Thursday, November 21, 2024

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮರವಂತೆ ಶಾಖೆಯ ನೂತನ ಕಟ್ಟಡ ಉದ್ಘಾಟನೆ

ಸದಸ್ಯರ ಕಷ್ಟಕ್ಕೆ ಸ್ಪಂದಿಸುವ ಸ್ವಾತಂತ್ರ್ಯವಿರುವುದು ಸಹಕಾರ ವ್ಯವಸ್ಥೆಗೆ ಮಾತ್ರ-ಡಾ.ಎಂ.ಎನ್.ರಾಜೇಂದ್ರ ಕುಮಾರ್

ಬೈಂದೂರು, ಜ.7: ಯಾವುದೇ ಸೌಲಭ್ಯಗಳು ಇವತ್ತು ನೇರವಾಗಿ ಫಲಾನುಭವಿಯನ್ನು ತಲುಪುವ ಏಕೈಕ ವ್ಯವಸ್ಥೆಯಿದ್ದರೆ ಅದು ಸಹಕಾರ ಕ್ಷೇತ್ರ. ಸೇವಾಧರ್ಮದಿಂದ ಸಹಕಾರ ಕ್ಷೇತ್ರವಿಂದು ಜನರ ಬ್ಯಾಂಕುಗಳಾಗಿ ಪರಿವರ್ತನೆಗೊಂಡಿದೆ. ಗ್ರಾಮೀಣ ಪ್ರದೇಶದ ಕಟ್ಟಕಡೆಯ ಜನರನ್ನೂ ತಲುಪುವ ಕೊಂಡಿಯಾಗಿ, ಸದಸ್ಯರ ನೋವು-ನಲಿವುಗಳಲ್ಲಿ ಸ್ಪಂದಿಸುವ ಸ್ವಾತಂತ್ರ್ಯದಿಂದ ಸಹಕಾರಿ ಸಂಘಗಳು ಜನರ ಜೀವನಾಡಿಯಾಗಿ ಬೆಳೆದಿದೆ ಎಂದು ದ.ಕ ಜಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಅವರು ಜ.7ರಂದು ಸರಳವಾಗಿ ನಡೆದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮರವಂತೆ ಶಾಖೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಮನೋಭಾವದಿಂದ ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ಸದೃಢವಾಗಿ ಬೆಳೆದಿದೆ. ಸುಸಜ್ಜಿತವಾದ ಸ್ವಂತ ಕಟ್ಟಡಗಳನ್ನು ಹೊಂದಿದೆ. ಉತ್ತಮ ಆಡಳಿತ, ಸಿಬ್ಬಂದಿಗಳ ಸೇವೆ, ಸದಸ್ಯರ ಸಹಕಾರದಿಂದ ಇದು ಸಾಧ್ಯವಾಗಿದೆ. ಸತತ 27 ವರ್ಷಗಳಿಂದ ಈ ಸಂಘದ ಅಧ್ಯಕ್ಷರಾಗಿರುವ ಎಸ್.ರಾಜು ಪೂಜಾರಿಯವರ ಸಹಕಾರ ಚಿಂತನೆಯೂ ಮಹತ್ವದ್ದಾಗಿದೆ ಎಂದರು.

ವಾಣಿಜ್ಯ ಬ್ಯಾಂಕುಗಳಿಂದ ಮಾಡಲಾಗದ ಕೆಲಸ ಇವತ್ತು ಸಹಕಾರ ಕ್ಷೇತ್ರದಿಂದ ಆಗುತ್ತಿದೆ. ಕೊರೋನಾ ಅಥವಾ ಇನ್ನಿತರ ಅವಘಡದಿಂದ ತನ್ನ ಸದಸ್ಯರಿಗೆ ಹಾನಿಯಾದರೆ ಬ್ಯಾಂಕುಗಳಿಂದ ಪರಿಹಾರ ನೀಡಲು ಸ್ವಾತಂತ್ರ್ಯ ಇರುವುದಿಲ್ಲ. ಆದರೆ ಸಹಕಾರ ವ್ಯವಸ್ಥೆಯಲ್ಲಿ ಸಾಧ್ಯವಿದೆ. ಈ ಸೇವಾ ಮನೋಭಾವದಿಂದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳು ಜನಮಾನಸದಲ್ಲಿ ಗಟ್ಟಿಯಾದ ನೆಲೆ ಕಂಡುಕೊಂಡಿವೆ ಎಂದರು.

ಅವಿಭಜಿತ ದ.ಕ ಜಿಲ್ಲೆಯಲ್ಲಿ ಕೃಷಿಪತ್ತಿನ ಸಹಕಾರ ಸಂಘಗಳು ಲಾಭದಲ್ಲಿ ಮುನ್ನೆಡೆಯುತ್ತಿದೆ. 26 ವರ್ಷಗಳಿಂದ ದೇಶದಲ್ಲಿಯೇ ಕೃಷಿ ಸಾಲ ಸಮರ್ಪಕವಾಗಿ ಮರುಪಾವತಿಯಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಇಂಥಹ ಸಹಕಾರ ಸಂಘಗಳು ಸದೃಢವಾಗಿ ಬೆಳೆದರೆ ಮಾತ್ರ ಇಡೀ ಸಹಕಾರ ವ್ಯವಸ್ಥೆ ಉಳಿಯಲು ಸಾಧ್ಯ ಎಂದರು.

ಜನಸ್ಪಂದನೆಯ ಕ್ಷೇತ್ರ ಸಹಕಾರ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೈಂದೂರು ಕ್ಷೇತ್ರದ ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಜನಸಾಮಾನ್ಯರ ನೋವು ಅರ್ಥ ಮಾಡಿಕೊಳ್ಳುವ ಶಕ್ತಿ ಇರುವುದು ಸಹಕಾರ ಕ್ಷೇತ್ರಕ್ಕೆ ಮಾತ್ರ. ಸಹಕಾರ ಸಂಘಗಳ ಅಧ್ಯಕ್ಷರಿಗೆ ಗೌರವಾಧರದ ಸ್ಥಾನ ಲಭಿಸಿದೆ. ಮೊಳಹಳ್ಳಿ ಶಿವರಾಯ ಸಹಕಾರಿ ರಂಗದ ಪಿತಾಮಹಾ. ಈಗ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಅವಿಭಜಿತ ಜಿಲ್ಲಾ ಸಹಕಾರ ಕ್ಷೇತ್ರ ರಾಷ್ಟ್ರಮಟ್ಟದ ಗಮನ ಸಳೆದಿದೆ ಎಂದರು.

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ರಾಜು ಪೂಜಾರಿ ಅವರು ಮಾಜಿ ಶಾಸಕ ಜಿ.ಎಸ್.ಆಚಾರ್ ಗರಡಿಯಲ್ಲಿ ಪಳಗಿದವರು. ನಾನು ಅವರನ್ನು ಆರಂಭದಿಂದಲೇ ಗಮನಿಸುತ್ತಿದ್ದೆ. ಮುಂದೊಂದು ದಿನ ಮಹತ್ವದ ಸ್ಥಾನಕ್ಕೇರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ರಾಜು ಪೂಜಾರಿಯವರಿಗೆ ಇನ್ನೂ ಉತ್ತಮ ಅವಕಾಶಗಳಿವೆ. 27 ವರ್ಷಗಳಿಂದ ಈ ಸಂಘದ ಅಧ್ಯಕ್ಷರಾಗಿ ಸಂಘವನ್ನು ಉತ್ತಮವಾಗಿ ಅಭಿವೃದ್ದಿ ಪಡಿಸಿದ್ದಾರೆ ಎಂದರು.

ಮಾಜಿ ಶಾಸಕರು, ಸಾಗರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಬೈಂದೂರು ಅಧ್ಯಕ್ಷರಾದ ಕೆ.ಗೋಪಾಲ ಪೂಜಾರಿ ಗೋದಾಮು ಉದ್ಘಾಟಿಸಿದರು.

ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ ಮರವಂತೆ ಶುಭಾಶಂಸನೆಗೈದು, ನಾವುಂದದಲ್ಲಿ ಒಂದು ಟೇಬಲ್, ಒಂದು ಕುರ್ಚಿಯಿಂದ ಆರಂಭವಾಗಿ ಸಾಕಷ್ಟು ಏಳು-ಬೀಳುಗಳನ್ನು ಕಂಡ ಈ ಸಂಸ್ಥೆ ಇವತ್ತು ತನ್ನ ಕಾರ್ಯಕ್ಷೇತ್ರದ ಜನರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ನಿವೇಶನ, ಸ್ವಂತ ಕಟ್ಟಡಗಳನ್ನು ಹೊಂದಿದೆ. ಪರಿವರ್ತನೆಗಳು ಸ್ವಾಭಾವಿಕವಾದರೂ ಕೂಡಾ ಈ ಸಂಘ ಸದಸ್ಯರ ನಾಡಿಮಿಡಿತ ಅರಿತು, ಸೇವಾ ಮನೋಧರ್ಮದಿಂದ ಮುನ್ನೆಡೆದಿದೆ. ಆವತ್ತು ರಾಮ ಪೂಜಾರಿಯವರ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಹುಡುಗ ಇವತ್ತು ಸಹಕಾರ ವ್ಯವಸ್ಥೆಯಲ್ಲಿ ಇಷ್ಟು ಎತ್ತರಕ್ಕೆ ಬೆಳೆಯುವುದರೊಂದಿಗೆ ತನ್ನ ಇಚ್ಛಾಶಕ್ತಿಯಿಂದ ಸಹಕಾರ ಕ್ಷೇತ್ರ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದರು.

ಸಂಘದ ಅಧ್ಯಕ್ಷರಾದ ಎಸ್.ರಾಜು ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, 27ವರ್ಷಗಳ ಹಿಂದೆ ತುಂಬಾ ನಷ್ಟದಲ್ಲಿದ್ದ ಈ ಸಹಕಾರ ಸಂಘದ ಸಾರಥ್ಯ ನನ್ನ ಹೆಗಲಿಗೆ ಬಂತು. ಆ ಕಠಿಣ ಪರಿಸ್ಥಿತಿಯಲ್ಲಿ ಮಾಜಿ ಶಾಸಕ ಜಿ.ಎಸ್.ಆಚಾರ್ ಅವರ ಮಾರ್ಗದರ್ಶನ, ತಂದೆ ರಾಮ ಪೂಜಾರಿಯವರ ಪ್ರೇರಣಾದಾಯಕ ಮಾತುಗಳು ಯಶಸ್ಸಿಗೆ ದಾರಿಯಾಯಿತು. ಹಂತಹಂತವಾಗಿ ಬೆಳೆದ ಈ ಸಂಸ್ಥೆ ಇವತ್ತು ತನ್ನ ಕಾರ್ಯವ್ಯಾಪ್ತಿಯ ನಾವುಂದ, ಹೇರೂರು, ಬಡಾಕೆರೆ, ಮರವಂತೆಯಲ್ಲಿ ಸ್ವಂತ ಕಟ್ಟಡವನ್ನು ಹೊಂದಿ, ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮರವಂತೆ ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ, ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ., ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮಹೇಶ ಹೆಗ್ಡೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಎಂ.ಚಂದ್ರಶೀಲ ಶೆಟ್ಟಿ, ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ನಿದೇರ್ಶಕರುಗಳಾದ ವಾಸು ಪೂಜಾರಿ, ಭೋಜ ನಾಯ್ಕ, ಜಗದೀಶ ಪಿ.ಪೂಜಾರಿ, ನರಸಿಂಹ ದೇವಾಡಿಗ, ರಾಮಕೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ.ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ಶ್ರೀಮತಿ ನಾಗಮ್ಮ, ಶ್ರೀಮತಿ ಸರೋಜ ಆರ್.ಗಾಣಿಗ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಉಪಸ್ಥಿತರಿದ್ದರು.

ಯಕ್ಷಾಭಿನಂದನೆ:

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಯಕ್ಷಗಾನದ ಕಿರೀಟ ತೊಡಿಸಿ ಯಕ್ಷಾಭಿನಂದನೆ ಸಲ್ಲಿಸಲಾಯಿತು. ವಿಶೇಷವಾಗಿ ಎಸ್.ಜನಾರ್ದನ್ ಮರವಂತೆ ರಚಿಸಿದ ರಾಜೇಂದ್ರ ಕುಮಾರ್ ಪರಿಚಯ ಕಾವ್ಯವನ್ನು ಯಕ್ಷಗಾನ ಭಾಗವತಿಕೆಯಲ್ಲಿ ಪ್ರಸಿದ್ಧ ಭಾಗವತ ದೇವರಾಜ ದಾಸ್ ಮರವಂತೆ ತಂಡದವರು ಪ್ರಸ್ತುತ ಪಡಿಸಿದರು.
ಸಮುದಾಯ ಸೇವೆಗೆ ಗೌರವ:

ಸಮುದಾಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸಂಘದ ಹಿರಿಯ ಸದಸ್ಯ, ನಿವೃತ್ತ ಉಪನ್ಯಾಸಕ, ಪಂಚಾಯತ್ ರಾಜ್ ಪರಿಣತ ಎಸ್.ಜನಾರ್ದನ್ ಮರವಂತೆ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಸನ್ಮಾನ ಪತ್ರ ವಾಚಿಸಿದರು.

ರಾಜು ಪೂಜಾರಿಯವರಿಗೆ ಗ್ರಾಮಸ್ಥರ ಸನ್ಮಾನ:
ಮರವಂತೆ ಗ್ರಾಮಕ್ಕೆ ಸುಸಜ್ಜಿತ ಸಹಕಾರಿ ಸಂಘದ ಕಟ್ಟಡ ಒದಗಿಸಿದ ಸಂಘದ ಅಧ್ಯಕ್ಷರಾದ ಎಸ್.ರಾಜು ಪೂಜಾರಿಯವರನ್ನು ಮರವಂತೆ ಗ್ರಾಮಸ್ಥರ ಪರವಾಗಿ ಸನ್ಮಾನಿಸಿಸಲಾಯಿತು. ಎಸ್.ಜನಾರ್ದನ್ ಮರವಂತೆ ರಚಿಸಿದ ಕಾವ್ಯಾಭಿನಂದನೆಯನ್ನು ಗಾಯಕ ಡಾ.ಗಣೇಶ ಗಂಗೊಳ್ಳಿ ರಾಗಸಂಯೋಜಿಸಿ ಹಾಡಿದರು.

ಸಂಘದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.

ರೂ.10 ಸಾವಿರ ನಗದು ನೆರವು:
ಸಂಘದ ವ್ಯಾಪ್ತಿಯಲ್ಲಿ ಕೊರೋನಾದಿಂದ ಮೃತರಾದ 18 ಕುಟುಂಬಗಳಿಗೆ ತಲಾ 10 ಸಾವಿರ ನಗದು ನೆರವು ವಿತರಿಸಲಾಯಿತು. ಕ್ಯಾನ್ಸರ್ ಪೀಡಿತರಿಗೆ ಸಂಘದ ವತಿಯಿಂದ ವೈದ್ಯಕೀಯ ನೆರವು ನೀಡಲಾಯಿತು. ಸಂಘದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.

ಅಕಾಶವಾಣಿ ಕಲಾವಿದ ಗಣೇಶ ಗಂಗೊಳ್ಳಿ ರೈತಗೀತೆ ಹಾಡಿದರು. ನಾಮ ನಿರ್ದೇಶಿತ ನಿರ್ದೇಶಕ ಎಂ.ವಿನಾಯಕ ರಾವ್ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!