Sunday, September 8, 2024

ರಾಜ್ಯದಲ್ಲಿಂದು ಅಭಿವೃದ್ದಿಯೊಂದಿಗೆ ಸಾಮಾಜಿಕ ಬದಲಾವಣೆ-ಸಿ.ಎಂ.ಬೊಮ್ಮಾಯಿ

ಕುಂದಾಪುರ: ರಾಜ್ಯದಲ್ಲಿ ಹಿಂದೆ ಆಡಳಿತ ನಡೆಸಿದ ಸರಕಾರಗಳಿಗೆ ಯಾಕೆ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಕೇವಲ ಮಾತಿನಿಂದ ಮಂಟಪ ಕಟ್ಟಿದರೆ ಹೊಟ್ಟೆ ತುಂಬುದಿಲ್ಲ. ರಾಜ್ಯದಲ್ಲಿ ಹತ್ತು ಹಲವಾರು ಸಮಸ್ಯೆಗಳಿವೆ. ಸವಾಲುಗಳನ್ನು ಮೆಟ್ಟಿ ನಿಂತು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಅಭಿವೃದ್ಧಿ ಕೆಲಸಗಳನ್ನು ನಿರಂತರವಾಗಿ ಮಾಡಿದರೆ ಮಾತ್ರ ಜನರು ವ್ಯವಸ್ಥೆ ಮೇಲೆ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟುಕೊಳ್ಳುತ್ತಾರೆ. ರಾಜ್ಯದಲ್ಲಿ ಸಾಮಾಜಿಕ ಬದಲಾವಣೆ ಆಗುತ್ತಿದೆ. ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು ಡಬ್ಬಲ್ ಇಂಜಿನ್‌ನಂತೆ ಕೆಲಸ ಮಾಡುತ್ತಿದೆ. ಸ್ಥಳೀಯವಾಗಿಯೂ ಕೂಡಾ ಸಂಸದರು, ಶಾಸಕರು ಡಬ್ಬಲ್ ಇಂಜಿನ್ ರೀತಿ ಕೆಲಸ ಮಾಡಿದ್ದಕ್ಕೆ ಎನ್ನುವುದಕ್ಕೆ ಸೇರಿರುವ ಜನಸ್ತೋಮಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.

ಉಡುಪಿ ಜಿಲ್ಲಾಡಳಿತ ವತಿಯಿಂದ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ನಗುಸಿಟಿಯಲ್ಲಿ ಮನೆ ಮನೆಗೆ ಕುಡಿಯುವ ನೀರು, ಮರವಂತೆ ಮೀನುಗಾರಿಕೆ ಬಂದರು, ಏತ ನೀರಾವರಿ ಯೋಜನೆ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕರಾವಳಿ ಭಾಗದ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಲು ೯ ಲಕ್ಷ ಹೆಕ್ಡೇರ್ ಡೀಮ್ಡ್ ಫಾರೆಸ್ಟ್ ಭೂಮಿಯಲ್ಲಿ ೬ ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಕರಾವಳಿ ಭಾಗದಲ್ಲಿ ಕುಚ್ಚಲಕ್ಕಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರಿಂದ ಕುಚ್ಚಲಕ್ಕಿಯನ್ನು ಖರೀದಿಸಿ ಬಡವರಿಗೆ ನೀಡಲು ಸರಕಾರ ಕ್ರಮಕೈಗೊಂಡಿದೆ. ಈ ಭಾಗದ ಬಂದರುಗಳ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ಅತೀ ಹೆಚ್ಚಿನ ಅನುದಾನವನ್ನು ಮೀಸಲಿಟ್ಟು, ಈ ಭಾಗದ ಸಮಗ್ರ ಅಭಿವೃದ್ಧಿಗೆ ಸರಕಾರ ಆದ್ಯತೆ ನೀಡಲಿದೆ ಎಂದು ಅವರು ಹೇಳಿದರು.

ಅಡಿಕೆ ಬೆಳಗಾರರನ್ನು ಕಾಡುತ್ತಿರುವ ಎಲೆಚುಕ್ಕಿ ರೋಗದ ಅಧ್ಯಯನ ನಡೆಸಲು ಸೂಚನೆ ನೀಡಲಾಗಿದ್ದು, ರೋಗವನ್ನು ನಿಯಂತ್ರಿಸಲು ಮತ್ತು ಔಷಧ ಸಿಂಪಡಣೆಯಾಗಿ ತುರ್ತಾಗಿ ೧೦ ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದ ಅವರು, ಇತ್ತೀಚಿಗೆ ನಡೆದ ಗ್ಲೋಬಲ್ ಇನ್ವೆಸ್ಟರ್ ಮೀಟ್‌ನಲ್ಲಿ ರಾಜ್ಯಕ್ಕೆ ೯.೩ ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, ಕರಾವಳಿಯ ಮಂಗಳೂರು, ಉಡುಪಿ ಹಾಗೂ ಕಾರವಾರದಲ್ಲಿ ೨ ಲಕ್ಷ ಕೋಟಿ ಅನುದಾನ ಹೂಡಿಕೆಯಾಗಿದೆ. ಮುಂದಿನ ದಿನಗಳಲ್ಲಿ ಯುವಕರ ಕೈಗೆ ಉದ್ಯೋಗ ನೀಡಿ ಅವರನ್ನು ಸಶಕ್ತರನ್ನಾಗಿ ಮಾಡಲು ಸರಕಾರ ಮುಂದಾಗಿದೆ. ರೈತರ ಮಕ್ಕಳಿಗೆ ಪ್ರಾರಂಭಿಸಲಾಗಿದ್ದ ವಿದ್ಯಾನಿಧಿ ಯೋಜನೆಯನ್ನು ಕೂಲಿಕಾರ ಮತ್ತು ಮೀನುಗಾರರ ಮಕ್ಕಳಿಗೂ ವಿಸ್ತರಿಸಲಾಗಿದ್ದು, ಸುಮಾರು ೨ ಲಕ್ಷ ಮೀನುಗಾರರ ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಎಸ್.ಸಿ/ಎಸ್.ಟಿ ಸಮುದಾಯಕ್ಕೆ ೨೮ ಸಾವಿರ ಕೋಟಿ ಅನುದಾನ ಮೀಸಲಿಟ್ಟು ಅದನ್ನು ಬಿಡುಗಡೆ ಮಾಡಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯಾದ್ಯಂತ ೧೦೦ ಅಂಬೇಡ್ಕರ್ ಹಾಸ್ಟೆಲ್ ನಿರ್ಮಿಸಲು ಮತ್ತು ೫೦ ಕನಕದಾಸರ ಹೆಸರಿನಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಲು ಸರಕಾರ ಯೋಜನೆ ರೂಪಿಸಿದೆ. ಮಂಗಳೂರಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೂ ಸರಕಾರ ಮುಂದಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣ, ಗಂಗೊಳ್ಳಿ ಬಂದರು ಅಭಿವೃದ್ಧಿಗೆ ಅನುದಾನ ಬಿಡುಗಡೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇರುವುದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ, ಮೆಡಿಕಲ್ ಕಾಲೇಜು ಸ್ಥಾಪನೆ, ವಿಮಾನ ನಿಲ್ದಾಣ ರಚನೆ ಹಾಗೂ ೯೪ಸಿ ಅಡಿ ಅರ್ಜಿ ಹಾಕಿದ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಸರಕಾರ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸವಲತ್ತು ವಿತರಿಸಲಾಯಿತು. ವಿದ್ಯಾನಿಧಿ ಯೋಜನೆಯಡಿ ಮೀನುಗಾರ ಮಕ್ಕಳಿಗೆ ವಿದ್ಯಾನಿಧಿ ವಿತರಿಸಲಾಯಿತು. ವಿವಿಧ ಇಲಾಖೆಗಳು ಸುಮಾರು ೧೦೯೫.೧೬ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ೨೫೧.೪೬ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.

ಸಚಿವರಾದ ಗೋವಿಂದ ಎಂ.ಕಾರಜೋಳ, ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ.ಸುನೀಲ್ ಕುಮಾರ್, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ ಕುಮಾರ್ ಕೊಡ್ಗಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಿಥುನ್ ಆರ್.ಹೆಗ್ಡೆ, ಮಾಜಿ ಸಚಿವ ಪ್ರಮೋದ ಮಧ್ವರಾಜ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚಿಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಹಾಯಕ ಕಮಿಷನರ್ ಕೆ.ರಾಜು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕೆ.ವಿ.ರವಿಕುಮಾರ್, ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಅಭಿಯಂತರ ಶಿವಾನಂದ ಎಸ್.ಬಣಕಾರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ನಿಗಮದ ಕಾರ್ಯಪಾಲಕ ಅಭಿಯಂತರ ಗೋಕುಲ್ ದಾಸ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಬಿ.ಟಿ ಮೋಹನ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಸ್ವಾಗತಿಸಿದರು. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಕೆ.ಸಿ.ರಾಜೇಶ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!