Sunday, September 8, 2024

ಬಗ್ವಾಡಿ: ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ವಿನೂತನ ಮಾದರಿ ಸ್ಮಾರ್ಟ್ ತರಗತಿ ಉದ್ಘಾಟನೆ

ಕುಂದಾಪುರ, ಮಾ.12: ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದರೆ ಮಾತ್ರ ದೇಶ ಬದಲಾಗಲು ಸಾಧ್ಯ. ಕಷ್ಟದಿಂದ ಓದಿದ ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ಉನ್ನತ ಸ್ಥಾನಕ್ಕೆರುತ್ತಾರೆ. ಶಿಕ್ಷಣದಿಂದ ಯಾವ ಮಗುವೂ ಕೂಡಾ ವಂಚಿತವಾಗಬಾರದು. ಗ್ರಾಮೀಣ ಶಾಲೆಗಳ ಮೂಲಸೌಕರ್ಯ ಒದಗಿಸಿ ಕೊಡುವ ಕಾರ್ಯ ಆಗುತ್ತಿದ್ದು, ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಸ್ಮಾರ್ಟ್ ತರಗತಿ ಮಾಡುತ್ತಿರುವುದು ರಾಜ್ಯಕ್ಕೇ ವಿನೂತನ ಕಾರ್ಯಕ್ರಮವಾಗಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

ಬೈಂದೂರು ಶೈಕ್ಷಣಿಕ ವಲಯದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-2, ಬಗ್ವಾಡಿ ಇಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ವಿನೂತನ ಮಾದರಿ ಸ್ಮಾರ್ಟ್ ತರಗತಿಯನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳ ಬೇಡಿಕೆಯನ್ನು ಪೂರೈಸುವ ಕೆಲಸ ಆಗುತ್ತಿದೆ. ಸರ್ಕಾರಿ ಶಾಲೆಗಳು ಮಕ್ಕಳನ್ನು ಆಕರ್ಷಿಸುವ ಕೆಲಸ ಮಾಡಬೇಕಾಗಿದೆ. ಮುಖ್ಯವಾಗಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ಗ್ರಾಮೀಣ ರಸ್ತೆಯಲ್ಲಿ ಓಡಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹಳ್ಳಿಹಳ್ಳಿಗಳಲ್ಲಿ ಬೇಡಿಕೆ ಇರುವ ಮಾರ್ಗದಲ್ಲಿ ಸರ್ಕಾರಿ ಬಸ್ ಓಡಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಕೇವಲ ಲಾಭವನ್ನೇ ಗಮನದಲ್ಲಿ ಇರಿಸಿಕೊಳ್ಳದೇ ಸೇವೆಯ ಮನೋಭಾವ ಗ್ರಾಮೀಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಯನ್ನು ಪರಿಗಣಿಸಿ ಬಸ್ ಓಡಿಸುವಂತಾಗಬೇಕು. ಮುಂದಿನ ಶೈಕ್ಷಣಿಕ ವರ್ಷಾರಂಭದೊಳಗೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ಓಡಿಸದೇ ಇದ್ದರೆ ವಿದ್ಯಾರ್ಥಿಗಳು ಕುಂದಾಪುರದ ಡಿಪೋಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಕೆ‌ಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಎಚ್ಚರಿಸಿದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಶತಮಾನದ ಹೊಸ್ತಿಲಲ್ಲಿ ಇರುವ ಬಗ್ವಾಡಿ ಶಾಲೆ ಈ ಭಾಗದ ಜನರ ಜೀವನ ರೂಪಿಸಿದೆ. ಇದೀಗ ರಾಜ್ಯದಲ್ಲಿಯೇ ಗುರುತಿಸಿಕೊಳ್ಳುತ್ತಿದೆ. ಇನ್ನಷ್ಟು ಅಭಿವೃದ್ದಿ ಹೊಂದಲಿ ಎಂದರು.

ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗ ಮುಖ್ಯಸ್ಥ ಕಮಲ್ ಕುಮಾರ್ ಮಾತನಾಡಿ, ನಿರೂಪಯೂಕ್ತ ಬಸ್ಸನ್ನು ಕೆ‌ಎಸ್‌ಆರ್‌ಟಿಸಿ ಉದಾರವಾಗಿ ನೀಡಿದ ನಿದರ್ಶನವಿಲ್ಲ. ಅದು ಈ ಶಾಲೆಗೆ ಸಿಕ್ಕಿದೆ ಎಂದರೆ ಹೆಮ್ಮೆಯ ವಿಚಾರ ಎಂದರು.

ಹಕ್ಲಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಚೇತನ್ ಕುಮಾರ್, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಮ್.ಮುಂದಿನಮನಿ, ಹಕ್ಲಾಡಿ ಗ್ರಾ. ಪಂ ಸದಸ್ಯ ಅಶೋಕ ಪೂಜಾರಿ, ಶಾರದಾ ಮೊಗವೀರ, ಭಾರತ ಸರ್ಕಾರದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನಿವೃತ್ತ ನಿರ್ದೇಶಕ ಬಿ.ಎನ್.ಶೆಟ್ಟಿ, ಪುರೋಹಿತರಾದ ನಾಗಪ್ಪಯ್ಯ ಭಟ್ ಬೈಲೂರು, ಕೆ.ಎಸ್.ಆರ್.ಟಿ.ಸಿ ಡಿಪೋ ಮೆನೇಜರ್ ರಾಜೇಶ, ಎಸ್.ಡಿ.ಎಂ.ಸಿ ಸಮನ್ವಯ ಸಮಿತಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಮ್, ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ಉದ್ಯಮಿ ಕೆ.ಅಬ್ದುಲ್ ರೆಹಮಾನ್, ಅಜಿತ್ ಕುಮಾರ್ ಬಗ್ವಾಡಿ, ಬಗ್ವಾಡಿ ಮಹಿಷಾಸುರಮರ್ದಿನಿ ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಪುತ್ರನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ರಾಜೀವ ಶೆಟ್ಟಿ, ವಿದ್ಯಾರ್ಥಿ ನಾಯಕಿ ಪ್ರಜ್ಞಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಮಿನಿಯೇಚರ್ ಬಸ್ ನಿರ್ಮಾತೃ ಪ್ರಶಾಂತ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ವತಿಯಿಂದ ಪ್ರಶಾಂತ ಆಚಾರ್ಯರನ್ನು ಸನ್ಮಾನಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಜಾ ವಿ.ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಈ ಶಾಲೆಯ ಪೂರ್ವ ವಿದ್ಯಾರ್ಥಿ ಪ್ರಶಾಂತ್ ಆಚಾರ್ಯ ಅವರು ಕೆ‌ಎಸ್‌ಆರ್‌ಟಿಸಿ ರಾಜಹಂಸ ಬಸ್‌ಗಳ ತದ್ರೂಪ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದನ್ನು ಗಮನಿಸಿ ಇವರ ಕಾರ್ಯ ಪ್ರಶಂಸಿಸಿದ ಅಂದಿನ ಸಚಿವ ಲಕ್ಷ್ಮಣ ಸವದಿಯವರು ಬಗ್ವಾಡಿ ಶಾಲೆಗೆ ನಿರೂಪಯೂಕ್ತ ಬಸ್‌ನ್ನು ನೀಡುವುದಾಗಿ ತಿಳಿಸಿದರು. ಅಂತೆಯೇ ಬಸ್ ಬಂತು. ಕೊವಿಡ್ ಸಂಕಷ್ಟದಿಂದ ಬಸ್ಸನ್ನು ಕಲಿಕೆಗೆ ಪೂರಕವಾಗಿ ಬಳಸಿಕೊಳ್ಳುವುದು ವಿಳಂಬವಾಯಿತು. ಈಗ ಅದನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಿ ಸ್ಮಾರ್ಟ್ ತರಗತಯನ್ನಾಗಿ ರೂಪಿಸಲಾಗಿದೆ ಎಂದು ಹೇಳಿದ ಅವರು, ಶತಮಾನೋತ್ಸವದ ಸಂದರ್ಭದಲ್ಲಿರುವ ಈ ಶಾಲೆಗೆ ಕೊಠಡಿಯ ಅವಶ್ಯಕತೆ ಇದೆ. ಶಿಕ್ಷಕರ ಕೊರತೆ ಇದೆ. ಕಂಪ್ಯೂಟರ್ ತರಗತಿಯಿದ್ದು ಕಂಪ್ಯೂಟರ್ ಅವಶ್ಯಕತೆ ಇದೆ. ಶಾಲೆಯ ಹೆಸರನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಗ್ವಾಡಿಯನ್ನಾಗಿ ಮಾರ್ಪಡಿಸಬೇಕಾಗಿದೆ ಎಂದರು.

ಶಿಕ್ಷಕಿ ಶೋಭಾ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಸತ್ಯಾವತಿ ವಂದಿಸಿದರು. ಶಿಕ್ಷಕ ವಸಂತರಾಜ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮಣಿಕಂಠ ಶೆಟ್ಟಿ ಸಹಕರಿಸಿದರು. ಶಾಲಾ ಶಿಕ್ಷಕಿಯರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷರು, ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಸಭಾಕಾರ್ಯಕ್ರಮ ಪೂರ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಮನೋರಂಜನಾ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!