Sunday, September 8, 2024

ಶಿಕ್ಷಕರೇ ನಿರ್ಮಿಸಿದ ಚಲನಚಿತ್ರ ‘ಸುಗಂಧಿ’ ಬಿಡುಗಡೆಗೆ ಸಿದ್ಧ

ಕೋಟ: ಶಿಕ್ಷಕರು ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿ ಸಧೃಡ ಸಮಾಜ ನಿರ್ಮಿಸುವ ಶಿಲ್ಪಿಗಳಂತೆ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದುದು ಸುಳ್ಳಲ್ಲ. ಶಿಕ್ಷಕರು ಮಕ್ಕಳಿಗೆ ಗುರುಗಳಾಗಿ, ಸಮಾಜಕ್ಕೆ ಆದರ್ಶನೀಯರಾಗಿ ಸೇವೆ ಸಲ್ಲಿಸುತ್ತಿರುವುದನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ. ಆದರೆ ಇಲ್ಲೊಂದಿಷ್ಟು ಶಿಕ್ಷಕ ಸ್ನೇಹಿತರು ಒಂದು ಹೆಜ್ಜೆ ಮುಂದಿಟ್ಟು ಮಕ್ಕಳ ಮನಸ್ಸನ್ನು ಕೇಂದ್ರೀಕೃತವಾಗಿಟ್ಟುಕೊಂಡು ಚಲನಚಿತ್ರ ನಿರ್ಮಾಣಕ್ಕೆ ಒಂದು ಹೆಜ್ಜೆಯನ್ನಿಟ್ಟು ಯಶಸ್ಸು ಕಂಡವರು. ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿಯಂತೆ ಸದಾ ಹೊಸತನದತ್ತ ಮುಖ ಮಾಡುವ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಹಾಗೂ ಅವರ ಶಿಕ್ಷಕ ಸ್ನೇಹಿತ ತಂಡದವರು.

ಸಮಾನ ಮನಸ್ಕ ಕಲಾತ್ಮಕ ದೃಷ್ಠಿಕೋನ ಉಳ್ಳ ಶಿಕ್ಷಕರೇ ಸೇರಿ ನಿರ್ಮಿಸಿರುವಂತಹ ಒಂದು ಕಲಾತ್ಮಕ ಚಿತ್ರ ಸುಗಂಧಿ. ಸಂಭಾಷಣೆಯನ್ನು ಬರೆದು ಚಿತ್ರೀಕರಣದ ಸಂಪೂರ್ಣ ಮೇಲ್ವಿಚಾರಣೆಯನ್ನು ಹೊತ್ತಿರುವಂತಹ ಶಿಕ್ಷಕ ಸಮುದಾಯ ಶೈಕ್ಷಣಿಕ ವಿಷಯ ವಸ್ತುವನ್ನು ಆರಿಸಿಕೊಂಡು ನಿರ್ಮಿಸಿರುವ ಈ ಚಿತ್ರ ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿದೆ. ಶಿಕ್ಷಣದ ಹೊಸ ಸಾಧ್ಯತೆಗಳನ್ನು ಸುಗಂಧಿ ಸಿನಿಮಾ ತೆರೆದಿಡುತ್ತದೆ. ಕಾರಣ ಏನೆಂದರೆ ಸಾಂಪ್ರಾದಾಯಕ ಶಿಕ್ಷಣಕ್ಕಿಂತ ಹೊರತಾದ ಶಿಕ್ಷಣವು ಮಗುವಿನಲ್ಲಿ ಅಡಗಿರುವಂತಹ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಿದೆ ಎನ್ನುವುದನ್ನು ಸುಗಂಧಿ ಚಲನಚಿತ್ರ ಸಾಧಿಸಿ ತೋರಿಸಿದೆ.

ಡಾ. ಕಾರಂತರನ್ನು ಮುಂದಿನ ಪೀಳಿಗೆಗೆ ಹೇಗೆ ಪರಿಚಯಿಸಬಹುದು ಎನ್ನುವ ವಿಷಯವನ್ನಿಟ್ಟುಕೊಂಡು ಕಾರಂತರ ಕಾದಂಬರಿ ಹೆಸರು ಅಳಿದ ಮೇಲೆ ಎನ್ನುವ ಹಾಗೆ ಅಳಿದ ಮೇಲೂ ಅವರು ಹೇಗೆ ನಮ್ಮೊಳಗೆ ಸಮಾಜದ ಮುಂದೆ ಭಾವನಾತ್ಮಕ ಬೆಸುಗೆಯೊಂದಿಗೆ ಜೊತೆಗಿರಬಹುದು ಎನ್ನುವುದನ್ನು ಇವರ ಸಿನಿಮಾ ಸುಗಂಧಿಯಲ್ಲಿ ನೋಡಬಹುದು. ಸುಗಂಧಿ ಚಲನಚಿತ್ರ ಕೇವಲ ಮನೋರಂಜನೆ ನೀಡುವ ಸಿನಿಮಾ ಆಗದೆ ಮಕ್ಕಳ ಮನಸ್ಸಿನಲ್ಲಿ ನಾವೇನಾದರೂ ಸಾಧಿಸಲು ಸಾಧ್ಯ ಎನ್ನುವ ಹುರುಪು ಹೆಚ್ಚಿಸುವುದಲ್ಲದೆ, ಕರಾವಳಿ ಭಾಗದ ಜನಮಾನಸದಲ್ಲಿ ಎಂದೂ ಬತ್ತದ ಶ್ರೇಷ್ಠ ಕಲೆ ಯಕ್ಷಗಾನದ ಹಿರಿಮೆ ಸಾರುವುದರ ಜೊತೆಗೆ, ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುವ ಸಾರಾಂಶ ನೀಡುವ ಚಿತ್ರವಿದು.

ಎಲ್ಲೊ ಒಂದು ಕಡೆ ಕಲೆಗೆ ಸಿರಿತನ-ಬಡತನ ಎನ್ನುವ ಭೇದ ಇಲ್ಲ ಎನ್ನುವ ಭಾವನೆ ಮೂಡಿಸುವ ಪ್ರಯತ್ನ ಸಿನಿಮಾದ್ದು ಇರಬಹುದು. ಒಂದು ಬಡ ಕುಟುಂಬದ ಹುಡುಗಿ ಯಕ್ಷಗಾನ ಹಾಗೂ ಕಾರಂತರಿಂದ ಪ್ರೇರಣೆ ಹೊಂದಿ ನಾನಾ ತೊಡಕು ಅವಮಾನದಿಂದ ಬೆಂದರೂ ಛಲ ಬಿಡದೆ ನಿಂದಿಸಿದವರೇ ಸನ್ಮಾನಿಸುವ ಹಾಗೆ ಸಾಧನೆ ಮಾಡಿ ಸಮಾಜಕ್ಕೆ ಒಂದು ಮಾದರಿಯಾಗುವ ಛಲಗಾರ್ತಿ. ಕಲೆಗೆ ಗೌರವ ನೀಡಿ ಆರಾಧಿಸಿ ತಮ್ಮ ಶಿಷ್ಯರಿಗೆ ಧಾರೆ ಎರೆಯುವ ಗುರುಗಳು ಒಂದು ಕಡೆ ಆದರೆ, ಕಲೆಯನ್ನು ಮನೋರಂಜನೆಗೆ ಬಳಸಿ ತಮ್ಮ ಸಂಪಾದನೆ ಹೆಚ್ಚಿಸಿಕೊಳ್ಳುವ ಶ್ರೀಮಂತ ವರ್ಗ ಇನ್ನೊಂದು ಕಡೆ. ಇದೆಲ್ಲವೂ ಸುಗಂಧಿ ಚಲನಚಿತ್ರದಲ್ಲಿ ನೋಡಬಹುದಾಗಿದೆ.
ಇದೊಂದು ಅಪರೂಪವಾದ ವಿಶಿಷ್ಟವಾದ ಚಿತ್ರಕಥೆ ಹೊಂದಿರುವ ಸಿನಿಮಾವಾಗಿದ್ದು ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಜಿ. ಮೂರ್ತಿ ಅವರ ಕಲಾ ಕುಸುಮದಲ್ಲಿ ಮೂಡಿ ಬಂದಿರುವಂತಹ ನೆನಪು ಮೂವೀಸ್ ಕೋಟ ಅತ್ಯಂತ ಉತ್ತಮವಾದ ಚಿತ್ರ ನಿರ್ಮಿಸಿದೆ. ಒಂದು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದಕ್ಕೆ ಸಾಧ್ಯವಾಗಿದೆ. ವಿನಯ ಪ್ರಸಾದ್ ಅವರ ಬಡ ಮಹಿಳೆಯ ಪಾತ್ರ ಭಾವನಾತ್ಮಕ ಸ್ಪರ್ಶ ನೀಡಿದ್ದು ಹಾಗೂ ಸ್ಥಳೀಯ ಕಲಾವಿದರ ಮನೋಜ್ಞ ಅಭಿನಯ ತುಂಬಾ ಸೊಗಸಾಗಿದೆ. ಮಗುವಿನ ಆಸಕ್ತಿಯನ್ನು ಗುರುತಿಸಿ ಅದರ ಮೂಲಕ ಶಿಕ್ಷಣವನ್ನು ನೀಡಿದರೆ ಬಹುಶಃ ಮಗು ಯಾವ ಎತ್ತರಕ್ಕೂ ಏರಬಹುದು ಎನ್ನುವುದನ್ನು ಸಾಧಿಸಿ ತೋರಿಸಿದೆ. ಶಿವರಾಮ ಕಾರಂತರ ಶಿಷ್ಯರಾಗಿರುವಂತಹ ಬನ್ನಂಜೆ ಸಂಜೀವ ಸುವರ್ಣ ಅವರ ಗುರುವಿನ ಪಾತ್ರ ಮನ ಮೆಚ್ಚುವಂತೆ ಅಭಿನಯಿಸಿದ್ದಾರೆ. ಗುರುಗಳ ಸಾಂಗತ್ಯ, ಗುರುಗಳ ಸಾಮಿಪ್ಯ ದೊರೆತರೆ ಎಂತಹ ವಿದ್ಯಾರ್ಥಿಗಳು ಕೂಡಾ ಅದ್ಭುತವಾದುದು ಸಾಧಿಸಿ ತೋರಿಸಿ ಕೊಡಬಹುದು ಎಂಬುದನ್ನು ಈ ಚಿತ್ರ ಸಾರುತ್ತದೆ. ಅಲ್ಲದೇ ಮುಖ್ಯವಾಗಿ ಶಿವರಾಮ ಕಾರಂತರನ್ನು ಒಂದು ಪ್ರತಿಮೆಯಾಗಿಟ್ಟುಕೊಂಡು ಅವರಿಂದ ಪ್ರೇರಣೆಗೊಂಡು ಮಗು ಕಲಿಯುತ್ತಾ ಹೋಗುವುದು ಮಗುವಿನ ಆಸಕ್ತಿ ಬೆಳೆಸಿಕೊಂಡು ಅದರಲ್ಲೆ ಯಶಸ್ಸನ್ನು ಕಾಣುವ ವಿಷಯಾಧಾರಿತ ಒಂದು ಉತ್ತಮ ಚಿತ್ರಕಥೆ.

ಡಾ. ಶಿವರಾಮ ಕಾರಂತರ ಬದುಕೇ ಒಂದು ಚರಿತ್ರೆ. ಅವರನ್ನು ಮುಂದಿನ ಸಮಾಜಕ್ಕೆ ಹೇಗೆ ಅರ್ಥಪೂರ್ಣವಾಗಿ ತೋರಿಸುವುದು ಎನ್ನುವುದಕ್ಕೆ ಈ ಚಲನಚಿತ್ರ ಸಾಕ್ಷಿಯಾಗುವುದರಲ್ಲಿ ಸಂಶಯವಿಲ್ಲ.

ಕನ್ನಡ ಚಿತ್ರರಂಗದ ಹೆಸರಾಂತ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ದಿ. ಜಿ.ಮೂರ್ತಿ ಚಿತ್ರಕಥೆ ಜೊತೆಗೆ ನಿರ್ದೇಶಿಸಿದ್ದು, ನಿರ್ಮಾಪಕ ನರೇಂದ್ರ ಕುಮಾರ್ ಹಾಗೂ ಸತೀಶ್ ವಡ್ಡರ್ಸೆ ಸಂಭಾಷಣೆ ಬರೆದಿದ್ದಾರೆ. ಕ್ಯಾಮರ ಪಿ.ಕೆ.ದಾಸ್ ಮಾಡಿದ್ದು ಸಂಗೀತ ಪ್ರವೀಣ್ ಗೋಡ್ಕಿಂಡಿ ನಿರ್ಮಿಸಿದ್ದಾರೆ. ಜೂನ್ ಕೊನೆಯ ವಾರ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಜುಲೈ ತಿಂಗಳಿನಿಂದ ಕೋಟದ ಕಾರಂತ ಥೀಮ್ ಪಾರ್ಕ್‌ನ ಪ್ರತಿ ಶನಿವಾರ ಆದಿತ್ಯವಾರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!