spot_img
Wednesday, January 22, 2025
spot_img

ಜಲಜೀವನ್ ಮಿಷನ್ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಮುಕ್ತಾಯಗೊಳಿಸಿ- ಜಿ.ಪಂ. ಸಿಇಒ ಪ್ರಸನ್ನ ಹೆಚ್.

ಉಡುಪಿ, ಜೂ10: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಜಿಲ್ಲೆಯಲ್ಲಿ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ, ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಶುದ್ಧ ನಳ್ಳಿ ನೀರು ಸಂಪರ್ಕ ಒದಗಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಸೂಚಿಸಿದರು.

ಅವರು ಜಿ.ಪಂ. ಕಚೇರಿಯಲ್ಲಿ ನಡೆದ, ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯತ್‌ಗಳ 246 ಗ್ರಾಮಗಳಲ್ಲಿನ 2,42,526 ಮನೆಗಳ ಒಟ್ಟು 10,32,277 ಜನರಿಗೆ ದೈನಂದಿನ ಬಳಕೆಗಾಗಿ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದ್ದು, ಈ ಬಗ್ಗೆ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು 2023 ನೇ ಸಾಲಿನ ಒಳಗೆ ಮುಗಿಸಿ, ನಿಗಧಿತ ಅವಧಿಯೊಳಗೆ ಗುರಿ ಸಾಧನೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ನೀಡಿದ ನಂತರ, ನೀರಿನ ಸಮರ್ಪಕ ಬಳಕೆ ಕುರಿತು ಪರಿಶೀಲಿಸಲು ಪ್ರತಿ ಮನೆಗಳಿಗೆ ಮೀಟರ್ ಅಳವಡಿಸುವಂತೆ ಹಾಗೂ ಅನಗತ್ಯವಾಗಿ ನೀರು ಪೋಲಾಗದಂತೆ ಅರಿವು ಮೂಡಿಸಿ, ಆಗಾಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಈಗಾಗಲೇ ನಿಟ್ಟೆಯಲ್ಲಿ ಎಂ.ಆರ್.ಎಫ್ ಘಟಕವನನ್ನು ಆರಂಭಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲಾಗುತ್ತಿದ್ದು, ಇದುವರೆಗೆ 1000 ಟನ್ ಗೂ ಅಧಿಕ ಪ್ಲಾಸ್ಟಿಕ್ ಕಸವನ್ನು ವಿಲೇವಾರಿ ಮಾಡಲಾಗಿದೆ. ಇನ್ನೂ 1 ಮಿನಿ ಎಂ.ಆರ್.ಎಫ್ ಘಟಕ ಆರಂಭಿಸಲು ಟೆಂಡರ್ ಕರೆಯಲಾಗಿದ್ದು, 2 ಮಿನಿ ಎಂ.ಆರ್.ಎಫ್ ಘಟಕ
ಆರಂಭಿಸಲು ಮಂಜೂರಾತಿಗೆ ಕಳುಹಿಸಲಾಗಿದೆ.

ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು ಮತ್ತು ಪಿಡಿಓ ಗಳಿಗೆ ನಿಟ್ಟೆ ಎಂ.ಆರ್.ಎಫ್ ಘಟಕಕ್ಕೆ ಆಹ್ವಾನಿಸಿ, ಘಟಕದ ಕಾರ್ಯನಿರ್ವಹಣೆ ಬಗ್ಗೆ ಸವಿವರಣೆ ಮತ್ತು ಪ್ರಾತ್ಯಕ್ಷಿಕೆ ತೋರಿಸಲಾಗಿದ್ದು, ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಸಮರ್ಪಕ
ರೀತಿಯಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಮಾಡಲು ಹೆಚ್ಚಿನ ಗಮನಹರಿಸುವಂತೆ ಸೂಚಿಸಿದರು.

ಮನೆಗಳಲ್ಲಿ ತ್ಯಾಜ್ಯದ ನಿರ್ವಹಣೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಿ, ಅದನ್ನು ತಮ್ಮ ಮನೆಗಳಲ್ಲಿ ಅನುಷ್ಠಾನಗೊಳಿಸುವಂತೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!