Sunday, September 8, 2024

ಐಪಿಎಲ್ ಇತಿಹಾಸದ ದೈತ್ಯ ಬ್ಯಾಟರುಗಳು 

—–■ ಎಸ್ ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ —–
ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ದೊರೆತಿದೆ. ಈ ಜಬರ್ದಾಸ್ತದ ಕ್ರಿಕೆಟ್ ಪಂದ್ಯಾಟದ ಸವಿಯನ್ನು ಅಭಿಮಾನಿಗಳು ಸವಿಯಲು ಆರಂಭಿಸಿರುವ ಹೊತ್ತಿನಲ್ಲಿ  ಪ್ರತಿ ತಂಡದ ಬ್ಯಾಟರುಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಕಾತರಿಸುತ್ತಿದ್ದಾರೆ . ಏಕೆಂದರೆ ಐಪಿಎಲ್ ಪಂದ್ಯಾಟದಲ್ಲಿ ಬ್ಯಾಟರುಗಳು ಹೊಡಿಬಡಿ ಆಟದ ಮೂಲಕ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಕಟ್ಟಿ ತಂಡದ ಗೆಲುವಿಗೆ ಕಾರಣವಾಗಿದ್ದಾರೆ. ಐಪಿಎಲ್​ 15ನೇ ಆವೃತ್ತಿ ಮಾರ್ಚ್-26ರಂದು ಆರಂಭಗೊಳ್ಳಲಿದ್ದು ,  ಈ ಹಿನ್ನೆಲೆಯಲ್ಲಿ ಎಲ್ಲ ತಂಡಗಳ ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಪ್ರತಿ ಸೀಸನ್​ನಲ್ಲಿ ಬ್ಯಾಟರುಗಳು ಎದುರಾಳಿ ಬೌಲರ್​ಗಳ ಮೇಲೆ ಪಾರಮ್ಯ ಮೆರೆದು ನಿದ್ದೆಗೆಡಿಸಿದ್ದಾರೆ . ಹಾಗಾಗಿ ಐಪಿಎಲ್ ಇತಿಹಾಸದಲ್ಲಿ ತಮ್ಮ ಬ್ಯಾಟಿಂಗ್ ಕರಾಮತ್ತು ಪ್ರದರ್ಶಿಸಿ ,  ವೈಯಕ್ತಿಕ ಅತ್ಯಧಿಕ ರನ್​ ಬಾರಿಸಿದ ಬ್ಯಾಟರುಗಳ ವಿವರ ಹೀಗಿದೆ.

ವೆಸ್ಟ್ ಇಂಡೀಸ್  ದೈತ್ಯ ಕ್ರಿಸ್ ಗೇಲ್ :
ಟ್ವೆಂಟಿ-20 ಕ್ರಿಕೆಟ್​ನಲ್ಲಿ ವೆಸ್ಟ್ ಇಂಡೀಸ್ ದೈತ್ಯ  ಕ್ರಿಸ್​ಗೇಲ್​ ಹೆಸರು ಮುಂಚೂಣಿಯಲ್ಲಿದೆ. ಅದರಲ್ಲೂ ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲೂ  ವಿಧ್ವಂಸಕ ಆರಂಭಿಕ ಆಟಗಾರ ಕ್ರಿಸ್‌ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. 2013ರ ಐಪಿಎಲ್  ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರ ಆಡಿದ್ದ ಗೇಲ್ ಪುಣೆ ವಿರುದ್ಧದ ಪಂದ್ಯದಲ್ಲಿ 175 ರನ್ ಬಾರಿಸಿದ್ದರು. ಆ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಗಳಿಸಿದ್ದರು. ಗೇಲ್ ಸಿಡಿಲಬ್ಬರದ ಬ್ಯಾಟ್​ನಿಂದ 13 ಬೌಂಡರಿ ಬಂದರೆ, 17 ಸಿಕ್ಸರ್‌ಗಳು ಬಾರಿಸಲ್ಪಟ್ಟಿದ್ದವು. ಆರ್ ಸಿ ಬಿ  ಈ ಪಂದ್ಯದಲ್ಲಿ  130 ರನ್‌ಗಳ ಜಯ ಗಳಿಸಿತ್ತು.

ನ್ಯೂಜಿಲೆಂಡಿನ ಬ್ರೆಂಡನ್ ಮೆಕಲಮ್ :
ನ್ಯೂಜಿಲೆಂಡ್​ ಆರಂಭಿ ಆಟಗಾರ ಬ್ರೆಂಡನ್​ ಮೆಕಲಮ್ ಸಾಧನೆಯನ್ನು ಐಪಿಎಲ್ ಕ್ರಿಕೆಟಿನಲ್ಲಿ  ಎಂದಿಗೂ ಮರೆಯಲಾಗದು. ಐಪಿಎಲ್​ ಉದ್ಘಾಟನಾ ಪಂದ್ಯದಲ್ಲೇ ಮೆಕಲಮ್​ ರನ್​ ಪಟಾಕಿ ಸಿಡಿಸಿದ್ದರು. ಟೂರ್ನಿಯ ಮೊದಲ ಋತುವಿನ  ಮೊದಲ ಪಂದ್ಯದಲ್ಲೇ ಮೆಕಲಮ್  ಚುಟುಕು ಕ್ರಿಕೆಟಿನಲ್ಲಿ ಸುಂಟರಗಾಳಿ ಬ್ಯಾಟಿಂಗ್ ಪ್ರದರ್ಶಿಸಿದರು . ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಮೆಕಲಮ್​, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೇವಲ 73 ಎಸೆತಗಳಲ್ಲಿ 158 ರನ್ ಗಳಿಸಿದ್ದರು. ಇದರಲ್ಲಿ 10 ಬೌಂಡರಿ ಹಾಗೂ 13 ಸಿಕ್ಸರ್‌ಗಳು ಅವರ ಬ್ಯಾಟ್​ನಿಂದ ಸಿಡಿದಿದ್ದವು. ಮೆಕಲಮ್​ ಮಿಂಚಿನ ಆಟದಿಂದ ಕೋಲ್ಕತ್ತಾ ನೈಟ್ ರೈಡರ್ಸ್ 140 ರನ್‌ಗಳ ಬೃಹತ್ ಅಂತರದ ಗೆಲುವು ಪಡೆದಿತ್ತು.

ದಕ್ಷಿಣ ಆಫ್ರಿಕಾದ  ಎಬಿಡಿ ವಿಲಿಯರ್ಸ್ :
‘360 ಡಿಗ್ರಿ ಕ್ರಿಕೆಟರ್​’ ಎಂದೇ ಖ್ಯಾತರಾದ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್​ 2015ರ ಐಪಿಎಲ್ ಸೀಸನ್ ನಲ್ಲಿ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡದ ಪರ ಆಡಿದ್ದರು. ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿಲಿಯರ್ಸ್ 59 ಎಸೆತಗಳಲ್ಲಿ 133 ರನ್ ಚಚ್ಚಿದ್ದರು. ಇದರಲ್ಲಿ 19 ಬೌಂಡರಿ ಮತ್ತು 4 ಸಿಕ್ಸರ್‌ಗಳು  ಒಳಗೊಂಡಿತ್ತು. ಎಬಿಡಿ ವಿಲಿಯರ್ಸ್  ಮಿಂಚಿನ ಆಟದಿಂದ ಆರ್‌ಸಿಬಿ 39 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

ಭಾರತದ ಕೆಎಲ್.ರಾಹುಲ್ :
ಭಾರತ ತಂಡದ ಭವಿಷ್ಯದ ಆಟಗಾರ ಎಂದೇ ಗುರುತಿಸಿಕೊಂಡ ಕರ್ನಾಟಕದ ಕೆಎಲ್.ರಾಹುಲ್​ ಐಪಿಎಲ್​ನಿಂದ ಪ್ರವರ್ಧಮಾನಕ್ಕೆ ಬಂದವರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದ ರಾಹುಲ್ 2020 ರಲ್ಲಿ ಯುಎಇಯಲ್ಲಿ ನಡೆದ ಟೂರ್ನಿಯ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 69 ಎಸೆತಗಳಲ್ಲಿ 132 ರನ್​ಗಳನ್ನು ಹೊಡೆದಿದ್ದರು. ಇದು ಐಪಿಎಲ್​ ಚರಿತ್ರೆಯಲ್ಲಿ ಭಾರತೀಯ ಆಟಗಾರನೊಬ್ಬ ದಾಖಲಿಸಿದ ಗರಿಷ್ಠ ಮತ್ತು ರಾಹುಲ್​ರ ವೈಯಕ್ತಿಕ ಸ್ಕೋರ್ ಇದಾಗಿದೆ. ಪಂದ್ಯದಲ್ಲಿ ರಾಹುಲ್​ 14 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಪಂದ್ಯವನ್ನು ಪಂಜಾಬ್ 97 ರನ್‌ಗಳಿಂದ ಗೆದ್ದುಕೊಂಡಿತ್ತು. 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!