Sunday, September 8, 2024

ಯಾಕೂಬ್ ಖಾದರ್ ಗುಲ್ವಾಡಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕುಂದಾಪುರ: ಚಲನಚಿತ್ರ, ನಟ, ಬರಹಗಾರ ಯಾಕೂಬ್ ಖಾದರ್ ಗುಲ್ವಾಡಿ ಅವರಿಗೆ ಈ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬರಹಗಾರನಾಗಿರುವ ಇವರ ಪ್ರವಾಸ ಕಥನಗಳಾದ ‘ಶ್ರೀಲಂಕಾ ಒಂದು ಸುಂದರ ದ್ವೀಪ ರಾಷ್ಟ್ರ’, ‘ಅಂಡಮಾನ್ ಮತ್ತು ಸುನಾಮಿ’, ಮತ್ತು ‘ನನ್ನ ಫಾರಿನ್ ಟೂರಿಂಗ್ ಟಾಕೀಸ್’ ಎಂಬ ಕೃತಿಗಳನ್ನು ರಚಿಸಿದ್ದು ಈಗಾಗಲೇ, ಅಮೇರಿಕಾ, ದಕ್ಷಿಣ ಕೊರಿಯಾ, ದುಬೈ, ಸಿಂಗಾಪುರ, ಓಮನ್, ಶ್ರೀಲಂಕಾ, ಮಾಲ್ಡಿವ್ಸ್, ಕತಾರ್, ಕೀನ್ಯಾ, ತಾನ್‌ಜೇನಿಯಾ, ಮಲೇಷ್ಯಾ, ಥಾಲ್ಯಾಂಡ್, ಕೆನಡಾ, ಅಂಡಮಾನ್ ನಿಕೋಬಾರ್‌ನಲ್ಲಿ ನಡೆದ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಯಾಕೂಬ್ ಖಾದರ್ ಮನೆಯೇ ಒಂಥರ ಮ್ಯೂಸಿಯಂ. ಪ್ರಾಚೀನ ನಾಣ್ಯಗಳು, ಬ್ಯಾರಿ ಹಾಗೂ ಇತರ ಸಂಸ್ಕೃತಿಗೆ ಸಂಬಂಧಪಟ್ಟ ಪ್ರಾಚ್ಯ ವಸ್ತುಗಳ ಬೃಹತ್ ಸಂಗ್ರಹಾಲಯ ಇದೆ. ಒಂಥರ ಅವರದ್ದು ಅಧ್ಯಯನದ ಮನಸ್ಥಿತಿ. ಅ ನಿಟ್ಟಿನಲ್ಲಿ ಬಿಡುವಿಲ್ಲದ ಕೆಲಸ, ದೇಶ ವಿದೇಶದ ಪ್ರವಾಸ, ಕನ್ನಡಿಗರ ಹುಡುಕಾಟ, ಕಾರ್ಯಕ್ರಮ ಆಯೋಜನೆ ಬ್ಯಾರಿ ಭಾಷೆಯ ಜೊತೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯ ಸರಕಾರದ ಚಲನಚಿತ್ರ ಆಯ್ಕೆ ಸಲಹಾ ಸಮಿತಿಯ ಸದಸ್ಯನಾಗಿ, ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಟಾನ. ಇದರ ಪ್ರದಾನ ನಿರ್ವಾಹಕನಾಗಿ, ಕರ್ನಾಟಕ ಸರಕಾರದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಒಂದುವರೆ ವರ್ಷಗಳ ಕಾಲ ಸದಸ್ಯನಾಗಿ, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯ ಸಲಹಾ ಮಂಡಳಿಯ ನಿರ್ದೇಶಕನಾಗಿ, ದೇಶ ವಿದೇಶಗಳಲ್ಲಿ ಕನ್ನಡ ಸಮ್ಮೇಳನಗಳನ್ನು ಸಂಘಟಿಸುವ ಮೂಲಕ ಹೊರದೇಶಗಳಲ್ಲಿ ಕನ್ನಡ ಕಟ್ಟುವ ಕೆಲಸಗಾರನಾಗಿ, ಗುಲ್ವಾಡಿ ವೆಂಕಟರಾವ್ ಸ್ಮಾರಕ ಸಾರ್ವಜನಿಕ ಗ್ರಂಥಾಲಯದ ಪ್ರದಾನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ ಇದರ ಅಜೀವ ಸದಸ್ಯನಾಗಿ, ಸಹಮತ, ನಡುಮನೆ, ಸದ್ಭಾವನಾ ಈ ಸಂಘಟನೆಗಳ ಸದಸ್ಯನಾಗಿ, ಹೃದಯವಾಹಿನಿ ಪತ್ರಿಕೆ ಮಂಗಳೂರು ಇದರ ಗೌರವ ಸಂಪಾದಕನಾಗಿ ತನ್ನನ್ನು ತೊಡಗಿಸಿಕೊಂಡಿದ್ದು, ಕಳೆದ ಹಲವಾರು ವರ್ಷಗಳಿಂದ ಬರವಣಿಗೆ, ಸಮಾಜ ಸೇವೆ, ಸಂಘಟನೆ, ಸಿನೆಮಾ, ಅಭಿನಯ, ಛಾಯಾಚಿತ್ರ, ಕ್ರಿಕೆಟ್, ರಕ್ತದಾನ, ಪ್ರವಾಸ ಹಾಗೂ ಪ್ರಾಚೀನ ಕಾಲದ ವಸ್ತು ಹಾಗೂ ನಾಣ್ಯ, ವಿದೇಶಿ ನಾಣ್ಯ ಹಾಗೂ ಅಪರೂಪದ ನೋಟುಗಳ ಸಂಗ್ರಹಕಾರರಾಗಿದ್ದಾರೆ.

ರಾಜ್ಯದ ಹಲವಾರು ಪತ್ರಿಕೆಗಳು ಗುರುತಿಸಿ, ವಿಶೇಷ ಲೇಖನ ಪ್ರಕಟ, ದೂರದರ್ಶನ ಚಂದನ ವಾಹಿನಿಯ ಬೆಳಗು ನೇರಪ್ರಸಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂದರ್ಶನ ಪ್ರಸಾರವಾಗಿದೆ. ಇವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅಬುದಾಬಿ ಕನ್ನಡ ಸಂಘದಿಂದ ಅಂತರಾಷ್ಟ್ರೀಯ ಸಮಾಜ ಸೇವಾ ಪ್ರಶಸ್ತಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ, ವಿಜಾಪುರ ನೀಡಿದ ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ.) ಬೆಂಗಳೂರು ನೀಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾಂಗ್ರೆಸ್ ಸೇವಾದಳದ ಕಾರ್ಯಕರ್ತನಾಗಿ ಅಂಡಮಾನ್ ಮತ್ತು ತಮಿಳುನಾಡಿನಲ್ಲಿ ಸುನಾಮಿ ಸಂತೃಸ್ತರ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಕೇಂದ್ರ ಸರಕಾರದ ವತಿಯಿಂದ ಪ್ರಶಸ್ತಿ, ತಮಿಳುನಾಡು ರೆಡ್‌ಕ್ರಾಸ್ ಸಂಸ್ಥೆಯಿಂದ ಪ್ರಶಸ್ತಿ, ಭಾರತ್ ಸೇವಾ ದಳ ರಾಜ್ಯ ಸಂಘಟನೆಯಿಂದ ಪ್ರಶಸ್ತಿ, ಅಂಡಮಾನ್ ಮತ್ತು ಸುನಾಮಿ ಛಾಯಾಚಿತ್ರ ಪ್ರದರ್ಶನಕ್ಕೆ ಸಿಂಗಾಪುರ ಕನ್ನಡ ಸಂಘದಿಂದ ಪ್ರಶಸ್ತಿ, ಮಿನಿಯೇಚರ್ ಕೌಶಲ್ಯಕ್ಕೆ ದ.ಕ. ಜಿಲ್ಲಾಧಿಕಾರಿಯವರಿಂದ ಪ್ರಶಸ್ತಿ, ಅಲ್ಲದೇ, ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘ ಗುರುತಿಸಿ ಗೌರವಿಸಿದೆ.

ಕನ್ನಡದ ಯುವ ನಟ ನಿರ್ದೇಶಕ ನಿಖಿಲ್ ಮಂಜೂ ಲಿಂಗಯ್ಯ ನಿರ್ದೇಶನದ ಮೂರು ರಾಜ್ಯಪ್ರಶಸ್ತಿ, ಎರಡು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಪ್ರಶಸ್ತಿ ಪಡೆದ ಕುಂದಗನ್ನಡ ಮತ್ತು ಬ್ಯಾರಿ ಭಾಷೆ ಮಿಶ್ರಿತ ಹಜ್ ಚಲನಚಿತ್ರಕ್ಕೆ ಕಲಾಕಾರನಾಗಿ ಮತ್ತು ನಾಯಕನ ಸ್ನೇಹಿತನ ಪಾತ್ರಧಾರಿಯಾಗಿ ನಟಿಸಿದ್ದಾರೆ. ಅಲ್ಲದೇ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ರಾಷ್ಟ್ರಪ್ರಶಸ್ತಿ ವಿಜೇತ ಗುಲಾಬಿ ಟಾಕೀಸ್ ಮುಖ್ಯಪಾತ್ರಧಾರಿ ಹಿರಿಯ ಕಲಾವಿದೆ ಉಮಾಶ್ರೀಯವರಿಗೆ ವಸ್ತ್ರವಿನ್ಯಾಸಕಾರಿಯಾಗಿ ಕೆಲಸ ಮಾಡಿದ್ದಾರೆ. ಇವರ ಮೊದಲ ನಿರ್ಮಾಣದ ರಿಸರ್ವೇಶನ್ ಎಂಬ ಕನ್ನಡ ಚಲನಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ (ರಜತ ಕಮಲ) ಸೇರಿದಂತೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ದೊರಕಿತ್ತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಜೊತೆಗೆ ಟ್ರಿಪಲ್ ತಲಾಖ್ ಎನ್ನುವ ಬ್ಯಾರಿ ಭಾಷೆಯ ಚಲನಚಿತ್ರವನ್ನು ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ಅವರು ನಟಿಸಿ, ನಿರ್ದೇಶಿಸಿ, ರೊನಾಲ್ಡ್ ಅವರೊಂದಿಗೆ ಜಂಟಿಯಾಗಿ ನಿರ್ಮಿಸಿರುವ ಆ 90 ದಿನಗಳು ಚಲನಚಿತ್ರ ಸಾಕಷ್ಟು ಹೆಸರು ತಂದುಕೊಟ್ಟಿದ್ದಲ್ಲದೆ ೧೩ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಸ್ಪರ್ಧಾ ವಿಭಾಗದಲ್ಲಿ ಸ್ಥಾನ ಪಡೆದಿತ್ತು.

ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕನ್ನಡದ ಹಿರಿಯ ಪತ್ರಕರ್ತ ಸಂತೊಷ್ ಕುಮಾರ್ ಗುಲ್ವಾಡಿಯವರ ಹೆಸರಲ್ಲಿ ಪ್ರಶಸ್ತಿವೊಂದನ್ನು ಸ್ಥಾಪಿಸಿದ್ದು, ನಾಡಿದ ಹಿರಿಯ ಸಾಹಿತಿ, ಸಾಂಸ್ಕೃತಿಕ ರಾಯಬಾರಿ, ಸಂಘಟಕರನ್ನು ಗುರುತಿಸಿ, ಗೌರವಿಸುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೇ ಕನ್ನಡ ಮತ್ತು ಬ್ಯಾರಿ ಭಾಷೆ ಮತ್ತು ಸಂಸ್ಕೃತಿ, ಸಾಹಿತ್ಯದ ಕುರಿತಂತೆ ಅನೇಕ ಚರ್ಚೆ ಮತ್ತು ದೇಶವಿದೇಶಗಳಾದ್ಯಂತ ಅನೇಕ ಕಾರ್ಯಕ್ರಮ ಕಮ್ಮಟಗಳನ್ನು ಏರ್ಪಡಿಸಿ ಮತ್ತು ಭಾಗವಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!