Sunday, September 8, 2024

ರಾಜ್ಯ ಕಾಂಗ್ರೆಸ್‌ನ ಆಂತರಿಕ ಬಿರುಕಿಗೆ ರಾಹುಲ್ ಪ್ಯಾಚ್ ವರ್ಕ್


ರಾಹುಲ್ ಕರೆದ ಸಭೆಯ ಹಿಂದಿನ ಗುಟ್ಟೇನು? | ಸಾಮೂಹಿಕ ನಾಯಕತ್ವ ಎಲ್ಲಿಯವರೆಗೆ..?

-ಶ್ರೀರಾಜ್ ವಕ್ವಾಡಿ

ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಆಂತರಿಕ ಒಡಕಿಗೆ ರಾಹುಲ್ ಗಾಂಧಿ ಒಂದು ಹಂತದಲ್ಲಿ ಪ್ಯಾಚ್ ವರ್ಕ್ ಮಾಡಿದ್ದಾರೆ ಎಂದು ಸದ್ಯದ ಮಟ್ಟಿಗೆ ನೇರಾನೇರವಾಗಿ ಕಾಣಿಸುತ್ತಿದೆ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಕೈ ಪಡೆಯಲ್ಲಿನ ಆಂತರಿಕ ವೈಮನಸ್ಸನ್ನು ತೆಗೆದು ಹಾಕುವ ಪ್ರಯತ್ನದಲ್ಲಿದೆ.

ರಾಜ್ಯದಲ್ಲಿ ತನ್ನದೇ ಆದಂತಹ ಛಾಪನ್ನು ಹೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಕಾಂಗ್ರೆಸ್‌ನಲ್ಲಿ ಇಂದಿಗೂ ಒಂದು ದೊಡ್ಡ ಬಳಗ ಅವರ ಹಿಂದೆ ಇರುವುದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೂ ಕೂಡ ಗೊತ್ತಿದೆಯಾದ್ದರಿಂದಲೇ, ಡಿಕೆಶಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಬೇಕೆಂಬ ಕಾರಣದಿಂದಾಗಿ ಪಾದಯಾತ್ರೆಯಂತಹ ರಾಜಕೀಯ ತಂತ್ರಗಾರಿಕೆಯನ್ನು ಹೂಡುತ್ತಿರುವುದು ರಾಜಕೀಯ ಪಡಸಾಲೆಯಲ್ಲಿನ ಎಲ್ಲರಿಗೂ ಗೊತ್ತಿರುವ ವಿಚಾರ. ಬಳ್ಳಾರಿ ಪಾದಯಾತ್ರೆ ಮಾಡಿ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದರು, ಅದೇ ರೀತಿ ಮೇಕೆದಾಟು ಪಾದಯಾತ್ರೆ ಮಾಡುವುದರ ಮುಖೇನ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆಶಿ ಏರುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಒಂದಿಷ್ಟು ಚರ್ಚೆಗಳು ಕೇಳಿ ಬರುತ್ತಿದ್ದರೂ ಕೂಡ, ಹಾಗೆ ಆಗುವ ಸಾಧ್ಯತೆ ಇನ್ನೂ ಅಸ್ಪಷ್ಟ ಸ್ಥಿತಿಯಲ್ಲಿದೆ ಎನ್ನುವುದು ರಾಜ್ಯ ಕಾಂಗ್ರೆಸ್‌ನ ಸದ್ಯದ ವಾತಾವರಣವನ್ನು ಗಮನಿಸಿದರೇ, ತಿಳಿಯುತ್ತದೆ. ಅದೇನೇ ಇರಲಿ, ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೋ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೋ ಅಥವಾ ಕಾಂಗ್ರೆಸ್ ಬಿಜೆಪಿ ಎದುರು ಸೋಲುತ್ತದೋ, ಗೆಲ್ಲುತ್ತದೋ ಎನ್ನುವುದು ಚುನಾವಣೆಯ ನಂತರದ ವಿಷಯ. ಆದರೇ, ಕೈ ಪಾಳಯ ಈಗಾಗಲೇ ಚುನಾವಣಾ ಕಸರತ್ತು ಆರಂಭಿಸಿದೆ ಎನ್ನುವುದು ಸುಸ್ಪಷ್ಟ.

ಹೈಕಮಾಂಡ್‌ಗೆ ನಾಯಕತ್ವಕ್ಕಿಂತ ಪಕ್ಷದ ಅಧಿಕಾರವೇ ಮುಖ್ಯ : ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಗೆ ಪ್ರತಿಪಕ್ಷ ಬಿಜೆಪಿ ಎದುರು ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಸಾಧ್ಯವಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಶತಪ್ರಯತ್ನದಲ್ಲಿ ಕೇಂದ್ರ ಕಾಂಗ್ರೆಸ್ ಇದೆ. ಪಂಜಾಬ್ ಕಾಂಗ್ರೆಸ್ ನಲ್ಲಿ ಸೃಷ್ಟಿಯಾದ ಗೊಂದಲಗಳು ರಾಜ್ಯ ಕಾಂಗ್ರೆಸ್ ನಲ್ಲಿಯೂ ಕೂಡ ಆಗುವ ಸಾಧ್ಯತೆ ಇದೆ ಎಂಬ ಒಂದು ಸಣ್ಣ ಭಯ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಮುಸುಕಿನ ವೈಮನಸ್ಸಿನಿಂದ ಕಾಂಗ್ರೆಸ್ ಹೈಕಮಾಂಡ್ ಗೆ ಉಂಟಾಗಿದೆ ಎಂಬುವುದನ್ನು ಇದ್ದಕ್ಕಿದ್ದಂತೆ ರಾಹುಲ್ ಗಾಂಧಿ ರಾಜ್ಯದ ಪ್ರಮುಖ ಹದಿನಾಲ್ಕು ನಾಯಕರನ್ನು ದೆಹಲಿಗೆ ಬರುವುದದಕ್ಕೆ ಭುಲಾವ್ ನಿಡಿದ್ದರಿಂದಲೇ ತಿಳಿಯಬಹುದಾಗಿದೆ. ಪಂಜಾಬ್ ನಲ್ಲಿ ಸಿಂಗ್ ದ್ವಯರ (ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಪಂಜಾಬ್ ಪ್ರದೇಶ್ ಕಾಂಗ್ರೆಸ್ ನ ಅಧ್ಯಕ್ಷ ನವಜಿತ್ ಸಿಂಗ್ ಸಿಧು) ನಡುವಿನ ಗುದ್ದಾಟ ಅಂತಿಮವಾಗಿ ಪಂಜಾಬ್ ನ ಅಚ್ಚರಿಯ ಮುಖ್ಯಮಂತ್ರಿ ಆಯ್ಕೆಯ ತನಕ ತಂದು ತಲುಪಿಸಿರುವ ವಿಚಾರ ಗೊತ್ತೇ ಇದೆ. ಆದರೇ, ಪಂಜಾಬ್ ಪರಿಸ್ಥಿತಿಯನ್ನು ರಾಜ್ಯಕ್ಕೆ ಹೋಲಿಸುವುದಕ್ಕೆ ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ, ರಾಜ್ಯದಲ್ಲಿಯೂ ಹಾಗೆಯೇ ಆಗಬಹುದು ಎನ್ನುವ ವಿಚಾರವನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿಯೇ, ರಾಹುಲ್ ಗಾಂಧಿ ಇತ್ತೀಚೆಗೆ ಕರೆದ ಸಭೆಯತ್ತ ಭಾರಿ ದೊಡ್ಡ ಕುತೂಹಲ ಮೂಡಿಸಿದೆ. ರಾಜ್ಯದ ಪ್ರಮುಖ ನಾಯಕರನ್ನೆಲ್ಲರನ್ನೂ ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎನ್ನುವುದು ಸ್ಪಷ್ಟವಾಗಿದೆ. ಕರ್ನಾಟಕವನ್ನು ಹೊರತು ಪಡಿಸಿದರೇ, ದಕ್ಷಿಣ ಭಾರತದಲ್ಲಿ ಸದ್ಯಕ್ಕೆ ಕಾಂಗ್ರೆಸ್ ಗೆ ಮೈತ್ರಿಯಿಲ್ಲದೇ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿರುವ ಕೆಲವು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿ ಹೈಕಮಾಂಡ್ ಇದ್ದ ಹಾಗೆ ಕಾಣಿಸುತ್ತಿದೆ. ಹಾಗಾಗಿ ಸಭೆಯಲ್ಲಿ ರಾಹುಲ್ ಗಾಂಧಿ ಸಾಮೂಹಿಕ ನಾಯಕತ್ವದ ಬಗ್ಗೆ ಒತ್ತಿ ಹೇಳಿದ್ದಾರೆ. ಅಧಿಕಾರವೇ ಮುಖ್ಯ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರ ಪಡೆಯುವುದೇ ನಮ್ಮ ಪರಮ ಗುರಿಯಾಗಬೇಕು ಎಂಬ ಧ್ಯೇಯದಿಂದ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಪಕ್ಷದಲ್ಲಿನ ವೈಮನಸ್ಸನ್ನು ಶಮನಗೊಳಿಸುವ ಬಗ್ಗೆ ರಾಹುಲ್ ಮಾತನಾಡಿದ್ದು ನೋಡಿದರೇ, ಅಧಿಕಾರಕ್ಕೆ ಬರುವವರೆಗೆ ನಾಯಕತ್ವದ ಬಗ್ಗೆ ಚಿಂತನೆಯಲ್ಲಿ ಹೈಕಮಾಂಡ್ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಹದಿನಾಲ್ಕು ನಾಯಕರಿಗೆ ದೆಹಲಿಗೆ ಬರಲು ಭುಲಾವ್ ನೀಡಿದ ಗುಟ್ಟೇನು? : ಈವರೆಗೆ ರಾಜ್ಯದ ಪಕ್ಷದ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವುದಕ್ಕಿದ್ದರೂ ಕೇವಲ ವಿಧಾನ ಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈರ್ವರನ್ನು ಮಾತ್ರ ಸಭೆಗೆ ಕರೆಯುತ್ತಿದ್ದ ರಾಹುಲ್ ಗಾಂಧಿ, ಈ ಬಾರಿ ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರನ್ನು ಆಂತರಿಕ ಸಭೆಗೆ ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಕೊಂಚ ಕುತೂಹಲವನ್ನು ಹೆಚ್ಚಿಸಿದೆ. ರಾಹುಲ್ ಕರೆದ ಸಭೆಯಲ್ಲಿ ಡಿ. ಕೆ ಶಿವಕುಮಾರ್, ಸಿದ್ದರಾಮಯ್ಯ ಮಾತ್ರವಲ್ಲದೇ, ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ಎ‌ಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷರು, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ. ವಿ ಶ್ರೀನಿವಾಸ್ ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು. ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ನಡುವಿನ ಪ್ರತಿಷ್ಠೆಯ ವೈಮನಸ್ಸು ಇದ್ದರೇ, ರಾಜ್ಯದಲ್ಲಿ ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ಚುನಾವಣೆಗಳನ್ನು ಎದುರಿಸುವ ಆಡಳಿತ ಪಕ್ಷ ಬಿಜೆಪಿಯ ವಿರುದ್ಧ ನಿಲ್ಲುವುದಕ್ಕೆ ಸಾಧ್ಯವಿಲ್ಲ ಹಾಗೂ ಯಾವುದೇ ಭಿನ್ನಾಭಿಪ್ರಾಯಗಳು ರಾಜ್ಯ ಕಾಂಗ್ರೆಸ್ ನಲ್ಲಿ ಕಾಣಿಸಿಕೊಂಡರೂ ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕು ಎಂಬ ಅರಿವು ರಾಹುಲ್ ಗೆ ತಡವಾಗಿಯಾದರೂ ಆಗಿದೆ ಎಂದು ಈಗ ಕಾಣಿಸುತ್ತಿದೆ. ಆದ್ದರಿಂದಲೇ, ಚುನಾವಣೆಯ ನಾಯಕತ್ವದ ಬಗ್ಗೆ ರಾಹುಲ್ ಸದ್ಯಕ್ಕೆ ನೋ ಎಂದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಇನ್ನು, ರಾಹುಲ್ ಗಾಂಧಿಯ ಬಗ್ಗೆ ಕೇಂದ್ರದ ಕಾಂಗ್ರೆಸ್ ಹಿರಿಯ ನಾಯಕರಲ್ಲಿಯೂ ಒಳ್ಳೆಯ ಅಭಿಪ್ರಾಯವಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವದ ಬಗ್ಗೆ ಜಿ23 ಪಡೆ ಅತೃಪ್ತಿ ವ್ಯಕ್ತಪಡಿಸಿರುವುದು ಕೊಂಚ ಮಟ್ಟಿಗೆ ರಾಹುಲ್ ನಾಯಕತ್ವದ ವರ್ಚಸ್ಸಿಗೆ ಧಕ್ಕೆ ಉಂಟಾಗಿರುವ ವಿಚಾರ ಸ್ವತಃ ರಾಹುಲ್ ಗಾಂಧಿಗೆ ಗೊತ್ತಿದೆ. ಹಾಗಾಗಿ ಪಕ್ಷವನ್ನು ತಳಮಟ್ಟದಿಂದಲೇ ಭದ್ರಗೊಳಿಸುವವ ಸಲುವಾಗಿ ರಾಜ್ಯದ ಎಲ್ಲಾ ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ ಅಂತನ್ನಿಸುತ್ತಿದೆ.

ರಾಹುಲ್ ನಡೆಯಿಂದ ಡಿಕೆಶಿಗೆ ಲಾಭ.? :

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಹೆಸರಿನ ಮೂಲಕವೇ ಗುರುತಿಸಿಕೊಳ್ಳಬೇಕೆಂಬ ಪ್ರಚಾರದ ಹುಚ್ಚು ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಇದೆ. ಆದರೇ, ಆ ಎಲ್ಲದಕ್ಕೂ ಈಗ ಕೊಂಚ ಬ್ರೇಕ್ ಬಿದ್ದ ಹಾಗೆ ಕಾಣಿಸುತ್ತಿದೆ. ರಾಹುಲ್ ಗಾಂಧಿಯವರ ಸಾಮೂಹಿಕ ನಾಯಕತ್ವದ ಜಪದಿಂದ ಡಿಕೆಶಿಗೆ ಏನು ಲಾಭ..? ಹೌದು, ಖಂಡಿತ ಡಿಕೆಶಿಗೆ ಇದರಿಂದ ಲಾಭ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಣಿಸುತ್ತಿದೆ. ರಾಜಕೀಯ ವಲಯದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಂದರೇ, ಸಿದ್ದರಾಮಯ್ಯ ಎಂಬ ಅಭಿಪ್ರಾಯ ಇನ್ನೂ ಇದೆ. ಆ ಅಭಿಪ್ರಾಯವನ್ನು ಬದಲಾಯಿಸಬೇಕೆಂದು ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಹರಸಾಹಸ ಪಡುತ್ತಿರುವುದು ರಾಜಕೀಯ ಪಡಸಾಲೆಯಲ್ಲಿರುವವರಿಗೆ ಮಾತ್ರವಲ್ಲದೇ ಜನ ಸಾಮಾನ್ಯರಿಗೂ ಗೊತ್ತಿರುವ ವಿಷಯ. ಡಿಕೆಶಿಯವರ ಆ ಪ್ರಯತ್ನಕ್ಕೆ ಹೈಕಮಾಂಡ್‌ನ ಅಭಿಪ್ರಾಯ ಡಿಕೆಶಿ ರಾಜಕೀಯ ತಂತ್ರಗಾರಿಕೆಗೆ ಸ್ವಲ್ಪ ಮಟ್ಟಿಗಾದರೂ ಸಹಾಯ ಮಾಡಲಿದೆ ಎಂದು ಕಾಣಿಸುತ್ತಿದೆ. ಆದರೇ, ಡಿಕೆಶಿ ಈ ಸ್ಥಿತಿಯನ್ನು ಅಂದರೇ, ಈ ಸಾಮೂಹಿಕ ನಾಯಕತ್ವದ ಯೋಜನೆಯಡಿಲ್ಲಿ ಹೇಗೆ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ.

ರಾಹುಲ್ ಸಭೆಯ ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಗ್ಗಟ್ಟಿನ ಪ್ರದರ್ಶನ ತೋರಿಸಿದ್ದರೂ ಅದು ಬೂದಿ ಮುಚ್ಚಿದ ಕೆಂಡ ಎನ್ನುವುದು ಗೊತ್ತಿರುವ ವಿಷಯ. ಒಂದೆಡೆ ಸಿದ್ದರಾಮಯ್ಯರಂತೂ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ದೊಡ್ಡ ದೊಡ್ಡ ಮಾತನ್ನಾಡಿದರೇ, ಇನ್ನೊಂದೆಡೆ ಡಿಕೆಶಿ, ಒಗ್ಗಟ್ಟಿನಿಂದ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದು ರಾಹುಲ್ ಗೆ ಭರವಸೆ ನೀಡಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಹೌದು. ಆದರೇ, ಈ ಒಗ್ಗಟ್ಟು ಎಲ್ಲಿಯವರಗೆ ಎನ್ನುವುದು ಸದ್ಯದ ಪ್ರಶ್ನೆ.

ಇನ್ನು, ಚುನಾವಣೆ ತಂತ್ರಗಾರಿಕೆಗೆ ಕೇಂದ್ರದ ತಂಡವನ್ನೇ ರಾಜ್ಯಕ್ಕೆ ಕಳುಹಿಸುವುದಾಗಿ ರಾಹುಲ್ ರಾಜ್ಯದ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದಾರೆ. ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಎಷ್ಟೇ ಅನುಭವವಿದ್ದರೂ ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಹೂಡುವ ರಾಜಕೀಯ ತಂತ್ರಗಾರಿಕೆಯ ಎದುರು ಕಾಂಗ್ರೆಸ್ ರಾಜಕೀಯ ತಂತ್ರಗಾರಿಕೆಯ ತೂಕ ಕೊಂಚ ಕಡಿಮೆಯೇ ಇರಲಿದೆ ಎನ್ನುವುದು ಸತ್ಯ. ಅದು ಏನೇ ಇರಲಿ, ಕೇಂದ್ರದಿಂದ ರಾಜ್ಯಕ್ಕೆ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕಾ ತಂಡ ಬಂದು ಹೇಗೆ ತಂತ್ರಗಾರಿಕೆ ಹೂಡುತ್ತದೆ..? ರಾಹುಲ್ ಗಾಂಧಿ ಕಳುಹಿಸುವ ತಂಡ ಹೂಡುವ ರಾಜಕೀಯ ತಂತ್ರಗಾರಿಕೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯತ್ತದೆಯೇ..? ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ, ಮುಖ್ಯಮಂತ್ರಿ ಯಾರಾಗಲಿದ್ದಾರೆ..? ಎಂಬ ಪುಂಖಾನುಪುಂಖವಾದ ಪ್ರಶ್ನೆಗಳು ಸದ್ಯದ ಕುತೂಹಲವನ್ನು ಕೆರಳಿಸುತ್ತಿವೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!