Sunday, September 8, 2024

ಕುಂದಾಪುರದ ಹುಲಿವೇಷ ಪರಂಪರೆ ಉಳಿವಿಕೆಗೆ ಪ್ರೋತ್ಸಾಹ ಅಗತ್ಯ-ಬಿ. ಕಿಶೋರ್ ಕುಮಾರ್

ಕುಂದಾಪುರ:ಹುಲಿವೇಷ ಉಳಿವು, ಚಿಂತನ-ಮಂಥನ ಸಭೆ

ಕುಂದಾಪುರ, ಸೆ.24: ಕುಂದಾಪುರದ ಹುಲಿವೇಷಕ್ಕೆ ತನ್ನದೇಯಾದ ವಿಶೇಷತೆ, ಪರಂಪರೆ ಇದೆ. ನವರಾತ್ರಿಯ ಹುಲಿವೇಷ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಬಹುತ್ವ ಪರಂಪರೆಯನ್ನು ಇದರಲ್ಲಿ ಗಮನಿಸಬಹುದಾಗಿದೆ. ದುರಾದೃಷ್ಟವೆಂದರೆ ಇತ್ತೀಚೆಗಿನ ವರ್ಷಗಳಲ್ಲಿ ಪ್ರೋತ್ಸಾಹದ ಕೊರತೆ, ಹುಲಿವೇಷಧಾರಿಗಳ ಆಸಕ್ತಿಯ ಕೊರತೆಯಿಂದ ಕುಂದಾಪುರದ ಹುಲಿವೇಷ ಅಳಿವಿನಂಚಿನಲ್ಲಿದೆ. ಕುಂದಾಪುರದ ಹುಲಿವೇಷ ಪರಂಪರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಧಾರ್ಮಿಕ ಕೇಂದ್ರಗಳು, ಸಂಘ ಸಂಸ್ಥೆಗಳು, ಕಲಾಸಕ್ತರು ಆಲೋಚನೆ ಮಾಡಬೇಕಾಗಿದೆ ಎಂದು ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಹೇಳಿದರು.

ಕುಂದಾಪುರದ ಕಲಾಕ್ಷೇತ್ರದ ಕಛೇರಿಯಲ್ಲಿ ಸೆ.23ರಂದು ನಡೆದ ಹುಲಿವೇಷ ಉಳಿವು, ಚಿಂತನ-ಮಂಥನ ಸಭೆಯಲ್ಲಿ ಅವರು ಮಾತನಾಡಿದರು.

ಕುಂದಾಪುರ ಹುಲಿಯ ವೇಷಭೂಷಣ ತೀರಾ ಭಿನ್ನ, ಹುಲಿವೇಷ ಕುಣಿತಕ್ಕಾಗಿ ಹಿನ್ನೆಲೆಯಲ್ಲಿ ಬಳಸುವ ವಾದ್ಯ, ಡೋಲು, ತಾಸ್ಮಾರ್ ಇತ್ಯಾದಿಗಳ ನುಡಿಸುವಿಕೆಗೆ ತಕ್ಕಂತೆ ಮೂರುಪೆಟ್ಟು, ಚೇಳುಬಾಗುವುದು, ವೃತ್ತಾಕಾರವಾಗಿ ಸುತ್ತುತ್ತಾ ಮಾಡುವ ಹುಲಿವೇಷಧಾರಿಗಳ ನೃತ್ಯದ ಸೊಬಗು ಅದರ ಜೊತೆಯಲ್ಲಿ ಗೊಂಡೆ ಆಡಿಸುವುದು ಮತ್ತು ಹಳದಿ ಬಣ್ಣವನ್ನು ಆಧಾರವಾಗಿಸಿಕೊಂಡು ವೇಷಧಾರಿಗಳ ದೇಹದ ಮೇಲೆ ಹುಲಿಯ ಚಿತ್ರವನ್ನು ಅರಳಿಸುವಂತಹ ವಿಭಿನ್ನ ಸಂಸ್ಕೃತಿಯ ಹುಲಿವೇಷ ಮತ್ತು ಕುಣಿತವನ್ನು ಕುಂದಾಪುರ ಹೊರತುಪಡಿಸಿ ಇನ್ನೆಲ್ಲು ನೋಡಲು ಸಾಧ್ಯವಿಲ್ಲ. ಇಂಥಹ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಹುಲಿವೇಷವನ್ನು ಕಾಪಾಡಿಕೊಳ್ಳಬೇಕಾದ ಜವಬ್ದಾರಿ ನಮಗಿದೆ ಎಂದರು.

ಕುಂದಾಪುರದಲ್ಲಿ ಅದೆಷ್ಟೋ ಪರಂಪರೆಯ ಹುಲಿವೇಷಧಾರಿಗಳು ಆಗಿಹೋಗಿದ್ದಾರೆ. ಕೆಲವೇ ತಂಡಗಳನ್ನು ಮಾತ್ರ ಇವತ್ತು ಕಾಣಬಹುದಾಗಿದೆ. ಕಲಾಕ್ಷೇತ್ರ ಕುಂದಾಪುರದ ಕಲಾಪ್ರಕಾರಗಳ ರಕ್ಷಣೆಗೆ ತನ್ನಿಂದಾದ ಕರ್ತವ್ಯ ನಿರ್ವಹಿಸುತ್ತಾ ಬಂದಿದೆ. ಕುಂದಾಪುರದ ಹುಲಿವೇಷಕ್ಕೊಂದು ವೇದಿಕೆ ಒದಗಿಸಿಕೊಡುವ ಕೆಲಸ ಕಲಾಕ್ಷೇತ್ರ ಈ ಹಿಂದೆಯೇ ಮಾಡಿದೆ ಎಂದರು.

ಸಾಂಸ್ಕೃತಿಕ ಪ್ರಕಾರ ಅಳಿಯಬಾರದು-ಜಾನ್ ಡಿಸೋಜ
ಪತ್ರಕರ್ತ ಜಾನ್ ಡಿಸೋಜ ಮಾತನಾಡಿ, ಕುಂದಾಪುರದ ಹುಲಿವೇಷ ಪಕ್ಕಾ ಶಾಸ್ತ್ರೀಯವಾದುದು. ಆದರೆ ಸೂಕ್ತ ಪ್ರೋತ್ಸಾಹ ದೊರಕದೆ ಅಳಿವಿನಂಚಿನಲ್ಲಿದೆ. ಉಡುಪಿ, ಮಂಗಳೂರುಗಳಲ್ಲಿ ಹುಲಿವೇಷಕ್ಕೆ ಬಹಳ ಉತ್ತೇಜನ ಸಿಗುತ್ತಿದೆ. ಕಲೆ, ಸಂಸ್ಕೃತಿ, ಸಾಂಸ್ಕೃತಿಕ ನಾಶವಾಗಬಾರದು. ಸಾಂಸ್ಕೃತಿಕ ಪ್ರಜ್ಞೆ, ಪ್ರೀತಿಯಿಂದ ಇಂತಹ ಕಲಾ ಪ್ರಕಾರಗಳನ್ನು ಅಮೂಲಾಗ್ರವಾಗಿ ಮೇಲೆತ್ತುವ ಪ್ರಯತ್ನ ಮಾಡಬೇಕಾಗಿದೆ ಎಂದರು.

ಇವತ್ತು ಕುಂದಾಪುರ ಸುತ್ತಮುತ್ತಲಿನ ಪರಂಪರೆಯ ಕಲಾಪ್ರಕಾರಗಳು ಅವನತಿಯ ಹಾದಿ ಹಿಡಿದಿವೆ. ಕೆಲವೊಂದು ಜನಾಂಗಗಳು ಸಾಂಪ್ರಾದಾಯಿಗಳ ನೃತ್ಯ, ಹಾಡು ಮರೆಯಾಗುತ್ತಿವೆ. ಇವುಗಳ ಬಗ್ಗೆ ಅಧ್ಯಯನ, ಉಳಿಸುವ ಪ್ರಯತ್ನಗಳು ನಡೆಯಬೇಕು. ಮುಂದಿನ ತಲೆಮಾರಿಗೆ ಇಂತಹ ಕಲಾ ಪ್ರಕಾರಗಳು ಹಿಂದೆ ಇತ್ತು ಎಂದು ಚಿತ್ರ ತೋರಿಸಿ ಹೇಳುವಂತಾಗಬಾರದು ಎಂದರು.

ಹುಲಿವೇಷ ಜಾತಿ, ಧರ್ಮಗಳ ಇತಿಮಿತಿಗೆ ಸೀಮಿತವಾಗಿಲ್ಲ. ಎಲ್ಲರೂ ಹುಲಿವೇಷ ಇಷ್ಟಪಡುತ್ತಾರೆ. ವಿಶೇಷವಾದ ಆಕರ್ಷಣೆ ಇದರಲ್ಲಿದೆ. ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿಯೂ ಹುಲಿವೇಷ ಕುಣಿತಕ್ಕೆ ಅವಕಾಶ ಕಲ್ಪಿಸಿದರೆ ಕಲೆಗೆ ಪ್ರೋತ್ಸಾಹ ಸಿಗುತ್ತದೆ. ಆ ಕೆಲಸ ಕುಂದಾಪುರದಲ್ಲಿ ಆಗಬೇಕು. ಕುಂದಾಪುರದ ಶಾಸ್ತ್ರೀಯವಾದ ಹುಲಿವೇಷ ಮತ್ತೆ ವಿಜೃಂಭಿಸಬೇಕು ಎಂದರು.

ಕಲಾಕ್ಷೇತ್ರದ ಪೋಷಕರಾದ ಸತೀಶ ಕಾವೇರಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕುಂದಾಪುರದ ಹುಲಿವೇಷ ಪ್ರಕಾರದ ಬಗ್ಗೆ ಸಮಗ್ರ ಅಧ್ಯಯನ ಮಾಡುವ ಅಗತ್ಯವಿದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಈ ನಾಡಿನ ಕಲೆಗೆ ಬೇರೆ ಬೇರೆ ಭಾಗಗಳಲ್ಲಿ ಉತ್ತಮ ಗೌರವವಿದೆ. ಕುಂದಾಪುರದ ಹುಲಿವೇಷ ಬೇರೆ ಬೇರೆ ಹುಲಿವೇಷಗಳಿಗಿಂತ ವಿಶೇಷ. ಅದನ್ನು ಉಳಿಸಲು ಪ್ರಯತ್ನಿಸೋಣ ಎಂದರು.

ಸನತ್ ಕುಮಾರ್ ರೈ ಉಪಸ್ಥಿತರಿದ್ದರು. ಸಭೆಯಲ್ಲಿ ಕಲಾಸಕ್ತರು, ಹುಲಿವೇಷಧಾರಿಗಳು ತಮ್ಮ ಅಭಿಪ್ರಾಯ ಮಂಡಿಸಿದರು. ರಾಜೇಶ ಕಾವೇರಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!