಗೆ ಸ್ಪರ್ಧೆಗೆ ಟಿಕೆಟ್ ಲಭಿಸಿದೆ ಎಂದು ಕಾರ್ಯಕರ್ತರ ನಡುವೆ ಗೊಂದಲ ಸೃಷ್ಟಿಸಿದರೆ ಪಕ್ಷ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ ಹೇಳಿದರು.

ಅವರು ಡಿ.13ರಂದು ಹೆಮ್ಮಾಡಿಯ ಹೋಟೆಲ್ ಜ್ಯುವೆಲ್ ಪಾರ್ಕ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರೂ ಆರ್ಹರು. ಅದಕ್ಕೆ ಟಿಕೇಟ್ ಕೇಳುವುದು ತಪ್ಪಲ್ಲ. ಆದರೆ ಟಿಕೇಟ್ ಕ್ಷೇತ್ರದಲ್ಲಿ ಕೊಡುವುದಲ್ಲ. ಅದಕ್ಕೊಂದು ವ್ಯವಸ್ಥೆ ಇದೆ. ಯಾರಿಗೆ ಟಿಕೇಟ್ ನೀಡಬೇಕು ಎಂದು ಪಕ್ಷ ನಿರ್ಧರಿಸುತ್ತದೆ. ಅಲ್ಲಿಯ ತನಕ ಅಕಾಂಕ್ಷಿಗಳು ಸುಮ್ಮನಿದ್ದು ಪಕ್ಷದ ಬೆಳವಣಿಗೆಗೆ ಶ್ರಮಿಸಬೇಕೇ ಹೊರತು ಅನಗತ್ಯ ಗೊಂದಲ ಸೃಷ್ಟಿ ಮಾಡಬಾರದು ಎಂದರು.

ಬೈಂದೂರು ಕ್ಷೇತ್ರದಲ್ಲಿ ತಾನು ಅಭ್ಯರ್ಥಿ ತನಗೆ ಟಿಕೇಟ್ ಆಗಿದೆ ಎಂದು ಹೇಳಿಕೊಂಡು ತಿರುಗುವುದು, ಗುಂಪು ಗುಂಪಾಗಿ ಸಭೆ ನಡೆಸುವುದು ಪಕ್ಷದ ಗಮನಕ್ಕೆ ಬಂದಿದೆ. ಇದು ಪಕ್ಷದ ಹಿತಾದೃಷ್ಟಿಯಿಂದ ಸರಿಯಲ್ಲ. ಪಕ್ಷ ಟಿಕೇಟ್ ಯಾರಿಗೂ ಕೊಡಬಹುದು. ಪಕ್ಷ ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆ ಮಾಡುವ ತನಕ ತಾಳ್ಮೆಯಿಂದಿರಿ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಬಿಜೆಪಿ ತಳಮಟ್ಟದಿಂದ ಪ್ರಬಲವಾಗಿದೆ. ಉಡುಪಿ ಜಿಲ್ಲೆಯ ಐದು ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇನ್ನೂ ಹೆಚ್ಚಿನ ಅಂತರದಲ್ಲಿ ಜಿಲ್ಲೆಯ ಐದೂ ಸ್ಥಾನಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ಜಿಲ್ಲೆಯ 155 ಗ್ರಾಮ ಪಂಚಾಯತ್‌ಗಳ ಪೈಕಿ 115 ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಹಿಡಿತವಿದೆ. ಜಿ.ಪಂ. ತಾ.ಪಂ. ಶಾಸಕರು, ಸಂಸದರು ನಮ್ಮವರೇ ಇದ್ದಾರೆ ಎಂದರು.

ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಮೋದ್ ಮುತಾಲಿಕ್ ಲಾಗ ಹಾಕಿದರೂ 3 ಸಾವಿರ ಮತ ಸಿಗುವುದಿಲ್ಲ. ನಿಜವಾದ ಹಿಂದುತ್ವ ಯಾವುದೆಂದು ಕಾರ್ಕಳದ ಮತದಾರರು ತೋರಿಸಿಕೊಡಲಿದ್ದಾರೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಜೆಡ್ಡು, ಪ್ರಿಯದರ್ಶಿನಿ ದೇವಾಡಿಗ, ಅಲ್ಪಸಂಖ್ಯಾತ ಘಟಕದ ದಾವುದ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!