Sunday, September 8, 2024

ಗೂಗ್ಲೋಪತಿ

ನೀವು ಎಂದಾದರೂ ಗೂಗ್ಲೋಪತಿ ಅಥವಾ ಸೈಬರ್ಕಾಂಡ್ರಿಯಾ ಪದವನ್ನು ಕೇಳಿದ್ದೀರಾ?
ಇಂದಿನ ಅಂಕಣದಲ್ಲಿ ವಿಶಿಷ್ಟ ವಿಚಾರ ಒಂದನ್ನು ಚರ್ಚಿಸುತ್ತ ಇದ್ದೇನೆ. ಇಂದು ವೈದ್ಯರಿಗೆ ದೊಡ್ದ ಸವಾಲಾಗುತ್ತ ಇರುವುದು ರೋಗಿಗಳು Google ನಲ್ಲಿ ಅರ್ಧಂಬರ್ಧ ತಿಳಿದುಕೊಂಡು ಚಿಕಿತ್ಸೆಯ ಬಗ್ಗೆ ಪ್ರಶ್ನೆ ಮಾಡುವುದು, ಹೊಸ ಹೊಸ ಚಿಕಿತ್ಸಾ ಕ್ರಮಗಳನ್ನು ಉಪಯೋಗಿಸುವಂತೆ ಕೇಳಿಕೊಳ್ಳುವುದು, ತಮ್ಮನ್ನು ತಾವೇ ಪರೀಕ್ಷಿಸಿಕೊಂಡು ರೋಗನಿರ್ಣಯ ಮಾಡಿಕೊಳ್ಳುವುದು. ಹೌದು ವೈದ್ಯರಿಗೆ ನೀವು ಪ್ರಶ್ನೆ ಕೇಳಬೇಕು, ನಿಮ್ಮ ರೋಗದ ಬಗ್ಗೆ ತಿಳಿದುಕೊಳ್ಳುವುದು ನಿಮ್ಮ ಹಕ್ಕು.

ಆದರೆ ಕೆಲವೊಮ್ಮೆ ರೋಗಿಗಳು ತಮಗೆ ಗೊತ್ತು ಎಂದು ತಿಳಿದು ತಮ್ಮ ತೊಂದರೆಗೆ ಇಂತಹುದೇ ಮಾತ್ರೆ ಕೊಡಿ ಎಂದು ಬರುತ್ತಾರೆ. ಇನ್ನು ಕೆಲವೊಮ್ಮೆ ತಾವು ಆನ್ಲೈನ್ ಓದಿದ ಯಾವುದೋ ಬೇರೆ ಒಬ್ಬ ರೋಗಿಯ ಚಿಹ್ನೆಗಳನ್ನು ತಮ್ಮ ರೋಗ ಲಕ್ಷಣಗಳಿಗೆ ಹೋಲಿಸಿ ಅವರು ತೆಗೆದುಕೊಳ್ಳುತ್ತಿರುವ ಚಿಕಿತ್ಸೆ ನಮಗೆ ಕೊಡಿ ಎಂದು ಬರುತ್ತಾರೆ. ಒಬ್ಬ ವೈದ್ಯನಾಗಿ ನಾನು ಇಂತ ಜನರ ಬಗ್ಗೆ ಸಿಟ್ಟು ಗೊಳ್ಳುವುದಿಲ್ಲ, ಅವರು ನನ್ನ ಹತ್ತಿರ ತಮ್ಮ ಸಂದೇಹಗಳನ್ನು ಚರ್ಚಿಸಿದರು ಮತ್ತು ಅವರಲ್ಲಿ ಇರುವ ಅಪನಂಬಿಕೆ ದೂರ ಮಾಡಲು ನನಗೆ ಒಂದು ಅವಕಾಶ ಅಂದುಕೊಳ್ಳುತ್ತೇನೆ. ಹೆಚ್ಚಿನ ರೋಗಿಗಳು ಇಲ್ಲದ ರೋಗಗಳು ತಮಗೆ ಇದೆ ಎಂದುಕೊಂಡು ಬರುತ್ತಾರೆ. ತಮ್ಮ ರೋಗದ ಗುಣಲಕ್ಷಣಗಳು ನೋಡಿ ತಮಗೆ ಕ್ಯಾನ್ಸರ್ ಇರಬೇಕು ಅಥವಾ ಏಡ್ಸ್ ಇರಬೇಕು, ಹಾಗೆಯೇ ಇತ್ತೀಚಿನ ದಿನಗಳಲ್ಲಿ ಕೆಮ್ಮು ಬಂದರೆ ಕೋವಿಡ್ ಇರಬೇಕು ಎಂಬ ಸಂದೇಹದಿಂದ ಹೆದರಿ ತಾವೇ ಪರೀಕ್ಷೆಗಳನ್ನು ಮಾಡಿಕೊಂಡು ಕಂಗಾಲಾಗಿ ವೈದ್ಯಕೀಯ ಶಾಪ್‌ನಲ್ಲಿ ಮಾತ್ರೆಗಳನ್ನು ಕೊಂಡು ತಿನ್ನುತ್ತಾರೆ. ದುರದಷ್ಟವಶಾತ್ ಕೆಲವೊಮ್ಮೆ ಕೆಲವು ರೋಗಗಳ ಪ್ರಾಥಮಿಕ ಚಿಹ್ನೆ ಗಳು ನೋಡಿ Google ನಲ್ಲಿ ಓದಿ ಸ್ವ-ಚಿಕಿತ್ಸೆ ಮಾಡಿ ಕೆಲವು ಸಮಯ ಕಳೆದ ಮೇಲೆ ವೈದ್ಯರ ಬಳಿ ಬರುವಾಗ ರೋಗ ಬಹಳ ಮುಂದುವರಿಯುವ ಸ್ಥಿತಿಯಲ್ಲಿ ಕೂಡ ನಾನು ನೋಡಿದ್ದೇನೆ.

ಒಬ್ಬ ವೈದ್ಯ ಕನಿಷ್ಠ ಆರು ವರುಷ ಗರಿಷ್ಠ ಹತ್ತು ವರುಷ ಓದಿ ವೈದ್ಯಕೀಯ ಪದವಿ ಪಡೆದಿರುತ್ತಾನೆ. Google ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ. ಒಬ್ಬ ವೈದ್ಯ ಎಂದು ಪರಿಪೂರ್ಣನಲ್ಲ ಹಲವೊಮ್ಮೆ ಚಿಕಿತ್ಸಾ ಕ್ರಮಗಳ ಬಗ್ಗೆ ನಾನು ಕೂಡ Google ಮುಖಾಂತರ ವೈದ್ಯಕೀಯ ಜರ್ನಲ್ಗಳಲ್ಲಿ ನೋಡುತ್ತೇನೆ, ಹೊಸ ಚಿಕಿತ್ಸೆಗಳ ಬಗ್ಗೆ ಓದುತ್ತೇನೆ ಆದರೆ ಅದು ಎಲ್ಲಿ ಓದಬೇಕು ಅನ್ನುವ ತಿಳುವಳಿಕೆ ನನಗೆ ನನ್ನ ಡಿಗ್ರಿ ಅಥವಾ ಸ್ನಾತಕೋತ್ತರ ವಿದ್ಯಾಭ್ಯಾಸದ ಸಮಯದಲ್ಲಿ ಹೇಳಿ ಕೊಡಲಾಗುತ್ತದೆ. ಆದರೆ ಹೆಚ್ಚಿನ ವಿದ್ಯಾವಂತ ಗ್ರಾಹಕರು ಕೂಡ ಇಂಟರ್ನೆಟ್‌ನಲ್ಲಿ ಅರೆ ಬೆಂದ ವಿಷಯಗಳನ್ನು ಓದಿ ತಿಳಿದುಕೊಂಡು ಸಮಸ್ಯೆಗೆ ಒಳಗಾಗುತ್ತಾರೆ. ಅನಗತ್ಯವಾಗಿ ತಾವೇ ತಲೆಯ ಸ್ಕ್ಯಾನ್ ಮಾಡಿಸಿಕೊಳ್ಳುವುದು, ವಿಟಮಿನ್ ಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು, ಥೈರಾಯ್ಡ್ ಪರೀಕ್ಷೆ ಮಾಡಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ವೈದ್ಯರ ಮೇಲೆ ಭರವಸೆ ಕಡಿಮೆಯಾಗಿದೆ. ಹಲವು ಮಾನಸಿಕ ರೋಗಗಳಲ್ಲಿ ದೈಹಿಕ ಚಿಹ್ನೆಗಳು ಇರುತ್ತವೆ.. ಸುಸ್ತು, ತಲೆ ನೋವು, ಬೆನ್ನು ನೋವು, ಹೃದಯ ಬಡಿತ ಜೋರಾಗಿ ಹೆದರಿಕೆ ಇವು ಮನೋರೋಗಗಳಲ್ಲಿ ಕೂಡ ಉಂಟಾಗಬಹುದು ಆದರೆ ಕೆಲವೊಮ್ಮೆ ದೈಹಿಕ ಸಮಸ್ಯೆಗಳಲ್ಲಿ ಕೂಡ ಉಂಟಾಗಬಹುದು. ಆದರೆ ಈ ಚಿಹ್ನೆಗಳನ್ನು Google ಮಾಡಿ ಓದಿಕೊಂಡು ಹೆದರಿ ಅನಗತ್ಯ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ಬಳಿ ಹೋಗಿ ಕೂಡ ದೊಡ್ಡ ದೊಡ್ಡ ಸಮಸ್ಯೆಗಳ ಟೆಸ್ಟ್ ಮಾಡಿಸಿ ಹಣ ಕರ್ಚು ಮಾಡಿಕೊಳ್ಳುವುದು, ಏನೋ ಕಂಡುಹಿಡಿಯಲು ಆಗದ ರೋಗ ಇದೆ ಎಂದು ಹೆದರಿ ಹೋಗುವುದು ಇದನ್ನು ಸೈಬರ್ ಕೊಂಡ್ರಿಯಾ ಎಂದು ಕರೆಯುತ್ತೇವೆ. ಕೊನೆಗೆ ನೋಡಿದರೆ ಅದು ಒಂದು ಬಗೆಯ ಆತಂಕದ ರೋಗವಾಗಿರುತ್ತದೆ.

ಈ ಸಮಸ್ಯೆಗೆ ಮುಖ್ಯ ಚಿಕಿತ್ಸೆ ಆಗಬೇಕಿರುವುದು ನಮ್ಮ ವೈದ್ಯಕೀಯ ವ್ಯವಸ್ಥೆಗೆ. ಇಂದು family doctor ಅಂದರೆ ಕುಟುಂಬ ವೈದ್ಯ ಎಂಬ ಕಾನ್ಸೆಪ್ಟ್ ಹೋಗಿ ಬಿಟ್ಟಿದೆ. ಹಿಂದೆ ಊರೂರುಗಳಲ್ಲಿ ಸಿಗುತ್ತಾ ಇದ್ದ mbbss ವೈದ್ಯರು ಕಾಣೆಯಾಗಿದ್ದಾರೆ. ಹೆಚ್ಚಿನ ಯುವ ವೈದ್ಯರು ಸಣ್ಣ ಊರುಗಳಲ್ಲಿ ಕ್ಲಿನಿಕ್ ಪ್ರಾಕ್ಟೀಸ್ ಮಾಡಲು ಒಪ್ಪುತ್ತಾ ಇಲ್ಲ. ಜನರು ಕೂಡ ಈಗ ರೋಗಗಳ ಬಗ್ಗೆ ಇಂಟರ್ನೆಟ್ ನಲ್ಲಿ ಓದಿ ದೊಡ್ಡ ವೈದ್ಯರು ದೊಡ್ಡ ಆಸ್ಪತ್ರೆಗಳು ದುಬಾರಿ ಪರೀಕ್ಷೆಗಳ ಹಿಂದೆ ಬಿದ್ದಿದ್ದಾರೆ. ಇನ್ನು ವೈದ್ಯರ ಪಾಡು ಹೇಳತೀರದು. ಅನಗತ್ಯ ಪರೀಕ್ಷೆಗಳು ಈ Google ವೈದ್ಯರ ಸಮಾಧಾನ ಪಡಿಸಲು ಬರೆಯಬೇಕಾಗಿದೆ. ಹಾಗೆಯೇ ಹಳೆಯ ಕಾಲದ ಕಡಿಮೆ ಬೆಲೆಯ ಮದ್ದನ್ನು ಉಪಯೋಗಿಸಿ ಗುಣಪಡಿಸಬಹುದು ಎಂಬ ವಿಷಯ ಗೊತ್ತಿದ್ದರೂ ಕೂಡ ಈ Google ವೈದ್ಯರಿಗೆ ಹೆದರಿ ಇತ್ತೀಚಿನ ಚಿಕಿತ್ಸೆ, ಇತ್ತೀಚಿನ ಮಾತ್ರೆ ಕೊಡಬೇಕಾಗುತ್ತದೆ. ಅನಗತ್ಯವಾಗಿ ಹೆಚ್ಚು ಹೆಚ್ಚು ಮಾತ್ರೆಗಳನ್ನು ಬರೆಯಬೇಕಾಗುತ್ತದೆ.

ಇಂದಿಗೂ ಕೆಲವು ಮುಂದುವರೆದ ದೇಶಗಳಲ್ಲಿ family doctor ಅಥವಾ general practitioner ಗಳ ಮೂಲಕವೇ ಸ್ಪೆಷಲಿಸ್ಟ್ ವೈದ್ಯರು ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಬಳಿ ಹೋಗುವ ಪದ್ಧತಿ ಇದೆ. ಹಾಗೆಯೇ ಆ ವೈದ್ಯರು ಯಾವ ಯಾವ ಮಾತ್ರೆ ಉಪಯೋಗಿಸಬಹುದು ಎಂಬ ಬಗ್ಗೆ ಅವರಿಗೆ ಕಾಯ್ದೆಗಳು ಇರುತ್ತದೆ. ಇದರಿಂದಾಗಿ ರೋಗಿಗಳು ಅನಗತ್ಯವಾಗಿ ಸ್ಪೆಷಲಿಸ್ಟ್‌ಗಳ ಬಳಿ ಹೋಗುವುದು, ಅನಗತ್ಯ ಟೆಸ್ಟ್ ಮಾಡಿಸುವುದು ಸಾಧ್ಯವಿಲ್ಲ. ನಿಮ್ಮ ಕಾಯಿಲೆ ಬಗ್ಗೆ ಅರಿವು ಅಗತ್ಯ ಆದರೆ ತಪ್ಪು ಅರಿವು ಸಾಕಷ್ಟು ತೊಂದರೆ ಉಂಟುಮಾಡಬಹುದು ನೆನಪಿನಲ್ಲಿ ಇಡೀ.

ಇಷ್ಟೆಲ್ಲಾ ಬರೆಯಲು ಕಾರಣ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಅವರ 75 ವರುಷದ ತಂದೆಯನ್ನು ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದು ನಮ್ಮ duty doctor ಅವರಿಗೆ ಆ ಟೆಸ್ಟ್ ಮಾಡಿಸಿ ಈ ಟೆಸ್ಟ್ ಮಾಡಿಸಿ ಅಂತ ತಮ್ಮ phoneನೋಡಿ ಕೊಂಡು ಹೇಳುತ್ತಾ ಇದ್ದರು. ನನ್ನನು ನೋಡಿದ ಕೂಡಲೇ ಸ್ವಲ್ಪ ತಣ್ಣಗೆ ಆಗಿ ಪರಿಚಯದ ನಗುವಿನೊಂದಿಗೆ ಮಾತಾಡಿದರು. ಅವರ ತಂದೆ ಆರೋಗ್ಯವಾಗಿದ್ದಾರೆ ಆದರೆ ಬೆಂಗಳೂರಿನಲ್ಲಿ ಸುಸ್ತು ಎಂದು ಹೇಳಿದ್ದರಿಂದ ವೈದ್ಯರು ಪರೀಕ್ಷೆ ಮಾಡಿ bp ಜಾಸ್ತಿ ಇದೆಯೆಂದು ಅಮ್ಲೋಡಿಪಿನೆ (amlodepine 2.5mg) ಬರೆದು ಕೊಟ್ಟಿದ್ದರಂತೆ. ಇಂದು ನೋಡಿದರೆ ಕಾಲು ಊತಾ ಇದೆಯಂತೆ. ಅವರ Google ಪ್ರಕಾರ ಇದು kidney ಸಮಸ್ಯೆ ಲಕ್ಷಣ ಅಂತೆ, ಅದಕ್ಕೆ ನಮ್ಮ ಕಿರಿಯ ವೈದ್ಯರ ಮೇಲೆ rft ಅಂದರೆ ಕಿಡ್ನಿ ಫಂಕ್ಷನ್ ಟೆಸ್ಟ್ ಮಾಡಿಸಿ, ಮೂತ್ರ ಟೆಸ್ಟ್ ಮಾಡಿಸಿ ಅಂತ ಒತ್ತಯಮಾಡುತ್ತ ಇದ್ದರು. ನಿಜವಾಗಿ ನೋಡಿದರೆ ಅದು ಅವರಿಗೆ ಇತ್ತೀಚೆಗೆ ಕೊಟ್ಟ amlodepine ಮಾತ್ರೆಯ ಸೈಡ್ ಎಫೆಕ್ಟ್, ಇದನ್ನೇ ನಮ್ಮ ಕಿರಿಯ ವೈದ್ಯರು ಹೇಳಲು ಪ್ರಯತ್ನ ಪಡುತ್ತಾ ಇದ್ದರು ಆದರೆ ಇವರು ಕೇಳುವ ಮನಸ್ಸಿನಲ್ಲಿ ಇರಲ್ಲಿಲ, ಏನೋ ನಾನು ಪರಿಚಯ ಇದ್ದ ಕಾರಣ ನನಗೆ ಮಾತನಾಡಲು ಅವಕಾಶ ಮಾಡಿದರು, ನಾನು ವಿವರಿಸಿ ಅವರ ಬಿಪಿ ಮಾತ್ರೆ ಬದಲು ಮಾಡುವ ನಮ್ಮ ಕಿರಿಯ ವೈದ್ಯರ ನಿರ್ಧಾರ ತಿಳಿಸಿದೆ. ಮುಂದಿನ ವಾರ ಬರುವಾಗ ಯಾವ ಊತವು ಇಲ್ಲ, ಅನಗತ್ಯ ಪರೀಕ್ಷೆಯು ಇಲ್ಲ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!