Sunday, September 8, 2024

ಬದ್ದ ವೈರಿಗಳ ಮನ ಗೆದ್ದ ಬ್ಯಾಟರ್-ವಿರಾಟ್ ಕೊಹ್ಲಿ

-ಪಿ ಎಸ್ ಜಗದೀಶ್ಚಂದ್ರ ಅಂಚನ್

ಕ್ರಿಕೆಟ್ ಎನ್ನುವ ಮೂರೂವರೆ ಅಕ್ಷರಕ್ಕೆ ವಿರೋಧಿಗಳನ್ನು ಪ್ರೀತಿಸುವ ಪವರ್ ಇದೆ. ತನ್ನ ಬದ್ದವೈರಿ ಆದರೂ ಕೂಡ ಕ್ರಿಕೆಟಿಗೆ ಸಂಬಂಧಿಸಿದಾಗ ಆತನ ಮೇಲೆ ಪ್ರೀತಿ ಹುಟ್ಟುತ್ತದೆ. ಆದರೆ , ಇಲ್ಲಿ ಪ್ರಸ್ತಾಪಿಸಿರುವ ವಿಷಯವೇ ಆಶ್ಚರ್ಯ ಪಡುವಂತದ್ದು . ಹೌದು , ಇಲ್ಲಿ ಪ್ರಸ್ತಾಪಿಸಲ್ಪಡುವ ವಿಚಾರ ಭಾರತ – ಪಾಕಿಸ್ತಾನಕ್ಕೆ ಸಂಬಂಧಿಸಿದ್ದು. ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆದಿದೆ . ಉಭಯ ರಾಷ್ಟ್ರಗಳ ನಡುವಿನ ಗಡಿಗೆ ಬೇಲಿ ಇದೆ. ಪ್ರತಿ ದಿನ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಒಂದಲ್ಲ ಒಂದು ಕಾರಣಕ್ಕೆ ಯುದ್ಧ ನಡೆಯುತ್ತಲೇ ಇದೆ. ರಾಜಕೀಯವಾಗಿ ಈ ರಾಷ್ಟ್ರಗಳ ನಡುವೆ ಯಾವಾಗಲೂ ಮಾತಿನ ಚಕಮಕಿ ನಡೆಯುತ್ತಲೇ ಇದೆ .

ಈ ನಡುವೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಈಗ ಯಾವುದೇ ಕ್ರೀಡಾ ಸ್ಪರ್ಧೆಗಳು ನಡೆಯುತ್ತಿಲ್ಲ. ಆದರೂ ಅಭಿಮಾನ, ಸ್ನೇಹ, ಬಾಂಧವ್ಯಕ್ಕೆ ಇಲ್ಲಿ ಯಾವುದೇ ಅಡ್ಡಿಯಾಗುತ್ತಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ಯುದ್ಧದ ಹೋಲಿಕೆ ಮಾಡಲಾಗುತ್ತದೆ. ದಾಯಾದಿಗಳ ಕದನ ಅಂತನೇ ಕ್ರಿಕೆಟ್ ಪಂದ್ಯವನ್ನು ಬಿಂಬಿಸಲಾಗುತ್ತದೆ. ಯಾಕೆಂದರೆ ಇಲ್ಲಿ ಸೋಲಿನ ಮಾತೇ ಇಲ್ಲ. ಗೆಲ್ಲಲೇ ಬೇಕು ಎನ್ನುವ ಗುರಿ. ಇದು ಉಭಯ ತಂಡಗಳ ಮತ್ತು ಉಭಯ ದೇಶಾಭಿಮಾನಿಗಳ ಮೂಲ ಮಂತ್ರ.

ಇಂತಹ ಬದ್ದವೈರತ್ವದ ನಡುವೆಯೂ ಈಚೆಗೆ ಪಾಕಿಸ್ತಾನದಲ್ಲಿ ನಡೆದ ದೇಶೀಯ ಪಿ‌ಎಸ್ ಎಲ್ ಕ್ರಿಕೆಟ್ ಪಂದ್ಯವೊಂದರಲ್ಲಿ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಯೊಬ್ಬನ ಕೈಯಲ್ಲಿ ಟೀಂ ಇಂಡಿಯಾದ ಲೆಜೆಂಡ್ ಬ್ಯಾಟರ್ ವಿರಾಟ್ ಕೊಹ್ಲಿಯ ಪೋಸ್ಟರ್ ರಾರಾಜಿಸಿದೆ. ಪಾಕಿಸ್ತಾನ ನೆಲದಲ್ಲಿ ವಿರಾಟ್ ಕೊಹ್ಲಿ ಶತಕ ದಾಖಲಿಸುವುದನ್ನು ನಾನು ನೋಡಬೇಕು ಎನ್ನುವುದು ಆ ಕ್ರಿಕೆಟ್ ಅಭಿಮಾನಿಯ ಅಭಿಲಾಷೆ. ಜೊತೆಗೆ ಈ ಉಭಯರಾಷ್ಟ್ರಗಳ ನಡುವೆ ಸಾಮರಸ್ಯದ ಶಾಂತಿಯ ಸಂದೇಶವನ್ನು ಆ ಅಭಿಮಾನಿ ರವಾನಿಸಿದ್ದಾನೆ. ಈ ಬಗ್ಗೆ ವಿರಾಟ್ ಕೊಹ್ಲಿ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಈ ಮೂಲಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳು ಇದ್ದಾರೆ ಎಂಬುದು ಸಾಬೀತಾಗಿದೆ. ಹಾಗಂತ ಪಾಕ್ ಅಭಿಮಾನಿಗಳ ಅಭಿಮಾನವನ್ನು ಗಿಟ್ಟಿಸಿಕೊಂಡ ಮೊದಲ ಆಟಗಾರ ವಿರಾಟ್ ಕೊಹ್ಲಿಯಲ್ಲ. ಈ ಹಿಂದೆ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಸಚಿನ್ ತೆಂಡೂಲ್ಕರ್ , ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಆಟಗಾರರಿಗೆ ಪಾಕಿಸ್ತಾನದಲ್ಲಿ ಅಭಿಮಾನಿಗಳ ಬಳಗವಿತ್ತು. ಅಷ್ಟೇ ಯಾಕೆ, ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ಶೈಲಿ ಮತ್ತು ಹೇರ್ ಸ್ಟೈಲ್ ಗೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷ್ರಫ್ ಕೂಡ ಫಿದಾ ಆಗಿದ್ದರು.

ಹೌದು ನೋಡಿ , ವಿರಾಟ್ ಕೊಹ್ಲಿಯ ೭೧ನೇ ಶತಕಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಕೊಹ್ಲಿಯ ಬ್ಯಾಟ್ನಿಂದ ಶತಕ ಸಿಡಿಯಲ್ಪಡದೆ ೨ ವರ್ಷಗಳಾಗಿವೆ. ೨೦೧೯ ರಲ್ಲಿ ಬಾಂಗ್ಲಾದೇಶ ವಿರುದ್ಧದ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಕೊನೆಯ ಶತಕ ಬಾರಿಸಿದ್ದರು. ಮತ್ತೊಂದೆಡೆ ಭಾರತ ತಂಡವು ೨೦೦೮ ರಿಂದ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ಸುಮಾರು ೧೪ ವರ್ಷಗಳಿಂದ ಇಬ್ಬರ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಎರಡೂ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಇಷ್ಟಾದರೂ ಪಾಕಿಸ್ತಾನದಲ್ಲಿ ಕಿಂಗ್ ವಿರಾಟ್ ಕೊಹ್ಲಿಯ ಭಾರತೀಯ ಅಭಿಮಾನಿಗಳು ಬಯಸುತ್ತಿರುವಂತೆ ಪಾಕಿಸ್ತಾನದಲ್ಲೂ ಅಭಿಮಾನಿಗಳ ಬಳಗ ಕೊಹ್ಲಿಯ ೭೧ನೇ ಶತಕಕ್ಕಾಗಿ ಕಾತುರದಿಂದ ಕಾಯುತ್ತಿರುವುದು ಮಾತ್ರ ಸ್ಪಷ್ಟ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!