spot_img
Wednesday, January 22, 2025
spot_img

ಖೇಲೋ ಇಂಡಿಯಾದಲ್ಲಿ ಗಮನ ಸೆಳೆದ ಗ್ರಾಮೀಣ ಜನರ ‘ಮಲ್ಲಕಂಬ ಕ್ರೀಡೆ’

ಪಿ. ಎಸ್ ಜಗದೀಶ್ಚಂದ್ರ ಅಂಚನ್

ಭಾರತದ ದೇಶೀಯ ಸಾಂಪ್ರದಾಯಿಕ ಕ್ರೀಡೆಯಾಗಿ ಗುರುತಿಸಿಕೊಂಡಿರುವ ಮಲ್ಲಕಂಬ ಕ್ರೀಡೆ ಹಲವು ದೇಶಗಳಲ್ಲಿ ಜನಪ್ರಿಯವಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಮಲ್ಲಕಂಬಕ್ಕೆ ವಿಶಿಷ್ಟವಾದ ಸ್ಥಾನವಿದೆ. ರಾಜ್ಯದ ಗ್ರಾಮೀಣ ಜಿಲ್ಲೆಗಳಲ್ಲಿ ಮೈನವಿರೇಳಿಸುವ ಈ ಸಾಹಸ ಕ್ರೀಡೆಯಲ್ಲಿ ಹೆಚ್ಚಿನ ಕ್ರೀಡಾಪಟುಗಳು ತೊಡಗಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಜಾತ್ರೆ, ಉತ್ಸವ, ಹಬ್ಬಹರಿದಿನಗಳು, ಶಾಲಾ ಮತ್ತು ಕಾಲೇಜುಗಳಲ್ಲಿ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದ್ದ ಮಲ್ಲಕಂಬ ಈಚೆಗೆ ವೃತ್ತಿಪರ ಕ್ರೀಡೆಯಾಗಿ ಬದಲಾಗಿದೆ. ದೇಶ, ವಿದೇಶಗಳಲ್ಲಿ ಮಲ್ಲಕಂಬದ ಸಾಹಸಗಳು ಸ್ಪರ್ಧಾತ್ಮಕವಾಗಿ ಪ್ರದರ್ಶಿತವಾಗುತ್ತಿವೆ. ಈಚೆಗೆ ನಡೆದ ಖೇಲೋ ಇಂಡಿಯಾ ಯುನಿವರ್ಸಿಟಿ ಕ್ರೀಡಾಕೂಟದಲ್ಲಿ ಮಲ್ಲಕಂಬ ಕ್ರೀಡೆಗೆ ಅವಕಾಶ ನೀಡಲಾಗಿದ್ದು ಅತ್ಯಂತ ಆಕರ್ಷಣೆಯ ಕ್ರೀಡೆಯಾಗಿ ಹೊರಹೊಮ್ಮಿದೆ.

ಹೌದು , ಪ್ರಧಾನಿ ನರೇಂದ್ರ ಮೋದಿಯವರು ಕೂಡ ’ ಮನ್ ಕಿ ಬಾತ್ ’ ನಲ್ಲಿ ಮಲ್ಲಕಂಬ ಕ್ರೀಡೆಯ ಬಗ್ಗೆ ಉಲ್ಲೇಖಿಸಿ ನಮ್ಮ ಸಾಂಪ್ರದಾಯಿಕ ಕ್ರೀಡೆ ಹೊರ ದೇಶಗಳಲ್ಲೂ ಜನಪ್ರಿಯವಾಗುತ್ತಿದೆ ಎನ್ನುವುದನ್ನು ನೆನಪಿಸಿಕೊಂಡಿದ್ದರು. ಮಲ್ಲಕಂಬದ ಮಲ್ಲರು. ಸಾಧನೆಯ ಛಲವುಳ್ಳವರು. ಎಂಥದ್ದೇ ಸಾಧನೆಯಾದರೂ ಮಾಡಬಲ್ಲೆವು ಎನ್ನುವ ಧೈರ್ಯ ಮಲ್ಲಕಂಬದ ಮಲ್ಲರಿಗೆ ಇದೆ . ಕಂಬದ ಮೇಲೆ ಹಲವಾರು ಸಾಹಸಗಳನ್ನು ಮಾಡುವ ಇವರು ನೆಲದ ಮೇಲೆ ಕಾಲಿಟ್ಟು ಆಕಾಶದತ್ತ ಮುಖ ಮಾಡಿ ನೋಡನೋಡುತ್ತಲೇ ೨೫ರಿಂದ ೩೦ ಅಡಿಗಳಷ್ಟು ಮೇಲಕ್ಕೆ ಹೋಗಿ ದೇಹ ಸಮತೋಲಿತವಾಗಿ ಇರುವಂತೆ ಮಾಡಬಲ್ಲರು.

ಮಲ್ಲಕಂಬ ಕ್ರೀಡೆ ಇಂದು ಬಹುತೇಕ ಕಡೆ ಸಂಸ್ಕೃತಿಯಾಗಿ ಬೆಳೆದುಬಂದಿದೆ. ಮುಖ್ಯವಾಗಿ ಶಾಲಾ ಮಕ್ಕಳು ಮಲ್ಲಕಂಬ ಕ್ರೀಡೆಯ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ಶಾಲೆಗಳ ಪಠ್ಯೇತರ ಚಟುವಟಿಕೆಗಳಲ್ಲಿ ಒಂದಾಗಿರುವ ಈ ಕ್ರೀಡೆ ಈಚೆಗೆ ಹೊಸ ಪ್ರಯೋಗಗಳನ್ನು ಕಾಣುತ್ತಿದೆ .ಮಲ್ಲಕಂಬ ಕಲಿಯಲು ಬಯಸುವ ಮಕ್ಕಳಿಗೆ ಸಾಧಕರ ಕಥೆಗಳನ್ನು ಹೇಳಿ ಅವರಲ್ಲಿ ಸ್ಫೂರ್ತಿ ತುಂಬಲಾಗುತ್ತದೆ. ಮಲ್ಲಕಂಬ ಸಾಹಸ ಮತ್ತು ಹೆಚ್ಚು ಶ್ರಮ ಪಡುವ ಕ್ರೀಡೆಯಾದ್ದರಿಂದ ಬಹಳಷ್ಟು ಮಂದಿ ಇದನ್ನು ಛಾಲೆಂಜ್ ಆಗಿ ತೆಗೆದುಕೊಂಡಿದ್ದಾರೆ.

ಸಾಮಾನ್ಯವಾಗಿ ನಡೆಯುವ ಮಲ್ಲಕಂಬಗಳ ಸಾಹಸದ ಜೊತೆಗೆ ನಿರಾಧಾರ, ಬಾಟಲ್, ಹ್ಯಾಂಗಿಂಗ್ ಮತ್ತು ಬಾಳೆಗೊನೆ ಆಕಾರದ ಮಲ್ಲಕಂಬಗಳ ವಿಧಾನಗಳಿವೆ. ಆದರೆ, ವರ್ಷಗಳು ಉರುಳಿದಂತೆ ಮಲ್ಲಕಂಬದಲ್ಲಿ ಹೊಸ ಪ್ರಯೋಗಗಳು ನಡೆದ ಕಾರಣ ವೃತ್ತಿಪರವಾಗಿ ಈ ಕ್ರೀಡೆ ಬೆಳೆಯುತ್ತಿದೆ. ಯೋಗ ಹಾಗೂ ಮಲ್ಲಕಂಬದ ಕೌಶಲಗಳು ಜೋಡನೆಯಾಗಿ ಒಂದು ಹೊಸ ಆವಿಷ್ಕಾರ ಮಲ್ಲಕಂಬ ಕ್ರೀಡೆಯಲ್ಲಿ ಆಗಿದೆ . ಸ್ಥಿರ ಮಲ್ಲಕಂಬದಲ್ಲಿ ದಶರಂಗಾಸನ, ನಟರಾಜಾಸನ, ಸೂರ್ಯ ನಮಸ್ಕಾರ, ಏಕಪಾದಾಸನ, ರಾಜಾಸನ, ಮಯೂರಾಸನ, ಪದ್ಮಾಸನ, ರೋಪ್ ಮಲ್ಲಕಂಬದಲ್ಲಿ ನಿದ್ರಾಸನ, ಪದ್ಮಾಸನ, ಪರ್ವತಾಸನ, ಶವಾಸನ ಹೀಗೆ ಅನೇಕ ಆಸನಗಳು ಈ ಕ್ರೀಡೆಯಲ್ಲಿ ಪ್ರದರ್ಶಿಸಲ್ಪಡುತ್ತಿವೆ.

ಮುಖ್ಯವಾಗಿ ಯೋಗಾಸನದ ಮಲ್ಲಕಂಬಗಳಲ್ಲಿ ಪಾದರಸದಷ್ಟು ವೇಗ, ಚಾಕಚಕ್ಯತೆ, ದೇಹವನ್ನು ಬಾಗಿಸುವ ಮತ್ತು ಸಮತೋಲನ ಕಾಪಾಡುವ ಕೌಶಲವನ್ನು ಮಲ್ಲಕಂಬ ಮಲ್ಲರು ಪ್ರದರ್ಶಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ . ಯಾವಾಗ ನಮ್ಮ ಆಚರಣೆ , ಸಂಪ್ರದಾಯ, ಕಲೆಗಳ ಮೇಲೆ ಪ್ರೀತಿ ಅಭಿಮಾನ , ಗೌರವ ತೋರಿಸುತ್ತೇವೆಯೋ ಆಗ ಜಗತ್ತು ನಮ್ಮ ಕಡೆ ತಿರುಗಿ ನಿಲ್ಲುತ್ತದೆ ಎಂಬುದಕ್ಕೆ ಈ ಮಲ್ಲಕಂಬ ಕ್ರೀಡೆ ಸಾಕ್ಷಿಯಾಗಿದೆ. ನಮ್ಮ ದೇಶದ ಯೋಗ ಹಾಗೂ ಮಲ್ಲಕಂಬದ ಕೌಶಲಗಳನ್ನು ಕಲಿತಿರುವ ಅನೇಕರು ದೇಶ- ವಿದೇಶಗಳಲ್ಲಿ ಪ್ರದರ್ಶನ ನೀಡಿ ಈ ಕ್ರೀಡೆಯನ್ನು ವಿಶ್ವವ್ಯಾಪಿಯನ್ನಾಗಿಸಿದ್ದಾರೆ.

ಮಲ್ಲಕಂಬ ಕ್ರೀಡೆಯ ತರಬೇತಿ ಪಡೆಯುವವರು ಮಾನಸಿಕವಾಗಿ ಗಟ್ಟಿ ಆಗಿರಬೇಕು.

ಸಾಹಸ ಮನೋಭಾವನೆ ಬೆಳೆಸುವ ನಿತ್ಯ ಯೋಗ, ಪ್ರಾಣಾಯಾಮ ಹಾಗೂ ಧ್ಯಾನದ ಮೂಲಕ ಮಲ್ಲಕಂಬದ ತರಬೇತಿ ನೀಡಲಾಗುತ್ತಿದೆ . ನೆಲದ ಮೇಲೆ ಕಂಬ ಇಟ್ಟು ಮಲ್ಲಕಂಬದ ಸಾಹಸ ಮಾಡುವುದು ಸಾಮಾನ್ಯವಾಗಿದ್ದು ಈಗ ಇದೇ ಕ್ರೀಡೆಯಲ್ಲಿ ಹೊಸತನಗಳನ್ನು ಅಳವಡಿಸಲಾಗಿದೆ. ’ಮಲ್ಲಕಂಬ ಕ್ರೀಡೆಯಷ್ಟೇ ಅಲ್ಲ, ಈಗ ಜೀವನ ಪಾಠವೂ ಆಗಿದೆ. ಈ ಕ್ರೀಡೆಯಲ್ಲಿ ಸರಾಗವಾಗಿ ಆಸನಗಳನ್ನು ಮಾಡಲು ದೇಹ ಹೇಗೆ ಸಮತೋಲಿತವಾಗಿ ಇರಬೇಕೋ, ಅದೇ ರೀತಿ ಜೀವನ ಸುಂದರವಾಗಿ ಇರಲು ಎಲ್ಲವೂ ಸಮತೋಲಿತವಾಗಿ ಇರಬೇಕು ಎನ್ನುವ ಸಂದೇಶ ಮಲ್ಲಕಂಬ ಕ್ರೀಡೆಯದ್ದು ಆಗಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!