Sunday, September 8, 2024

“ಹದಿನಾರರ ವಯಸ್ಸು ಹುಚ್ಚು ಕೋಡಿ ಮನಸ್ಸು”


ಡ್ರಗ್ಸ್‌ಗೆ ಬಲಿಯಾಗಿರುವ ಯುವಕನೊಬ್ಬನ ಬಗ್ಗೆ ಬೆಳಗ್ಗಿನಿಂದ ಯೋಚನೆ ಮಾಡುವಾಗ ಈ ಹದಿಹರೆಯದ ಬಗ್ಗೆ ಯೋಚನೆಯಾಯಿತು. ಹದಿಹರೆಯದಲ್ಲಿ ಮನಸ್ಸು ಬಹಳ ಚಂಚಲವಾಗಿರುತ್ತದೆ. ಸಮಾಜದ ಕಟ್ಟಳೆಗಳನ್ನು ವಿರೋಧಿಸಬೇಕು ಎಂಬ ಭಂಡ ಧೈರ್ಯ. ಅಪ್ಪ, ಅಮ್ಮ, ಗುರು, ಹಿರಿಯರು ಕುಡಿಯಬಾರದು ಸಿಗರೇಟ್ ಸೇದಬಾರದು ಅಂತ ಹೇಳ್ತಾರೆ ಅದನ್ನು ಮಾಡಿಯೆ ನೋಡಬೇಕು, ಮಿತ್ರರನ್ನು ಮೆಚ್ಚಿಸಬೇಕು ಎಂಬ ಚಪಲ. ಆ ಕಾರಣದಿಂದ ಮದ್ಯವ್ಯಸನ, ತಂಬಾಕು ಮತ್ತು ಗಾಂಜಾ ಸೇವನೆ, ಮುಂತಾದ ವಿಷಯಗಳಲ್ಲಿ ಮಿತ್ರರು ಹೇಳಿದ ಹಾಗೆ ಮಾಡುವುದು ಸ್ವಾಭಾವಿಕವಾಗಿ ನೋಡುತ್ತೇವೆ. ಈ ವಯಸ್ಸಿನಲ್ಲಿ ಕುತೂಹಲ ಮತ್ತು ಪ್ರಯೋಗ ಮನೋಭಾವ ಕೂಡ ಜಾಸ್ತಿ. ಈ ವಯಸ್ಸಿನಲ್ಲಿ ಹಲವು ರೀತಿಯ ಕೆಲಸಗಳನ್ನು ಒಮ್ಮೆಲೇ ಮಾಡುವ, ಸಮಸ್ಯೆಗಳನ್ನು ಬಗೆಹರಿಸುವ, ಹಾಗೂ ಕ್ಲಿಷ್ಟವಾದ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಯುವಕರಲ್ಲಿ ಇರುತ್ತದೆ. ಯಾವುದಾದರೂ ಹೊಸ ವಿಷಯವನ್ನು ಕಲಿತು ಅದನ್ನು ಜೀವನದಾದ್ಯಂತ ಬೆಳೆಸಿಕೊಳ್ಳುವ ಪೋಷಿಸುವ ಶಕ್ತಿ ಅವರಲ್ಲಿ ಇರುತ್ತದೆ. ಈ ವಯಸ್ಸಿನಲ್ಲಿ ತಮ್ಮದೇ ಆದ ಒಂದು ಅಸ್ತಿತ್ವಕ್ಕಾಗಿ ಈ ಯುವಕರು ಹೋರಾಡುತ್ತಾರೆ. ತಾವು ಸ್ವತಂತ್ರವಾಗಿರಲು ಬಯಸುತ್ತಾರೆ. ಹಲವಾರು ಹಿರಿಯರನ್ನು ನೋಡಿ ಅವರ ಹಾಗೆ ಆಗಬೇಕು ಎಂಬ ಹಂಬಲ ಉಂಟಾಗುತ್ತದೆ.

ಅಣ್ಣಾಮಲೈ, ಸೆಂಥಿಲ್, ರವಿ ಚನ್ನಣ್ಣವರ್, ರೂಪಾ.ಡಿ ತರಹದ ಅಧಿಕಾರಿಗಳು, ಇವರ ಮನಸ್ಸಿಗೆ ಬಂದ “ಇಸಂ”ಗಳು ಹಾಗೂ ಪ್ರಚೋದನೆಗಳ ಕಾರಣದಿಂದ ಇಷ್ಟವಾಗಲು ಶುರುವಾಗುತ್ತಾರೆ. ಹಾಗೆಯೇ ಸಿನಿಮಾ ತಾರೆಯರು ಕೂಡ ಇಷ್ಟವಾಗುತ್ತಾರೆ. ಕೆಲವೊಮ್ಮೆ ಕೆಲವು ಯೂತ್ ಐಕಾನ್‌ಗಳು. ಹುಡುಗಿಯರು ಕತ್ರಿನಾ ಕೈಫ್ ಬಗ್ಗೆ ಯೋಚನೆ ಮಾಡಿದರೆ ಹುಡುಗರು ಅಕ್ಷಯ್ ಕುಮಾರ್ ಆಗಬೇಕು ಸುಶಾಂತ್ ಸಿಂಗ್ ರಜ್ಪೂತ್ ಆಗಬೇಕು ಎಂದು ಯೋಚಿಸುತ್ತಾರೆ. ಹದಿಹರೆಯ ಹತ್ತೊಂಬತ್ತು ವರ್ಷಕ್ಕೆ ಮುಗಿಯುತ್ತಿದ್ದರೂ ಈ ನಡುವೆ ವಿಜ್ಞಾನಿಗಳು ವ್ಯಕ್ತಿಗೆ ಇಪ್ಪತ್ತೈದು ವರ್ಷ ಆಗುವವರೆಗೆ ಮಿದುಳಿನ ನರಕೋಶಗಳಲ್ಲಿ ಬದಲಾವಣೆಗಳನ್ನು ಗಮನಿಸಿದ್ದಾರೆ. ಈ ವಯಸ್ಸು ಸೃಜನಶೀಲತೆ ಬೆಳೆಯುವ ವಯಸ್ಸಾಗಿದ್ದರೂ ಕೂಡಾ ಈ ವಯಸ್ಸಿನಲ್ಲಿ ಏನಾದರೂ ಮಾನಸಿಕ ಆಘಾತಗಳು. ಅಂದರೆ ಸಣ್ಣ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯ ಅಥವಾ ದೈಹಿಕ ದಂಡನೆ ಇದರ ಬಲಿಪಶುಗಳಾದರೇ ಇವುಗಳು ಮಾನಸಿಕ ಆಘಾತಕ್ಕೆ ಒಳಗಾಗಿ ಈಗ ಕಾಲಿಕ ಒತ್ತಡಗಳಿಗೆ ಬಲಿಯಾಗುತ್ತಾರೆ. ಹಲವರು ಈ ದೆಸೆಯಿಂದ ಮಾದಕ ದ್ರವ್ಯ ಸೇವನೆ, ಕುಡಿತ ಗುಟ್ಕಾ ಸೇವನೆ ಮುಂತಾದವುಗಳನ್ನು ಮಾಡಲು ಶುರು ಮಾಡುತ್ತಾರೆ. ಈ ಮದ್ಯ, ಮಾದಕ ದ್ರವ್ಯ ವ್ಯಸನಿಗಳು ಹದಿಹರೆಯದ ಮೆದುಳಿನ ಒಟ್ಟಾರೆ ವಿಕಾಸ ಮತ್ತು ಸ್ವಭಾವ ರೂಪಿಸುವುದರಲ್ಲಿ ಕೂಡ ಪಾತ್ರ ವಹಿಸುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಹಲವು ಸಂಶೋಧನೆಗಳ ಪ್ರಕಾರ ಮನೋರೋಗ ತಜ್ಞರ ಹತ್ತಿರ ಬರುವ ರೋಗಿಗಳಲ್ಲಿ ಶೇ 16 ಹದಿಹರೆಯದವರು. ಈ ಹದಿಹರೆಯದವರು ಹೆಚ್ಚಾಗಿ ಮಾನಸಿಕ ಖಿನ್ನತೆ, ಮೂಡ್ ಡಿಸಾರ್ಡರ್ಸ್ ಅಂದರೆ ವ್ಯಕ್ತಿಯ ಮೂಡ್ ಅಥವಾ ಮನೋಸ್ಥಿತಿ ಮತ್ತು ಭಾವನೆಗಳ ನಿಯಂತ್ರಣದಲ್ಲಿ ಏರುಪೇರಾಗುವುದು, ಉದ್ವೇಗ ಮಾನಸಿಕ ಕಿರಿಕಿರಿ ಹತಾಶ ಮನೋಭಾವದಿಂದ ಭಾವನಾತ್ಮಕ ಸಮಸ್ಯೆಗಳು ಉಂಟಾಗುವುದು, ಕೆಲವೊಮ್ಮೆ ಕಾರಣ ಇಲ್ಲದೇ ಹೊಟ್ಟೆ ನೋವು ತಲೆ ನೋವು ತಲೆ ಸುತ್ತುವುದು. ಈ ಬಗ್ಗೆ ಹಲವಾರು ದೈಹಿಕ ತಪಾಸಣೆಗಳು ನಡೆದು ಅದರಲ್ಲಿ ಏನೂ ಸಮಸ್ಯೆಗಳು ಇಲ್ಲದೆ ಕೊನೆಗೆ ಈ ಸಮಸ್ಯೆಗಳ ಉಗಮ ಮನಸ್ಸಿನ ಯಾವುದೋ ಒಂದು ಬೇಸರದ ಘಟನೆಯಲ್ಲಿ ಇದೆ ಅನ್ನುವುದು ತಿಳಿಯುವುದು. ಇದನ್ನು ನಾವು ಮನೋದೈಹಿಕ ಸಮಸ್ಯೆಗಳು ಎಂದು ಹೇಳುತ್ತೇವೆ.

ಹಲವು ಹದಿಹರೆಯದವರು ಕಲಿಕೆ, ಶಿಕ್ಷಣ, ಶಾಲೆಯ ಹಾಜರಾತಿ ಮುಂತಾದವುಗಳಲ್ಲಿ ಸಮಸ್ಯೆ ಅನುಭವಿಸುತ್ತಾರೆ. ಈ ಸಮಸ್ಯೆಗಳನ್ನು ಬೇರೆಯವರೊಂದಿಗೆ ಚರ್ಚಿಸದೆ ಸಮಾಜದಿಂದ ಹಿಮ್ಮುಖವಾಗಿ ನಡೆಯುತ್ತಾ ಒಂಟಿ ಜೀವಿಗಳಾಗುತ್ತಾರೆ. ಹಲವರು ಕೀಳರಿಮೆಯಿಂದ ಸಾಮಾಜಿಕ ಆತಂಕ, ಪರೀಕ್ಷಾ ಆತಂಕ ಮುಂತಾದವುಗಳನ್ನು ಹೊಂದಿ ಜೀವನದಲ್ಲಿ ಪ್ರಗತಿ ಕಾಣದೆ ನಿರಾಶರಾಗುತ್ತಾರೆ. ವಿಚಿತ್ರವೆಂದರೆ ಕೆಲವರಲ್ಲಿ ಕೀಳರಿಮೆ ಬೇರೆ ರೀತಿಯಲ್ಲಿ ಪ್ರಕಟಗೊಳ್ಳುತ್ತದೆ. ಹಿರಿಯರ ವಿರುದ್ಧ ಅಶಿಸ್ತಿನಿಂದ ವರ್ತಿಸುವುದು, ಹಿರಿಯರಿಗೆ ಸವಾಲು ಹಾಕುವುದು, ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವುದು, ಟೀಚರ್‌ಗಳನ್ನು ತಮಾಷೆ ಮಾಡುವುದು ಮುಂತಾದವುಗಳನ್ನು ಮಾಡತೊಡಗುತ್ತಾರೆ. ಕೆಲವು ಮಕ್ಕಳಲ್ಲಿ ತಮ್ಮ ದೇಹದ ಬೇರೆ ಬೇರೆ ಅಂಗಾಂಗಗಳ ಬಗ್ಗೆ ವಿಚಿತ್ರವಾದ ವ್ಯಾಮೋಹ. ನನ್ನ ಮೂಗು ಸರಿ ಇಲ್ಲ, ನನ್ನ ಹಲ್ಲು ಉಬ್ಬು, ಮುಖದಲ್ಲಿ ಮೊಡವೆ ಇದೇ ,ನನ್ನ ಬಾಡಿ ಸಿಕ್ಸ್ ಪ್ಯಾಕ್ಸ್ ಆಗಬೇಕು, ನನ್ನ ತಲೆ ಕೂದಲು ಉದ್ದ ನಿಲ್ಲಬೇಕು ಈ ಬಗ್ಗೆ ಅತಿಯಾಗಿ ಯೋಚಿಸಿ ಕೆಲವೊಮ್ಮೆ ಇದು ನೈಸರ್ಗಿಕವಾದ ಯೋಚನೆಯೋ ಅಥವಾ ಕಾಯಿಲೆಯೋ ಎಂಬ ಮಟ್ಟಿಗೆ ಬಂದು ತಲುಪುತ್ತದೆ. ಇದನ್ನು ಮನೋ ವೈದ್ಯರುಗಳು ನಾವು body dysmorphophobia ಎಂದು ಕರೆಯುತ್ತೇವೆ.

ಕೆಲವು ಹದಿಹರೆಯದವರು ತಮ್ಮನ್ನು ತಾವೇ ಘಾಸಿ ಮಾಡಿಕೊಳ್ಳುವುದು (ಸ್ವ ಹಾನಿ) ಇನ್ನು ಕೆಲವರು ಆತ್ಮಹತ್ಯೆಯ ಪ್ರಯತ್ನಗಳನ್ನು ಮಾಡುವುದು. ಜೋರಾಗಿ ಮೋಟಾರು ವಾಹನಗಳನ್ನು ಓಡಿಸುವುದು. ಅಪಘಾತಗಳಿಗೆ ಬಲಿಯಾಗುವುದು ಇವುಗಳನ್ನು ಪ್ರತಿದಿನ ಅನ್ನುವಂತೆ ಓದುತ್ತಿದ್ದೇವೆ.

ಇತ್ತೀಚೆಗೆ ನೋಡುತ್ತಿರುವ ಇನ್ನೊಂದು ಸಮಸ್ಯೆ ಎಂದರೆ ಅತಿಯಾದ ಮೊಬೈಲ್ ಬಳಕೆ, ಇಂಟರ್ನೆಟ್ ಮೇಲೆ ಅವಲಂಬನೆ, ಜೂಜು, ಕ್ರಿಕೇಟ್ ಬೆಟ್ಟಿಂಗ್, ಅಶ್ಲೀಲ ಚಿತ್ರಗಳ ಅತೀಯಾದ ವೀಕ್ಷಣೆ, ಅನಗತ್ಯ ವಸ್ತುಗಳ ಶಾಪಿಂಗ್ ಮುಂತಾದ ನಡುವಳಿಕೆ ಸಮಸ್ಯೆಗಳು.

ಈ ಒಟ್ಟಾರೆ ಸಮಸ್ಯೆಗಳ ಬಗ್ಗೆ ಯೋಚಿಸಿದರೆ ನಾವು ಹಿರಿಯರು ಪ್ರಾಥಮಿಕ ಹಂತದಲ್ಲೆ ಮನೋವೈದ್ಯಕೀಯ ಬದಲಾವಣೆಗಳ ಗಮನಿಸಿ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುವುದು. ಒಬ್ಬರನ್ನು ಇನ್ನೊಬರೊಂದಿಗೆ ಹೋಲಿಕೆ ಮಾಡದೇ ಬೆಳೆಸುವುದು, ಅವರಲ್ಲಿ ಇರುವ ನ್ಯೂನತೆಗಳನ್ನು ಒಪ್ಪಿಕೊಂಡು ಸಕಾರಾತ್ಮಕ ಬೆಳವಣೆಗೆಗೆ ಪ್ರಯತ್ನಿಸುವುದು, ಮಾನಸಿಕ ಖಾಯಿಲೆಗಳು ಇದೇ ಎಂದಾಗ ಅಗತ್ಯವಾಗಿ ಮನೋವೈದ್ಯಕೀಯ ಸಲಹೆ ಕೊಡಿಸಿ ತನ್ನ ಸಮಸ್ಯೆಗಳನ್ನು ಬದಿಗೊತ್ತಿ ಪುಟಿದೇಳುವಂತೇ ಮಾಡುವುದು, ಸಮಸ್ಯೆಯ ಬಗ್ಗೆ ಅನೂಭೂತಿ ಬೆಳೆಸಿಕೊಂಡು ಮಕ್ಕಳಲ್ಲಿ ಧೈರ್ಯವನ್ನು ಬೆಳೆಸಲು ಪ್ರಯತ್ನಿಸುವುದು ಮಾಡಬೇಕಿದೆ.

ಕವಿ ವೆಂಕಟೇಶ್ ಮೂರ್ತಿ ನೆನಪಾಗುತ್ತಾರೆ “ಹದಿನಾರರ ವಯಸ್ಸು ಹುಚ್ಚು ಕೋಡಿ ಮನಸ್ಸು”.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!