spot_img
Wednesday, January 22, 2025
spot_img

ಎಸ್.ಸಿ.ಡಿಸಿಸಿ ಬ್ಯಾಂಕ್‌ನಿಂದ ಗ್ರಾಮೀಣ ಜನರಿಗೆ ಉತ್ಕೃಷ್ಟ ಮಟ್ಟದ ಸೇವೆ-ಬಿ.ಎಂ.ಸುಕುಮಾರ್ ಶೆಟ್ಟಿ

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 108ನೇ ತಲ್ಲೂರು ಶಾಖೆ ಉದ್ಘಾಟನೆ
ಕುಂದಾಪುರ, ಫೆ.21: ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಗ್ರಾಮೀಣ ಜನರಿಗೆ ಉತ್ಕೃಷ್ಟ ಮಟ್ಟದ ಸೇವೆ ನೀಡುತ್ತಾ ಅವರ ಏಳ್ಗೆಗೆ ಶ್ರಮಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡಿಮೆ ಇಲ್ಲವೆನ್ನುವಂತೆ ಸೇವೆ ನೀಡುತ್ತಾ, ಗ್ರಾಮಾಂತರ ಪ್ರದೇಶಗಳಲ್ಲಿಯೂ ತನ್ನ ಶಾಖೆಗಳನ್ನು ತೆರೆಯುವ ಮೂಲಕ ಜನರ ಹಣಕಾಸು ವ್ಯವಹಾರಗಳಿಗೆ ಕ್ಲಪ್ತ ಸಮಯದಲ್ಲಿ ಸ್ಪಂದಿಸುವ ಕೆಲಸ ಈ ಬ್ಯಾಂಕ್‌ನಿಂದ ಆಗುತ್ತಿದೆ ಎಂದು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.

ತಲ್ಲೂರಿನ ಶ್ರೀಜಲ ಅವೆನ್ಯೂ ಇದರ ಪ್ರಥಮ ಅಂತಸ್ತುವಿನಲ್ಲಿ ನೂತನವಾಗಿ ಆರಂಭಗೊಂಡ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 108ನೇ ತಲ್ಲೂರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಅವಿಭಜಿತ ಸಹಕಾರ ಕ್ಷೇತ್ರದಲ್ಲಿ ಸಾಧಕರಾಗಿ ಮೂಡಿಬಂದಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಕಾರಕ ಕೆಲಸಗಳು ನಡೆಯುತ್ತಿವೆ. ಶಾಖೆಗಳ ಆರಂಭ, ವ್ಯವಸ್ಥಿತ ನಿರ್ವಹಣೆ, ಉತ್ತಮ ಸೇವೆ, ದಕ್ಷ ಆಡಳಿತ ವ್ಯವಸ್ಥೆಯ ಮೂಲಕ ಉಭಯ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರೂ ಆದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಸದಸ್ಯರ ಅಗತ್ಯತೆಗೆ ತಕ್ಕಂತೆ ಸಕಾಲದಲ್ಲಿ ಆರ್ಥಿಕ ಸವಲತ್ತು ಒದಗಿಸಿಕೊಟ್ಟಾಗ ಸಾಲ ಮರುಪಾವತಿ ಕೂಡಾ ಸುಲಭವಾಗಿ ಆಗುತ್ತದೆ. ಕಳೆದ ೨೫ ವರ್ಷಗಳಿಂದ ಕೃಷಿಸಾಲ ಮರುಪಾವತಿಯಲ್ಲಿ ಅವಿಭಜಿತ ದ.ಕ ಜಿಲ್ಲೆ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಆರ್ಥಿಕ ಅಡಚಣೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಇದಕ್ಕೆ ಕಾರಣ ಸಹಕಾರ ಕ್ಷೇತ್ರಗಳು ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿರುವುದೇ ಆಗಿದೆ ಎಂದರು.

ನವೋದಯ ಸ್ವಸಹಾಯ ಗುಂಪುಗಳಿಗೆ ಮಾರ್ಚ್‌ನಿಂದ ಪ್ರತಿ ಗುಂಪುವಿಗೂ 20 ಲಕ್ಷ ರೂ., ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುವುದು. ಪಡೆದ ಸಾಲವನ್ನು ಉತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಂಡು ಅಭಿವೃದ್ದಿ ಸಾಧಿಸಬೇಕು. ಕನಸು ಕಾಣುವುದು ಮಾತ್ರವಲ್ಲ, ನನಸು ಮಾಡಲು ಕಾರ್ಯೋನ್ಮುಖವಾಗಬೇಕು. ಎಂದು ಹೇಳಿದ ಅವರು, ಇದೇ ಫೆ.28ಕ್ಕೆ ಕಾರ್ಕಳದ ಬೈಲೂರಿನಲ್ಲಿ ಆ ಭಾಗದ ನವೋದಯ ಸ್ವಸಹಾಯ ಗುಂಪುಗಳ ಸಮಾವೇಶ ಏರ್ಪಡಿಲಾಗುವುದು. ಅಲ್ಲಿ ಪ್ರಯೋಗಿಕವಾಗಿ ಸಮವಸ್ತ್ರ ನೀಡಲಾಗಿದ್ದು, ಯೋಗ್ಯ ಕಂಡುಬಂದರೆ ಅದೇ ಮಾದರಿಯ ಸಮವಸ್ತ್ರವನ್ನು 8 ಲಕ್ಷ ಸದಸ್ಯರಿಗೆ ವಿತರಿಸಲಾಗುವುದು. ಮಾರ್ಚ್‌ನಲ್ಲಿ ಉಪ್ಪುಂದದಲ್ಲಿಯೂ ಸಮಾವೇಶ ಆಯೋಜಿಸಲಾಗುವುದು ಎಂದರು.

ಗಣಕೀಕರಣವನ್ನು ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ ಉದ್ಘಾಟಿಸಿದರು. ಭದ್ರತಾ ಕೋಶವನ್ನು ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಭೀಮವ್ವ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಟ್ಟಡ ಮಾಲಿಕ ಜಯಸೂರ್ಯ ಪೂಜಾರಿ, ಬ್ಯಾಂಕಿನ ಗೋಪಿಕೃಷ್ಣ ಹಾಗೂ ವಿವಿಧ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಟ್ಟಡ ಮಾಲಿಕರಾದ ಜಯಸೂರ್ಯ ಪೂಜಾರಿ, ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಹಾಗೂ ತಲ್ಲೂರು ಶಾಖೆಯ ಶಾಖಾ ವ್ಯವಸ್ಥಾಪಕ ಹಿರಿಯಣ್ಣ ಪೂಜಾರಿ, ಯೋಗಪಟು ಧನ್ವಿ ಮರವಂತೆ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಚಯ ಖಾತೆ, ನಿರಖು ಠೇವಣಿಯ ಅದೃಷ್ಟಶಾಲಿಗಳ ಆಯ್ಕೆ ನಡೆಯಿತು. ಶಾಖೆಯ ವ್ಯಾಪ್ತಿಯ ಹೊಸತಾಗಿ ಆರಂಭಗೊಂಡ 30 ನವೋದಯ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಲಾಯಿತು. ೫೬ ನವೋದಯ ಗುಂಪುಗಳಿಗೆ 2,24,15000 ಸಾಲ ವಿತರಣೆಯ ಸಾಲಪತ್ರ ವಿತರಿಸಲಾಯಿತು. ಚೈತನ್ಯ ವಿಮಾ ಪರಿಹಾರ ಮೊತ್ತವನ್ನು ಹಸ್ತಾಂತರಿಸಲಾಯಿತು. ವಿವಿಧ ಸಾಲಪತ್ರಗಳನ್ನು ಹಸ್ತಾಂತರಿಸಲಾಯಿತು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ರಾಜು ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ನೂತನ ತಲ್ಲೂರು ಶಾಖೆಯಲ್ಲಿ ಈಗಾಗಲೇ 1700 ಎಸ್.ಬಿ ಖಾತೆಗಳನ್ನು ತೆರೆಯಲಾಗಿದೆ. 12 ಕೋಟಿ ಠೇವಣಾತಿ ಸಂಗ್ರಹವಾಗಿದೆ. ಈ ಭಾಗದಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ ಎಂದರು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಮಹೇಶ ಹೆಗ್ಡೆ ಮೊಳಹಳ್ಳಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!